ಸತ್ಪ್ರಜೆಗಳಿಂದ ಸಮೃದ್ಧ ದೇಶ ನಿರ್ಮಾಣ

Published : Oct 20, 2026, 12:37 PM IST
population

ಸಾರಾಂಶ

ಒಂದು ಬಲಿಷ್ಠ ಕಟ್ಟಡಕ್ಕೆಗಟ್ಟಿಯಾದ ಇಟ್ಟಿಗೆಗಳು ಎಷ್ಟು ಅಗತ್ಯವೋ, ಒಂದು ಪ್ರಗತಿಪರ ಹಾಗೂ ಸದೃಢರಾಷ್ಟ್ರದ ನಿರ್ಮಾಣಕ್ಕೆ ಗುಣವಂತ ಮತ್ತು ಚಾರಿತ್ರಿವಂತ ಪ್ರಜೆಗಳು ಅಷ್ಟೇ ಅಗತ್ಯ. ‘ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರನಿರ್ಮಾಣ’ ಎನ್ನುವುದು ಕೇವಲ ಆಕರ್ಷಕ ಘೋಷಣೆಯಲ್ಲ ಅದೊಂದು ಜಾಗತಿಕ ಮತ್ತು ಸರ್ವಕಾಲಿಕ ಸತ್ಯ.

-ಪ್ರತಿಭಾ ರ.ಜೋಶಿ, ಶಿಕ್ಷಕಿ, ಬೆಳಗಾವಿ. 

ಯಾರೋ ಮಾಡಿದ ಎನ್ನುವುದಕ್ಕಿಂತ

ನಾನೇನು ಮಾಡಿದೆ ಎನ್ನುವುದು ಮುಖ್ಯ.

ದೇಶ ಕಾಯುವ ಯೋಧನಷ್ಟೇ ಅಲ್ಲ,

ಪ್ರಾಮಾಣಿಕ ನಾಗರಿಕನೂ ದೇಶದ ರಕ್ಷಕ!

ರಾಷ್ಟ್ರ ಎಂದರೆ ಕೇವಲ ಭೂಪಟದಲ್ಲಿ ಗೆರೆ ಎಳೆದ ಗಡಿಯಲ್ಲ ಅಥವಾ ರಾಷ್ಟ್ರವು ಭೌತಿಕ ಇತಿಮಿತಿ ಇರುವಂತಹ ರಸ್ತೆ ಕಟ್ಟಡಗಳು ಅಲ್ಲ. ರಾಷ್ಟ್ರ ಎಂದರೇನು? ಅಲ್ಲಿ ವಾಸಿಸುವ ಜನರ ಜೀವಂತ ಸಮೂಹ. ಆದ್ದರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಸತ್ಪ್ರಜೆಯಾಗಿ ರೂಪುಗೊಂಡಾಗ ಮಾತ್ರ ರಾಷ್ಟ್ರದ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ.

ಹಾಗಿದ್ದಲ್ಲಿ ವ್ಯಕ್ತಿ ನಿರ್ಮಾಣ ಎಂದರೇನು?

ವ್ಯಕ್ತಿ ನಿರ್ಮಾಣ ಎಂದರೆ ಕೇವಲ ದೊಡ್ಡ ಪದವಿಗಳನ್ನು ಪಡೆಯುವುದು, ಉನ್ನತ ಉದ್ಯೋಗ ಹಿಡಿಯುವುದು ಅಥವಾ ಆರ್ಥಿಕವಾಗಿ ಶ್ರೀಮಂತರಾಗುವುದಲ್ಲ. ಅದು ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ವಿಕಾಸ ಒಳಗೊಂಡಿರುತ್ತದೆ.

ಚಾರಿತ್ರ್ಯಮತ್ತು ನೈತಿಕತೆ:

ಸತ್ಯ, ಪ್ರಾಮಾಣಿಕತೆ, ಪರಸ್ತ್ರೀ /ಪರಪುರುಷರ ಗೌರವ ಮತ್ತು ಕರ್ತವ್ಯ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು.

ಶಿಸ್ತು ಮತ್ತು ದೇಶಪ್ರೇಮ:

ವೈಯಕ್ತಿಕ ಸ್ವಾರ್ಥಕ್ಕಿಂತ ದೇಶದ ಹಿತಾಸಕ್ತಿಯೇ ದೊಡ್ಡದು ಎಂದು ಭಾವಿಸುವುದು.

