- ಪ್ರಿಯಾ ಕೆರ್ವಾಶೆ
ಅದು ಮುಂಜಾನೆ 2.35ರ ಸಮಯ. ಕೊಂಚ ದೂರದಲ್ಲಿದ್ದ ಗಂಗಾ ತೀರದಿಂದ ಮೈಕ್‌ನಲ್ಲಿ ಭಜನ್, ಸತ್ಸಂಗ್‌ನ ಧ್ವನಿ ಚಳಿಗಾಳಿ ಜೊತೆ ತೇಲಿಬರುತ್ತಿತ್ತು. ಪ್ರಯಾಗ್‌ರಾಜ್‌ನಲ್ಲಿ ಅದು ನಮ್ಮ ಮೊದಲ ರಾತ್ರಿ.ಸಂಜೆ ಹೊತ್ತಲ್ಲಿ ನಮ್ಮ ಬೆಂಗಳೂರಿನ ಜನವರಿ ತಿಂಗಳ ಹವೆಯಂತೆ ಹದವಾಗಿದ್ದ ಚಳಿ ರಾತ್ರಿ ಆಗುತ್ತ ಹೋದಂತೆ ಕುಟುಕುಟು ಚಳಿಯಾಗಿ ಕೊರೆಯುವ ಚಳಿಯಾಗಿ ಒಂದು ಹಂತದಲ್ಲಿ 5 ಡಿಗ್ರಿಯಷ್ಟು ಕೆಳಗಿಳಿದು ತಡೆಯಲಸಾಧ್ಯವಾಗಿ ನಡುಗುತ್ತ ಟೆಂಟಿನೊಳಗೆ ಕೂರಲೂ ಆಗದೆ ಹೊರ ಹೋಗಲೂ ಆಗದೆ ಶೂನ್ಯವನ್ನೇ ಧ್ಯಾನಿಸುತ್ತ ಬಿದ್ದುಕೊಂಡಿದ್ದೆ.
ನಮ್ಮ ಮುಂದಿನ ದಾರಿಯುದ್ದಕ್ಕೂ ಜನ ಸಾಗರ. ಸಾವಿರಾರು ಜನ ತಲೆ ಮೇಲೆ ಮೂಟೆ ಹೊತ್ತುಕೊಂಡು ಸ್ಪರ್ಧೆಗೆ ಬಿದ್ದವರ ಹಾಗೆ ಓಡು ನಡಿಗೆಯಲ್ಲಿ ನದಿ ತೀರದತ್ತ ಧಾವಿಸುತ್ತಿದ್ದರು. ಉತ್ತರ ಭಾರತದ ಹಳ್ಳಿಗಳ ತೆಳುವಾದ ಗಾಢ ಬಣ್ಣದ ಉಡುಗೆಯಲ್ಲಿದ್ದ ಅವರನ್ನು ನಮ್ಮಂತೆ ಚಳಿ, ರಾತ್ರಿ ಅನ್ನುವ ಲಿಮಿಟೇಶನ್‌ಗಳೆಲ್ಲ ಬಂಧಿಸಿಟ್ಟಂತಿರಲಿಲ್ಲ. ನೆಟ್ಟ ಗುರಿಯತ್ತ ಬಾಣಗಳ ಹಾಗೆ ನುಗ್ಗುತ್ತಿದ್ದರು.
