;Resize=(412,232))
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹೊರ ಬಿದ್ದ ಕ್ರಾಂತಿಕಾರಿ ಘೋಷಣೆಯಿದು. ಸಾಮಾಜಿಕ ಜಾಲತಾಣ ಶಾಲಾ ಮಕ್ಕಳ ಮೇಲೆ ಬೀರುತ್ತಿರುವ ದುಷ್ಪರಿಣಾಮ ಬಲ್ಲ ಪ್ರತಿಯೊಬ್ಬರ ಅಂತರಂಗದ ಬಯಕೆಯಿದು. ಅಂತರ್ಜಾಲ ಆಧಾರಿತ ಗೇಮ್‌ಗಳ ಪ್ರಭಾವದಿಂದ ಆತ್ಮಹತ್ಯೆ ಮಾಡಿಕೊಳ್ಳುವುದು, ಪೋಷಕರ ಮೇಲೆ ಹಲ್ಲೆ ಮಾಡುವುದು, ಸಮಾಜದಿಂದ ದೂರವುಳಿಯುವುದು, ವಯಸ್ಸಿಗೆ ಮೀರಿದ ವರ್ತನೆ ತೋರುವುದು ಸೇರಿ ನಾನಾ ರೀತಿಯ ಅಪರಾಧ ಮನಃಸ್ಥಿತಿ ಬೆಳೆಸಿಕೊಳ್ಳುತ್ತಿರುವ ಮಕ್ಕಳ ಸ್ಥಿತಿ ಪ್ರತಿಯೊಬ್ಬ ಪೋಷಕರನ್ನೂ ಕಾಡುತ್ತಿದೆ. ಇದಕ್ಕೆ ಪರಿಹಾರವೇನು ಎಂದು ಜಾಗತಿಕವಾಗಿ ವಿಪರೀತ ಚರ್ಚೆಗಳು ನಡೆಯುತ್ತಿರುವ ಈ ಹಂತದಲ್ಲೇ ಸರ್ಕಾರ ಕೈಗೊಂಡ ಈ ಮಹತ್ವದ ತೀರ್ಮಾನ ತೀವ್ರ ಚರ್ಚೆ ಹುಟ್ಟುಹಾಕಿದೆ. ನಿಯಂತ್ರಣ ಬೇಕು ಎಂದು ಬಯಸುತ್ತಿದ್ದವರೂ ಸರ್ಕಾರದ ಈ ನಿರ್ಧಾರ ಕಾರ್ಯಸಾಧುವೇ ಎಂದು ಪ್ರಶ್ನಿಸತೊಡಗಿದ್ದಾರೆ. ಎಐ ಕಾಲಘಟ್ಟದಲ್ಲಿ ಬದುಕುತ್ತಿರುವ ಜನಾಂಗವನ್ನು ಸಂಪೂರ್ಣವಾಗಿ ಅಂತರ್ಜಾಲದಿಂದ ದೂರವಿಡುವುದು ಸಾಧ್ಯವೇ? ಸಾಧ್ಯವಾದರೂ ಅದರ ಪರಿಣಾಮವೇನು? ಇಷ್ಟಕ್ಕೂ ಸರ್ಕಾರ ಘೋಷಣೆಯನ್ನೇನೋ ಮಾಡಿದೆ. ಆದರೆ, ಹೇಗೆ ಮತ್ತು ಯಾವಾಗ? ನಿಯಂತ್ರಣಕ್ಕೆ ಎದುರಾಗಬಹುದಾದ ಸವಾಲುಗಳು, ತೊಡಕುಗಳೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಶಿಕ್ಷಣ ತಜ್ಞರು, ದಿಶಾ ಭಾರತ ಸಂಘಟನೆಯ ಮಾರ್ಗದರ್ಶಕ ಮಂಡಳಿ ಸದಸ್ಯ ಆದ ಪ್ರೊ.ಎಚ್.ಎಸ್.ಗಣೇಶ ಭಟ್ಟ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
* 16ನೇ ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬ್ಯಾನ್! ಇದು ಕಾರ್ಯಸಾಧ್ಯವೇ?
