ಬೆಂಗಳೂರಿಗೆ ಮೊಟ್ಟ ಮೊದಲು ಲ್ಯಾಮಿನೇಶನ್‌ ತಂದ ಸಾಧಕ ಟಿ ಎಸ್‌ ನಾಗರಾಜ್‌

KannadaprabhaNewsNetwork | Updated : Jun 30 2024, 06:07 AM IST

ಸಾರಾಂಶ

ಬೆಂಗಳೂರಿಗೆ ಮೊಟ್ಟ ಮೊದಲು ಲ್ಯಾಮಿನೇಶನ್‌ ಟೆಕ್ನಾಲಜಿ ಪರಿಚಯಿಸಿದ ಟಿ ಎಸ್‌ ನಾಗರಾಜ್‌ ಅವರಿಗೆ ಮುದ್ರಣ ರತ್ನ ಪ್ರಶಸ್ತಿ.

‘ಅಪ್‌ಡೇಟ್‌ ಆಗಬೇಕು, ಹೊಸ ಹೊಸತನ್ನು ಕಲಿಯುತ್ತಲೇ ಇರಬೇಕು..’

ಇದು ಈಗಿನ ಜೆನ್‌ ಝಡ್‌ ಹುಡುಗನ ಮಾತಲ್ಲ. ಎಪ್ಪತ್ತೊಂದರ ಹರೆಯದ ಮುದ್ರಣ ಕ್ಷೇತ್ರದಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿರುವ ‘ಗೌರಿ ಲ್ಯಾಮಿನೇಟರ್ಸ್‌’ ಸಂಸ್ಥಾಪಕ ಟಿ ಎಸ್‌ ನಾಗರಾಜ್‌ ಅವರ ಅನುಭವದ ಮಾತು.

ಈಗ ಎಲ್ಲರೂ ಜಪಿಸುತ್ತಿರುವ ‘ಅಪ್‌ಡೇಟ್‌’ ಮಂತ್ರವನ್ನು ನಾಗರಾಜ್‌ 80 ರ ದಶಕದಲ್ಲೇ ಪಠಿಸಿದ್ದಾರೆ. ಪರಿಣಾಮ 1982ರಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ಲ್ಯಾಮಿನೇಶನ್ ಟೆಕ್ನಾಲಜಿ ಪರಿಚಯಿಸುವುದು ಇವರಿಂದ ಸಾಧ್ಯವಾಯಿತು. ಆ ಬಳಿಕ ಮುದ್ರಣ ಹಾಗೂ ಲ್ಯಾಮಿನೇಶನ್‌ ಮಾಧ್ಯಮದಲ್ಲಿ ಹಲವು ಹೊಸತನ್ನು ಪರಿಚಯಿಸುತ್ತಲೇ ಬಂದಿದ್ದಾರೆ.

ಇವರ ಲೈಫಿನ ಕೆಲವು ಆಸಕ್ತಿಕರ ಅಂಶಗಳು ಇಲ್ಲಿವೆ.

*

ಅದು ಸ್ವಾತಂತ್ರ್ಯ ಪೂರ್ವಕಾಲ. ನಾರಾಯಣ ಶೆಟ್ಟಿ ಎಂಬವರು ಮೈಸೂರು ರಾಜರ ಆಸ್ಥಾನದಲ್ಲಿ ಟಂಕಸಾಲೆಯ ಮುಖ್ಯಸ್ಥರಾಗಿದ್ದವರು. ಜೊತೆಗೆ ನಾಡಿನ ಬೇರೆ ಬೇರೆ ಭಾಗಗಳಿಂದ ಕಂದಾಯ ಸಂಗ್ರಹವನ್ನೂ ಮಾಡುತ್ತಿದ್ದರು. ಅವರು ಒಮ್ಮೆ ಬೆಂಗಳೂರಿಗೆ ಬಂದು ಕಂದಾಯ ಸಂಗ್ರಹಿಸುವ ವಾಪಾಸು ಮೈಸೂರಿಗೆ ಹೋಗುವಾಗ ದಾರಿ ಮಧ್ಯೆ ಆ ಹಣ ದರೋಡೆಯಾಗುತ್ತದೆ. ಧೃತಿಗೆಡದ ಶೆಟ್ಟರು ತಮ್ಮ ಎಲ್ಲ ಆಸ್ತಿ ಮಾರಿ ಬಂದ ಹಣದಿಂದ ಮಹಾರಾಜರಿಗೆ ಕಂದಾಯ ನೀಡುತ್ತಾರೆ. ಇವರ ಪ್ರಾಮಾಣಿಕತೆಗೆ ಮಹಾರಾಜರು ನೀಡುವ ಬಿರುದೇ ‘ಟಂಕಸಾಲೆ’. ಈ ಟಂಕಸಾಲೆ ನಾರಾಯಣ ಶೆಟ್ಟಿ ಅವರು ಟಿ ಎಸ್‌ ನಾಗರಾಜ್‌ ಅವರ ತಾತನ ತಂದೆ. ನಾಗರಾಜ್‌ ಅವರ ಹೆಸರಿನಲ್ಲಿರುವ ‘ಟಿ’ ಇನೀಷಿಯಲ್ಲಿನ ಹಿನ್ನೆಲೆ ಈ ಟಂಕಸಾಲೆ ಕಥೆ.