ಭಾವನಾತ್ಮಕ ಪಕ್ವತೆ:

ಕಷ್ಟಕಾಲದಲ್ಲಿ ಧೃತಿಗಡದೆ ಸಮಾಜದ ಇತರರ ನೋವಿಗೆ ಮಿಡಿಯುವ ಸಹಾನುಭೂತಿ ಹೊಂದುವುದು.

ಅದೇ ರೀತಿ ರಾಷ್ಟ್ರ ಸೇವಿಕಾ ಸಮಿತಿಯ ಶಾಖೆಯ ಪ್ರಮುಖ ಉದ್ದೇಶಗಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣ, ಶಿಸ್ತು ಮತ್ತು ಸಂಸ್ಕಾರಗಳ ಬೆಳೆವಣಿಗೆ, ರಾಷ್ಟ್ರಭಕ್ತಿಯ ಜಾಗೃತಿ ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯುತ ಭಾವನೆ ಬೆಳೆಸುವುದು ಪ್ರಮುಖವಾದವುಗಳಾಗಿವೆ.

ಶಾಖೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ, ಸಹಕಾರ ಮತ್ತು ಸಾಮರಸ್ಯತೆ, ರಾಷ್ಟ್ರಭಕ್ತಿಯ ಭಾವನೆ, ಆತ್ಮವಿಶ್ವಾಸ ಮತ್ತು ನಾಯಕತ್ವ, ಚಿಂತನ ಶಕ್ತಿ ಮತ್ತು ನಿರ್ಧಾರ ಸಾಮರ್ಥ್ಯ, ಸಮಾಜದ ಬಗ್ಗೆ ಕಾಳಜಿ ಮತ್ತು ಸೇವಾ ಮನೋಭಾವ, ಉತ್ತಮ ಸಂಸ್ಕಾರ ಮತ್ತು ಜವಾಬ್ದಾರಿಯುತ ಜೀವನ, ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಇವೆಲ್ಲವನ್ನೂ ದೈನಂದಿನ ಶಾಖೆಯ ವ್ಯಾಯಾಮ, ಆಟಗಳು, ಬೌದ್ಧಿಕ, ಗೀತೆ, ಚರ್ಚೆ ಮತ್ತು ಸಾಮೂಹಿಕ ಚಟುವಟಿಕೆಗಳ ಮೂಲಕ ಬೆಳೆಸಲಾಗುತ್ತಿದೆ.

ರಾಷ್ಟ್ರಸೇವಿಕಾ ಸಮಿತಿಯ ಪ್ರಕಾರ ಒಬ್ಬ ಉತ್ತಮ ವ್ಯಕ್ತಿ- ಒಂದು ಉತ್ತಮ ಕುಟುಂಬ- ಒಂದು ಉತ್ತಮ ಸಮಾಜ- ಒಂದು ಶಕ್ತಿಶಾಲಿ ರಾಷ್ಟ್ರ. ಹಾಗಾಗಿ ಶಾಖೆ ಕೇವಲ ಒಂದು ಗಂಟೆಯ ಕಾರ್ಯಕ್ರಮವು ಅಲ್ಲ, ಇದು ಜೀವನ ರೂಪಿಸುವ ನಿರಂತರ ಸಂಸ್ಕಾರ ಪ್ರಕ್ರಿಯೆ.

‘ವ್ಯಕ್ತಿಯ ಚಾರಿತ್ರ್ಯವೇ ದೇಶದ ಶಕ್ತಿ

ಮೌಲ್ಯಗಳ ನಡತೆಯೇ ನಾಡಿನ ಭಕ್ತಿ

ಇಟ್ಟಿಗೆ ಗಟ್ಟಿಯಾದರೆ ಕೋಟೆಭದ್ರ

ಪ್ರಜೆಗಳು ಸತ್ಪ್ರಜೆಯಾದರೆ ರಾಷ್ಟ್ರ ಸಮೃದ್ಧ’

ವ್ಯಕ್ತಿ ನಿರ್ಮಾಣ-ಮಹಾನ್‌ ಮಹಿಳೆಯರ ಜೀವನದಿಂದ:

