ಐಎಸ್ಐ ಬೆಳೆದದ್ದು ಭುಟ್ಟೋ ಆಡಳಿತದಲ್ಲಿ...

KannadaprabhaNewsNetwork | Updated : Jul 07 2024, 06:07 AM IST

ಸಾರಾಂಶ

ಇತ್ತೀಚೆಗೆ ಬಿಡುಗಡೆಯಾಗಿರುವ, ಸಪ್ನ ಬುಕ್ ಹೌಸ್ ಪ್ರಕಟಿಸಿರುವ ನಿವೃತ್ತ ಡಿ.ಜಿ.ಪಿ ಡಾ.ಡಿ.ವಿ.ಗುರುಪ್ರಸಾದ್ ರಚಿಸಿರುವ ‘ಪಾಕಿಸ್ತಾನದ ಐ.ಎಸ್.ಐ’ ಕೃತಿಯ ಆಯ್ದ ಭಾಗ.

ಡಾ.ಡಿ.ವಿ.ಗುರುಪ್ರಸಾದ

ಬಾಂಗ್ಲಾದೇಶದ ಉಗಮದ ಫಲವಾಗಿ ಪಾಕಿಸ್ತಾನವು ಸಾಕಷ್ಟು ಜನರನ್ನು ಕಳೆದುಕೊಂಡದ್ದಲ್ಲದೇ ಆರ್ಥಿಕವಾಗಿಯೂ ಬಡವಾಗಿತ್ತು. ದೊಡ್ಡ ದೇಶವಾಗಿದ್ದ ಅದು ಇಬ್ಭಾಗವಾಗಿತ್ತು. ದೇಶದ ಸೈನ್ಯಪಡೆ, ನೌಕಾಪಡೆ ಮತ್ತು ವಾಯುಪಡೆಗಳು ಕಡಿತಗೊಂಡಿದ್ದರಿಂದ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳಿಗೆ ತೀವ್ರ ನೋವಾಗಿತ್ತು. 

ಪಾಕಿಸ್ತಾನಿಯರು ತಮ್ಮ ಸಂಪೂರ್ಣ ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿದ್ದರು. ತಮ್ಮ ದೇಶದ ಸೈನ್ಯವು ಭಾರತದ ಸೈನ್ಯದಿಂದ ಸೋಲನ್ನು ಅನುಭವಿಸಿದ್ದು ನುಂಗಲಾರದ ತುತ್ತಾಗಿತ್ತು. ಅಲ್ಲಿಯವರೆಗೆ ಪಾಕಿಸ್ತಾನಿಯರು ತಾವು ಭಾರತಕ್ಕಿಂತ ಮೇಲು ಎಂದು ಭಾವಿಸುತ್ತಿದ್ದರು. ತಮಗಾದ ಈ ಅವಮಾನದ ಸೋಲಿಗೆ ಸೈನ್ಯಾಧಿಕಾರಿಗಳ ಹುಚ್ಚುತನವೇ ಮೂಲಕಾರಣವೆಂದು ಸಾರ್ವಜನಿಕರು ದೂಷಿಸತೊಡಗಿದರು. 

ದೇಶದ ಎಲ್ಲೆಡೆಗಳಲ್ಲಿ ಸಾರ್ವಜನಿಕರು ಸೈನ್ಯಾಧಿಕಾರಿಗಳ ಮೇಲಿನ ತಮ್ಮ ಆಕ್ರೋಶವನ್ನು ಬೇರೆ ಬೇರೆ ರೀತಿಗಳಲ್ಲಿ ಹೊರಹಾಕತೊಡಗಿದರು. ಸರ್ಕಾರಗಳು ತಮ್ಮ ವೈಫಲ್ಯಕ್ಕೆ ಗೂಢಚಾರ ದಳಗಳನ್ನು ದೂರುವುದು ವಾಡಿಕೆ. ಪಾಕಿಸ್ತಾನವೂ ಇದಕ್ಕೆ ಹೊರತಾಗಿರಲಿಲ್ಲ. ಸೈನ್ಯಾಧಿಕಾರಿಗಳು ದೇಶಕ್ಕಾದ ಪರಿಸ್ಥಿತಿಗೆ ಪಿ.ಐ.ಬಿಯನ್ನು ದೂರತೊಡಗಿದರು. 