*

ಟಿ ಎಸ್‌ ನಾಗರಾಜ್‌ ಅವರ ತಾತ ಕೃಷ್ಣಯ್ಯ ಶೆಟ್ಟಿ ಸ್ವಾತಂತ್ರ್ಯಪೂರ್ವದಲ್ಲೇ ಬೆಂಗಳೂರಿನಲ್ಲಿ ಮುದ್ರಣ ಕೇಂದ್ರ ಆರಂಭಿಸಿದವರು. ಲೆಕ್ಕಕ್ಕೆ ಸಿಗದಷ್ಟು ಧಾರ್ಮಿಕ, ಆಧ್ಯಾತ್ಮಿಕ ಕೃತಿಗಳನ್ನು ಪ್ರಕಟಿಸಿದವರು.

ಇಂಥಾ ಪರಿಸರದಲ್ಲಿ ಹಳೆಯ ಕಾಲದ ದೈತ್ಯ ಮುದ್ರಣದ ಯಂತ್ರಗಳನ್ನು ನೋಡುತ್ತಾ ಬೆಳೆದ ನಾಗರಾಜ್‌ ಅವರಿಗೆ ಬಾಲ್ಯದಿಂದಲೇ ಈ ಪ್ರಿಂಟಿಂಗ್‌ ತಂತ್ರಜ್ಞಾನದ ಕುತೂಹಲ. ಈ ಕ್ಷೇತ್ರದಲ್ಲಿ ಹೊಸತೇನಾದರೂ ಮಾಡುವ ತುಡಿತ. ಅದಕ್ಕೆ ಹತ್ತನೇ ಕ್ಲಾಸ್‌ ಮುಗಿಸಿ ಮುದ್ರಣ ಕ್ಷೇತ್ರದಲ್ಲೇ ಡಿಪ್ಲೊಮಾ ಪದವಿ ಪಡೆಯುತ್ತಾರೆ. ಮುಂದೆ ತಮ್ಮ ಉಪನ್ಯಾಸಕರಿಂದ ಈ ಬಗ್ಗೆ ಇನ್ನಷ್ಟು ಅರಿತು ಈ ಕ್ಷೇತ್ರದಲ್ಲೇ ಉದ್ಯೋಗಕ್ಕೆ ಮುಂದಾಗುತ್ತಾರೆ. ಒಂದಿಷ್ಟು ವರ್ಷಗಳ ಅನುಭವದ ಬಳಿಕ ಇವರ ಬದುಕಿನಲ್ಲಿ ಮಹತ್ವದ ತಿರುವು ಬರುತ್ತದೆ.

*

ಅದು ಎಂಭತ್ತರ ದಶಕದ ಪೂರ್ವಾರ್ಧ. ಒಮ್ಮೆ ಪುಸ್ತಕ ಮಳಿಗೆಯಲ್ಲಿ ಪುಸ್ತಕಗಳತ್ತ ಕಣ್ಣಾಡಿಸುತ್ತಿದ್ದಾಗ ಒಂದು ಪುಸ್ತಕ ಇವರ ಗಮನಸೆಳೆಯುತ್ತದೆ. ಅದಕ್ಕೆ ಕಾರಣ ಅದರ ಮುಖಪುಟದ ಹೊಳಪು. ಅಚ್ಚರಿಯಿಂದಲೇ ಆ ಬಗ್ಗೆ ವಿಚಾರಿಸಿದಾಗ ಅದು ಲ್ಯಾಮಿನೇಶನ್‌ ಮಾಡಿರುವ ಮುಖಪುಟ ಅನ್ನುವುದು ಗೊತ್ತಾಗುತ್ತದೆ. ಈ ಲ್ಯಾಮಿನೇಶನ್‌ ಮರ್ಮವನ್ನು ಅರಸುತ್ತಾ ಹೋದಾಗ ತಿಳಿದದ್ದು ಮುಂಬೈಯಲ್ಲಿ ಮಿಶ್ರಾ ಎಂಬವರ ಬಳಿ ಇಂಥಾ ಲ್ಯಾಮಿನೇಶನ್‌ ಮಾಡುವ ಮೆಶೀನ್‌ಗಳಿವೆ ಎಂದು. ಪಟ್ಟು ಬಿಡದೇ ಮುಂಬೈಗೆ ಹೋಗುತ್ತಾರೆ. ಅಲ್ಲಿ ಲ್ಯಾಮಿನೇಶನ್‌ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು ಬೆಂಗಳೂರಿಗೆ ಮರಳುತ್ತಾರೆ.