ಭಾರತದ ಇತಿಹಾಸದಲ್ಲಿ ಪ್ರಸಿದ್ಧ ಮಹಾನ್‌ ಸ್ತ್ರೀಯಯರಾದ ಹಾಗೂ ನಮ್ಮ ಆದರ್ಶರಾದ ಮಾತಾ ಅಹಿಲ್ಯಬಾಯಿ ಹೋಳ್ಕರ್, ಜಿಜಾಮಾತಾ ಹಾಗೂ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು ವ್ಯಕ್ತಿ ನಿರ್ಮಾಣದ ವಿಭಿನ್ನ ಆಯಾಮಗಳನ್ನು ನಮಗೆ ತೋರಿಸುತ್ತಾರೆ. ಮಹಾನ್‌ ವ್ಯಕ್ತಿಗಳು ಹುಟ್ಟುವುದಿಲ್ಲ, ಅವರ ವ್ಯಕ್ತಿತ್ವವು ಸಂಸ್ಕಾರ, ಧೈರ್ಯ, ಕರ್ತವ್ಯ ಮತ್ತು ನಿರಂತರ ಪ್ರಯತ್ನಗಳಿಂದ ರೂಪುಗೊಳ್ಳುತ್ತದೆ.

ಮಾತಾ ಅಹಿಲ್ಯಬಾಯಿ ಹೋಳ್ಕರ್ - ಕರ್ತೃತ್ವದ ಮೂರ್ತಿ- ಸೇವೆ ಮತ್ತು ಕರ್ತವ್ಯ ನಿಷ್ಠೆ:

ಅಹಿಲ್ಯ ಬಾಯಿಯವರು ಆಡಳಿತದಲ್ಲಿ ಪ್ರಜೆಗಳ ಕಲ್ಯಾಣಕ್ಕೆ ಮಹತ್ವ ನೀಡಿದ ಆಡಳಿತಗಾರ್ತಿಯಾಗಿ ಪ್ರಸಿದ್ಧರಾಗಿದ್ದಾರೆ. ಅವರ ಜೀವನವು ಅಧಿಕಾರಕ್ಕಿಂತ ಕರ್ತವ್ಯ ಮತ್ತು ಸೇವೆ ಮುಖ್ಯ ಎಂಬುವುದನ್ನು ತೋರಿಸುತ್ತದೆ. ಅವರ ಜೀವನದಿಂದ ನಾವು ಕಲಿಬೇಕಾದ ಪಾಠ ಎಂದರೆ, ನಮ್ಮ ಸಾಮರ್ಥ್ಯ ಸಮಾಜದ ಹಿತಕ್ಕಾಗಿ ಬಳಕೆಯಾಗಬೇಕು.

ಜೀಜಾಮಾತಾ-ಮಾತೃತ್ವ- ಸಂಸ್ಕಾರ ಮತ್ತು ದೃಷ್ಟಿಯ ನಿರ್ಮಾಣ:

ತಾಯಿ ತನ್ನ ಮಗುವಿಗೆ ನೀಡುವ ಸಂಸ್ಕಾರವು ಅವನ ವ್ಯಕ್ತಿತ್ವದ ಅಡಿಪಾಯ ಆಗಿರುತ್ತದೆ. ಶಿವಾಜಿ ಮಹಾರಾಜರಲ್ಲಿ ಧರ್ಮನಿಷ್ಠೆ, ಸ್ವಾಭಿಮಾನ, ಪ್ರಜೆ ಬಗ್ಗೆ ಕಾಳಜಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿದರು. ಇವರ ಜೀವನದಿಂದ ಕಲಿಯಬೇಕಾದ ಪಾಠ ಎಂದರೇ ವ್ಯಕ್ತಿ ನಿರ್ಮಾಣದ ಮಹತ್ವದ ಸ್ಥಾನ ಕುಟುಂಬ.

ಝಾನ್ಸಿ ರಾಣಿ ಲಕ್ಷ್ಮೀಬಾಯಿ- ನೇತೃತ್ವ- ಧೈರ್ಯ ಮತ್ತು ಆತ್ಮವಿಶ್ವಾಸ:

ಲಕ್ಷ್ಮೀಬಾಯಿಯ ಜೀವನವು ಸಂಕಷ್ಟದ ಸಮಯದಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಕರ್ತವ್ಯಪ್ರಜ್ಞೆ ತೋರಿಸುತ್ತದೆ. ಸವಾಲುಗಳು ವ್ಯಕ್ತಿತ್ವವನ್ನು ಪರೀಕ್ಷಿಸುತ್ತವೆ, ಧೈರ್ಯ ಅದನ್ನು ಮುನ್ನಡೆಸುತ್ತದೆ ಎನ್ನುವ ಪಾಠ ಇವರ ಜೀವನದಿಂದ ಕಲಿಯಬಹುದು.