ಆ ಸಮಯದಲ್ಲಿ ನಿವೃತ್ತಿ ಹೊಂದಿದ್ದ ಜನರಲ್ ಅಯೂಬ್ ಖಾನ್ ಐ.ಎಸ್.ಐ ಬಗ್ಗೆ ತಮಗಾದ ಅಸಮಾಧಾನವನ್ನು ತಮ್ಮ ದಿನಚರಿಯಲ್ಲಿ ಹೀಗೆ ದಾಖಲಿಸಿದ್ದಾರೆ:‘ನಮ್ಮ ದೇಶದ ಗುಪ್ತಚರ ದಳಗಳ ದೌರ್ಬಲ್ಯವೆಂದರೆ ಅವು ಕೊಡುವ ಎಲ್ಲಾ ವರದಿಗಳೂ ನಮಗೆ ಯಾವುದಾದರೂ ವೃತ್ತಪತ್ರಿಕೆಯಿಂದಲೇ ಸಿಗುತ್ತವೆ. ಅವರು ನಮಗೆ ವಸ್ತುಸ್ಥಿತಿಯೇನು ಎಂದು ಹೇಳುವುದೇ ಇಲ್ಲ.

 ಸರ್ಕಾರಕ್ಕೆ ಸೂಕ್ತ ಎಚ್ಚರಿಕೆಯನ್ನು ನೀಡುವುದಿಲ್ಲ. ಇಂತಹ ಸಂಸ್ಥೆಗಳ ನಿರ್ದೇಶಕರಾಗಿ ಪೊಲೀಸ್ ಅಧಿಕಾರಿಗಳು ಇರಬೇಕಾದದ್ದು ಅವಶ್ಯವಾಗಿದೆ. ಏಕೆಂದರೆ ಪೊಲೀಸರಿಗೆ ಜನರ ಮನಸ್ಸನ್ನು ಅರಿಯುವ ಸಾಮರ್ಥ್ಯವಿದೆ’.ಐ.ಎಸ್.ಐ ಇನ್ನೊಂದು ಮಹತ್ವದ ಘಟನೆಯ ಮುನ್ಸೂಚನೆಯನ್ನು ಸರ್ಕಾರಕ್ಕೆ ನೀಡಲು ಅಸಮರ್ಥವಾಗಿತ್ತು.ಯುದ್ಧದಲ್ಲಿ ಪಾಕಿಸ್ತಾನದ ಸೋಲಿನ ನಂತರ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಗಳಲ್ಲಿ ತಮ್ಮ ಮೇಲಾಧಿಕಾರಿಗಳು ಅದರಲ್ಲಿಯೂ ಜ.ಯಾಹ್ಯಾಖಾನ್‌ರ ಮೇಲೆ ಅಸಮಾಧಾನ ಭುಸುಗುಟ್ಟುತ್ತಿತ್ತು. 

ಯಾಹ್ಯಾ ಖಾನ್ ಅಧಿಕಾರವನ್ನು ಹಸ್ತಾಂತರಿಸುವ ಒಂದು ದಿನದ ಮೊದಲು ಸೈನ್ಯಾಧಿಕಾರಿಗಳು ದಂಗೆಯೆದ್ದರು. ಅವರ ಬೇಡಿಕೆ ಒಂದೇ ಆಗಿತ್ತು- ದೇಶದ ಆಡಳಿತವನ್ನು ನಾಗರಿಕರಿಗೆ ವಹಿಸಿಕೊಡುವುದು. ಒಂದು ವೇಳೆ ಯಾಹ್ಯಾ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡದೇ ಹೋದರೆ ತಾವೇ ಅವರನ್ನು ಬಂಧಿಸಿ ಶಿಕ್ಷಿಸುವುದಾಗಿ ಮಿಲಿಟರಿ ಅಧಿಕಾರಿಗಳು ತೀರ್ಮಾನಿಸಿದ್ದರು. ಇದನ್ನು ಕೇಳಿದ ಕೂಡಲೇ ಐ.ಎಸ್.ಐ ಮುಖ್ಯಸ್ಥ ಜಿಲಾನಿ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ನಿರ್ದೇಶಕ ಗಜ್ರನ್‌ವಾಲಾ ಗಾಬರಿಗೊಂಡು ಒಂದು ನಿಮಿಷವೂ ತಡಮಾಡದೆ ದಂಗೆಯೆದ್ದಿದ್ದ ಜನರಲ್‌ಗಳನ್ನು ಭೇಟಿಯಾದರು.