ಹೇಗಾದರೂ ಮಾಡಿ ಆ ಟೆಕ್ನಾಲಜಿಯನ್ನು ಬೆಂಗಳೂರಿಗರಿಗೆ ಪರಿಚಯಿಸಬೇಕು ಎಂಬ ಕನಸು ಮೊಳೆಯುತ್ತದೆ. ಆದರೆ ಮನೆಯವರಿಂದ ಹಣ ಪಡೆಯಬಾರದು, ಸ್ವತಂತ್ರವಾಗಿ ತನ್ನ ಕನಸನ್ನು ನನಸು ಮಾಡಬೇಕು ಎಂಬ ಯೋಚನೆ. ಮೆಶಿನ್‌ ಖರೀದಿಗೆ ಸಿಕ್ಕ ಸಿಕ್ಕ ಬ್ಯಾಂಕ್‌ಗಳಿಗೆ ಅಲೆಯುತ್ತಾರೆ. ಆವರೆಗೆ ಇಂಥದ್ದೊಂದು ಟೆಕ್ನಾಲಜಿಯನ್ನು ಕಣ್ಣಿಂದ ನೋಡಿಯೂ ಗೊತ್ತಿರದ ಬ್ಯಾಂಕ್‌, ಫೈನಾನ್ಸ್‌ಗಳು ಇದಕ್ಕೆ ಹಣ ಸುರಿಯಲು ಸುತಾರಾಂ ಒಪ್ಪುವುದಿಲ್ಲ. ಕೊನೆಗೂ ಎಡೆಬಿಡದ ಪ್ರಯತ್ನಕ್ಕೆ ಫಲ ಸಿಕ್ಕಿ ಒಂದು ಕಡೆ ಆರ್ಥಿಕ ಸಹಾಯ ಸಿಗುತ್ತದೆ.

ಹೀಗೆ 1982ರ ಅಕ್ಟೋಬರ್‌ನಲ್ಲಿ ಬೆಂಗಳೂರಿಗೆ ಮೊತ್ತ ಮೊದಲ ಲ್ಯಾಮಿನೇಶನ್‌ ತಂತ್ರಜ್ಞಾನ ಅಡಿ ಇಡುತ್ತದೆ.

‘ಸಟೀಕ ವ್ರತರತ್ನಂ’ ಎಂಬ ವಿವಿಧ ವ್ರತಗಳ ಕುರಿತು ಇವರು ಹೊರತಂದಿರುವ ಕೃತಿಯೇ ಕನ್ನಡದ ಮೊಟ್ಟ ಮೊದಲ ಲ್ಯಾಮಿನೇಶನ್‌ ಮುಖಪುಟ ಇರುವ ಕೃತಿ.

ಮುಂದೆ ಇದೇ ಟೆಕ್ನಾಲಜಿ ಬಳಸಿ ಜಿ ವಿ ಅಯ್ಯರ್‌ ಅವರ ‘ಶಾಂತಲಾ’ ಕಾದಂಬರಿ ಲ್ಯಾಮಿನೇಶನ್‌ ಕವರ್‌ ಪೇಜ್‌ನೊಂದಿಗೆ ಹೊರಬರುತ್ತದೆ. ಹೊಸ ತಂತ್ರಜ್ಞಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನವರೂ ನೂರಾರು ಕೃತಿಗಳ 5000ಕ್ಕೂ ಅಧಿಕ ಪ್ರತಿಗಳ ಮುಖಪುಟವನ್ನು ಲ್ಯಾಮಿನೇಶನ್‌ನೊಂದಿಗೆ ಹೊರತರುತ್ತಾರೆ.

