ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ರಾಜಧಾನಿಗೆ ಬಹುಪಾಲು : ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಭರಪೂರ ಯೋಜನೆ

KannadaprabhaNewsNetwork | Updated : Mar 08 2025, 05:54 AM IST

ಸಾರಾಂಶ

 ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಭರಪೂರ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯದಲ್ಲಿ ಘೋಷಿಸಿದ್ದಾರೆ.

 ಬೆಂಗಳೂರು : ‘ಬ್ರ್ಯಾಂಡ್‌ ಬೆಂಗಳೂರು’ ಘೋಷಣೆ ಸಾಕಾರ ಮಾಡುವ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ದಾಖಲೆಯ ₹7000 ಕೋಟಿ ಅನುದಾನ, ಸುಗಮ ಸಂಚಾರಕ್ಕೆ ಸುರಂಗ ರಸ್ತೆ ನಿರ್ಮಿಸಲು ₹19,000 ಕೋಟಿಗೆ ಸಾಲದ ಗ್ಯಾರಂಟಿ, ಡಬ್ಬಲ್‌ ಡೆಕ್ಕರ್‌ ಫ್ಲೈಓವರ್ ನಿರ್ಮಾಣಕ್ಕೆ ₹8916 ಕೋಟಿ ವೆಚ್ಚ, ಕುಡಿಯುವ ನೀರು, ಒಳಚರಂಡಿ ಯೋಜನೆ, ಕೆರೆಗಳ ಅಭಿವೃದ್ಧಿ, ವಾಯು ಮಾಲಿನ್ಯ ಕಡಿಮೆ ಮಾಡಲು ಒಂಬತ್ತು ಸಾವಿರ ವಿದ್ಯುತ್‌ ಬಸ್‌ ನೀಡಿಕೆ ಸೇರಿದಂತೆ ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಭರಪೂರ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯದಲ್ಲಿ ಘೋಷಿಸಿದ್ದಾರೆ.

ರಾಜಧಾನಿಯ ಜನರು ಬೆರಗಾಗುವ ಮಟ್ಟಿಗೆ ಹತ್ತಾರು ಹೊಸ ಕಾರ್ಯಕ್ರಮ, ಯೋಜನೆ ಪ್ರಕಟಿಸಿರುವುದು ಶೀಘ್ರದಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಯನ್ನು ಪುಷ್ಟೀಕರಿಸಿದೆ.

ಬಿಬಿಎಂಪಿ ಅನುದಾನ ₹3 ರಿಂದ 7 ಸಾವಿರ ಕೋಟಿ: ನಗರದ ಮೂಲಸೌಕರ್ಯ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ಬಿಬಿಎಂಪಿಗೆ ಪ್ರತಿ ವರ್ಷ ಸರ್ಕಾರ ಸುಮಾರು ₹3000 ಕೋಟಿ ಅನುದಾನ ನೀಡುತ್ತಿತ್ತು. ಈ ಬಾರಿ ಅನುದಾನ ಮೊತ್ತವನ್ನು ₹7 ಸಾವಿರ ಕೋಟಿಗೆ ಹೆಚ್ಚಿಸಿದೆ. ಈ ಅನುದಾನ ಬಳಸಿಕೊಂಡು ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ವಿಶೇಷ ಉದ್ದೇಶಿತ ವಾಹಕ (Special Purpose Vehicle) ಸ್ಥಾಪಿಸಲು ನಿರ್ಧರಿಸಿದೆ.

ಸುರಂಗ ರಸ್ತೆಗೆ ₹19 ಸಾವಿರ ಕೋಟಿ ಸಾಲದ ಗ್ಯಾರಂಟಿ:

ಬೆಂಗಳೂರಿನ ಉತ್ತರ-ದಕ್ಷಿಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ ವರೆಗೆ ಹಾಗೂ ಪೂರ್ವ-ಪಶ್ಚಿಮ ಸಂಪರ್ಕ ಕಲ್ಪಿಸುವ ಕೆ.ಆರ್‌.ಪುರದಿಂದ ಮೈಸೂರು ರಸ್ತೆ ವರೆಗೆ 40 ಸಾವಿರ ಕೋಟಿ ರು, ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬ್ಯಾಂಕ್‌ ಹಾಗೂ ಇತರೆ ಹಣಕಾಸು ಸಂಸ್ಥೆಗಳಿಂದ 19 ಸಾವಿರ ಕೋಟಿ ರು. ಸಾಲ ಪಡೆಯಲು ತೀರ್ಮಾನಿಸಿದೆ. ಸಾಲ ನೀಡುವ ಸಂಸ್ಥೆಗಳಿಗೆ ರಾಜ್ಯ ಸರ್ಕಾರವು ಗ್ಯಾರಂಟಿ ನೀಡಲಿದೆ.

