;Resize=(412,232))
ವಿಧಾನಸಭೆ : ಸರ್ಕಾರ ಅನರ್ಹರ ಪಡಿತರ ಚೀಟಿಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಅರ್ಹರ ಬಿಪಿಎಲ್ ಕಾರ್ಡುಗಳನ್ನೂ ಎಪಿಎಲ್‌ಗೆ ಬದಲಾವಣೆ ಮಾಡುತ್ತಿದೆ. ಇದರಿಂದ ಕ್ಷೇತ್ರದಲ್ಲಿ ಜನರು ನಮ್ಮನ್ನು ಓಡಾಡಲು ಬಿಡುತ್ತಿಲ್ಲ ಎಂದು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಬುಧವಾರ ವಿಧಾನಸಭೆಯಲ್ಲಿ ಅಳಲು ತೋಡಿಕೊಂಡ ಘಟನೆ ನಡೆಯಿತು.
ಗಮನ ಸೆಳೆಯುವ ಸೂಚನೆ ವೇಳೆ ಕಾಂಗ್ರೆಸ್ ಸದಸ್ಯ ಜಿ.ಎಚ್.ಶ್ರೀನಿವಾಸ್, ರಾಜ್ಯದಲ್ಲಿ ಪ್ರಸ್ತುತ ಶಂಕಿತ ಪಡಿತರ ಚೀಟಿಗಳನ್ನು ಬಿಪಿಎಲ್ ನಿಂದ ಎಪಿಎಲ್‌ಗೆ ಬದಲಾವಣೆ ಮಾಡುತ್ತಿರುವುದರಿಂದ ಅರ್ಹ ಬಿಪಿಎಲ್ ಕಾರ್ಡುದಾರರಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಅರ್ಹರ ಬಿಪಿಎಲ್ ಕಾರ್ಡುಗಳು ಬದಲಾವಣೆ ಆಗದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ವಿವಿಧ ಸದಸ್ಯರು ಬೆಂಬಲ ಸೂಚಿಸಿ ಕ್ಷೇತ್ರದಲ್ಲಿ ಜನರು ನಮ್ಮನ್ನು ಓಡಾಡಲು ಬಿಡುತ್ತಿಲ್ಲ. ಬಿಪಿಎಲ್ ಕಾರ್ಡು ಇದ್ದರೆ ಕುಟುಂಬಕ್ಕೆ ಪಡಿತರ ಬರುವುದು ಒಂದೆಡೆಯಾದರೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಲಭ್ಯವಾಗಲಿದೆ. ಹಾಗಾಗಿ ಜನರು ಬಿಪಿಎಲ್ ಕಾರ್ಡು ಬೇಕೆಂದು ಹೆಚ್ಚು ಬೇಡಿಕೆ ಇಡುತ್ತಿದ್ದಾರೆ.
ಸರ್ಕಾರ ಈಗ ಯಾವ ಮಾನದಂಡದಲ್ಲಿ ಅನರ್ಹ ಎಂದು ಬಿಪಿಎಲ್ ಕಾರ್ಡುಗಳನ್ನು ರದ್ದುಮಾಡಲು ಹೊರಟಿದೆಯೋ ಅದನ್ನು ಕೈಬಿಟ್ಟು ಮಾನದಂಡಗಳನ್ನು ಪರಿಷ್ಕರಿಸಬೇಕು. ವಾರ್ಷಿಕ ಆದಾಯ ಮಿತಿಯನ್ನು 1.20 ಲಕ್ಷ ರು.ನಿಂದ 3 ಲಕ್ಷ ರು.ಗೆ ಹೆಚ್ಚಿಸಬೇಕು. ಜೀವನೋಪಾಯಕ್ಕಾಗಿ ಒಂದು ಎಲ್ಲೋ ಬೋರ್ಡ್ ವಾಹನ ಹೊಂದಿದ್ದರೆ ಅದನ್ನು ಅನರ್ಹತೆಗೆ ಪರಿಗಣಿಸಬಾರದು ಎಂದು ಆಗ್ರಹಿಸಿದರು.