*

ಒಮ್ಮೆ ಅಂತಾರಾಷ್ಟ್ರೀಯ ಮಟ್ಟದ ಮೆಕ್‌ ಡೊನಾಡ್‌ನ ಪ್ರಾಜೆಕ್ಟ್‌ ಕೈ ಸೇರುವ ಮೊದಲು ಒಂದು ಸವಾಲು ಎದುರಾಗುತ್ತದೆ. ಆ ಕಂಪನಿಯವರು ದೀರ್ಘಕಾಲ ಪ್ರಿಂಟ್‌ನ ಬಣ್ಣದಲ್ಲಿ ವ್ಯತ್ಯಾಸ ಆಗಬಾರದು. ವರ್ಷವಾದರೂ ಕೆಂಪು ಬಣ್ಣ ಗುಲಾಬಿಯಾಗಿ ಬದಲಾಗಬಾರದು ಎಂಬ ಷರತ್ತು ಹಾಕುತ್ತಾರೆ. ಆ ಹೊತ್ತಿಗೆ ಅವರ ಬಳಿ ಇದ್ದ ಮೆಟೀರಿಯಲ್‌ ಇಟ್ಟುಕೊಂಡು ಅಂಥಾ ಪ್ರತಿ ರೆಡಿ ಮಾಡುವುದು ಕಷ್ಟ. ಹಗಲಿರುಳೂ ಈ ಬಗ್ಗೆ ತಲೆ ಕೆಡಿಸಿಕೊಂಡಾಗ ಇವರ ಕಣ್ಣಿಗೆ ಬೀಳುವುದು ಮನೆಯ ಕಬೋರ್ಡ್‌ನಲ್ಲಿದ್ದ ಒಂದು ಕ್ಯಾಪ್ಸೂಲ್‌! ಆ ಕ್ಯಾಪ್ಸೂಲನ್ನು ಕೈಗೆ ತೆಗೆದುಕೊಂಡು ನೋಡುತ್ತಾರೆ. ಅದರಲ್ಲಿ ಬಳಸುವ ಬಹು ಸೂಕ್ಷ್ಮ ಲ್ಯಾಮಿನೇಶನ್‌ ನೋಡುತ್ತಿದ್ದಂತೆ ಬಂಡೆಯ ಹಾಗಿದ್ದ ಸವಾಲು ಕರಗಿಯೇ ಹೋಗುತ್ತದೆ. ಮುಂದೆ ಈ ಕ್ಯಾಪ್ಸೂಲ್‌ನ ತಂತ್ರಜ್ಞಾನವನ್ನೇ ಬಳಸಿ ಲ್ಯಾಮಿನೇಶನ್‌ ಕ್ಷೇತ್ರದಲ್ಲಿ ಬಣ್ಣಕ್ಕೆ ಕೊಂಚವೂ ಕುಂದುಂಟಾಗದ ಹೊಸ ಟೆಕ್ನಾಲಜಿಯನ್ನು ತಾವೇ ಅಭಿವೃದ್ಧಿಪಡಿಸುತ್ತಾರೆ. ಇಂದಿಗೂ ಲ್ಯಾಮಿನೇಶನ್‌ ಕ್ಷೇತ್ರದಲ್ಲಿ ಈ ತಂತ್ರದ ವ್ಯಾಪಕ ಬಳಕೆಯಾಗುತ್ತಿದೆ. ಲ್ಯಾಮಿನೇಷನ್ ಜೊತೆಗೆ ಪರ್ಫೆಕ್ಟ್ ಬೈಂಡಿಂಗ್ ಎಂಬ ತಂತ್ರವನ್ನು ಕನ್ನಡ ಸಾಹಿತ್ಯ ಲೋಕದ ಪುಸ್ತಕಗಳಿಗೆ ಪರಿಚಯಿಸಿದ್ದಾರೆ.

42 ವರ್ಷಗಳಿಂದ ಅದೆಷ್ಟೋ ಪುಸ್ತಕಗಳ ಮುಖಪುಟಗಳಿಗೆ ಲ್ಯಾಮಿನೇಷನ್ ಮಾಡಿ ಪುಸ್ತಕಗಳನ್ನು ಗಾಳಿ ಮತ್ತು ತೇವಾಂಶಗಳಿಂದ ಕಾಪಿಟ್ಟು ಇಂದಿನವರಿಗೂ ಸಿಗುವಂತೆ ಮಾಡಿದ್ದಾರೆ. 20 ವರ್ಷಗಳ ಕೆಳಗೆಯೇ ಇಂದು ಜನಪ್ರಿಯವಾಗಿರುವ ನರ್ಲಿಂಗ್‌ ತಂತ್ರವನ್ನು ಅರಿತವರಿವರು. ಥರ್ಮಲ್‌ ಲ್ಯಾಮಿನೇಶನ್‌ ಅನ್ನು ನಮ್ಮ ರಾಜ್ಯಕ್ಕೆ ಪರಿಚಯಿಸಿದವರು.

