ಯುವ ವಿಜ್ಞಾನಿಯಾಗಿ ಸೈ ಎನಿಸಿಕೊಂಡ ಮಂಡ್ಯದ ಎಂ.ಯೋಗೇಶ್ -ಎಂ.ಇ ಸವಿತಾ ದಂಪತಿ ಪುತ್ರಿ ಬಿ.ವೈ.ಚತುರ ಶ್ರೀ

KannadaprabhaNewsNetwork | Updated : Nov 14 2024, 07:10 AM IST

ಸಾರಾಂಶ

 ಕನ್ನಡಪ್ರಭದಿಂದ ಲಿಟಲ್‌ ಸ್ಟಾರ್ಸ್‌ ಎಂಬ ವಿಶೇಷ ಲೇಖನದ ಮೂಲಕ ಮಕ್ಕಳ ಸಾಧನೆ ಬಗ್ಗೆ ತಿಳಿಸಿಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಯುವ ವಿಜ್ಞಾನಿ ಬಿ.ವೈ.ಚತುರಶ್ರೀ, ಕರ್ನಾಟಕದ ಟಾಪ್‌ಸೀಡ್ ಟೆನ್ನಿಸ್ ತಾರೆ ಕಶ್ವಿ ಸುನಿಲ್ ಎಂಬ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ.

ಮಂಡ್ಯದ ಎಂ.ಯೋಗೇಶ್ -ಎಂ.ಇ ಸವಿತಾ ದಂಪತಿ ಪುತ್ರಿ ಬಿ.ವೈ.ಚತುರಶ್ರೀ. ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿಜ್ಞಾನ ವಿಷಯದ ಸೆಳೆತಕ್ಕೆ ಒಳಗಾಗಿ ಸಂಶೋಧನೆಯಲ್ಲಿ ತುಂಬಾ ಕ್ರಿಯಾಶೀಲವಾಗಿದ್ದಾಳೆ.

ಚಿಕ್ಕ ವಯಸ್ಸಿನಲ್ಲೇ ವಿಜ್ಞಾನದ ಹಲವಾರು ಮಾದರಿಗಳನ್ನು ತಯಾರಿಸಿ ಸೈ ಎನಿಸಿಕೊಂಡಿದ್ದಾಳೆ. ಜಿಲ್ಲಾಮಟ್ಟದಲ್ಲಿ ಹಲವಾರು ಬಹುಮಾನಗಳನ್ನೂ ಪಡೆದುಕೊಂಡಿದ್ದಾಳೆ. ಜಿಲ್ಲಾಮಟ್ಟದ ವಸ್ತು ಪ್ರದರ್ಶನದಲ್ಲಿ ಟ್ರಾಫಿಕ್ ಟರ್ಬೈನ್, ಫಾರ್ಮ್‌ಹೌಸ್ ಮ್ಯಾಜಿಕ್, ಎಲೆಕ್ಟ್ರಿಕಲ್ ಜನರೇಟರ್ ಬೈ ರೈನ್ ವಾಟರ್, ನ್ಯೂರಾನ್ ಇನ್ ಹ್ಯೂಮನ್ ಬಾಡಿ, ಮ್ಯಾಜಿಕ್ ಆಫ್ ಗ್ರ್ಯಾವಿಟಿ ಅಂತಹ ಮಾದರಿಗಳನ್ನು ಶಾಲೆಯ ವಿಜ್ಞಾನ ಶಿಕ್ಷಕಿ ಡೇಜಲಿನ್ ಸಲ್ಡಾನಾ ಮಾರ್ಗದರ್ಶನದಲ್ಲಿ ನಿರ್ಮಿಸಿ ಇಸ್ರೋಗೆ ಆಯ್ಕೆಯಾದ ಶಾಲೆಯ ತಂಡದ ನಾಯಕಿಯಾಗಿದ್ದಳು.

ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದದಲ್ಲೂ ಪಾಲ್ಗೊಂಡು ಸೈ ಎನಿಸಿಕೊಂಡ ಈ ಚತುರೆ, ಇಸ್ರೋ ವಿಜ್ಞಾನಿಗಳು ಬಿಡಿ ಬಿಡಿಯಾಗಿ ನೀಡಿದ್ದ ಮಾದರಿಗಳನ್ನು ಕ್ರಮಬದ್ಧವಾಗಿ ಜೋಡಿಸಿ ಎಲ್ಲರ ಗಮನಸೆಳೆದಿದ್ದಾಳೆ. ಚಿಕ್ಕ ವಯಸ್ಸಿನಲ್ಲೇ ಅತೀವ ಸಂಶೋಧನಾಸಕ್ತಿಯನ್ನು ಹೊಂದಿರುವ ಈ ವಿದ್ಯಾರ್ಥಿನಿ ವಿಜ್ಞಾನದ ಇತರೆ ವಿಭಾಗಗಳಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾಳೆ. ಮರಾಲಿನ್ ಸ್ಪೈಸಿಸ್ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದು, ಶಿಕ್ಷಕರು ಮತ್ತು ಪೋಷಕರೂ ಈಕೆಯ ಸಂಶೋಧನಾಸಕ್ತಿಗೆ ಒತ್ತಾಸೆಯಾಗಿ ನಿಂತು ಪ್ರೋತ್ಸಾಹಿಸುತ್ತಿದ್ದಾರೆ. ಪಠ್ಯದ ಜೊತೆಗೆ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾಳೆ.

