;Resize=(412,232))
ಒಂದು ನಾಡಿನ ಪ್ರಜೆಗಳೆಲ್ಲರೂ ಸೇರಿ ತಮ್ಮನ್ನು ತಾವೇ ಆಳಿಕೊಳ್ಳುವ ಪೂರ್ಣ ಮತ ಹೊಂದಿದ, ಅಗತ್ಯವಿದ್ದರೆ ಬಹುಮತ ಪಡೆದ ಒಂದು ತಂಡ ಮುಂದಿನ ತಲೆಮಾರಿನ ಬದುಕಿಗೆ ತಮಗೆ ತಾವೇ ರೂಪಿಸಿಕೊಂಡ ಪ್ರಜಾಪ್ರಭುತ್ವದ ಕ್ರಮದಂತೆ ಶಾಶ್ವತ ವ್ಯವಸ್ಥೆಯಾದ ಒಂದು ಗ್ರಂಥವೇ ಆ ದೇಶದ ಸಂವಿಧಾನ.
ಸರ್ಕಾರವೆಂದರೆ, ಪ್ರಬುದ್ಧ ಪ್ರಜೆಗಳ ಇಚ್ಛೆಯನ್ನು ಕಾರ್ಯರೂಪಕ್ಕೆ ತರುವ ಸಾಧನ. ಸಂವಿಧಾನದ ಮೂಲ ಆಶಯವೆಂದರೆ, ಸರ್ವರಿಗೂ ಸಮಾನತೆ ಮತ್ತು ಸಮಬಾಳು, ಸಮಪಾಲು, ಸಾಮಾಜಿಕ ನ್ಯಾಯ. ಯಾವುದೇ ಸಂವಿಧಾನ ಆಕಾಶದಿಂದ ಉದುರುವುದಿಲ್ಲ, ಅದು ದೇವರ ಕೊಡುಗೆಯೂ ಅಲ್ಲ. ತನ್ನ ಅಧಿಕಾರ ಶಾಶ್ವತವಾಗಿರಬೇಕೆಂಬ ಯಾವ ನಾಡಿನ ಯಾವ ರಾಜನೂ ಸರ್ವರನ್ನೊಳಗೊಂಡ ಸಾಮಾಜಿಕ ವ್ಯವಸ್ಥೆಯ ಬದಲು ತನ್ನ ಆಜ್ಞೆ ಶಾಸನಬದ್ಧ ವ್ಯವಸ್ಥೆಯೆಂದು ಪ್ರತಿಬಿಂಬಿಸಿ ಪ್ರಜೆಗಳ ಮೇಲೆ ಹೇರಿದ್ದು ರಾಜ್ಯಾಡಳಿತದ ಕೊಡುಗೆಯೇ ಹೊರತು ಅದು ಜನ ಬೆಂಬಲಿತ ಸಂವಿಧಾನವಲ್ಲ.
ಭಾರತದ ಮಟ್ಟಿಗೆ ಡಾ। ಬಿ.ಆರ್.ಅಂಬೇಡ್ಕರ್ ರೂಪಿಸಿದ ಸಂವಿಧಾನ 146 ಕೋಟಿ ಜನರಿಗೆ ನಿತ್ಯ ಬದುಕನ್ನು ಕಟ್ಟಿಕೊಡುವ ಸಾಧನವಾಗಿ ಉಳಿದು ಬೆಳೆದಿದೆ. 1949 ನ.26ರಂದು ನಮ್ಮ ಸಂವಿಧಾನವನ್ನು ಸಂವಿಧಾನ ಸಭೆ ಅಂಗೀಕರಿಸಿತು. ಅಂದರೆ, ನಮ್ಮ ಸಂವಿಧಾನ ಹುಟ್ಟಿದ್ದು ನ.26. ಅದು ಅಧಿಕೃತವಾಗಿ ಜಾರಿಗೆ ಬಂದದ್ದು 1950 ಜ.26. ವಾಸ್ತವಿಕವಾಗಿ ಹಿಂದೆ ನ.26ರ ಸಂವಿಧಾನ ದಿನವನ್ನು ರಾಷ್ಟ್ರೀಯ ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು. ಆದರೆ 2015ರಲ್ಲಿ ಸಂವಿಧಾನದ ಸೃಷ್ಟಿಕರ್ತ ಅಂಬೇಡ್ಕರ್ ಅವರ 125ನೇ ಜನ್ಮದಿನದ ವೇಳೆ ಪ್ರಧಾನಿ ಮೋದಿ ನ.26ಅನ್ನು ಸಂವಿಧಾನ ದಿನ ಎಂದು ಘೋಷಿಸಿದರು.
