ಗೋಪಾಲಕೃಷ್ಣ ಕುಂಟಿನಿ ಅವರ ವ್ಯಾಸ ಭಾರತದ ರಮಣೀಯತೆ - ಕೃಷ್ಣ, ಕುಂತಿ-ಕರ್ಣನ ಪ್ರಸಂಗಗಳು

KannadaprabhaNewsNetwork | Updated : Oct 27 2024, 05:21 AM IST

ಸಾರಾಂಶ

ವ್ಯಾಸ ಭಾರತದ ರಮಣೀಯ ಪ್ರಸಂಗವನ್ನಿಲ್ಲಿ ಲೇಖಕರು ಸೊಗಸಾಗಿ ಬರೆದಿದ್ದಾರೆ.

- ಗೋಪಾಲಕೃಷ್ಣ ಕುಂಟಿನಿ

1. ಒಂದು ಬಿಂದಿಗೆ ನೀರು ಮತ್ತು ಕುಶಲವೇ ಎಂಬ ಮಾತು ಶರದೃತು ಮುಗಿದು ಹೇಮಂತ ಆರಂಭವಾದ ಹೊತ್ತು. ಚುಮುಚುಮು ಬೆಳಗು. ಕೃಷ್ಣ ಹಸ್ತಿನಾವತಿಗೆ ರಾಯಭಾರಕ್ಕೆ ಹೊರಟ.

ಹೋಗುತ್ತಿರುವುದು ದುಷ್ಟರ ಬಳಿಗೆ. ಶತ್ರುಪಾಳಯವನ್ನು ನಿರ್ಲಕ್ಷಿಸುವಂತಿಲ್ಲ. ಗದೆ,ಈಟಿ, ಶಂಖಚಕ್ರಗಳನ್ನು ರಥಕ್ಕೆ ಏರಿಸಿಕೊಂಡಿದ್ದ. ಬಣ್ಣದ ರಥಕ್ಕೆ ದಾರುಕ ಸಾರಥಿ.

ಕೃಷ್ಣನನ್ನು ಕೊಂಚ ದೂರ ಹಿಂಬಾಲಿಸಿ ಬಂದ ಯುಧಿಷ್ಠಿರ ಅವನನ್ನು ಆಲಂಗಿಸಿ, ‘ಅಮ್ಮ ಕುಂತಿಯ ಕುಶಲ ವಿಚಾರಿಸಿಕೊಂಡಿರು, ಜೊತೆಗೆ ಧೃತರಾಷ್ಟ್ರ,ಭೀಷ್ಮಾದಿಗಳನ್ನೂ ನಾವು ಕೇಳಿದ್ದೇವೆ ಎನ್ನು, ಅವರಿಗೆ ನಮ್ಮ ನಮಸ್ಕಾರ ತಿಳಿಸು’ ಎಂದ. ಅರ್ಜುನ, ‘ಕೌರವರಲ್ಲಿ ಅರ್ಧರಾಜ್ಯವನ್ನೇ ಕೇಳು, ಕೊಡದೇ ಇದ್ದರೆ ಅವರನ್ನು ನಾನು ಮುಗಿಸುತ್ತೇನೆ’ ಎಂದ.

ಕೃಷ್ಣನ ರಥ ಸಾಗುತ್ತಿತ್ತು. ಹಾದಿ ಮಧ್ಯೆ ಋಷಿಗಳ ದಂಡು. ಕೃಷ್ಣ ರಥದಿಂದ ಇಳಿದು,ಅವರಿಗೆ ನಮಸ್ಕರಿಸಿ ಕುಶಲ ವಿಚಾರಿಸಿದ. ಪರಶುರಾಮ ಹೇಳಿದ, ‘ಕೃಷ್ಣ ನಿನ್ನ ಸಂಧಾನಸಭೆಯಲ್ಲಿ ನಾವೂ ವೀಕ್ಷಕರಾಗಿ ಪಾಲ್ಗೊಳ್ಳಲು ಹೊರಟಿದ್ದೇವೆ, ನೀನು ಮುಂದುವರಿ, ನಾವೂ ಸಾವಕಾಶ ಮಾಡಿಕೊಂಡು ಬರುತ್ತೇವೆ.’