 ಯಾಹ್ಯಾ ಖಾನ್‌ರನ್ನು ಗೃಹ ಬಂಧನದಲ್ಲಿಟ್ಟು ತಮ್ಮ ದೇಶದ ಸೋಲಿಗೆ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂಬ ತೀರ್ಮಾನ ಆ ಜನರಲ್‌ಗಳದ್ದಾಗಿತ್ತು. ಅವರ ಇನ್ನೊಂದು ಬೇಡಿಕೆಯೆಂದರೆ ಕೂಡಲೇ ದೇಶದಲ್ಲಿ ನಾಗರಿಕ ಸರ್ಕಾರವು ಅಸ್ತಿತ್ವಕ್ಕೆ ಬರಬೇಕಾದರೆ ಚುನಾವಣೆಗಳಲ್ಲಿ ಎರಡನೆಯ ಸ್ಥಾನವನ್ನು ಗಳಿಸಿದ್ದ ಭುಟ್ಟೋರನ್ನು ದೇಶದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎನ್ನುವುದು. 

ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡ ರಾಷ್ಟ್ರಾಧ್ಯಕ್ಷ ಜನರಲ್ ಯಾಹ್ಯಾ ಖಾನ್ ತಮ್ಮ ಅಧಿಕಾರವನ್ನು ಚುನಾವಣೆಗಳಲ್ಲಿ ಪಶ್ಚಿಮ ಪಾಕಿಸ್ತಾನದಲ್ಲಿ ಅಭೂತಪೂರ್ವ ಜಯಗಳಿಸಿದ ಜುಲ್ಫಿಕರ್ ಅಲಿ ಭುಟ್ಟೋರಿಗೆ 1971ರ ಡಿಸೆಂಬರ್ 20ರಂದು ಹಸ್ತಾಂತರಿಸಿದರು. ಭುಟ್ಟೋ ಪಾಕಿಸ್ತಾನದ ನಾಲ್ಕನೆಯ ರಾಷ್ಟ್ರಾಧ್ಯಕ್ಷರೆಂದು ದೇಶದ ಅಧಿಕಾರ ವಹಿಸಿಕೊಂಡಾಗ ಅವರ ಸರ್ಕಾರ 1958ರ ನಂತರ ಪಾಕಿಸ್ತಾನದಲ್ಲಿ ಮೂಡಿಬಂದ ಮೊದಲ ನಾಗರಿಕ ಸರ್ಕಾರವಾಗಿತ್ತು. 

ಭುಟ್ಟೋ ಮಾಡಿದ ಮೊದಲ ಕೆಲಸವೆಂದರೆ ಆಡಳಿತದ ಸರ್ಜರಿ. ಅವರು ತಮಗೆ ಆಗದಿರುವ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಿಂದ ಕಿತ್ತು ಹಾಕಿ ಆ ಜಾಗಗಳಿಗೆ ತಮ್ಮ ಆಪ್ತರನ್ನು ನೇಮಿಸಿದರು. ಪಾಕಿಸ್ತಾನದ ಸೈನ್ಯವನ್ನು ಹಿಡಿತದಲ್ಲಿಡಲು ಭುಟ್ಟೋ ಎರಡು ಹೊಸ ಸಂಘಟನೆಗಳನ್ನು ಹುಟ್ಟು ಹಾಕಿದರು. ಅವುಗಳಲ್ಲಿ ಒಂದಾದ ಫೆಡರಲ್ ಸೆಕ್ಯೂರಿಟಿ ಫೋರ್ಸ್ ಅರೆಸೈನ್ಯ ಪಡೆಯಾಗಿತ್ತು.