1949 ರಿಂದ 2026ರ ಇಂದಿನವರೆಗೆ 77ನೇ ಸಂವಿಧಾನ ದಿನಾಚರಣೆ ಮಾಡುತ್ತಿರುವ ನಮಗೆ ಈ ಬಾರಿಯ ವಿಶೇಷತೆಯೆಂದರೆ ನಮ್ಮ ಸಂವಿಧಾನ- ನಮ್ಮ ಸ್ವಾಭಿಮಾನ ಎಂಬ ಘೋಷವಾಕ್ಯದೊಡನೆ ಈ ಬಾರಿಯ ಸಂವಿಧಾನ ದಿನಾಚರಣೆ ಸಂಪನ್ನಗೊಳ್ಳುತ್ತಿದೆ. ಮೂಲ ಸಂವಿಧಾನದಲ್ಲಿ 395 ವಿಧಿಗಳು, 22 ಭಾಗಗಳು 8 ಅನುಸೂಚಿಗಳು ಇವೆ. ಇದನ್ನು ಮೊದಲು ಕೈಯಿಂದಲೇ ಬರೆಯಲಾಗಿತ್ತು. ಸಂವಿಧಾನದ ಗ್ರಂಥ ರಚನೆಗಾಗಿ ಕರಡು ಸಮಿತಿಯ ಅಧ್ಯಕ್ಷ ಡಾ। ಬಿ.ಆರ್.ಅಂಬೇಡ್ಕರ್ ಅವರ ತಂಡ 2 ವರ್ಷ 11 ತಿಂಗಳು 18 ದಿನ ಶ್ರಮಪಟ್ಟು ಬರೆದರಂತೆ.
ಭಾರತ ದೇಶದ ಇತಿಹಾಸದಲ್ಲಿ ಸಂವಿಧಾನಕ್ಕೆ ಬಲು ದೊಡ್ಡ ಗಂಡಾಂತರ ಬಂದುದು 1975ರಲ್ಲಿ ಬಂದ ತುರ್ತು ಪರಿಸ್ಥಿತಿಯಿಂದ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು. ತುರ್ತು ಪರಿಸ್ಥಿತಿಯ ಮೂಲಕ ದೇಶದ ನ್ಯಾಯಾಂಗವನ್ನೇ ಪ್ರಶ್ನಿಸುವ ಮಟ್ಟಕ್ಕೆ ಅಂದಿನ ಸರ್ಕಾರ ಬಂತು. ಪ್ರಜಾಪ್ರಭುತ್ವದಲ್ಲಿ Shadow Government (ಆಳುವವರ ನೆರಳು) ಎಂದು ಬಿಂಬಿತವಾಗಿದ್ದ ವಿಪಕ್ಷದ ನಾಯಕರನ್ನು ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿ, ಲಾಲ್ಕೃಷ್ಣ ಅಡ್ವಾಣಿ, ಜಾರ್ಜ್ ಫರ್ನಾಂಡಿಸ್ ಮುಂತಾದ ವಿರೋಧ ಪಕ್ಷದ ಮುಖಂಡರನ್ನು ಯಾವುದೇ ಅಪರಾಧ ಮಾಡದಿದ್ದರೂ ವಿಚಾರಣೆ ಇಲ್ಲದೆ ಜೈಲಿಗೆ ಹಾಕಲಾಯಿತು. ಜತೆಗೆ ಮಾಧ್ಯಮಗಳನ್ನು ಸರ್ಕಾರ ಸೆನ್ಸಾರ್ಗೆ ಒಳಪಡಿಸಿತು.
