ಬೆಂಗಳೂರು : ರವಿವಾರ ತಂಪಾದ ರಾತ್ರಿಯಲಿ ನೇಸರನ ನೇರ ರಶ್ಮಿಗಳಿಂದ ವಂಚಿತನಾಗಿ ಕಡು ಕೆಂಪು ವರ್ಣದಲ್ಲಿ ಮಿಂಚುತ್ತಿದ್ದ ಚಂದಿರನನ್ನು ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮೋಡಗಳ ನಡುವೆ ಖಗೋಳ ಆಸಕ್ತರು ವೀಕ್ಷಿಸಿ ಸಂಭ್ರಮಿಸಿದರು.
ಹೌದು, ಖಗೋಳದ ಅಪೂರ್ವ ಮತ್ತು ಅದ್ಭುತ ವಿದ್ಯಮಾನ ಖಗ್ರಾಸ ಚಂದ್ರಗ್ರಹಣವನ್ನು ಮೋಡಗಳ ನಡುವೆ ಜನ ವೀಕ್ಷಿಸಿದರು. ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿ 12.22ರ ನಡುವೆ ಖಗೋಳದ ಕೌತುಕ ನೋಡುಗರ ಕಣ್ಮನ ಸೆಳೆಯಿತು. ಚಂದ್ರ ಗ್ರಹಣ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಲು ಯಾವುದೇ ಅಡ್ಡಿ ಇಲ್ಲ. ಹೀಗಾಗಿ, ಕಟ್ಟಡಗಳ ಮೇಲಿಂದ ನಾಗರಿಕರು ಗ್ರಹಣ ವೀಕ್ಷಿಸಿದರು. ಖಗೋಳ ವಿದ್ಯಮಾನಗಳ ಕುರಿತು ವಿಶೇಷ ಆಸಕ್ತರು, ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಟೆಲಿಸ್ಕೋಪ್ ಬಳಸಿ ಕೆಂಪಗಿನ ಚಂದಿರನನ್ನು ಕಂಡರು.
ನಗರದ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ಟೆಲಿಸ್ಕೋಪ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಗ್ರಹಣಕ್ಕೂ ಮುನ್ನ ಗ್ರಹಣ ಕುರಿತಾದ ವಿಶೇಷ ಉಪನ್ಯಾಸವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿತ್ತು. ಟೆಲಿಸ್ಕೋಪ್ ಮೂಲಕ ನೋಡಿದರೆ ಗ್ರಹಣ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ. ಚಂದಿರನ ಅಂಗಳವನ್ನು ಹೆಚ್ಚು ವಿವರವಾಗಿ ವೀಕ್ಷಿಸಬಹುದು ಎಂದು ತಾರಾಲಯದ ನಿರ್ದೇಶಕ, ವಿಜ್ಞಾನಿ ಡಾ. ಬಿ.ಆರ್. ಗುರುಪ್ರಸಾದ್ ಹೇಳಿದರು.
ಸೂರ್ಯ, ಭೂಮಿ ಮತ್ತು ಚಂದ್ರ ಸರಳ ರೇಖೆಯಲ್ಲಿ ಬಂದಾಗ, ಸೂರ್ಯನ ಕಿರಣಗಳು ನೇರವಾಗಿ ಚಂದ್ರನ ಮೇಲೆ ಬೀಳುವುದನ್ನು ಭೂಮಿ ತಡೆಯುತ್ತದೆ. ನೆರಳು ಮಾತ್ರ ಚಂದ್ರನ ಮೇಲೆ ಬೀಳುತ್ತದೆ. ಸೂರ್ಯನಿಂದ ಬರುವ ಬೆಳಕಿನ ಕಿರಣಗಳಲ್ಲಿನ ನೀಲಿ ಬಣ್ಣ ಭೂ ವಾತಾವರಣದಲ್ಲಿ ಚದುರುತ್ತವೆ. ಕೆಂಪು ಬಣ್ಣ ಮಾತ್ರ ಭೂ ವಾತಾವರಣವನ್ನು ದಾಟಿಕೊಂಡು ಹೋಗುತ್ತದೆ. ಹೀಗಾಗಿ, ಚಂದಿರ ಕಡು ಕೆಂಪು ವರ್ಣ ಅಥವಾ ತಾಮ್ರ ವರ್ಣದಲ್ಲಿ ಕಾಣಿಸುತ್ತಾನೆ ಎಂದು ಗುರುಪ್ರಸಾದ್ ವಿವರಿಸಿದರು.