 ನಾಗರಿಕ ದಂಗೆಗಳಾದಾಗ ಸೈನ್ಯವನ್ನು ಕರೆಯುವ ಬದಲು ಈ ದಳವನ್ನು ಬಳಸಲು ಭುಟ್ಟೋ ಉದ್ದೇಶಿಸಿದರು. ಎರಡನೆಯ ದಳ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ. ತನಿಖಾ ಸಂಸ್ಥೆಯಾಗಿದ್ದ ಇದು ಅಮೆರಿಕದ ಎಫ್.ಬಿ.ಐನಂತೆ ಕೆಲಸ ಮಾಡಬೇಕಿತ್ತು. ಗಡಿ ಭಾಗದಲ್ಲಿ ನಡೆಯುವ ಸ್ಮಗ್ಲಿಂಗ್, ಭಯೋತ್ಪಾದಕ ಕೃತ್ಯಗಳು ಮುಂತಾದವುಗಳ ಬಗ್ಗೆ ಗಮನಹರಿಸುವುದಲ್ಲದೇ ಈ ಸಂಸ್ಥೆಯು ಭೀಕರ ಅಪರಾಧಗಳ ತನಿಖೆಯನ್ನು ಮಾಡಿ ಇಂಟರ್‌ಪೋಲ್ ಜತೆಗೆ ಸಂಪರ್ಕವನ್ನಿಡಬೇಕಾಗಿತ್ತು. 

ಈ ಎರಡೂ ಹೊಸ ದಳಗಳಿಗೆ ಐ.ಎಸ್.ಐ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ಘಟಕಗಳು ಭಯೋತ್ಪಾದಕ ವಿರೋಧಿ ಕೃತ್ಯಗಳ ಬಗ್ಗೆ ನಡೆಸುತ್ತಿದ್ದ ಕೆಲವು ಕಾರ್ಯಗಳನ್ನು ವಹಿಸಿಕೊಡಲಾಯಿತು.ಭುಟ್ಟೋ ಮೂಲತಃ ಅನುಮಾನದ ಸ್ವಭಾವದವರಾಗಿದ್ದ ಕಾರಣದಿಂದ ಅವರು ತಮ್ಮ ಗುಪ್ತಚರ ದಳಗಳಿಗೆ ನೀಡಿದ ಮೊದಲ ಆದೇಶವೆಂದರೆ ಎಲ್ಲಾ ಪ್ರಮುಖ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇಟ್ಟು ಆ ವ್ಯಕ್ತಿಗಳ ಎಲ್ಲಾ ಸಂದೇಹಾಸ್ಪದ ಚಟುವಟಿಕೆಗಳ ಬಗ್ಗೆ ತಮಗೆ ನೇರವಾಗಿ ವರದಿ ಮಾಡಬೇಕು ಎನ್ನುವುದು. ತಮ್ಮ ಹತ್ತಿರದ ಸ್ನೇಹಿತರನ್ನು, ಸಹೋದ್ಯೋಗಿಗಳನ್ನು, ಸಂಬಂಧಿಕರ ಮೇಲೂ ಅವರು ನಿಗಾ ಇಡಿಸಿದ್ದರು.