ಮೌನಿ ಅಮಾವಾಸ್ಯೆಯ ಆ ಬ್ರಾಹ್ಮೀ ಮುಹೂರ್ತದಲ್ಲಿ ಫ್ರೀಜರ್‌ನಂತಿದ್ದ ನದಿ ನೀರಲ್ಲಿ ಮುಳುಗಿ ದಂಡೆಯ ಮೇಲೆ ತಮ್ಮ ಮೂಟೆಯಲ್ಲಿದ್ದ ಒಣ ಹುಲ್ಲನ್ನು ಹಾಸಿ ಒದ್ದೆ ಬಟ್ಟೆಯನ್ನು ಹರವಿ ಪಕ್ಕದಲ್ಲಿ ಒಂಚೂರು ಜಾಗವಿದ್ದರೆ ಮಲಗಿಕೊಳ್ಳುತ್ತಿದ್ದರು. ಗಂಗಾ ತೀರದ ನೂರಾರು ಕಿಮೀ ಉದ್ದಕ್ಕೂ ಈ ಹಳ್ಳಿ ಜನ ತಂದು ಹರವಿದ್ದ ಒಣಹುಲ್ಲು, ರಾತ್ರಿ ಗಂಗೆಯ ಮಡಿಲನ್ನು ಬೆಚ್ಚಗಾಗಿಸಿ ಚಳಿಯಿಂದ ಲಕ್ಷಾಂತರ ಮಂದಿಯನ್ನು ಕಾಯುತ್ತಿತ್ತು.ಇದೇ ಹೊತ್ತಿಗೆ ನಾವಿದ್ದ ಅರೈಲ್ ಘಾಟ್ ಸಂಗಮ ಸ್ಥಾನದ ಇನ್ನೊಂದು ತೀರದಲ್ಲಿ ಕಾಲ್ತುಳಿತವಾಗಿ ಕೆಲವು ಮಂದಿ ಗಂಗೆಯ ದಂಡೆಯಲ್ಲೇ ಕೊನೆಯುಸಿರೆಳೆದಿದ್ದರು. ಅನೇಕರು ಗಾಯದಿಂದ ಒದ್ದಾಡುತ್ತಿದ್ದರು. ತೀರ ಸಮೀಪದಲ್ಲಿ ಇಷ್ಟೆಲ್ಲ ಘಟಿಸುತ್ತಿದ್ದರೂ ನಾನು ಟೆಂಟಿನ ಒಳ ಹೊರಗೆ ಚಳಿಯ ಜೊತೆ ಗುದ್ದಾಡುತ್ತಿದ್ದೆ.
*ನಾಗಾ ಸಾಧುಗಳ ಜೊತೆ
ಗುಡಾರದ ಮುಂಭಾಗ ಹೊಗೆ ಉಗುಳುತ್ತ ಸಣ್ಣಗೆ ಉರಿಯುತ್ತಿದ್ದ ಭಾರೀ ಮರದ ದಿಮ್ಮಿ. ಹೊಗೆಯಾಡುತ್ತಿದ್ದ ಆ ಧುನಿಯಲ್ಲಿ ಚುಟ್ಟಾ ಹತ್ತಿಸಿ ತನ್ಮಯರಾಗಿ ಕಣ್ಮಚ್ಚಿ ಭಂಗಿ ಸೇದುತ್ತಿದ್ದ ನಾಗಾ ಸಾಧುಗಳು.ಕೆಲವರು ಅವರೆದುರು ತಟ್ಟೆಯಲ್ಲಿ ದುಡ್ಡು ಹಾಕಿ ನಮಸ್ಕಾರ ಮಾಡುತ್ತಿದ್ದರು. ಅವರ ಹಣೆಗೆ ಈ ನಾಗಾ ಸಾಧುಗಳು ವಿಭೂತಿ ಹಚ್ಚಿ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದಿಸಿ ಕಳಿಸುತ್ತಿದ್ದರು. ಕೆಲವೊಮ್ಮೆ ತಮ್ಮ ಕೈಯಲ್ಲಿದ್ದ ನವಿಲುಗರಿ ಸುತ್ತಿದ್ದ ಕೋಲನ್ನು ಬೆನ್ನಿಗೆ ಮುಟ್ಟಿಸಿ ಬೆನ್ನು ತಟ್ಟಿ ಒಳ್ಳೆಯದಾಗಲಿ ಎಂದು ಹರಸುತ್ತಿದ್ದರು.