ಕೃಷ್ಣ ಹಸ್ತಿನಾವತಿಗೆ ಸಾಗುತ್ತಿರುವ ಸುದ್ದಿ ಊರಂತೂರ ಹಬ್ಬಿತ್ತು. ಜನ ಕೃಷ್ಣನನ್ನು ನೋಡಲು ದಾರಿಯುದ್ದಕ್ಕೂ ಗುಂಪುಗುಂಪಾಗಿ ಸೇರಿದ್ದರು. ಹೆಣ್ಮಕ್ಕಳು ಅವನ ಮೇಲೆ ಕಾಡಿನ ಹೂವುಗಳನ್ನು ಸುರಿದರು. ವೃಕಸ್ಥಲವನ್ನು ತಲುಪುವಾಗ ಸಂಜೆಗತ್ತಲಾಯಿತು. ಕೃಷ್ಣ ಆ ಊರಲ್ಲೇ ವಿಶ್ರಾಂತಿಗೆ ನಿಶ್ಚಯಿಸಿದ. ತಮ್ಮೂರಲ್ಲಿ ರಾತ್ರಿ ಕೃಷ್ಣ ತಂಗುತ್ತಾನೆ ಎಂದು ಗೊತ್ತಾಗಿ ಊರವರು ಭಾರೀ ಅಡುಗೆ ಸಿದ್ಧಪಡಿಸತೊಡಗಿದರು. ತಮ್ಮ ಮನೆಗೆ ಬರಬೇಕು ಎಂದು ಜನ ದುಂಬಾಲು ಬಿದ್ದರು.

ಕೃಷ್ಣ ಬರುತ್ತಿರುವ ಸುದ್ದಿ ಹಸ್ತಿನಾವತಿಗೆ ತಲುಪಿತ್ತು. ಧೃತರಾಷ್ಟ್ರ ಮಗನನ್ನು ಕರೆಸಿದ. ‘ಕೃಷ್ಣ ಬರುತ್ತಿದ್ದಾನೆ, ಅದ್ಭುತ ಮತ್ತು ಮಹದಾಶ್ಚರ್ಯದ ಸುದ್ದಿ ಇದು. ಅವನನ್ನು ಭವ್ಯವಾಗಿ ಬರಮಾಡಿಕೊಳ್ಳಬೇಕು. ಅವನನ್ನು ಪೂಜಿಸಿದರೆ ಸುಖ, ಇಲ್ಲದಿದ್ದರೆ ಅಸುಖ. ಅವನ ಪೂಜೆಗೆ ಬೇಕಾದುದನ್ನು ಸಿದ್ಧಗೊಳಿಸು.’

ಅಪ್ಪನ ಮಾತಿನಂತೆ ದುರ್ಯೋಧನ ದಾರಿಯುದ್ದಕ್ಕೂ ರಮ್ಯ ಸಭಾಭವನಗಳನ್ನು ಕಟ್ಟಿಸಲು ಆದೇಶಿಸಿದ.

ಕೃಷ್ಣನ ಸ್ವಾಗತಕ್ಕೆ ಬಣ್ಣದ ಆಸನಗಳನ್ನಿಡಲಾಯಿತು. ಹೆಣ್ಮಕ್ಕಳು ಸುಗಂಧ ಅಲಂಕಾರಗಳನ್ನು ಹಿಡಿದುಕೊಂಡರು. ಬಗೆಬಗೆಯ ಅನ್ನಪಾನೀಯಗಳ ಭೋಜನ ಸಿದ್ಧವಾಯಿತು. ಧೃತರಾಷ್ಟ್ರ ವಿದುರನನ್ನು ಕರೆಸಿದ.

ಕೃಷ್ಣನ ಸತ್ಕಾರಕ್ಕೆ ತಾನು ಏನೆಲ್ಲಾ ವ್ಯವಸ್ಥೆ ಮಾಡುತ್ತಿದ್ದೇನೆ ಎಂದು ವಿವರಿಸಿದ. ‘ಹದಿನಾರು ರಥಗಳು, ಎಂಟು ಆನೆಗಳು, ಬಂಗಾರದ ಬಣ್ಣದ ನೂರು ಸುಂದರ ದಾಸಿಯರು, ನೂರು ದಾಸರು, ಹದಿನೆಂಟು ಸಾವಿರ ಮೃದು ಕಂಬಳಿಗಳು, ವಿಮಲ ಮಣಿಯನ್ನು ಕೃಷ್ಣನಿಗೆ ಉಡುಗೊರೆ ಕೊಡುತ್ತೇನೆ. ಅವನ ಜೊತೆ ಬಂದವರಿಗೆ ಭೂರಿಭೋಜನ ಹಾಕಿಸುತ್ತೇನೆ. ಕೃಷ್ಣನ ಸ್ವಾಗತಕ್ಕೆ ದುರ್ಯೋಧನನನ್ನು ಬಿಟ್ಟು ಎಲ್ಲಾ ಮಕ್ಕಳೂ ಮೊಮ್ಮಕ್ಕಳೂ ಹೋಗುತ್ತಾರೆ. ಅವನು ಬರುವ ದಾರಿಯಲ್ಲಿ ಧೂಳು ಹಾರದಂತೆ ನೀರು ಸಿಂಪಡಿಸಲಾಗುತ್ತದೆ. ವಾಸ್ತವ್ಯಕ್ಕೆ ದುಶ್ಯಾಸನನ ಮನೆಯನ್ನು ಒಪ್ಪ ಓರಣವಾಗಿಸಲಾಗಿದೆ…’