 ಯಾವುದಾದರೊಂದು ದಿನ ತಮ್ಮನ್ನು ತಮ್ಮ ಸ್ಥಾನದಿಂದ ಕಿತ್ತೊಗೆಯಬಹುದು ಎಂಬ ಭಯ ಭುಟ್ಟೋಗೆ ಇದ್ದ ಕಾರಣ ಅವರು ಪಾಕಿಸ್ತಾನದ ಗೂಢಚಾರ ದಳಗಳ ಮೇಲೆ ಹೆಚ್ಚಿಗೆ ಅವಲಂಬಿಸಲಾರಂಭಿಸಿದರು. ಅವರಿಗೆ ತಮ್ಮ ಗೂಢಚಾರರ ಬಗ್ಗೆಯೂ ಸಂಪೂರ್ಣ ವಿಶ್ವಾಸವಿರಲಿಲ್ಲ. ಹೀಗಾಗಿ ಅವರು ತಮ್ಮ ನಂಬಿಕಸ್ಥ ಅಧಿಕಾರಿ ಲೆಪ್ಟಿನೆಂಟ್ ಜನರಲ್ ಗುಲ್ ಹಸನ್ ಖಾನ್‌ರನ್ನು ಐ.ಎಸ್.ಐ ಮತ್ತು ಮಿಲಿಟರಿ ಅಧಿಕಾರಿಗಳ ಮೇಲೆಯೇ ಬೇಹುಗಾರಿಕೆಯನ್ನು ನಡೆಸಲು ನೇಮಿಸಿದರು. 

ಈ ಅಧಿಕಾರಿ ವಿಶೇಷ ಇಂಟೆಲಿಜೆನ್ಸ್ ಬ್ಯೂರೋ ಸೆಲ್ ಎನ್ನುವ ಹೊಸ ಸಂಸ್ಥೆಯನ್ನು ಆರಂಭಿಸಿ ಐ.ಎಸ್.ಐ ಸೇರಿದಂತೆ ಹಿರಿಯ ಮಿಲಿಟರಿ ಅಧಿಕಾರಿಗಳ ಮೇಲೆ ಬೇಹುಗಾರಿಕೆಯನ್ನು ನಡೆಸಲಾರಂಭಿಸಿದರು. ಆ ಅಧಿಕಾರಿಗಳು ಭುಟ್ಟೋಗೆ ವಿಧೇಯರಾಗಿದ್ದರೋ ಇಲ್ಲವೋ ಎನ್ನುವುದನ್ನು ಗಮನಿಸಿ ಅಧ್ಯಕ್ಷರಿಗೆ ವರದಿಯನ್ನು ಸಲ್ಲಿಸುತ್ತಿದ್ದರು. ಪ್ರತಿಯೊಬ್ಬ ಹಿರಿಯ ಅಧಿಕಾರಿಯ ಬಗ್ಗೆಯೂ ಒಂದು ಕಡತವನ್ನು ಅವರ ಕಚೇರಿಯಲ್ಲಿ ತಯಾರಿಸಲಾಗಿತ್ತು. ಹಿರಿಯ ಅಧಿಕಾರಿಗಳ ಬಗ್ಗೆ ತಮ್ಮ ವರದಿಯಲ್ಲಿ ಲೆಪ್ಟಿನೆಂಟ್ ಗುಲ್ ಹಸನ್ ಸತ್ಯ, ಅಸತ್ಯ, ಗಾಳಿ ಸುದ್ದಿ ಇತ್ಯಾದಿಗಳನ್ನು ಸೇರಿಸುತ್ತಿದ್ದರು. ತಮ್ಮ ವರದಿಗಳಿಂದ ಭುಟ್ಟೋರನ್ನು ಸಂತೃಪ್ತಗೊಳಿಸಬೇಕು ಎನ್ನುವುದೇ ಅವರ ಏಕೈಕ ಉದ್ದೇಶವಾಗಿತ್ತು.

ಆದರೆ ಐ.ಎಸ್.ಐ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ಅಧಿಕಾರಿಗಳು ಚಾಲಾಕಿಗಳಾಗಿದ್ದರು. ಅವರಿಗೆ ಈ ಗುಪ್ತ ವಿಶೇಷ ದಳವನ್ನು ಭುಟ್ಟೋ ರಚಿಸಿರುವುದು ತಿಳಿದಿತ್ತು. ಹೀಗಾಗಿ ಅವರು ತಮ್ಮ ಜಂಟಿ ಬಲವನ್ನು ಉಪಯೋಗಿಸಿ ಗುಲ್ ಹಸನ್ ಖಾನ್‌ರ ಕಾರ್ಯವು ಕುಂಠಿತವಾಗುವಂತೆ ನೋಡಿಕೊಂಡರು.

