ಕನ್ನಡಪ್ರಭವಾರ್ತೆ
ದಕ್ಷಿಣ ಕನ್ನಡದಲ್ಲಿ ಬಹಳಷ್ಟು ಕಡೆಗಳಲ್ಲಿ ಭತ್ತದ ಕೃಷಿ ಕ್ಷೀಣಿಸುತ್ತಿದ್ದರೂ 80ರ ಹರೆಯದ ಬಿ.ಕೆ ದೇವರಾಯರು 200ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಉಳಿಸಿ ಬೆಳೆಸುತ್ತಾ ಬಂದಿದ್ದಾರೆ.
‘ಕಾಲದ ಹೊಡೆತಕ್ಕೆ ಮರೆಯಾಗಿಹೋಗಬಹುದಾಗಿದ್ದ ಅಪರೂಪದ ತಳಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿರುವುದಲ್ಲದೇ, ಕೃಷಿಯಲ್ಲಿ ಇತರರಿಗೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಕೆ. ದೇವರಾಯರಿಗೆ ಮತ್ತು ಅವರ ಶ್ರೇಷ್ಠ ಬದುಕಿಗೆ ಗೌರವ ನೀಡುವ ಸಲುವಾಗಿ ಮೊದಲ ವರ್ಷದ ರೈತಪೀಠ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡುತ್ತಿದ್ದೇವೆ’ ಎಂದು ಡಾ. ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.ಮೂಡಬಿದ್ರಿ ಸಮೀಪದಲ್ಲಿರುವ ಎಸ್‌ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರಾಗಿ, ಉದ್ಯಮಿಯಾಗಿ ಸಾಕಷ್ಟು ಕೆಲಸ ಮಾಡಿರುವ ಡಾ. ರಾಮಕೃಷ್ಣ ಆಚಾರ್ ಇದೀಗ ಕೃಷಿಗೆ, ರೈತರಿಗೆ ಪ್ರೋತ್ಸಾಹ ನೀಡಲು ಮುಂದಾಗಿರುವುದು ಮಾದರಿ ನಡೆಯಾಗಿದೆ. ಮುಂದಿನ ಪೀಳಿಗೆ ಕೃಷಿಯತ್ತ ಆಕರ್ಷಿತರಾಗುವಂತೆ ಮಾಡುವ, ಮಣ್ಣಿನ ಸಂರಕ್ಷಣೆ ಮಾಡುವ, ಕೃಷಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಡಾ. ರಾಮಕೃಷ್ಣ ಆಚಾರ್ ಅವರ ಈ ನಿಲುವು ಅತ್ಯಂತ ಮಹತ್ವದ್ದಾಗಿದೆ.
ರೈತಪೀಠ ಪ್ರಶಸ್ತಿಯನ್ನು ಫೆ.20ರಂದು ಪಶ್ಚಿಮ ಘಟ್ಟದ ಬುಡದಲ್ಲಿರುವ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮುನಿಯಾಲಿನಲ್ಲಿರುವ ಗೋ-ಧಾಮ ತೋಟದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಮಾರಂಭದಲ್ಲಿ ಮಹಾರಾಷ್ಟ್ರ ಕೊಲ್ಹಾಪುರದ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿ ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ಗೋ-ಧಾಮದಲ್ಲಿ ಕೃಷಿ ಜಾಗೃತಿ ಮೂಡಿಸುವ ಕೃಷಿ ಮಂಡಲ ಕಾರ್ಯಕ್ರಮ ಮತ್ತು ಏಕಪವಿತ್ರ ಶ್ರೀಮನ್ನಾಗಮಂಡಲ ಕಾರ್ಯಕ್ರಮ ಜರುಗಲಿದೆ.ಡಾ.ರಾಮಕೃಷ್ಣ ಆಚಾರ್ ಅವರು ತಮ್ಮ ಉದ್ದೇಶದ ಕುರಿತು, ‘ನಮ್ಮ ದೇಶದಲ್ಲಿ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್, ಡಾಕ್ಟರ್, ಉದ್ಯಮಿಗಳಿಗೆ ಸಿಗುವಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಗೌರವ ರೈತನಿಗೂ ಸಲ್ಲಬೇಕು. ಆತನಿಗೆ ಘನತೆಯಿಂದ ಬದುಕುವ ವಾತಾವರಣ ನಿರ್ಮಿಸಬೇಕು. ಜೊತೆಗೆ ಹಲವಾರು ರಾಜ್ಯಗಳಿಗೆ ಹೋಗಿ ರೈತರ ಜೊತೆ ಒಡನಾಡಿದ ಕಾರಣದಿಂದ ತಿಳಿದುಬಂದ ವಿಚಾರವೆಂದರೆ ಮಣ್ಣಿನ ಫಲವತ್ತತೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಮಣ್ಣಿನ ಫಲವತ್ತತೆ ಉಳಿಯಬೇಕೆಂದರೆ ಕೃಷಿ ಕೆಲಸ ಉಳಿಯಬೇಕು, ಹೆಚ್ಚಾಗಬೇಕು. ಹಾಗಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಿದ್ದೇನೆ. ಈ ಉದ್ದೇಶದ ಒಂದು ಭಾಗವಾಗಿ ಪ್ರಶಸ್ತಿ ಸ್ಥಾಪನೆಯಾಗಿದೆ. ಇನ್ನುಳಿದಂತೆ ಮುಂದಿನ ಪೀಳಿಗೆಯ ಮಕ್ಕಳಿಗೆ ಕೃಷಿ ಪರಿಚಯಿಸುವ ಸಲುವಾಗಿ ಗೋಧಾಮ ಎಂಬ ಮಾದರಿ ಕೃಷಿ ತೋಟ ನಿರ್ಮಿಸಿದ್ದೇನೆ. ಇದರ ಹೊರತಾಗಿಯೂ ಸಾಕಷ್ಟು ಯೋಜನೆಗಳಿವೆ’ ಎನ್ನುತ್ತಾರೆ.