ಒಂದು ಕಡೆ ಅವರ ಚಟುವಟಿಕೆಗಳನ್ನು ನೋಡುತ್ತ ನಿಂತಿದ್ದೆ. ಇಬ್ಬರು ಯುವ ಸಾಧುಗಳು ಹೊರಗೆ ಕೂತಿದ್ದರು. ಹಿರಿಯ ಸಾಧು ಗುಡಾರದ ಒಳಗೆ ಇದ್ದರು. ಒಳಗೆ ಕೂತಿದ್ದ ಸಾಧು ಮೈಮೇಲೆ ಬಟ್ಟೆ ಇರಲಿಲ್ಲ. ಅವರು ಬಹಳ ಅಕ್ಕರೆಯಿಂದ ಆಶೀರ್ವಾದ ಬೇಡಿ ಬಂದ ಜನರನ್ನು ಹರಸಿ ಕಳಿಸುತ್ತಿದ್ದರು.ಹೊರಗೆ ಕೂತವರು ಸೊಂಟಕ್ಕೂ, ತಲೆಗೂ ಕಾವಿ ಬಟ್ಟೆ ಸುತ್ತಿ, ಕೊರಳ ತುಂಬ ರುದ್ರಾಕ್ಷಿ ಧರಿಸಿ ಮೈಗೆ ಬೂದಿ ಬಳಿದುಕೊಂಡಿದ್ದರು. ಏನೋ ಕೆಲಸ ಮಾಡುತ್ತ ಅವರಲ್ಲೊಬ್ಬ ಸಾಧು ಎದ್ದು ನಿಂತ. ಸೊಂಟಕ್ಕೆ ಸುತ್ತಿಕೊಂಡಿದ್ದ ಬಟ್ಟೆ ಕಳಚಿಬಿತ್ತು. ಎಲ್ಲರೆದುರು ಸಂಪೂರ್ಣ ಬೆತ್ತಲಾದ. ಸುತ್ತಮುತ್ತ ಓಡಾಡುತ್ತಿದ್ದ ಫೋಟೋಗ್ರಾಫರ್‌ಗಳೆಲ್ಲ ಈತನೆದುರು ನಿಂತು ಚಕಚಕನೆ ಫೋಟೋ ಕ್ಲಿಕ್ಕಿಸಲಾರಂಭಿಸಿದರು. ಇದ್ಯಾವುದರ ಪರಿವೆಯೇ ಇಲ್ಲದ ಆದ ಆತ ಬಿದ್ದ ಬಟ್ಟೆಯನ್ನೆತ್ತಿ ಸೈಡಿಗಿಟ್ಟು ತನ್ನ ಪಾಡಿಗೆ ಕೆಲಸ ಮುಂದುವರಿಸಿದ.
* ಮೈ ಇಡೀ ಬೂದಿ ಬಳಿದು ನಗ್ನರಾಗಿದ್ದ ನಾಗಾ ಸಾಧು ಒಬ್ಬರು ಹತ್ತಿರ ಕರೆದರು. ಆಜ್ಞಾಚಕ್ರದ ಜಾಗವನ್ನು ಒತ್ತಿ ವಿಭೂತಿ ಹಚ್ಚಿ ಬೆನ್ನು ತಟ್ಟಿ ಕಳಿಸಿದರು. ಆಮೇಲೆ ನೋಡಿದರೆ ಶಿವನ ಧ್ವಜದ ವಿನ್ಯಾಸದಲ್ಲಿ ಹಣೆಯ ಸರಿ ಅರ್ಧ ಭಾಗಕ್ಕೆ ಆತ ವಿಭೂತಿ ಹಚ್ಚಿದ್ದರು. ಇನ್ನೊಬ್ಬ ಸಾಧು ತನ್ನೆದುರು ಮನುಷ್ಯನ ತಲೆ ಬುರುಡೆಯನ್ನು, ಮೂಳೆಯನ್ನು ಇಟ್ಟು, ಪಕ್ಕದಲ್ಲಿ ಹಿತ್ತಾಳೆಯ ಯಾವುದೋ ದೇವತೆಯ ಮೂರ್ತಿಯನ್ನು ಇಟ್ಟಿದ್ದರು. ಇದರ ನಡುವೆ ಉರಿಯುತ್ತಿದ್ದ ಧುನಿಯಿಂದ ಆಗಾಗ ಭಂಗಿ ಎಳೆಯುತ್ತಿದ್ದರು. ಮೂವತ್ತೈದು ನಲವತ್ತರ ಆಸುಪಾಸಿನ ಆ ಸನ್ಯಾಸಿಯ ಉಡುಗೆ ನಾಗಾಸಾಧುಗಳಂತೆ ಕಾವಿಯಲ್ಲ, ಬದಲಿಗೆ ಕಡುಗಪ್ಪು. ತಲೆಗೆ ಚರ್ಮದ ಬಣ್ಣದ ಬಟ್ಟೆ, ಮುಖಕ್ಕೆ ಬೂದಿ, ಹಣೆಯಲ್ಲಿ ಕೆಂಪು ತಿಲಕ, ಕಣ್ಣಿಗೆ ಕಾಡಿಗೆಯನ್ನೂ ಹಚ್ಚಿದ್ದರು.ಅಲ್ಲೇ ನಿಂತು ಗಮನಿಸುತ್ತಿದ್ದ ನನ್ನನ್ನು ಸಮೀಪಕ್ಕೆ ಕರೆದರು. ಅವರ ತಟ್ಟೆಗೆ ಕಾಣಿಕೆ ಹಾಕಿದೆ. ಆತ ನನ್ನ ಕಣ್ಣುಗಳನ್ನೇ ಒಂದು ಕ್ಷಣ ದಿಟ್ಟಿಸಿ, ‘ಕೈ ಕೊಡು, ಕೂತ್ಕೋ’ ಅಂದರು. ಒಳಗೊಳಗೆ ಕೊಂಚ ದಿಗಿಲಾಯಿತು. ಬೇರೆ ದಾರಿ ಇದರಲಿಲ್ಲ. ಎರಡೂ ಕೈ ಅವರೆದುರು ಚಾಚಿದೆ.