ಈ ವರ್ಷ ಹೆಚ್ಚುವರಿ ₹750 ಕೋಟಿ ಸಂಗ್ರಹ

ಬಿಬಿಎಂಪಿ ಕೈಗೊಂಡಿರುವ ವಿವಿಧ ಸುಧಾರಣಾ ಕ್ರಮದಿಂದ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಈವರೆಗೆ 4556 ಕೋಟಿ ರು. ಸಂಗ್ರಹಿಸಿದೆ. ಮುಂಬರುವ ಆರ್ಥಿಕ ವರ್ಷದಲ್ಲಿ ಪಾಲಿಕೆಯ ಜಾಹೀರಾತು ಉಪ-ವಿಧಿಗಳು 2025 ರ ಅನುಷ್ಠಾನದಿಂದ ಹೆಚ್ಚುವರಿ 750 ಕೋಟಿ ರು. ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಜತೆಗೆ, ಪಾಲಿಕೆಯ ಸ್ವಂತ ಆಸ್ತಿಗಳ ಉತ್ತಮ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸಹಕಾರಿಯಾಗುವಂತೆ ಬಿಬಿಎಂಪಿ (ಆಸ್ತಿ) ನಿಯಮಗಳು 2024 ರೂಪಿಸಲಾಗಿದೆ.

ಡಬ್ಬಲ್‌ ಡೆಕ್ಕರ್‌ಗೆ 9 ಸಾವಿರ ಕೋಟಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ನಮ್ಮ ಮೆಟ್ರೋ ಹಂತ-3 ಯೋಜನೆಯಡಿ ನಿರ್ಮಿಸುವ ಫ್ಲೈಓವರ್‌ಗಳನ್ನು ಡಬ್ಬಲ್‌ ಡೆಕ್ಕರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಸುಮಾರು 40.50 ಕಿ.ಮೀ ಉದ್ದದ ಡಬ್ಬಲ್‌ ಡೆಕ್ಕರ್‌ ಫ್ಲೈಓವರ್ ನಿರ್ಮಾಣಕ್ಕೆ 8916 ಕೋಟಿ ರು. ವೆಚ್ಚ ಮಾಡುವುದಾಗಿ ಘೋಷಿಸಲಾಗಿದೆ.

ಸಿಗ್ನಲ್‌ ಫ್ರೀ ಕಾರಿಡಾರ್‌

ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಹಾಗೂ ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರದ ಮುಖ್ಯ ರಸ್ತೆಗಳನ್ನು ಸಿಗ್ನಲ್ ಮುಕ್ತಗೊಳಿಸುವ ನಿಟ್ಟಿನಲ್ಲಿ 3 ಸಾವಿರ ಕೋಟಿ ರು. ವೆಚ್ಚದಲ್ಲಿ ರಾಜಕಾಲುವೆಯ ಬಫರ್ ಪ್ರದೇಶದಲ್ಲಿ 300 ಕಿ.ಮೀ ಉದ್ದದ ರಸ್ತೆ ಜಾಲ ಅಭಿವೃದ್ಧಿ ಪಡಿಸುವುದು. 460 ಕಿ.ಮೀ. ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಜಾಲವನ್ನು ಅಭಿವೃದ್ಧಿಪಡಿಸಲು 660 ಕೋಟಿ ರು. ವೆಚ್ಚ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ.

ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ₹1800 ಕೋಟಿ

ಬ್ರ್ಯಾಂಡ್ ಬೆಂಗಳೂರುʼ ಯೋಜನೆಯಡಿ 2024-25ನೇ ಸಾಲಿನಲ್ಲಿ ಒಟ್ಟು 21 ಯೋಜನೆಗಳನ್ನು ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಗೆ 1,800 ಕೋಟಿ ರು. ಒದಗಿಸಲಾಗಿದೆ. ಹಸಿರು ಬೆಂಗಳೂರುʼ ಅಡಿಯಲ್ಲಿ 35 ಕೋಟಿ ರು. ವೆಚ್ಚದಲ್ಲಿ 14 ಕೆರೆಗಳ ಅಭಿವೃದ್ಧಿ ಮಾಡಲಾಗುತ್ತಿದೆ.