ಯಾವುದೇ ಪತ್ರಿಕೆಯಲ್ಲಿ ನಾಳೆ ಪ್ರಕಟ ಆಗಬೇಕಿದ್ದ ಸುದ್ದಿ ಇಂದು ಪೊಲೀಸ್ ಇಲಾಖೆಯೂ ಸೇರಿದಂತೆ ಕೆಲವು ಅಧಿಕಾರಿಗಳಿಗೆ ತೋರಿಸಿ ಮುದ್ರಣಕ್ಕೆ ಅನುಮತಿ ಕೋರಬೇಕಾಗಿತ್ತು. ಕರ್ನಾಟಕದ ಮಟ್ಟಿಗಂತೂ ಇಂಡಿಯನ್ ಎಕ್ಸ್ಪ್ರೆಸ್, ಪ್ರಜಾವಾಣಿ ಪತ್ರಿಕೆಗಳ ವರದಿಗಾರರು ಬಿಡುಗಡೆಗೊಳ್ಳುವಾಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಕಂಡದ್ದು ಕಂಡಂತೆ ಬರೆದ ಕಾರಣಕ್ಕೆ ಮಂಗಳೂರಿನ ಪತ್ರಕರ್ತ ನಾಗೋರಿ ಬೆಳಗ್ಗೆ ಎದ್ದು ದೇವರ ಫೋಟೋಗೆ ಕೈ ಮುಗಿಯುವಾಗ ಆಗಂತುಕರ ಚಾಕು ಏಟಿಗೆ ಬಲಿಯಾಗುತ್ತಾರೆ. ಒಂದು ಹಂತದಲ್ಲಿ ಸುಪ್ರೀಂ ಕೋರ್ಟ್ ಅಸಹಾಯಕತೆ ವ್ಯಕ್ತಪಡಿಸುವ ಹಂತಕ್ಕೆ ಬಂದದ್ದೇ ಅಂದು ಸಂವಿಧಾನದ ಆತ್ಮಕ್ಕೆ ಕೊಟ್ಟ ದೊಡ್ಡ ಹೊಡೆತವಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಸಂವಿಧಾನವನ್ನು ಎತ್ತಿ ಹಿಡಿದ ಪ್ರಕರಣವೇ ಕೇರಳದ ಕೇಶವಾನಂದ ಭಾರತಿ ಶ್ರೀಗಳ ಪ್ರಕರಣ. ಈ ಪ್ರಕರಣವನ್ನು ‘ಭಾರತದ ಸಂವಿಧಾನದ ಆತ್ಮವನ್ನು ಉಳಿಸಿದ ಕೇಸ್’ ಎಂದು ಕಾನೂನು ತಜ್ಞರು ಕರೆಯುತ್ತಾರೆ. ಕಾಸರಗೋಡಿನ ಯಡನೀರು ಮಠದ ಕೇಶವಾನಂದ ಸ್ವಾಮೀಜಿ ಅವರು ಸುಪ್ರೀಂಕೋರ್ಟ್ನಲ್ಲಿ ಹೂಡಿದ ದಾವೇ ನಡೆಯುತ್ತಾ, ನಡೆಯುತ್ತಾ ಸ್ವಾಮೀಜಿ ಅವರ ಕೇಸಿನ ಬದಲಾಗಿ ಸಂವಿಧಾನದ ಅಳಿವು-ಉಳಿವಿನ ಪ್ರಕರಣವಾಗಿ ಮಾರ್ಪಟ್ಟಿತು.
ಸಂವಿಧಾನ ಉಳಿಸಿದ ಸುಪ್ರೀಂ ತೀರ್ಪು:
ಅಂದಿನ ಇಂದಿರಾ ಸರ್ಕಾರ ಸಂವಿಧಾನವನ್ನು ಪ್ರಶ್ನಿಸುವ ಹಕ್ಕು ಸರ್ಕಾರಕ್ಕೆ ಎಂದು ಉದ್ಧಟತನ ತೋರಿದರೆ, ಸುಪ್ರೀಂ ಕೋರ್ಟ್ ಹೇಳಿದ್ದು ಸಂಸತ್ತಿನ ಅಧಿಕಾರ ತಾನು ಪ್ರಶ್ನಿಸುತ್ತಿಲ್ಲ. ಆದರೆ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವ ಅಧಿಕಾರ ಕೇಂದ್ರ ಸರ್ಕಾರದ ಆಡಳಿತಕ್ಕಿಲ್ಲ. ನ್ಯಾಯಾಂಗ ಶಾಸಕಾಂಗದ ವಿವಾದ ತಾರಕಕ್ಕೇರಿದಾಗ ನ್ಯಾಯ ನೀಡಲು ಸುಪ್ರೀಂ ಕೋರ್ಟ್ ಕುಳಿತದ್ದು ಸಾಮಾನ್ಯ ಬೆಂಚ್ ಅಲ್ಲ, ಬದಲಾಗಿ ಭಾರತ ದೇಶದ ಇತಿಹಾಸದಲ್ಲೇ 13 ಮಂದಿ ನ್ಯಾಯಮೂರ್ತಿಗಳು ಒಟ್ಟಾಗಿ ಕುಳಿತ ದೊಡ್ಡ ಪೀಠ ಅದಾಗಿತ್ತು. ಭಾರತದ ಇತಿಹಾಸದಲ್ಲಿ ಬಹುದೊಡ್ಡ ಬೈಟಕ್ ಎಂದು ಈ ಬೆಂಚನ್ನು ಬಣ್ಣಿಸಲಾಗಿದೆ. ಕೇಶವಾನಂದ ಭಾರತಿ ಪ್ರಕರಣದಲ್ಲಿ 68 ದಿನ ವಾದ ವಿವಾದಗಳಾದವು. 1973 ಏ.25ರಂದು ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಂವಿಧಾನದ ಮೂಲ ಚೌಕಟ್ಟನ್ನು ಮುಟ್ಟುವಂತಿಲ್ಲ ಎಂಬ ಅಭಿಪ್ರಾಯಕ್ಕೆ 7 ಮತಗಳು, ಮುಟ್ಟಲು ಸರ್ಕಾರಕ್ಕೆ ಅಧಿಕಾರವಿದೆ ಎಂಬ ಅಭಿಪ್ರಾಯಕ್ಕೆ 6 ಮತಗಳು, ತೀರ್ಪಿನಲ್ಲಿ ಬಂದು ಕೇವಲ 1 ಬಹುಮತದ ಅಂತರದಲ್ಲಿ ಸಂವಿಧಾನ ರಕ್ಷಣೆಗೊಳಗಾಯಿತು, ಎಂಬಲ್ಲಿಗೆ ಬಾಬಾ ಸಾಹೇಬರ ಸಂವಿಧಾನಕ್ಕೆ ರಕ್ಷಣೆ ಸಿಕ್ಕಂತಾಯಿತು.