ರಾಜ್ಯ ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ಇದರಿಂದ ನಮ್ಮ ಮಕ್ಕಳ ಮೇಲೆ ಶೈಕ್ಷಣಿಕ, ಮಾನಸಿಕ, ಆರೋಗ್ಯದ ಮೇಲೆ ಮತ್ತು ದೈಹಿಕವಾಗಿ ಆಗುತ್ತಿರುವ ಅಡ್ಡಪರಿಣಾಮಗಳನ್ನು ನಿಯಂತ್ರಿಸಬಹುದು ಎಂಬುದು ಹಲವು ಜಾಗತಿಕ ಸಂಶೋಧನೆಗಳೇ ಹೇಳಿವೆ. ನಿಷೇಧದಿಂದ ಕೆಲ ಅನನುಕೂಲಗಳೂ ಆಗಬಹುದು. ಆದರೆ, ಸಂಪೂರ್ಣ ನಿಷೇಧ ಎನ್ನುವ ಬದ ಬಳಕೆ ಬದಲು ಬೇರೆ ಪದ ಬಳಕೆ ಮೂಲಕ ಮಾಡಿದರೆ ಕಾನೂನು ತೊಡಕಿಗೆ ಅವಕಾಶವಾಗದಂತೆ ಜಾರಿಗೆ ಅನುಕೂಲವಾಗಬಹುದು. ಇನ್ನು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ದಾರಿಯೂ ಅಷ್ಟು ಸುಲಭವಲ್ಲ. ಬರೀ ಘೋಷಣೆ, ಆದೇಶದಿಂದ ಇದು ಜಾರಿಯಾಗುವಂತಹದ್ದಲ್ಲ, ಏಕೆಂದರೆ ಇದು ಯಾವುದೋ ಒಂದು ಇಲಾಖೆಯಿಂದ ಆಗುವ ಕೆಲಸವೂ ಅಲ್ಲ. ದೊಡ್ಡಮಟ್ಟದ, ದೀರ್ಘಕಾಲದ, ಆಳವಾದ ಹಾಗೂ ನಿರಂತರವಾದ ವ್ಯವಸ್ಥಿತ ಪ್ರಯತ್ನ ಮಾಡಬೇಕಾಗುತ್ತದೆ.
* ಈ ನಿಷೇಧ ಜಾರಿಗೆ ತರೋದು ಹೇಗೆ?
ಯಾವುದೇ ಹೊಸ ಆವಿಷ್ಕಾರ ನಡೆದಾಗ ಅದರಿಂದ ಅನುಕೂಲ, ಅನನುಕೂಲ ಎರಡೂ ಇರುತ್ತವೆ. ಜೊತೆಗೆ ಪ್ರಯತ್ನ ಸುಲಭ ಅಲ್ಲ ಅಂದರೆ ಇದರ ಅನುಷ್ಠಾನ ಸಾಧ್ಯವಿಲ್ಲ ಎಂದಲ್ಲ. ಸಾಕಷ್ಟು ಸವಾಲುಗಳು, ತೊಡಕುಗಳು ಎದುರಾಗುತ್ತವೆ. ಕರ್ನಾಟಕದ ಘೋಷಣೆ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ 13ರಿಂದ 19ವರ್ಷದ ವರೆಗಿನವರಿಗೆ ಸಾಮಾಜಿಕ ಜಾಲತಾಣ ನಿಷೇಧಿಸಿದೆ. ಹೀಗೆ ಏಕಾಏಕಿ ನಿಷೇಧದಿಂದ ಅನುಷ್ಠಾನ ಆಗಲ್ಲ. ತೊಡಕುಗಳು ಆಗದಂತೆ ಸವಾಲುಗಳನ್ನು ದಾಟಿ ಜಾರಿಗೊಳಿಸಲು ಸಾಕಷ್ಟು ಆಲೋಚಿಸಬೇಕು, ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಸಾಮಾಜಿಕ ಜಾಲತಾಣ ನಿಯಂತ್ರಣ ಎನ್ನುವುದು