ಸಮಗ್ರ ಆರೋಗ್ಯ ಯೋಜನೆ

ಬೆಂಗಳೂರನ್ನು ಅಂತಾರಾಷ್ಟ್ರೀಯ ಆರೋಗ್ಯ ಮಾನದಂಡಗಳ ನಗರವನ್ನಾಗಿ ಮಾಡಲು ಬ್ರ್ಯಾಂಡ್ ಬೆಂಗಳೂರುʼ ಅಭಿಯಾನದ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 413 ಕೋಟಿ ರು. ವೆಚ್ಚದಲ್ಲಿ ʻಸಮಗ್ರ ಆರೋಗ್ಯ ಯೋಜನೆʼಜಾರಿಗೊಳಿಸಲಾಗುವುದು.

ಹವಾಮಾನ ವೈಪರೀತ್ಯಕ್ಕೆ 3 ಸಾವಿರ ಕೋಟಿ

ಹವಾಮಾನ ವೈಪರೀತ್ಯದ ಪರಿಣಾಮವಾಗಿ ಬೆಂಗಳೂರು ನಗರವು ಎದುರಿಸುತ್ತಿರುವ ಪ್ರವಾಹ ನಿಯಂತ್ರಿಸಲು ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸುವುದಕ್ಕೆ ರಾಜ್ಯ ಸರ್ಕಾರವು ಬಿಬಿಎಂಪಿ ಹಾಗೂ ಬೆಂಗಳೂರು ಜಲ ಮಂಡಳಿಗೆ 3 ಸಾವಿರ ಕೋಟಿ ರು. ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಲಾಗಿದೆ.

ಕಾವೇರಿ 5ನೇ ಹಂತದಿಂದ 50 ಲಕ್ಷ ಜನರಿಗೆ ನೀರು

5,550 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾದ ಕಾವೇರಿ 5ನೇ ಹಂತದ ಯೋಜನೆಯಿಂದ ಬೆಂಗಳೂರು ನಗರಕ್ಕೆ ಹೆಚ್ಚುವರಿ 775 ಎಂಎಲ್‌ಡಿ ಕಾವೇರಿ ನೀರು ಲಭ್ಯವಾಗುತ್ತಿತ್ತು. ಆ ನೀರನ್ನು ನಗರದ 110 ಹಳ್ಳಿ ವ್ಯಾಪ್ತಿಯ 50 ಲಕ್ಷ ನಿವಾಸಿಗಳಿಗೆ ಒದಗಿಸಲಾಗುತ್ತಿದೆ. ಇದರೊಂದಿಗೆ ಕಾವೇರಿ ಹಂತ-6 ಯೋಜನೆ ಆರಂಭಿಸುವುದಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸುವುದಾಗಿ ಭರವಸೆ ನೀಡಿದೆ.

ಪ್ರತ್ಯೇಕ ತಂಡದಿಂದ ಭೂಸ್ವಾಧೀನ

ನೆನೆಗುದಿಗೆ ಬಿದ್ದಿದ್ದ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣ ಯೋಜನೆಯನ್ನು ಬೆಂಗಳೂರು ಬಿಸಿನೆಸ್‌ ಕಾರಿಡಾರ್ ಎಂದು ಮರುನಾಮಕರಣಗೊಳಿಸಿ 73 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಲು ಹುಡ್ಕೋ ಬ್ಯಾಂಕ್ ನಿಂದ 27 ಸಾವಿರ ಕೋಟಿ ರು. ಆರ್ಥಿಕ ನೆರವು ಪಡೆಯಲು ಯೋಜನೆ ರೂಪಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಭೂ ಸ್ವಾಧೀನಕ್ಕೆ ಪ್ರತ್ಯೇಕ ತಂಡ ರಚಿಸಿಕೊಂಡು ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದೆ.

ಎರಡು ವರ್ಷದಲ್ಲಿ 180 ಕಿ.ಮೀ ಮೆಟ್ರೋ

ಸದ್ಯ ನಗರದಲ್ಲಿ 68 ನಿಲ್ದಾಣಗಳಿದ್ದು, 79.65 ಕಿ.ಮೀ. ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚಿವರಿ 98.60 ಕಿ.ಮೀ ಸೇರಿದಂತೆ 180 ಕಿ.ಮೀ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲಿದೆ. ಅದರೊಂದಿಗೆ ದೇವನಹಳ್ಳಿಯ ವರೆಗೆ ಮೆಟ್ರೋ ಜಾಲವನ್ನು ವಿಸ್ತರಣೆ ಮಾಡುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ.