ಜೀಜಾ ಮಾತೆಯಿಂದ ಸಂಸ್ಕಾರ, ಅಹಿಲ್ಯಬಾಯಿಯಿಂದ ಸೇವೆ, ಲಕ್ಷ್ಮೀಬಾಯಿಯಿಂದ ಧೈರ್ಯ, ರಾಷ್ಟ್ರಸೇವಿಕಾ ಸಮಿತಿಯ ಶಾಖೆಯಿಂದ ಶಿಸ್ತು, ಸಾಮರಸ್ಯತೆ ಮತ್ತು ಸೇವಾಮನೋಭಾವ ಇವೆಲ್ಲವೂ ಸೇರಿ ಸಮಾಜಕ್ಕೆ ಉಪಯುಕ್ತವಾದ ಉತ್ತಮ ವ್ಯಕ್ತಿಯನ್ನು ರೂಪಿಸುವ ಆದರ್ಶವನ್ನು ನೀಡುತ್ತವೆ.

‘ಸಂಸ್ಕಾರವಿರುವ ವ್ಯಕ್ತಿ ಕುಟುಂಬವನ್ನು ಕಟ್ಟುತ್ತಾನೆ, ಕರ್ತವ್ಯ ನಿಷ್ಠ ವ್ಯಕ್ತಿ ಸಮಾಜವನ್ನು ಕಟ್ಟುತ್ತಾನೆ, ಧೈರ್ಯವಿರುವ ವ್ಯಕ್ತಿ ರಾಷ್ಟ್ರವನ್ನು ಬಲಪಡಿಸುತ್ತಾನೆ’.

ಸ್ವಾಮಿ ವಿವೇಕಾನಂದರ ಪ್ರಕಾರ ದೇಶದ ಪ್ರಗತಿರುವುದು ಅಲ್ಲಿಯ ಮಾನವ ಸಂಪನ್ಮೂಲದ ಅಭಿವೃದ್ಧಿಯಲ್ಲಿ. ಅವರು ಕೇವಲ ಮಾಹಿತಿ ತುಂಬುವ ಶಿಕ್ಷಣವನ್ನು ವಿರೋಧಿಸಿದರು. ನಮಗೆ ಬೇಕಾಗಿರುವುದು ಚಾರಿತ್ರ್ಯವನ್ನು ರೂಪಿಸುವ, ಮಾನಸಿಕ ಶಕ್ತಿಯನ್ನು ಹೆಚ್ಚಿಸುವ, ಬುದ್ಧಿಶಕ್ತಿಯನ್ನು ವಿಸ್ತರಿಸುವ, ಮತ್ತು ಒಬ್ಬವ್ಯಕ್ತಿಯನ್ನು ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವ ಶಿಕ್ಷಣ ಎಂದರು. ವ್ಯಕ್ತಿಯಲ್ಲಿ ಸುಪ್ತವಾಗಿರುವ ದೈವತ್ವ ಹಾಗೂ ಸಾಮರ್ಥ್ಯವನ್ನು ಜಾಗೃತಗೊಳಿಸುವುದೇ ವ್ಯಕ್ತಿ ನಿರ್ಮಾಣದ ಮೊದಲ ಹೆಜ್ಜೆ ಎಂದು ಪ್ರತಿಪಾದಿಸಿದರು.

‘ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ, ಯುವ ಶಕ್ತಿಯೇ ದೇಶದ ಜೀವಾಳ ಎಂದು ತಿಳಿಯಿರಿ. ನಿಮ್ಮ ಅಂದರೆ ಸ್ವಂತದ ಮೇಲಷ್ಟೇ ಅಲ್ಲ, ದೇಶದ ಮೇಲು ನಂಬಿಕೆ ಇಡಿ, ಮನುಷ್ಯ ನಿರ್ಮಾಣದ ಹಾದಿಯಲ್ಲಿ ಮುನ್ನಡೆಯಿರಿ’ ಎಂದು ಸ್ವಾಮಿ ವಿವೇಕಾನಂದರು ಒತ್ತಿ ಒತ್ತಿ ಹೇಳಿದ್ದಾರೆ.

ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ:

ಯುವ ಜನರು ದೇಶದ ಕೇವಲ ಮತದಾರರಲ್ಲ. ಅವರು ದೇಶದ ಭವಿಷ್ಯದ ನಿರ್ಮಾತೃಗಳು. ಭಾರತವು ಇಂದು ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಈ ಯುವಶಕ್ತಿ ಸರಿಯಾದ ಹಾದಿಯಲ್ಲಿ ಸಾಗಿದರೆ ರಾಷ್ಟ್ರ ನಿರ್ಮಾಣದ ವೇಗ ದುಪಟ್ಟಾಗುತ್ತದೆ. ಇಂದಿನ ಯುವಪೀಳಿಗೆ ಕೇವಲ ಉದ್ಯೋಗ ಹುಡುಕುವವರಾಗದೆ, ‘ನವೋದ್ಯಮ’ ಮತ್ತು ತಂತ್ರಜ್ಞಾನದ ಮೂಲಕ ದೇಶದ ಆರ್ಥಿಕತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಪರಿಸರ ಸಂರಕ್ಷಣೆ, ರಕ್ತದಾನ, ಸಾಕ್ಷರತಾ ಆಂದೋಲನ ಮತ್ತು ಗ್ರಾಮೀಣಾಭಿವೃದ್ಧಿ ಅಂತಹ ಕಾರ್ಯಗಳಲ್ಲಿ ಯುವಕ-ಯುವತಿಯರು ಭಾಗವಹಿಸಿದಾಗ ಸಮಾಜದಲ್ಲಿ ಧನಾತ್ಮಕ ಬದಲಾವಣೆ ಬರುತ್ತದೆ. ಯುವ ಜನರು ಮಾದಕ ದ್ರವ್ಯಗಳು, ಸಾಮಾಜಿಕ ಜಾಲತಾಣಗಳ ದುರುಪಯೋಗ ಮತ್ತು ಅಪರಾಧ ಪ್ರವೃತ್ತಿಗಳಿಂದ ದೂರವಿದ್ದು ತಮ್ಮ ಶಕ್ತಿಯನ್ನು ಸೃಜನಶೀಲ ಕೆಲಸಗಳಿಗೆ ಬಳಸಿದಾಗ ದೇಶದ ಆಂತರಿಕ ಭದ್ರತೆ ಮತ್ತು ಗೌರವ ಹೆಚ್ಚುತ್ತದೆ.

ವ್ಯಕ್ತಿ ನಿರ್ಮಾಣದ ಪ್ರಮುಖ ಸ್ತಂಭಗಳು:

ಒಬ್ಬ ಉತ್ತಮ ವ್ಯಕ್ತಿಯನ್ನು ರೂಪಿಸುವಲ್ಲಿ ಮೂರು ಮಹತ್ತರವಾದ ಘಟಕಗಳು ಕೆಲಸ ಮಾಡುತ್ತವೆ. ಅವು ಕುಟುಂಬ ಮತ್ತು ಸಂಸ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜ ಮತ್ತು ವಾತಾವರಣ.

ವ್ಯಕ್ತಿ ನಿರ್ಮಾಣಕ್ಕೆ ಮನೆಯೇ ಮೊದಲ ಪಾಠಶಾಲೆ. ತಂದೆ-ತಾಯಿ ಮಕ್ಕಳಿಗೆ ಬಾಲ್ಯದಲ್ಲೇ ಒಳ್ಳೆಯ ಮತ್ತು ಕೆಟ್ಟದರ ನಡುವಿನ ವ್ಯತ್ಯಾಸವನ್ನು ಕಲಿಸಬೇಕು. ಬಾಲ್ಯದಲ್ಲಿ ಬಿತ್ತಿದ ಸಂಸ್ಕಾರದ ಬೀಜವೇ, ಮುಂದೆ ದೊಡ್ಡ ಹೆಮ್ಮೆರವಾಗುತ್ತದೆ. ಹಾಗೆ ಶಾಲಾ-ಕಾಲೇಜುಗಳು ಕೇವಲ ಅಂಕಗಳನ್ನು ಗಳಿಸುವ ಕಾರ್ಖಾನೆಗಳಾಗಬಾರದು. ಅವು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಜಾಗೃತಗೊಳಿಸಬೇಕು. ವ್ಯಕ್ತಿಯ ಯೋಚನೆಗಳನ್ನು ಸುತ್ತ-ಮುತ್ತಲಿನ ಸ್ನೇಹಿತರು, ಪರಿಸರ ಮತ್ತು ಮಾಧ್ಯಮಗಳು ರೂಪಿಸುತ್ತವೆ. ಸಮಾಜದಲ್ಲಿ ಸತ್ಚಿಂತನಗಳಿಗೆ ಮನ್ನಣೆ ಸಿಕ್ಕಾಗಲೇ ಒಳ್ಳೆಯ ವ್ಯಕ್ತಿತ್ವ ಬೆಳೆಯುತ್ತದೆ.