ಒಳ್ಳೆಯದೇ. ಆದರೂ ಇದರಿಂದ ಮಕ್ಕಳ ಮೇಲೆ ಆಗುವ ಪರಿಣಾಮಗಳೇನು ಎನ್ನುವ ಬಗ್ಗೆ ಸಂಶೋಧನಾ ಸಂಸ್ಥೆಗಳಿಂದ ಸಂಶೋಧನೆ ಮಾಡಿಸಬೇಕು. ಅಥವಾ ಈಗ ಇರುವ ಸಂಶೋಧನೆಗಳನ್ನು ಅವಲೋಕನ ಮಾಡಬೇಕು. ಅಲ್ಲದೆ, ಇದು ಒಂದು ಇಲಾಖೆಯಿಂದ ಮಾಡುವಂತಹದ್ದಲ್ಲ. ಕಾನೂನು ಇಲಾಖೆ, ಐಟಿ ಬಿಟಿ, ಇ-ಆಡಳಿತ, ಪೊಲೀಸ್ ಹೀಗೆ ಇನ್ನು ಕೆಲ ಇಲಾಖೆಗಳ ಪತ್ರ ದೊಡ್ಡದಿದೆ. ಮತ್ತೊಂದೆಡೆ, ಇಂಟರ್ನೆಟ್ ಎನ್ನುವುದು ಕೇಂದ್ರ ಸರ್ಕಾರದ ವಿಷಯ. ಕೇಂದ್ರ ಸರ್ಕಾರದ ಅಭಿಪ್ರಾಯವನ್ನೂ ಪಡೆಯಬೇಕಾಗುತ್ತದೆ. ಇದರ ಜೊತೆಗೆ ಎಲ್ಲಾ ಭಾಗೀದಾರರೊಂದಿಗೆ ಚರ್ಚಿಸಿ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ತಯಾರಿಸಬೇಕಾಗುತ್ತದೆ.
* ಆಸ್ಟ್ರೇಲಿಯಾ ಸೇರಿ ಬೇರೆ ಬೇರೆ ದೇಶಗಳಲ್ಲಿ ನಿರ್ಬಂಧಿಸಿದ್ದಾರಲ್ಲ?
ನಿಜ ಕೆಲ ದೇಶಗಳಲ್ಲಿ 16ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟ್ಯಾಕ್, ಎಕ್ಸ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದನ್ನೇ ನಿರ್ಬಂಧಿಸಲಾಗಿದೆ. ಕಾಲೇಜುಗಳಲ್ಲಿ ಇಷ್ಟು ಗಂಟೆಯಿಂದ ಇಷ್ಟು ಗಂಟೆವರೆಗೆ ಇಂಟರ್ನೆಟ್ ಬಳಸುವಂತಿಲ್ಲ ಎಂಬ ನಿಯಮ ಜಾರಿಗೊಳಿಸಿದ್ದಾರೆ. ಆದರೆ, ಇದು ಎಷ್ಟು ಪ್ರಮಾಣದಲ್ಲಿ ಫಲ ನೀಡಿದೆ ಎನ್ನುವ ವರದಿ ಇನ್ನೂ ಸಿಕ್ಕಿಲ್ಲ. ಮತ್ತೊಂದೆಡೆ ಪಿನ್‌ಲ್ಯಾಂಡ್‌ನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಡಿಜಿಟಲ್ ವ್ಯವಸ್ಥೆ ಬದಲು ಭಾರತೀಯ ಮಾದರಿಯ ಪದ್ಧತಿಗೆ ವಾಪಸ್ ಹೋಗುತ್ತಿದ್ದಾರೆ. ಇಷ್ಟಕ್ಕೂ ಆ ರಾಷ್ಟ್ರಗಳು ಬಹಳ ಚಿಕ್ಕವು. ಅವುಗಳಲ್ಲಿ ಯಾವುದೇ ಹೊಸ ಯೋಜನೆ, ನಿಯಮ ಜಾರಿ ಸುಲಭ. ನಮ್ಮಂತಹ ದೊಡ್ಡ ರಾಷ್ಟ್ರ, ರಾಜ್ಯಗಳಲ್ಲಿ ಅದು ಅಷ್ಟು ಸುಲಭ ಅಲ್ಲ.