ಆತ ಎಡಗೈಯನ್ನು ತನ್ನ ಕೈಯಲ್ಲಿ ಹಿಡಿದು ಜ್ಯೋತಿಷ್ಯ ಹೇಳುವವರಂತೆ ಉರ್ದು ಮಿಶ್ರಿತ ಹಿಂದಿಯಲ್ಲಿ ಏನೇನೋ ಹೇಳಿದರು, ಅರೆಬರೆ ಹಿಂದಿಯಷ್ಟೇ ತಿಳಿದಿದ್ದ ನನಗೆ ಆ ಮಾತು ಒಂಚೂರೂ ಅರ್ಥ ಆಗಲಿಲ್ಲ. ಸುಮ್ಮನೆ ತಲೆಯಾಡಿಸುತ್ತಿದ್ದೆ. ಒಳಗೊಳಗೆ ಈಗ ದುಡ್ಡಿಗೆ ಡಿಮ್ಯಾಂಡ್ ಮಾಡಿದರೆ ಏನು ಹೇಳುವುದು, ಬ್ಯಾಗನ್ನೆಲ್ಲಿಯಾದರೂ ಕಿತ್ತುಕೊಳ್ಳಬಹುದಾ ಎಂದೆಲ್ಲ ಯೋಚನೆ ಬರುತ್ತಿತ್ತು. ಆತ ನನ್ನ ತೋರು ಬೆರಳಿನ ಕೆಳಗಿನ ಕೊಂಚ ತಗ್ಗಾಗಿದ್ದ ಭಾಗವನ್ನು ತೋರಿಸಿ ಈ ಜಾಗ ತಗ್ಗಾಗಿರಬಾರದು ಎಂದೇನೋ ಹೇಳಿದ್ದು ಅವರ ಸನ್ನೆಗಳಿಂದ ತಿಳಿಯಿತು. ‘ಈ ಥರ ಮಾಡು’ ಅಂತ ತೋರು ಬೆರಳನ್ನು ಹೆಬ್ಬೆಟ್ಟು ಬೆರಳನ್ನು ಸೇರಿಸಿ ಚಿಟಿಕೆ ಹೊಡೆದಂತೆ ಮಾಡಲು ಹೇಳಿದರು. ‘ಆಗಾಗ ಹೀಗೆ ಮಾಡುತ್ತಿರು, ಆ ತಗ್ಗಾಗಿರುವ ಜಾಗ ಸರಿ ಹೋಗುತ್ತದೆ, ಎಲ್ಲ ಒಳ್ಳೆಯದಾಗುತ್ತೆ, ಜೈಮಹಾಕಾಳಿ, ಮಹಾದುರ್ಗೆ’ ಎನ್ನುತ್ತ ವಿಚಿತ್ರ ಹೂಂಕಾರ ಮಾಡಿ ಹೊರಡಲು ಸನ್ನೆ ಮಾಡಿದರು. ಬದುಕಿದೆಯ ಬಡಜೀವವೇ ಅಂತ ಅಲ್ಲಿಂದೆದ್ದು ಈಚೆ ಬಂದೆ.*
ಕಾರು ಇನ್ನೇನು ಹೊರಡಲಿತ್ತು, ಧುತ್ತನೆ ಒಬ್ಬ ಸಾಧುವಿನಂತೆ ತೋರುವ ವ್ಯಕ್ತಿ ಕಾರಿಗೆ ಅಡ್ಡಲಾಗಿ ನಿಂತುಬಿಟ್ಟ! ಡ್ರೈವಿಂಗ್ ಸೀಟಿನಲ್ಲಿದ್ದ ಸ್ನೇಹಿತರನ್ನು ಕೆಳಗಿಳಿಯಲು ಹೇಳಿದ. ಅವರು ಕೆಳಗಿಳಿದ ಮೇಲೆ ಗೊತ್ತಾಯ್ತು, ಆತ ಬಟ್ಟೆ ತೊಟ್ಟಿರದ ನಗ್ನ ನಾಗಾ ಸಾಧು. ಕೊರಳಿಗೆ ಮನುಷ್ಯನ ಮೂಳೆಯನ್ನೇ ಹಾರವಾಗಿ ಧರಿಸಿ ಭಯಂಕರವಾಗಿ ಕಾಣುತ್ತಿದ್ದ. ನೋಡ ನೋಡುತ್ತಿದ್ದ ಹಾಗೆ ಮೂಳೆಯನ್ನು ಕಚ್ಚಿ ವಿಚಿತ್ರವಾಗಿ ಕಿರುಚಿದ.ನಾವು ಅಲ್ಲಿಯವರೆಗೆ ನೋಡಿದ ಸ್ನೇಹಮಯಿ ಸಾಧುಗಳಿಗೆ ತದ್ವಿರುದ್ಧವಾಗಿತ್ತು ಈತನ ವರ್ತನೆ. ಹಣ ನೀಡಿದರೆ ಮತ್ತೇನೋ ಸನ್ನೆ ಮಾಡಿದ, ನಮಗೆ ಅರ್ಥ ಆಗಲಿಲ್ಲ.