ರೈಲ್ವೆ ಹಳಿ ಡಬ್ಲಿಂಗ್‌

ಬೈಯ್ಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ಮಾರ್ಗದ 70 ಕಿ.ಮೀ ಉದ್ದದ ರೈಲ್ವೆ ಹಳಿ ಡಬ್ಲಿಂಗ್‌ ಮಾಡಲು ₹812 ಕೋಟಿ ವೆಚ್ಚವಾಗಲಿದೆ. ಈ ಪೈಕಿ ರಾಜ್ಯ ಸರ್ಕಾರ ತನ್ನ ಶೇ,50 ರಷ್ಟು ಪಾಲು 406 ಕೋಟಿ ರು. ಒದಗಿಸಲಾಗುತ್ತಿದೆ. ಈ ವರ್ಷದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.

ಕಾಲಮಿತಿಯಲ್ಲಿ ಉಪನಗರ ರೈಲು

ಬೆಂಗಳೂರು ಉಪನಗರ ರೈಲು ಯೋಜನೆಗೆ ,15,767 ಕೋಟಿ ವೆಚ್ಚ ಮಾಡಲಾಗುತ್ತಿದೆ. 58 ನಿಲ್ದಾಣ ಹಾಗೂ148 ಕಿ.ಮೀ ಉದ್ದದ ಜಾಲ ಹೊಂದಿರಲಿದೆ. ನಾಲ್ಕೈ ಕಾರಿಡಾರ್‌ ಪೈಕಿ ಸದ್ಯ ಎರಡು ಕಾರಿಡಾರ್‌ನ ಕಾಮಗಾರಿ ಚಾಲನೆಯಲ್ಲಿದೆ. ಇನ್ನೂ ಎರಡು ಕಾರಿಡಾರ್‌ಗಳು ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವ ವಿಶ್ವಾಸವನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಮೇಲ್ಸೇತುವೆಗೆ ₹50 ಕೋಟಿ

ದೇವನಹಳ್ಳಿಯಲ್ಲಿ 407 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಈ ಪಾರ್ಕ್‌ಗೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಪಾಲಿನ 50 ಕೋಟಿ ರು. ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಪ್ರಾಜೆಕ್ಟ್ ಮೆಜೆಸ್ಟಿಕ್

ಬೆಂಗಳೂರಿನ ಹೃದಯ ಭಾಗದ ಮೆಜೆಸ್ಟಿಕ್ ಬಸ್ ನಿಲ್ದಾಣದ ಜಾಗವನ್ನು ʻಪ್ರಾಜೆಕ್ಟ್ ಮೆಜೆಸ್ಟಿಕ್ʼ ಯೋಜನೆಯಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪುನರ್ ಅಭಿವೃದ್ಧಿಪಡಿಸಿ, ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಿಸಲು ನಿರ್ಧರಿಸಲಾಗಿದೆ.

ಬಿಎಂಟಿಸಿಗೆ ಇನ್ನೂ 9 ಸಾವಿರ ಇವಿ ಬಸ್‌

ಸ್ವಚ್ಛ ಪರಿಸರದ ಹಿತದೃಷ್ಟಿಯಿಂದ ವಿದ್ಯುತ್ ಚಾಲಿತ ಬಸ್ಸುಗಳನ್ನು ಸೇರ್ಪಡೆ ಮಾಡಲು 2025-26ನೇ ಸಾಲಿನಲ್ಲಿ ಆದ್ಯತೆ ನೀಡಲಾಗುತ್ತಿದ್ದು, ಪಿಎಂ ಇ ಡ್ರೈವ್‌ ಹಾಗೂ ಪಿಎಂ-ಇಬಸ್‌ ಸೇವಾ ಮತ್ತು ಬಾಹ್ಯ ನೆರವಿನೊಂದಿಗೆ 14,750 ಹೊಸ ವಿದ್ಯುತ್ ಚಾಲಿತ ಬಸ್ಸುಗಳನ್ನು ಸೇರಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದರ ಭಾಗವಾಗಿ ಬಿಎಂಟಿಸಿಗೆ 9 ಸಾವಿರ ಬಸ್‌ ನೀಡಲು ತೀರ್ಮಾನಿಸಲಾಗಿದೆ.