* ಭಾರತದಲ್ಲೂ ದೇಶಾದ್ಯಂತ ಮಕ್ಕಳಿಗೆ ಇಂಥ ನಿರ್ಬಂಧ ಅಗತ್ಯವಿದೆಯಾ?
ಆಫ್ರಿಕಾದಂಥ ದೇಶದಲ್ಲಿ ಮಕ್ಕಳ ಅತಿಯಾದ ಮೊಬೈಲ್ ಬಳಕೆ ಪೋಷಕರಲ್ಲಿ ಎಷ್ಟು ಕೋಪ ತರಿಸಿದೆ ಎಂದರೆ ಮಕ್ಕಳ ಮುಂದೆಯೇ ಮೊಬೈಲ್‌ಗಳನ್ನು ಕಲ್ಲಲ್ಲಿ ಚಚ್ಚಿಹಾಕಿದ್ದಾರೆ. ಅಂಥ ವಿಕೋಪಕ್ಕೆ ಹೋದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಭಾರತದಲ್ಲೂ ಇಂಥ ನಿಯಂತ್ರಣ ಬೇಕೇಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಆಲೋಚಿಸಬೇಕು. ನಿಮ್ಹಾನ್ಸ್ ಸೇರಿ ದೇಶದ ಪ್ರಮುಖ ಸಂಶೋಧನಾ ಸಂಸ್ಥೆಗಳೊಂದಿಗೆ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ಹೇಗೆ ಮಾಡಬೇಕು? ಇದರಿಂದ ಆಗುವ ಪರಿಣಾಮಗಳೇನು ಎಂಬ ಬಗ್ಗೆ ಸತ್ಯಶೋಧನೆ, ಕಾರ್ಯಸಾಧ್ಯತೆ ಅಧ್ಯಯನ ನಡೆಸಬೇಕು.
* ಬ್ಯಾನ್ ಬದ ಬಳಕೆಯಿಂದ ಕಾನೂನು ತೊಡಕು ಹೇಗಾಗುತ್ತದೆ?
ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ. ಇಲ್ಲಿ ಪ್ರತಿಯೊಬ್ಬರಿಗೂ ವೈಯಕ್ತಿಕ ಸ್ವಾತಂತ್ರ್ಯ ಅನ್ನುವುದಿದೆ. ಯಾವುದೇ ವಿಚಾರದಲ್ಲಿ ನಿಷೇಧ ಅಥವಾ ಬ್ಯಾನ್ ಅಂತ ಬಂದಾಗ ಅಲ್ಲಿ ವೈಯಕ್ತಿಕ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತದೆ ಎನ್ನುವ ಅಭಿಪ್ರಾಯ ಬರುವುದು ಸಾಮಾನ್ಯ. ಇದರ ವಿರುದ್ಧ ನ್ಯಾಯಾಲಯಗಳ ಮೆಟ್ಟಿಲೇರುವ ಅವಕಾಶಗಳು ಇರುತ್ತವೆ. ಹಾಗಾಗಿ ಈ ನಿಷೇಧ ಎನ್ನುವ ಪದವನ್ನು ಹೇಗೆ ವ್ಯಾಖ್ಯಾನಿಸುತ್ತೇವೆ ಎನ್ನುವುದು ಮುಖ್ಯ. ಸಂಪೂರ್ಣ ಬ್ಯಾನ್, ನಿಷೇಧ ಅನ್ನುವ ಬದಲು ನಿಯಂತ್ರಣ, ನಿರ್ಬಂಧ ಎನ್ನುವ ಪದ ಬಳಕೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.
*ಹಾಗಾದರೆ ನಿಮ್ಮ ಪ್ರಕಾರ ಇದರ ಅನುಷ್ಠಾನದ ಮಾದರಿ ಹೇಗಿರಬೇಕು?
ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾಜಿಕ ಜಾಲತಾಣ ನಿರ್ಬಂಧಿಸುತ್ತೇವೆ ಎನ್ನುವುದಾದರೆ ಪ್ರತಿ ಮಗು ಶಾಲೆಯಲ್ಲಿ ಆರೇಳು ಗಂಟೆ ಶಾಲೆಯಲ್ಲಿದ್ದರೆ ಉಳಿದ ಸಮಯ ತಂದೆ-ತಾಯಿ ಜೊತೆ ಮನೆಯಲ್ಲಿ ಕಳೆಯುತ್ತದೆ. ಇಲ್ಲೂ ಇದನ್ನು ಬ್ಯಾನ್ ಮಾಡಬೇಕಾ ಅನ್ನುವ ಪ್ರಶ್ನೆ ಬರುತ್ತದೆ. ಮಕ್ಕಳು ಹಠ ಮಾಡಿದರೆ, ಊಟ ಮಾಡದಿದ್ದರೆ ಮೊಬೈಲ್ ಕೊಟ್ಟು ಕೂರಿಸುತ್ತಾರೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ತಜ್ಞರು, ಪೋಷಕರು, ಎಸ್‌ಡಿಎಂಸಿಯವರು ಹಾಗೂ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರರು ಸೇರಿ ಎಲ್ಲ ಭಾಗೀದಾರರೊಂದಿಗೆ ಸಮಗ್ರವಾಗಿ ಚರ್ಚೆ ಆಗಬೇಕು, ಅಭಿಪ್ರಾಯ ಪಡೆಯಬೇಕು. ಮೊಬೈಲ್ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮ ಮನವರಿಕೆ ಮಾಡಿಕೊಟ್ಟು ಸಹಮತಕ್ಕೆ ಪಡೆದು ಮನೆಯಲ್ಲೂ ಸಹಕಾರ ನೀಡುವಂತೆ ಮಾಡಬೇಕಾಗುತ್ತದೆ. ಇದೆಲ್ಲದಕ್ಕೂ ಒಂದು ಸಮಗ್ರ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಸಿದ್ಧಪಡಿಸಬೇಕು.
* ಸಾಮಾಜಿಕ ಜಾಲತಾಣ ಬಗ್ಗೆ ಇಷ್ಟೊಂದು ಭಯ ಏಕೆ?
ಈ ಪ್ರಶ್ನೆಗೆ ನಾನು ನನ್ನ ಯಾವುದೇ ಹೇಳಿಕೆ ದಾಖಲಿಸುವುದಿಲ್ಲ. ಅಮೆರಿಕ ಸೈಕಾಲಜಿ ಅಸೋಸಿಯೇಷನ್, ಯೂನಿವರ್ಸಿಟಿ ಆಫ್ ಚಿಕಾಗೋ, ಪಿಇಡಬ್ಲ್ಯು, ಯೂನಿಸೆಫ್, ಕಾಮನ್‌ಸೆನ್ಸ್ ಮೀಡಿಯಾ ರಿಸರ್ಚ್ ಸೇರಿ ಇನ್ನೂ ಅನೇಕ ಸಂಸ್ಥೆಗಳು ಈ ಬಗ್ಗೆ ಸಮಗ್ರ ಸಂಶೋಧನೆಗಳನ್ನು ಮಾಡಿವೆ. ಅವುಗಳ ಪ್ರಕಾರ, ಸಾಮಾಜಿಕ ಜಾಲತಾಣ ಬಳಕೆಯಿಂದ ಸುಮಾರು ಶೇ.40ರಷ್ಟು ಮಕ್ಕಳ ಮಾನಸಿಕ ಆರೋಗ್ಯ ಹಾಳಾಗಿದೆ. ಇವುಗಳನ್ನು ಐದು ಗಂಟೆಗಿಂತ ಹೆಚ್ಚು ಬಳಸುತ್ತಿರುವವರು ಖಿನ್ನತೆಯಂಥ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅಷ್ಟೇ ಅಲ್ಲ, ಮಕ್ಕಳ ಬೌದ್ಧಿಕ ಶಕ್ತಿ, ನೆನಪಿನ ಶಕ್ತಿ, ಓದುವ, ಬರೆಯುವ, ಕಲಿಕಾ ಶಕ್ತಿ ಕಡಿಮೆಯಾಗುತ್ತಿದೆ. ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳು ವಿಪರೀತ ಕಡಿಮೆಯಾಗಿವೆ. ಈಗಿನ ಪೀಳಿಗೆಯಲ್ಲಿ ಏಕಾಂಗಿತನ ಹೆಚ್ಚಾಗುತ್ತಿದೆ. ಹೈಫೈ ಶಾಲೆಗಳ ಶೇ.75ರಷ್ಟು ಮಕ್ಕಳು ತಾವು ಓದುವಾಗ, ಪೋಷಕರೊಂದಿಗೆ ಮಾತನಾಡುವಾಗಲೂ ಮೊಬೈಲ್ ಬಳಸುತ್ತೇವೆ ಎಂದು ಹೇಳಿದ್ದಾರೆ. ಹೀಗಾದರೆ ಮಕ್ಕಳ ಕಲಿಕಾ ಮಟ್ಟ ಎಲ್ಲಿ ಹೆಚ್ಚುತ್ತದೆ, ಕೌಟುಂಬಿಕ ಮೌಲ್ಯಗಳು ಎಲ್ಲಿ ಸಿಗುತ್ತವೆ. ಸಾಮಾಜಿಕ ಜಾಲತಾಣ ಬಳಕೆ ಬೌದ್ಧಿಕ, ಮಾನಸಿಕ ಮಾತ್ರವಲ್ಲ ದೈಹಿಕವಾಗಿಯೂ ಮಾರಕವಾಗುತ್ತಿದೆ.
* ದೈಹಿಕವಾಗಿ ಮಾರಕ ಹೇಗೆ?
ಯುನಿಸೆಫ್ ಅಧ್ಯಯನದ ಪ್ರಕಾರ, ಅತಿಯಾಗಿ ಸಾಮಾಜಿಕ ಜಾಲತಾಣ ಬಳಕೆಯಿಂದ 30 ದೇಶಗಳಲ್ಲಿ ಮೂರರಲ್ಲಿ ಒಬ್ಬ ವಿದ್ಯಾರ್ಥಿ ಸೈಬರ್ ಬುಲ್ಲಿಂಗ್‌ಗೆ ಒಳಗಾಗುತ್ತಿದ್ದಾನೆ. ಇದರಿಂದ ವಿದ್ಯಾರ್ಥಿಗಳ ಜೀವಕ್ಕೇ ಅಪಾಯವಾಗುತ್ತಿದೆ. 20ರಷ್ಟು ಮಕ್ಕಳು ಶಾಲೆಗಳಿಗೆ ಬರುತ್ತಿಲ್ಲ. ರಾತ್ರಿ ವೇಳೆಯೂ ಅಗತ್ಯದಷ್ಟು ಸಮಯ ನಿದ್ರೆ ಮಾಡದೆ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗುತ್ತಿರುವುದರಿಂದ ಅದೊಂದು ವ್ಯಸನದ ರೀತಿ ಆಗುತ್ತಿದೆ. ಸ್ಕ್ರೀನ್ ಅಡಿಕ್ಷನ್, ನಿದ್ರಾ ಹೀನತೆಯಿಂದ ಕಣ್ಣು, ಕತ್ತು, ಬೆನ್ನು ಸೇರಿ ಬೇರೆ ಬೇರೆ ಅಂಗಾಂಗ ಸಮಸ್ಯೆಗಳು ಹೆಚ್ಚುತ್ತಿವೆ. ಬೇರೆಯವರ ದೇಹದ ಆಕಾರ, ಸೌಂದರ್ಯ ನೋಡಿ ನಾನು ಅವರಂತಿಲ್ಲವಲ್ಲ ಎಂದು ತನಗೆ ತಾನೇ ತೊಂದರೆ ಮಾಡಿಕೊಳ್ಳುವಂತಹ ಅಥವಾ ಬೇರೆಯವರಂತೆ ನಾನೂ ಕಾಣಬೇಕೆಂದು ಪ್ರಯೋಗಗಳನ್ನು ಮಾಡಿ ತಮ್ಮ ದೇಹವನ್ನು ತಾವೇ ವಿರೂಪಮಾಡಿಕೊಳ್ಳುವುದು, ಅಂಗಾಂಗ ಊನ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಮತ್ತೊಂದೆಡೆ ಲೈಂಗಿಕ ಶೋಷಣೆ ಕೂಡ ಹೆಚ್ಚಾಗುತ್ತಿದೆ ಎಂದು ಸಮೀಕ್ಷೆಗಳು ಹೇಳುತ್ತವೆ.
