ಫೆಂಗಲ್‌ ಚಂಡಮಾರುತ : ತುಂತುರು ಮಳೆಗೆ ತಂಪಾದ ರಾಜಧಾನಿ: ಪ್ರಮುಖ ರಸ್ತೆಗಳಲ್ಲಿ ಸವಾರರು ಹೈರಾಣು

KannadaprabhaNewsNetwork | Updated : Dec 03 2024, 07:04 AM IST

ಸಾರಾಂಶ

ಫೆಂಗಲ್‌ ಚಂಡಮಾರುತದ ಪರಿಣಾಮ ನಗರದಲ್ಲಿ ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆ ಸುರಿದ ಪರಿಣಾಮ ನಗರದ ತಾಪಮಾನ 19 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

 ಬೆಂಗಳೂರು : ಫೆಂಗಲ್‌ ಚಂಡಮಾರುತದ ಪರಿಣಾಮ ನಗರದಲ್ಲಿ ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆ ಸುರಿದ ಪರಿಣಾಮ ನಗರದ ತಾಪಮಾನ 19 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ದಿನವಿಡೀ ಸುರಿಯುತ್ತಿರುವ ಜಿಟಿ ಜಿಟಿ ಮಳೆ, ತಣ್ಣನೆ ವಾತಾವರಣದ ಪರಿಣಾಮ ಕೆಲಸಕ್ಕೆ ಹೋಗಬೇಕಾದವರು. ತುರ್ತು ಕೆಲಸದ ಸಂದರ್ಭ ಹೊರತು ಪಡಿಸಿ ಜನರು ಬೆಚ್ಚಗೆ ಮನೆಯಲ್ಲಿದ್ದರು. ಮಾರುಕಟ್ಟೆ ಪ್ರದೇಶವಂತೂ ಮಳೆಯಿಂದಾಗಿ ಕಾಲಿಡಲು ಆಗದಂತ ಸ್ಥಿತಿ ಕಂಡು ಬಂದಿತು. ಇದರಿಂದಾಗಿ ವ್ಯಾಪಾರ-ವಹಿವಾಟು ಕಡಿಮೆಯಾಗಿತ್ತು.

ಮಂಗಳವಾರ ಸಂಜೆ 5 ಗಂಟೆಯವರೆಗೆ ಜಿಟಿಜಿಟಿ ಮಳೆ ಸುರಿದಿದೆ. ನಂತರ ರಾತ್ರಿ 8 ಗಂಟೆಯಿಂದ ಆಗಾಗ ಮಳೆ ಸುರಿದಿದ್ದು, ರಾತ್ರಿ 11 ಗಂಟೆಯವರೆಗೂ ಪುನರಾವರ್ತನೆಯಾಯಿತು. ನಗರದ ಮೆಜೆಸ್ಟಿಕ್‌, ಕೆಆರ್‌ ಮಾರುಕಟ್ಟೆ, ಚಾಮರಾಜಪೇಟೆ, ರಾಜರಾಜೇಶ್ವರಿನಗರ, ಕೆಆರ್ ಪುರ, ಕೋರಮಂಗಲ, ತುಮಕೂರು ರಸ್ತೆ, ಕನಕಪುರ ರಸ್ತೆ, ಬನ್ನೇರಘಟ್ಟ ರಸ್ತೆ, ಮೈಸೂರು ರಸ್ತೆ ಸೇರಿ ಬಹುತೇಕ ಕಡೆಗಳಲ್ಲಿ ಮಳೆ ಸುರಿದಿದೆ. ನಿರಂತರವಾಗಿ ಸಣ್ಣ ಪ್ರಮಾಣದ ಮಳೆ ಸುರಿದ ಪರಿಣಾಮ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಮಳೆಯಿಂದಾಗಿ ಜಗಜೀವನರಾಮ್‌ ನಗರದಲ್ಲಿ ಮನೆಯ ಗೋಡೆ ಕುಸಿದಿದೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ.

ಫೆಂಗಲ್‌ ಚಂಡಮಾರುತದ ಪ್ರಭಾವ ಮಂಗಳವಾರದಿಂದ ಕಡಿಮೆಯಾಗುವ ಮುನ್ಸೂಚನೆಯಿದ್ದು, ಅದರ ಪರಿಣಾಮ ನಗರದಲ್ಲಿ ಮಳೆಯ ಪ್ರಮಾಣವೂ ಕುಸಿಯಲಿದೆ. ಆದರೆ, ಮೋಡ ಕವಿದ ವಾತಾವರಣ ಮಾತ್ರ ಮುಂದುವರಿಯಲಿದೆ. ಆದರೂ, ಕೆಲವೆಡೆ ಕೆಲಹೊತ್ತು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಸ್ತೆ ಗುಂಡಿ ಮುಚ್ಚಲು ಸೂಚನೆ: ಮಳೆಯಿಂದ ರಸ್ತೆ ಗುಂಡಿಗಳ ಸೃಷ್ಟಿ ಹೆಚ್ಚಾಗಿದ್ದು, ಅದನ್ನು ಕೋಲ್ಡ್‌ಮಿಕ್ಸ್‌ ಬಳಸಿ ಮುಚ್ಚುವಂತೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಮಳೆ ನಿಂತ ಕೂಡಲೇ ಎಲ್ಲೆಲ್ಲಿ ಗುಂಡಿಗಳು ಸೃಷ್ಟಿಯಾಗಿದೆ ಎಂದು ಪರಿಶೀಲಿಸಿ ಕೂಡಲೇ ಮುಚ್ಚಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

Share this article