ವಿದುರನಿಗೆ ಅಣ್ಣನ ಕಪಟ ಅರ್ಥವಾಗಿತ್ತು.

ಅವನೆಂದ, ‘ಅಯ್ಯಾ, ನೀನು ಏನೇ ಕೊಡಲು ಬಯಸುವೆಯೋ ಅದಕ್ಕಿಂತ ಹೆಚ್ಚಿನದು ಕೃಷ್ಣ. ಇದೆಲ್ಲಾ ತೋರ್ಪಡಿಕೆ ಎಂದೂ ನನಗೆ ಗೊತ್ತು. ಪಾಂಡವರು ಐದು ಗ್ರಾಮಗಳನ್ನು ಕೇಳುತ್ತಿದ್ದಾರೆ, ನೀನು ಕೊಡಬೇಕಾಗಿರುವುದು ಅದು, ಇದಲ್ಲ. ಕೃಷ್ಣನನ್ನು ಸತ್ಕರಿಸಿ ನೀನು ಪಾಂಡವರನ್ನು ಬೇರ್ಪಡಿಸಲು ನೋಡುತ್ತಿದ್ದೀಯೆ, ಇದು ಆಗುವುದಿಲ್ಲ ಬಿಡು. ಕೃಷ್ಣನಿಗೆ ಬೇಕಾಗಿರುವುದು ಒಂದು ಬಿಂದಿಗೆ ನೀರು ಮತ್ತು ಕುಶಲವೇ ಎಂಬ ಮಾತು. ಅದನ್ನು ಮಾಡು. 

2. ಮಗನನ್ನು ಕಾಣುವ ಹೊತ್ತುಕುಂತಿ ಕೃಷ್ಣನಿಗೆ ಹೇಳಿದಳು, ‘ನಾನೊಮ್ಮೆ ಕರ್ಣನನ್ನು ಭೇಟಿ ಮಾಡಲೇಬೇಕು.’

ನನಗೆ ಈ ಯುದ್ಧದಲ್ಲಿ ಭಯವಿರುವುದು ಮೂವರ ಮೇಲೆ. ಭೀಷ್ಮ, ದ್ರೋಣ ಮತ್ತು ಕರ್ಣ. ಮೊದಲ ಇಬ್ಬರು ಪಾಂಡವರ ಮೇಲೆ ಪ್ರೀತಿ ಉಳ್ಳವರು. ಅವರು ಯುದ್ಧ ಮಾಡದೆಯೂ ಇರಬಹುದು. ಆದರೆ ಕರ್ಣ ಹಾಗಲ್ಲ. ಅವನಿಗೆ ಪಾಂಡವರ ಮೇಲೆ ವಿಪರೀತ ದ್ವೇಷ ಇದೆ. ನಾನೀಗ ಅವನ ಬಳಿ ಹೋಗಿ ಅವನಲ್ಲಿ ಕರುಣೆಯನ್ನು ಬೇಡುವೆ, ಅವನನ್ನು ಪಾಂಡವರ ಕಡೆಗೆ ಸೆಳೆಯುವೆ.’

ಕರ್ಣ ಗಂಗಾತಟದಲ್ಲಿ ನಿಂತು ಜಪ ಮಾಡುತ್ತಿದ್ದ. ವ್ಯಾಸರು ಬರೆಯುತ್ತಾರೆ, ..ಕುಂತಿ ಮಗನು ಪಠಿಸುತ್ತಿರುವ ಮಂತ್ರಗಳನ್ನು ಕೇಳಿದಳು. ಅವನ ಜಪ ಮುಗಿಯುವ ತನಕ ಕಾದಳು. ಎಲ್ಲಿ ಕಾದಳು?