ಬೆಂಗಳೂರು ವಿವಿ ಮನಮೋಹನ್‌ ಸಿಂಗ್‌ ಹೆಸರು

ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣಕ್ಕೆ ತೀರ್ಮಾನಿಸಿದ್ದು, ಈ ವಿಶ್ವವಿದ್ಯಾಲಯವನ್ನು ದೇಶದ ಮಾದರಿ ವಿಶ್ವ ವಿದ್ಯಾಲಯವಾಗಿ ಮಾಡುವುದಾಗಿ ಘೋಷಿಸಲಾಗಿದೆ.

ವೃತ್ತಿ ಪರೀಕ್ಷೆ ತರಬೇತಿಗೆ 2 ವಸತಿ ನಿಲಯ

ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಐಎಎಸ್‌, ಐಪಿಎಸ್‌, ಕೆಎಎಸ್‌, ಕೆಪಿಎಸ್‌ ಸೇರಿದಂತೆ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಡಲು ಬೆಂಗಳೂರು ನಗರದಲ್ಲಿ ಎರಡು ಸುಸಜ್ಜಿತ ವಸತಿ ನಿಲಯ ಪ್ರಾರಂಭಿಸಲಾಗುವುದೆಂದು ಪ್ರಕಟಿಸಲಾಗಿದೆ.

ನಿರಾಶ್ರಿತ ತಾಣದಲ್ಲಿ ಮಾನಸಿಕ ಆರೋಗ್ಯ ಕೇಂದ್ರಬೆಂಗಳೂರಿನಲ್ಲಿರುವ ವಸತಿ ರಹಿತರ ಕೇಂದ್ರದಲ್ಲಿರುವ ನಿರಾಶ್ರಿತರ ಮಾನಸಿಕ ಸ್ವಸ್ಥತೆಗಾಗಿ ನಿರಾಶ್ರಿತ ತಾಣದಲ್ಲಿ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಲಾಗುತ್ತಿದೆ.

ವಿಶ್ವಬ್ಯಾಂಕ್‌ ನೆರವಿನಡಿ ಪ್ರವಾಹ ನಿಯಂತ್ರಣ

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರವಾಹ ನಿಯಂತ್ರಣಕ್ಕೆ 2 ಸಾವಿರ ಕೋಟಿ ರು. ವೆಚ್ಚದಲ್ಲಿ ಪರಿಹಾರ ಯೋಜನೆ ಕೈಗೊಳ್ಳಲಾಗುವುದು. ₹1070 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ಒಳಚರಂಡಿ ಪಂಪಿಂಗ್‌ ವ್ಯವಸ್ಥೆ, ನಗರದಲ್ಲಿರುವ ಮಳೆ ನೀರು ಚರಂಡಿಗಳ ಪುನರ್‌ ನಿರ್ಮಾಣಕ್ಕೆ ಮತ್ತು ಕೆರೆಗಳ ಪುನಃಶ್ಚೇತನಕ್ಕೆ 239 ಕೋಟಿ ರು. ವೆಚ್ಚಯನ್ನು ವಿಶ್ವ ಬ್ಯಾಂಕ್‌ ನೆರವಿನಡಿ ಕೈಗೊಳ್ಳಲಾಗುವುದು.

ನಗರದಲ್ಲಿರುವ ₹3 ಸಾವಿರ ಕೊಳಚೆ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಕಾರ್ಯಾಚರಣೆಯ ಮೇಲುಸ್ತುವಾರಿಯನ್ನು ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುವುದು.ಎಸ್‌ಟಿಪಿ ತ್ಯಾಜ್ಯದಿಂದ ಬಯೋಗ್ಯಾಸ್‌ ಆಧಾರಿತ ಆದಾಯ ಮತ್ತು ಕಾರ್ಬನ್‌ ಕ್ರಿಡಿಟ್‌ ಉಪಯೋಗ ಪಡೆಯಲು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸುವುದಕ್ಕೆ ನಿರ್ಧರಿಸಲಾಗಿದೆ.