* ಸೋಷಿಯಲ್ ಮೀಡಿಯಾಗಳಿಂದ ವಿದ್ಯಾರ್ಥಿಗಳಿಗೆ ಏನೂ ಒಳ್ಳೆಯದಿಲ್ವಾ?
ನನ್ನ ಪ್ರಕಾರ ಸಾಮಾಜಿಕ ಜಾಲತಾಣ ಚಾಕು ಇದ್ದ ಹಾಗೆ. ಚಾಕುವನ್ನು ಮನುಷ್ಯನನ್ನು ಸೀಳಲೂ ಬಳಸಬಹುದು, ಶಸ್ತ್ರಚಿಕಿತ್ಸೆಗೂ ಉಪಯೋಗಿಸಬಹುದು. ಆದರೆ, ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ಒಳ್ಳೆಯದು, ಕೆಟ್ಟದ್ದು ನಿಲ್ಲುತ್ತದೆ. ಸೋಷಿಯಲ್ ಮೀಡಿಯಾದಿಂದ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚುತ್ತದೆ ಎನ್ನುವ ಒಂದು ವಾದವಿದ್ದರೆ, ಡಿಜಿಟಲ್ ಸಾಕ್ಷರತೆಗೂ ಸೋಷಿಯಲ್ ಮೀಡಿಯಾಗೂ ಸಂಬಂಧವೇ ಇಲ್ಲ ಎಂದು ಮತ್ತೊಂದು ವಾದವಿದೆ. ಜತೆಗೆ ಯಾವುದೇ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮುಕ್ತ ಅಭಿಪ್ರಾಯ, ಟೀಕೆ, ವಿರೋಧ ವ್ಯಕ್ತಪಡಿಸಲು ಹೆಚ್ಚು ಧೈರ್ಯ ತೋರುತ್ತಾರೆ. ನೇರವಾಗಿ ಇದು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಧಕ್ಕೆ ಆಗಬಹುದು.
* ಸರ್ಕಾರಗಳೇ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಬಹುದಲ್ಲವೇ?
ಹೌದು, ಅದನ್ನೂ ಮಾಡಬಹುದು. ಸರ್ಕಾರಗಳೇ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವುದು ಇನ್ನೂ ದೊಡ್ಡ ತೀರ್ಮಾನ. ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ, ಯಾವುದೇ ರೀತಿ ಅವರನ್ನು ದಾರಿತಪ್ಪಿಸುವ, ತಪ್ಪು ಸಂದೇಶ ನೀಡುವ, ಸಮಾಜದ ಶಾಂತಿ ಕದಡುವ ಹೀಗೆ ಒಟ್ಟಾರೆ ಮಕ್ಕಳ ಭವಿಷ್ಯ, ಸಮಾಜದ ಒಳಿತಿಗೆ ಮಾರಕವಾಗುವ ಸುಳ್ಳು ಮಾಹಿತಿ, ಆತಂಕದ ಅಂಶಗಳನ್ನು ಸೃಷ್ಟಿಸುವ, ಹರಿಬಿಡುವ ಕಾರ್ಯ ತಡೆಯಬೇಕು. ಇದರ ಉಲ್ಲಂಘನೆ ಮಾಡಿದವರನ್ನು ಶಿಕ್ಷೆಗೆ ಒಳಪಡಿಸಬೇಕು. ಇದು ಸರ್ಕಾರದಿಂದ ಸಾಧ್ಯವಿದೆ. ಆಗ ಒಳ್ಳೆಯ ವಿಷಯಗಳು ಮಾತ್ರ ಅಥವಾ ಅಂತಹ ಅಂಶಗಳೇ ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಬರುತ್ತವೆ.