ನನ್ನ ಗೆಳತಿ ಹಿಂದಿನ ಸೀಟಿನಲ್ಲಿ ಕುಳಿತಿದ್ದಳು. ಅವಳ ಹತ್ತು ವರ್ಷದ ಮಗ ನನ್ನ ಪಕ್ಕ ಮುಂಭಾಗ ಕೂತಿದ್ದ. ಆ ಸನ್ಯಾಸಿ ತನಗೆ ನೀಡಿದ ಹಣವನ್ನು ನನ್ನ ಗೆಳತಿಯತ್ತ ಚಾಚಿ, ಆ ಹಣವನ್ನು ಮಗುವಿನ ತಲೆಗೆ ಸುತ್ತಿ ಕೊಡು ಎಂದೇನೋ ಹೇಳಿದ. ಆದರೆ ನಾವು ಆ ಹೊತ್ತಿಗೆ ಸ್ತಂಭೀಭೂತರಾಗಿ ಕೂತಿದ್ದೆವು. ಆತ ಹೇಳಿದರೂ ನಮಗೇನೂ ಮಾಡಲು ತೋಚಲಿಲ್ಲ. ಆತನ ಮುಖವನ್ನೇ ನೋಡುತ್ತ ಸುಮ್ಮನೆ ಕೂತುಬಿಟ್ಟೆವು. ಅಷ್ಟುಹೊತ್ತೂ ರಣಭೀಕರವಾಗಿ ವರ್ತಿಸಿದ ಆತ ಕೊನೆಯಲ್ಲಿ ಮಗುವಿನಂತೆ ಮುಖ ಮಾಡಿ ನನ್ನ ಗೆಳತಿಗೆ, ‘ನನ್ನ ಬಗ್ಗೆ ಸಿಟ್ಟು ಮಾಡಿಕೊಂಡಿಯಾ? ಸಿಟ್ಟು ಮಾಡಿಕೊಂಡಿಯೇನಮ್ಮಾ?’ ಅಂತ ಮತ್ತೆ ಮತ್ತೆ ಕೇಳತೊಡಗಿದ. ಆಕೆ ಇಲ್ಲ ಅಂದಮೇಲೆ ಕಾರಿಗೆ ದಾರಿಬಿಟ್ಟ. ನಾವು ಬಹಳ ಹೊತ್ತು ವಿಚಿತ್ರ ಸ್ಥಿತಿಯಲ್ಲಿದ್ದೆವು.ನನ್ನ ಪಕ್ಕ ಕೂತಿದ್ದ ಮಗು ನನ್ನ ಸ್ನೇಹಿತೆಯದೇ ಅಂತ ಆತನಿಗೆ ಹೇಗೆ ಗೊತ್ತಾಯ್ತು, ಅಷ್ಟು ಹೊತ್ತು ಎಲ್ಲೂ ಕಾಣದ ಆತ ಇದ್ದಕ್ಕಿದ್ದ ಹಾಗೆ ಎಲ್ಲಿಂದ ಬಂದ? ಆತ ಯಾರು.. ಹೀಗೆ ನಮ್ಮೊಳಗೆ ಪ್ರಶ್ನೆ ಮೇಲೆ ಪ್ರಶ್ನೆಗಳೇಳುತ್ತಿದ್ದವು. ಇಂದಿಗೂ ಆತ ನಮ್ಮೆಲ್ಲರಿಗೆ ಪ್ರಶ್ನೆಯಾಗಿಯೇ ಉಳಿದಿದ್ದಾನೆ.