ನಗರ ಪೊಲೀಸ್‌ ವಿಭಾಗ 11ಕ್ಕೆ ಏರಿಕೆ

ಬೆಂಗಳೂರು ನಗರದ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆಗಾಗಿ ಈಗಿರುವ ಎಂಟು ಪೊಲೀಸ್ ವಿಭಾಗಗಳನ್ನು 11ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಸ್ಯಾಟಲೈಟ್‌ ಮಾರುಕಟ್ಟೆ ಸ್ಥಾಪನೆ

ಬೆಂಗಳೂರಿನ ಮಾರುಕಟ್ಟೆ ಪ್ರದೇಶದಲ್ಲಿ ವಾಹನ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ನಗರದ ಹೊರ ವಲಯದಲ್ಲಿ ಸ್ಯಾಟಲೈಟ್‌ ಮಾರುಕಟ್ಟೆ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ.

ತಜ್ಞರ ಅಭಿಪ್ರಾಯಟನಲ್‌ ರೋಡ್‌, ಫ್ಲೈಓವರ್‌, ಗ್ರೇಡ್‌ ಸಪರೇಟರ್‌ ಸೇರಿದಂತೆ ರಸ್ತೆಗಳ ಅಭಿವೃದ್ಧಿ ಸರ್ಕಾರ ಅನುದಾನ ನೀಡಲಾಗಿದೆ. ಆದರೆ, ಪಾದಚಾರಿ ಮಾರ್ಗ ಸುಧಾರಣೆ, ಹೊಸ ಬಸ್‌ ಖರೀದಿ, ನೆನೆಗುದಿಗೆ ಬಿದ್ದ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷ ಬೆಂಗಳೂರು ಸಾಕಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಿಸಿತ್ತು. ಆದರೂ ನಗರದ ಅಂತರ್ಜಲ ಮರು ಪೂರ್ಣಕ್ಕೆ ಯಾವುದೇ ಕ್ರಮ ವಹಿಸಿಲ್ಲ. ಒಟ್ಟಾರೆ, ಬೆಂಗಳೂರಿನ ಪಾಲಿಕೆ ನಿರಾಶಾದಾಯಕ ಬಜೆಟ್‌ ಅನ್ನು ಸರ್ಕಾರ ಮಂಡಿಸಿದೆ

- ರಾಜಕುಮಾರ್ ದುಗರ್‌, ಬೆಂಗಳೂರು ನಗರ ತಜ್ಞರು

ಭಾಷಣಕ್ಕೆ 7 ಸಾವಿರ ಕೋಟಿ ಸೀಮಿತವೇ?ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಪ್ರತಿಯಲ್ಲಿ ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿ 7 ಸಾವಿರ ಕೋಟಿ ರು. ಅನುದಾನ ನೀಡಲಾಗಿದೆ ಎಂದು ಪ್ರಕಟಿಸಲಾಗಿದೆ. ಆದರೆ, ಸರ್ಕಾರದ ಬಜೆಟ್‌ ವೆಚ್ಚದ ಸಂಪುಟದಲ್ಲಿ 4 ಸಾವಿರ ಕೋಟಿ ರು. ಮಾತ್ರ ಪ್ರಕಟಿಸಲಾಗಿದೆ. ಉಳಿದ ಅನುದಾನವನ್ನು ಯಾವ ಶೀರ್ಷಿಕೆಯಡಿ ನೀಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ಮೂಲಸೌಕರ್ಯ ಅಭಿವೃದ್ಧಿ ಅನುದಾನ ₹3 ರಿಂದ ₹7 ಸಾವಿರ ಕೋಟಿಗೆ ಹೆಚ್ಚಳ* ನಮ್ಮ ಮೆಟ್ರೋ 3 ಹಂತದ ಯೋಜನೆಯ ಡಬ್ಬಲ್‌ ಡೆಕ್ಕರ್‌ ಫ್ಲೈಓವರ್‌ಗೆ 9 ಸಾವಿರ ಕೋಟಿ* ಪ್ರವಾಹ ನಿಯಂತ್ರಣಕ್ಕೆ 3 ಸಾವಿರ ಕೋಟಿ ರು. ವೆಚ್ಚ* ಬ್ರ್ಯಾಂಡ್‌ ಬೆಂಗಳೂರಿನಡಿ 1800 ಕೋಟಿ ರು. ಯೋಜನೆ

* ಟನಲ್‌ ರೋಡ್‌ ನಿರ್ಮಾಣದ ಸಾಲಕ್ಕೆ ಸರ್ಕಾರದ ಗ್ಯಾರಂಟಿ

Share this article