 ಹೀಗಾಗಿ ಭುಟ್ಟೋ ಮಿಲಿಟರಿ ಅಧಿಕಾರಿಗಳ ಮೇಲೆ ಹೆಚ್ಚಿನ ಪ್ರಭುತ್ವವನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಗೂಢಚಾರ ದಳಗಳನ್ನು ಭುಟ್ಟೋ ಅಗೋಚರ ಶಕ್ತಿಕೇಂದ್ರಗಳು ಎಂದು ಕರೆಯುತ್ತಿದ್ದರು. ಅವು ನನ್ನದೇ ಟೆಲಿಫೋನ್ ಕೂಡ ಕದ್ದಾಲಿಕೆ ಮಾಡಿದ್ದವು ಎಂದವರು ಹೇಳುತ್ತಿದ್ದರು. ಹೀಗಾಗಿ ದೇಶದ ಯಾವುದೇ ಗೂಢಚಾರ ದಳವೂ ಮೇಲುಗೈ ಸಾಧಿಸಬಾರದೆನ್ನುವ ಉದ್ದೇಶದಿಂದ ಭುಟ್ಟೋ ಒಡೆದು ಆಳುವ ರೀತಿಯನ್ನು ಅನುಸರಿಸಿದರು. ಐ.ಎಸ್.ಐ ಮತ್ತು ಪಿ.ಐ.ಬಿ ದಳಗಳ ನಡುವೆ ಬೇಕಂತಲೇ ವೈಮನಸ್ಯವನ್ನು ತರಿಸಿದರು.

 ಅವರು ಮಿಯಾ ಅನ್ವರ್ ಅಲಿ ಎನ್ನುವವರನ್ನು ಪಿ.ಐ.ಬಿ ಯ ಹೊಸ ನಿರ್ದೇಶಕರನ್ನಾಗಿ ನೇಮಿಸಿ ಅವರಿಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟರು. ಆದರೆ ಪಿ.ಐ.ಬಿಗೆ ಅವರು ಹೆಚ್ಚಿನ ಆಯವ್ಯಯವನ್ನು ಕೊಡದೇ ಹೋದದ್ದರಿಂದ ಐ.ಎಸ್.ಐನ ಚಟುವಟಿಕೆಗಳಲ್ಲಿ ವ್ಯತ್ಯಾಸವೇನೂ ಕಾಣಲಿಲ್ಲ.ಗೂಢಚಾರ ದಳಗಳ ಬಗ್ಗೆ ಭುಟ್ಟೋರ ಅಭಿಪ್ರಾಯ ಏನೇ ಆಗಿದ್ದರೂ ಅವರು ಐ.ಎಸ್.ಐ ಮುಖ್ಯಸ್ಥ ಗುಲಾಮ್ ಜಿಲಾನಿ ಖಾನ್ ಅವರನ್ನು ಬದಲಿಸದೇ ಹೋದದ್ದರಿಂದ ಭುಟ್ಟೋರ ಆಡಳಿತದಲ್ಲಿ ಐ.ಎಸ್.ಐ ಇನ್ನೂ ಪ್ರಭಾವಶಾಲಿಯಾದದ್ದಲ್ಲದೇ ಭಾರೀ ಬೆಳವಣಿಗೆಯನ್ನು ಕಂಡಿತು. (ಇತ್ತೀಚೆಗೆ ಬಿಡುಗಡೆಯಾಗಿರುವ, ಸಪ್ನ ಬುಕ್ ಹೌಸ್ ಪ್ರಕಟಿಸಿರುವ ನಿವೃತ್ತ ಡಿ.ಜಿ.ಪಿ ಡಾ.ಡಿ.ವಿ.ಗುರುಪ್ರಸಾದ್ ರಚಿಸಿರುವ ‘ಪಾಕಿಸ್ತಾನದ ಐ.ಎಸ್.ಐ’ ಕೃತಿಯ ಆಯ್ದ ಭಾಗ. ಕೃತಿಯ ಬೆಲೆ ₹295.)

Share this article