ವ್ಯಾಸರು ಬರೆಯುತ್ತಾರೆ, ಕುಂತಿ ಪೂರ್ವಕ್ಕೆ ಮುಖಮಾಡಿ ಕೈಗಳನ್ನೆತ್ತಿಕೊಂಡು ಜಪ ಮಾಡುತ್ತಿದ್ದ ಕರ್ಣನ ಉತ್ತರೀಯದ ನೆರಳಲ್ಲಿ ಕಾದುನಿಂತಳು. ಮುದ್ದಾಡದ, ಹಾಲುಣಿಸದ, ಮಲಮೂತ್ರಗಳನ್ನು ಮುಟ್ಟದ, ಹುಟ್ಟಿದೊಡನೆ ತೊಟ್ಟಿಲಲ್ಲಿಟ್ಟು ತೇಲಿಬಿಟ್ಟ ಮಗ.

ಕೊನೆಗೂ ತಾಯಿ ತಾನು ತ್ಯಜಿಸಿದ ಮಗನ ನೆರಳಲ್ಲಿ ಬಂದು ನಿಲ್ಲಬೇಕಾಯಿತು. ಪೂರ್ವದಲ್ಲಿ ಸೂರ್ಯ, ಪಶ್ಚಿಮದಲ್ಲಿ ಕುಂತಿ, ನಡುವೆ ಕರ್ಣ. ಪೂರ್ವದಲ್ಲಿ ತಂದೆ, ಪಶ್ಚಿಮದಲ್ಲಿ ತಾಯಿ, ನಡುವೆ ಮಗ.

ಮಧ್ಯೆ ಉತ್ತರೀಯದ ನೆರಳು!

ಮೊದಲ ಬಾರಿಗೆ ಭೇಟಿ ಮಾಡುತ್ತಿರುವ ಈ ಹೊತ್ತಿನಲ್ಲಿ ಆ ಮಗನಿಗೆ ಮದುವೆಗಳೂ ಆಗಿ, ಮಕ್ಕಳು, ಮೊಮ್ಮಕ್ಕಳೂ ಹುಟ್ಟಿ ಆಗಿದೆ. ಸೂರ್ಯನ ತಾಪದಿಂದ ಬಾಡಿ ಒಣಗಿದ ತಾವರೆಯ ಹೂಗಳ ಮಾಲೆಯಂತಾಗಿದ್ದಳು ಕುಂತಿ. ಅದೇ ಸೂರ್ಯ, ಅವಳ ಮೊದಲ ರಹಸ್ಯವನ್ನು ಬಿಡಿಸಿದ ಸೂರ್ಯ. ಬಹಳ ಹೊತ್ತು ಹೀಗೇ ಕಳೆಯಿತು. ಸೂರ್ಯ ನಡುನೆತ್ತಿಗೆ ಬಂದಿರಬೇಕು. ಕರ್ಣನ ಬೆನ್ನು ಸುಡತೊಡಗಿತ್ತು. ಜಪ ಮುಗಿಯಿತು. ತಿರುಗಿ ನೋಡಿದರೆ ಕುಂತಿ.

ಅಮ್ಮ!

ರಾಧೇಯೋ ಹಮಾಧಿರಥಿಃ ಕರ್ಣಸ್ತ್ವಾಮಭಿವಾದಯೇ ಎಂದುಬಿಟ್ಟ ಕರ್ಣ.

ನಾನು ರಾಧೇಯ, ನಾನು ಆದಿರಥಿ, ನಾನು ಕರ್ಣ ನಿನಗೆ ನಮಸ್ಕರಿಸುತ್ತಿದ್ದೇನೆ.

ನಾನು ರಾಧೆಯ ಮಗ.. ದಿಗ್ಭ್ರಾಂತಳಾಗಿ ಹೋದಳು ಕುಂತಿ.

ನೀನು ಕೌಂತೇಯ, ರಾಧೇಯನಲ್ಲ. ಅಧಿರಥನ ಮಗನೂ ಅಲ್ಲ, ಸೂತನೂ ಅಲ್ಲ ಎಂದಳು ಕುಂತಿ. ನಿನ್ನನ್ನು ನನ್ನ ಹೊಟ್ಟೆಯಲ್ಲಿ ಹೊತ್ತಿದ್ದೆ ಎಂದು ಇತ್ಯೋಪರಿಗಳನ್ನು ತಿಳಿಸತೊಡಗಿದಳು. ಬಾ ನಮ್ಮೆಡೆಗೆ ಎಂದು ಕರೆದಳು.

ಅತ್ತ ಸೂರ್ಯನು ಆಕಾಶದಿಂದ ಕುಂತಿಯ ಮಾತಿಗೆ ಧ್ವನಿಗೂಡಿಸಿದ.‘ತಾಯಿಯ ಮಾತಿನಂತೆ ಮಾಡು, ಒಳ್ಳೆಯದಾಗುತ್ತದೆ.’