ಇವರ ಆಫೀಸಿಗೆ ಹೋದರೆ ಲ್ಯಾಮಿನೇಶನ್‌ ಕ್ಷೇತ್ರದಲ್ಲಿ ಯಾವ ರೀತಿಯ ಹೊಸ ತಂತ್ರಜ್ಞಾನ ಬಂದಿದೆ ಅನ್ನೋದನ್ನು ತಿಳಿಯಬಹುದು. ಥರ್ಮಲ್‌ ಲ್ಯಾಮಿನೇಶನ್‌, ವೆಲ್ವೆಟ್‌ ಲ್ಯಾಮಿನೇಶನ್‌, ಸ್ಪಾರ್ಕಲ್‌ ಲ್ಯಾಮಿನೇಶನ್‌, ಸಿಲ್ಕಿ ಲ್ಯಾಮಿನೇಶನ್‌, ವಿವಿಧ ಬಗೆಯ ಸ್ಪಾಟ್‌ ಲ್ಯಾಮಿನೇಶನ್‌.. ಹೀಗೆ ಜಗತ್ತಿನ ವೈವಿಧ್ಯಮಯ ಲ್ಯಾಮಿನೇಶನ್‌ ತಂತ್ರಗಳನ್ನು ಬಳಸಿ ಮುದ್ರಿಸಿರುವ ಸ್ಯಾಂಪಲ್‌ಗಳು ಇವರ ಟೇಬಲ್‌ ಮೇಲಿರುತ್ತವೆ. ಈ ಮೂಲಕ ನಮ್ಮ ಕನ್ನಡ ಕೃತಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟ ತಂದುಕೊಟ್ಟ ಹಿರಿಮೆಯೂ ಇವರಿಗೆ ಸಲ್ಲುತ್ತದೆ. ಇದೀಗ ಅವರ ಮಗ ವಿನಾಯಕ್, ಮಗಳು ಗೌರಿ ಈ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ನಾಗರಾಜರು ಇವತ್ತಿಗೂ ಹೊಸ ತಂತ್ರಜ್ಞಾನವನ್ನು ಮಗು ಸಹಜ ಕುತೂಹಲದಿಂದ ಕೇಳುತ್ತಾರೆ. ಜರ್ಮನಿಗೆ ಹೋಗಿ ಅಲ್ಲಿ ಈ ಕ್ಷೇತ್ರದ ಹೊಸ ಬೆಳವಣಿಗೆಗಳನ್ನು ಕಂಡು ತಮ್ಮಲ್ಲೂ ಅಳವಡಿಸಲು ಮುಂದಾಗುತ್ತಾರೆ. ಅನೇಕ ಹೊಸಬರಿಗೆ ಮಾರ್ಗದರ್ಶನ ನೀಡಿ ಬೆಳೆಸಿದ್ದಾರೆ.‘ನಂಗೆ ಕೊನೇತನಕ ಪ್ರಿಂಟಿಂಗ್‌ನಲ್ಲಿ ಹೊಸ ಸಾಧ್ಯತೆಗಳನ್ನು ಕಲಿಯುತ್ತಲೇ ಕಳೆಯಬೇಕು ಅಂತಾಸೆ’ ಎಂದು ಕಣ್ಣರಳಿಸುವ ಇವರು, ‘ಆರೋಗ್ಯ ಸರಿ ಇಲ್ದೇ ಆಸ್ಪತ್ರೆ ಸೇರಿದ್ದೆ, ಆಗ ಈ ಮುದ್ರಣ ರತ್ನ ಪ್ರಶಸ್ತಿ ಬಂದಿರುವ ಸುದ್ದಿ ಗೊತ್ತಾಯ್ತು. ಭಾಳ ಖುಷಿ ಆಯ್ತು’ ಎಂದು ಸಂಭ್ರಮದಿಂದ ಹೇಳುತ್ತಾರೆ. ಆ ಖುಷಿ, ಅಪ್‌ಡೇಟ್‌ ಆಗುವ ಹುಮ್ಮಸ್ಸೇ ಇವರನ್ನು ವಯಸ್ಸಾಗದಂತೆ ಮಾಡಿದೆ ಎಂದರೆ ತಪ್ಪಿಲ್ಲ.

Share this article