ಕರ್ನಾಟಕದ ಟಾಪ್‌ಸೀಡ್ ಟೆನ್ನಿಸ್ ತಾರೆ ಕಶ್ವಿ ಸುನಿಲ್

ಕಶ್ವಿ ಸುನಿಲ್. ವಯಸ್ಸು ೧೫ ವರ್ಷ. ಅಂತಾರಾಷ್ಟ್ರೀಯ ಟೆನ್ನಿಸ್ ಕ್ರೀಡಾಪಟು. ಮಂಡ್ಯದ ಗ್ಲೋಬಲ್ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ವ್ಯಾಸಂಗ. ತಂದೆ ಸುನಿಲ್ ತಾಯಿ ಅನಿತಾ. ೧೧ನೇ ವಯಸ್ಸಿನಲ್ಲೇ ಕರ್ನಾಟಕ ಮಿನಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿ ಪ್ರಸ್ತುತ ಜೂನಿಯರ್ ಸೇರಿದಂತೆ ಎಲ್ಲಾ ರ್‍ಯಾಂಕಿಂಗ್ ಪಂದ್ಯಾವಳಿಗಳಲ್ಲಿ ಭಾಗಿ. ಕಳೆದ ಜೂನ್-ಜುಲೈನಲ್ಲಿ ಯೂರೋಪ್ ಖಂಡದ ಸ್ಪೇನ್‌ನಲ್ಲಿ ಒಂದು ತಿಂಗಳ ತರಬೇತಿ ಪೂರೈಸಿರುವ ಕಶ್ವಿ ಒಂದನೇ ತರಗತಿಯಿಂದಲೇ ಟೆನ್ನಿಸ್ ಆಡಲು ಪ್ರಾರಂಭ. ಪಿಟಿ ಕ್ರೀಡಾಂಗಣದ ಟೆನ್ನಿಸ್ ಅಕಾಡೆಮಿಯ ಮಂಜುನಾಥ್ ಅವರಲ್ಲಿ ಹತ್ತು ವರ್ಷಗಳಿಂದ ತರಬೇತಿ ಪಡೆದು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾಳೆ.

ಟಾಪ್ ರ್‍ಯಾಂಕಿಂಗ್‌ನಲ್ಲಿದ್ದ ಹಲವರನ್ನು ಮಣಿಸಿ ಎರಡು ಬಾರಿ ಜೂನಿಯರ್ ವರ್ಲ್ಡ್ ರ್‍ಯಾಂಕಿಂಗ್ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾಳೆ. ಹತ್ತಕ್ಕೂ ಹೆಚ್ಚು ಬಾರಿ ಆಲ್ ಇಂಡಿಯಾ ಟೆನ್ನಿಸ್ ರ್‍ಯಾಂಕಿಂಗ್‌ನಲ್ಲಿ ಚಾಂಪಿಯನ್ ಆಗಿರುವ ಕಶ್ವಿ, ಪ್ರಸ್ತುತ ಜೂನಿಯರ್ ವರ್ಲ್ಡ್ ರ್‍ಯಾಂಕಿಂಗ್‌ನಲ್ಲಿ ೭೦೪ನೇ ಸ್ಥಾನ ಪಡೆದಿದ್ದಾಳೆ. ಈಕೆಯ ಕ್ರೀಡಾ ಸಾಧನೆಗೆ ಪ್ರೇರಣೆಯಾಗಿ ಗ್ಲೋಬಲ್ ಶಾಲೆಯವರು ನಿಂತಿದ್ದು, ಎಲ್ಲ ರೀತಿಯ ಸಹಕಾರವನ್ನೂ ನೀಡುತ್ತಿದ್ದಾಳೆ.

ನ.೧೬ರಿಂದ ೩೦ರವರೆಗೆ ಅಸ್ಸಾಂನ ಗುವಾಹಟಿ ಮತ್ತು ನವದೆಹಲಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆ. ಕರ್ನಾಟಕದ ಟಾಪ್‌ಸೀಡ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾಳೆ. ಜಿಲ್ಲೆಯ ಟೆನ್ನಿಸ್ ವಿಭಾಗದಲ್ಲಿ ಈ ಮಟ್ಟದ ಸಾಧನೆ ಮಾಡಿದ ಏಕೈಕ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರಳಾಗಿದ್ದಾಳೆ.

Share this article