ಹುಟ್ಟಿಸಿದ ಅಪ್ಪ ಅಮ್ಮ ಹೇಳಿದರೂ ಕರ್ಣ ವಿಚಲಿತನಾಗಲಿಲ್ಲ. ಅವನು ಅಮ್ಮನಿಗೆ ಹೇಳಿದ,

‘ನಿನ್ನ ನಿಯೋಗದ ವಿಚಾರದಲ್ಲಿ ನಾನು ಅಪದ್ಧ ಮಾತನಾಡುವುದಿಲ್ಲ. ಆದರೆ ಹೆತ್ತ ನನ್ನನ್ನು ಬಿಸುಟು ಹೋದೆಯಲ್ಲಾ, ಅದು ಎಂದೂ ತೊಳೆಯಲಾಗದ ಪಾಪಕೃತ್ಯ. ಹಾಗೆ ಮಾಡಿ ನೀನು ನನಗೆ ಸಿಗಬೇಕಾಗಿದ್ದ ಕೀರ್ತಿ ಮತ್ತು ಯಶಸ್ಸನ್ನು ನಾಶಮಾಡಿದೆ. ನೀನು ಎಂದಾದರೂ ತಾಯಿಯಂತೆ ನನ್ನಲ್ಲಿ ನಡೆದುಕೊಂಡಿದ್ದು ಇದೆಯಾ? ಈಗ ನೀನು ಬಂದಿರುವುದು ನಿನ್ನ ಹಿತಕ್ಕೆ, ನನ್ನ ಹಿತಕ್ಕಲ್ಲ.

ನಾನು ಕ್ಷತ್ರಿಯನಾಗಿ ಹುಟ್ಟಿಯೂ ಕ್ಷತ್ರಿಯನಾಗಲಿಲ್ಲ ಎಂದು ಹಳಹಳಿಸಿದ ಕರ್ಣ. ಆಗಷ್ಟೇ ಕೃಷ್ಣನ ಬಳಿ ಹೆಮ್ಮೆಯಿಂದ ತಾನು ಸೂತನೇ ಎಂದು ಬೀಗಿಕೊಂಡಿದ್ದವನು ಈಗ ಕುಂತಿಯ ಮುಂದೆ ಹೀಗೆ ನೊಂದುಬಿಟ್ಟ.

ಕೊನೆಗೂ ನೀನು ನನ್ನ ಬಳಿಗೆ ಬಂದುದು ನಿಷ್ಫಲವಾಗದಂತೆ ನೋಡಿಕೊಳ್ಳುತ್ತೇನೆ. ಅರ್ಜುನನ್ನು ಬಿಟ್ಟು ಉಳಿದ ನಿನ್ನ ನಾಲ್ಕು ಮಕ್ಕಳನ್ನೂ ನಾನು ಕೊಲ್ಲುವುದಿಲ್ಲ. ಆಗ ನಾನೂ ಸೇರಿ ನಿನಗೆ ಐವರು ಮಕ್ಕಳಿರುತ್ತಾರೆ.

ಒಂದೊಮ್ಮೆ ಅರ್ಜುನ ನನ್ನನ್ನೇ ಕೊಂದರೂ ನಿನಗೆ ಐವರು ಮಕ್ಕಳು ಇದ್ದೇ ಇರುತ್ತಾರೆ. ಅರ್ಜುನ ಇಲ್ಲವಾದರೆ ಕರ್ಣನಿದ್ದಾನೆ, ಕರ್ಣ ಇಲ್ಲವಾದರೆ ಅರ್ಜುನನಿದ್ದಾನೆ. ನಾನು ನಿನ್ನ ಮಗ ಎಂದು ಆಗುವುದು ಈಗ ಅಲ್ಲ, ನಿರ್ಣಾಯಕ ಯುದ್ಧ ಮುಗಿದ ಮೇಲೆ ಎಂದು ಕರ್ಣ ಕುಂತಿಗೆ ಹೇಳುತ್ತಿದ್ದಾನೆ. ಕುಂತಿ ನಡುಗಿದಳು. ನಡುಗದೇ ನಿಂತಿದ್ದ ಕರ್ಣನನ್ನು ಬಿಗಿದಪ್ಪಿದಳು. ಕ್ಷೇಮದಿಂದಿರು, ಮಂಗಳವಾಗಲಿ ಎಂದಳು.

ಆಮೇಲೆ ಅವರಿಬ್ಬರೂ ಬೇರೆ ಬೇರೆ ದಾರಿಗಳಲ್ಲಿ ಹೋದರು.

Share this article