ಪ್ರಜಾಪ್ರಭುತ್ವದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳು ಸಂವಿಧಾನದ ಮೂಲ ಆಶಯವನ್ನು ಅರ್ಥ ಮಾಡಿಕೊಳ್ಳಲೇಬೇಕು. ದುರಾದೃಷ್ಟಕ್ಕೆ ಇವತ್ತು ಪ್ರಜಾಪ್ರಭುತ್ವ ಉಳಿಸಿ ಅನ್ನುವವರೆಲ್ಲಾ ತಮ್ಮ ಆಡಳಿತದ 50 ವರ್ಷಗಳ ಕಾಲ ಸಂವಿಧಾನದ ಕತ್ತುಹಿಸುಕಿದ್ದಾರೆ ಎನ್ನುವುದಕ್ಕೆ ಕಾಲಕಾಲಕ್ಕೆ ಚುನಾಯಿತ ರಾಜ್ಯ ಸರ್ಕಾರಗಳನ್ನು ಮನಸ್ಸೋ ಇಚ್ಛೆ ವಜಾ ಮಾಡಿದ್ದೆ ಉದಾಹರಣೆ. ಸಂವಿಧಾನದ 356ನೇ ವಿಧಿ ರಾಜ್ಯಪಾಲರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರಗಳನ್ನು ವಜಾ ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕೆ ಕೊಟ್ಟಿದೆ. ಆದರೆ 356ನೇ ವಿಧಿಯ ಬಗ್ಗೆ ಸಂವಿಧಾನದ ಸೃಷ್ಟಿಕರ್ತ ಬಾಬಾ ಸಾಹೇಬರು ರಚನಾ ಸಮಿತಿಯ ಸಭೆಯಲ್ಲಿ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದೇನೆಂದರೆ, ‘ಈ ವಿಧಿ ಅಗತ್ಯತೆ ಇದೆ ಎಂದು ನನಗೆ ಅನಿಸುತ್ತಿಲ್ಲ. ಆದ್ದರಿಂದಲೇ 356ನೇ ವಿಧಿಯನ್ನು ನಿಸ್ತಂತು ಎಂದು ಪರಿಗಣಿಸಿ ದಾಖಲಿಸಿದ್ದೇನೆ. 365ನೇ ವಿಧಿಯ ಸೇಡಿನ ರಾಜಕಾರಣದ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದೆ ಎಂದು ಅಂದೇ ಹೇಳಿದ್ದರು. ವಾಸ್ತವಿಕವಾಗಿ 356ನೇ ವಿಧಿ ರಾಜ್ಯದಲ್ಲಿ ಅಜಾಗರೂಕತೆ ಉಂಟಾದಾಗ ಕಾನೂನು ಸುವ್ಯವಸ್ಥೆ ನಿಯಂತ್ರಣ ತಪ್ಪಿದಾಗ ರಾಜ್ಯವನ್ನು ಅಂದರೆ ದೇಶದ ಒಂದು ಭಾಗವನ್ನು ಉಳಿಸುವುದಕ್ಕೊಸ್ಕರ ಕೇಂದ್ರದ ಹಸ್ತಕ್ಷೇಪವನ್ನು ಪರಿಗಣಿಸುತ್ತೆ’.
ಸಂವಿಧಾನ ಪ್ರತಿ ಭಾರತೀಯನ ಆತ್ಮವಾಗಿರಬೇಕು ಆಡಂಬರದ ಆಭರಣ ಅಲ್ಲ. ಇಂದಿನ ಸಂವಿಧಾನದ ದಿನವನ್ನು ಸಂಭ್ರದಿಂದ ಆಚರಿಸೋಣ.