ವ್ಯಕ್ತಿ ನಿರ್ಮಾಣವು ರಾಷ್ಟ್ರ ನಿರ್ಮಾಣಕ್ಕೆ ಕಾರಣ:

ವ್ಯಕ್ತಿ ನಿರ್ಮಾಣವು ರಾಷ್ಟ್ರದ ಪ್ರತಿಯೊಂದು ಕ್ಷೇತ್ರದಲ್ಲೂ ಧನಾತ್ಮಕ ಬದಲಾವಣೆಯನ್ನು ತರುತ್ತದೆ. ವ್ಯಕ್ತಿಯಲ್ಲಿ ನೈತಿಕತೆ ಮತ್ತು ಕಾನೂನಿಗೆ ಗೌರವ ನೀಡುವ ಗುಣವಿದ್ದಾಗ ದೇಶದಲ್ಲಿ ಭ್ರಷ್ಟಾಚಾರ, ವಂಚನೆಗಳಂತಹ ಸಾಮಾಜಿಕ ಪಿಡುಗುಗಳು ತಾನಾಗಿಯೇ ನಾಶವಾಗುತ್ತವೆ. ಕೌಶಲ್ಯಭರಿತ, ಶ್ರಮಜೀವಿ ಹಾಗೂ ಸೃಜನಶೀಲ ವ್ಯಕ್ತಿಗಳು ದೇಶದ ಉದ್ಯಮ, ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರಗಳನ್ನು ಬಲಪಡಿಸುತ್ತಾರೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಪ್ರಜೆ ದೇಶದ ಆರ್ಥಿಕತೆಯ ಬೆನ್ನೆಲು ಬಾಗುತ್ತಾನೆ. ಜಾತಿ, ಧರ್ಮ, ಭಾಷೆಗಳ ಭೇದ ಮರೆತು ಎಲ್ಲರನ್ನೂ ಗೌರವಿಸುವ ಗುಣವಿರುವ ಪ್ರಜೆಗಳಿಂದ ದೇಶದಲ್ಲಿ ಶಾಂತಿ ನೆಲೆಸುತ್ತದೆ. ಆಂತರಿಕ ಕಲಹಗಳಿಲ್ಲದ ದೇಶ ಜಗತ್ತಿನಲ್ಲಿ ಬಲಿಷ್ಠವಾಗಿ ನಿಲ್ಲುತ್ತದೆ. ರಾಷ್ಟ್ರ ನಿರ್ಮಾಣ ಎನ್ನುವುದು ಕೇವಲ ಸರ್ಕಾರದ ಕೆಲಸವಲ್ಲ ಅದು ಪ್ರತಿ ನಾಗರಿಕನ ಕರ್ತವ್ಯ.

ನನ್ನ ದೇಶ ನನ್ನ ಹೆಮ್ಮೆ

ನನ್ನ ನಡೆ ಅದರ ಗೌರವ

ನನ್ನ ಶ್ರಮವೇ ಈ ನಾಡಿನ ಯಶಸ್ಸಿನ ಸೌರಭ

ವ್ಯಕ್ತಿ ನಾನಾಗಿ ಬೆಳಗುವೆ

ರಾಷ್ಟ್ರವನ್ನಾಗಿ ಗೆಲ್ಲಿಸುವೆ

ನನ್ನ ಭಾರತವನ್ನು ಜಗತ್ತಿನ ಮೇಲೆ ನಿಲ್ಲಿಸುವೆ.

PREV
Read more Articles on

Recommended Stories

ವಿಜಯದಶಮಿ: ಹಬ್ಬವಲ್ಲ, ಬದುಕಿನ ವಿಜಯದರ್ಶನ!
ವನವೈಭವ - ಆನೆ ಪಾಲನೆಯಲ್ಲಿ ನಿಷ್ಣಾತರು ಈ ಮಾವುತರು, ಕಾವಾಡಿಗಳು