ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗೆ ಶಂಕುಸ್ಥಾಪನೆ

KannadaprabhaNewsNetwork |  
Published : Dec 05, 2024, 01:30 AM ISTUpdated : Dec 05, 2024, 04:55 AM IST
CM 4 | Kannada Prabha

ಸಾರಾಂಶ

ಜಯದೇವ ಆಸ್ಪತ್ರೆಯಂತೆಯೆ ನಗರದ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿ ಜನತೆಗೆ ಸ್ಪಂದಿಸುವ ಮಾದರಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸಬೇಕು. ವೈದ್ಯರು ಸೌಜನ್ಯಯುತವಾಗಿ ವರ್ತಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಕೊಟ್ಟರು.

 ಬೆಂಗಳೂರು : ಜಯದೇವ ಆಸ್ಪತ್ರೆಯಂತೆಯೆ ನಗರದ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿ ಜನತೆಗೆ ಸ್ಪಂದಿಸುವ ಮಾದರಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸಬೇಕು. ವೈದ್ಯರು ಸೌಜನ್ಯಯುತವಾಗಿ ವರ್ತಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಕೊಟ್ಟರು.

ಬುಧವಾರ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಜಯದೇವ ಆಸ್ಪತ್ರೆಯಲ್ಲಿ ಸಾಧ್ಯವಾಗಿದ್ದು ಬೇರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾಕೆ ಸಾಧ್ಯವಾಗುವುದಿಲ್ಲ. ಆಸ್ಪತ್ರೆ ಮುಖ್ಯಸ್ಥರು ಜನಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಆಸ್ಪತ್ರೆ ಅಭಿವೃದ್ಧಿಪಡಿಸುವ, ರೋಗಿಗಳ ಜೊತೆಗೆ ಚೆನ್ನಾಗಿ ಮಾತನಾಡಿ, ಚಿಕಿತ್ಸೆ ನೀಡುವ ಕೆಲಸ ಮಾಡಬೇಕು. ಬೌರಿಂಗ್‌ ಆಸ್ಪತ್ರೆಯಲ್ಲಿ ಸ್ವಚ್ಛತೆ, ನಿರ್ವಹಣಾ ಕಾರ್ಯ, ತಜ್ಞ ವೈದ್ಯಕೀಯ ಸಿಬ್ಬಂದಿಯ ಬಳಕೆ ಸರಿಯಾದ ಬಳಕೆ ಆಗಬೇಕು ಎಂದು ಸೂಚಿಸಿದರು.

ಬೌರಿಂಗ್ ಆಸ್ಪತ್ರೆ ಸುದೀರ್ಘ ಇತಿಹಾಸ ಹೊಂದಿದ್ದು, ಪ್ರತಿನಿತ್ಯ ಸಾವಿರಾರು ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರಿಗೆ ಮತ್ತೊಂದು ವೈದ್ಯಕೀಯ ಕಾಲೇಜಿನ ಅಗತ್ಯವನ್ನು ಮನಗಂಡು ಇಲ್ಲಿ ಮತ್ತೊಂದು ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದ್ದೆವು. ಈಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೂ ಆದಲ್ಲಿ ಕೆಳಮಧ್ಯಮ, ಬಡ, ದಲಿತರಿಗೆ ಸಾಕಷ್ಟು ಪ್ರಯೋಜನ ಆಗಲಿದೆ ಎಂದರು.

ಅದೇ ರೀತಿ ಹಿಂದೆ ಹಣಕಾಸು ಮಂತ್ರಿಯಾಗಿದ್ದಾಗ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ತೀರ್ಮಾನ ಕೈಗೊಂಡಿದ್ದೆ. ಪ್ರಸ್ತುತ 22 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಸ್ಥಾಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನಿವಾರಣೆಗೆ ಹಾಗೂ ಎಲ್ಲ ಸಮುದಾಯದ ವಿದ್ಯಾರ್ಥಿಗಳ ವೈದ್ಯರಾಗುವ ಕನಸು ನೆರವೇರಲು ಇದು ನೆರವಾಗುತ್ತಿದೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ್‌, ಬೌರಿಂಗ್‌ನಲ್ಲಿ ಈ ವರ್ಷದಿಂದ ಪಿಜಿ ಕೋರ್ಸ್ ಆರಂಭಿಸಲು ಹಾಗೂ ವೈದ್ಯಕೀಯ ಕಾಲೇಜಿಗೆ ಪೂರಕವಾಗಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಆಗುತ್ತಿದೆ. ಒಂದೂವರೆ ವರ್ಷದಲ್ಲಿ ಇಲ್ಲಿ ಸುಸಜ್ಜಿತ ಆಸ್ಪತ್ರೆ ತಲೆ ಎತ್ತಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಿಜ್ವಾನ್ ಅರ್ಷದ್, ಪ್ರಸ್ತುತ ಬೌರಿಂಗ್ ಆಸ್ಪತ್ರೆಯಲ್ಲಿ ಸದ್ಯ 400 ಒಳರೋಗಿಗಳು, ಪ್ರತಿನಿತ್ಯ 2500-3000 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ವ್ಯವಸ್ಥೆ ವಾಣಿಜ್ಯಿಕರಣ ಆಗಿರುವ ಈ ಸಂದರ್ಭದಲ್ಲಿ ಬೌರಿಂಗ್ ಆಸ್ಪತ್ರೆ ನವೀಕರಣ ಆಗುವುದರಿಂದ ಸಾವಿರಾರು ಜನತೆಗೆ ಅನುಕೂಲ ಆಗಲಿದೆ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಶೀನ್, ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ರಮೇಶ್, ನಿರ್ದೇಶಕ ಮನೋಜ್ ಇದ್ದರು.

ಡಾಕ್ಟರ್‌ ಆಗಿದ್ದರೆ ಸಿಎಂ ಆಗ್ತಿರಲಿಲ್ಲ: ತಮ್ಮ ಕಾಲೇಜು ದಿನ ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ, ನನ್ನನ್ನು ಡಾಕ್ಟರ್‌ ಮಾಡಬೇಕೆಂದು ಅಪ್ಪನಿಗೆ ತುಂಬಾ ಆಸೆಯಿತ್ತು. ಆದರೆ ಪಿಯಸಿ, ಡಿಗ್ರಿಯಲ್ಲಿ ನಂಗೆ ಹೆಚ್ಚಿನ ಅಂಕ ಬರಲಿಲ್ಲ. ಹಿಂಗಾಗಿ ಡಾಕ್ಟರ್‌ ಆಗಲು ಸಾಧ್ಯವಾಗಿಲ್ಲ. ಹಾಗಾಗಿ ಕಾನೂನು ಓದಿ ವಕೀಲನಾದೆ. ಒಂದು ವೇಳೆ ಡಾಕ್ಟರ್‌ ಆಗಿದ್ದಿದ್ದರೆ ಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ ಎಂದು ನಕ್ಕರು. ಈ ವೇಳೆ ಜನ, ನೀವು ಡಾಕ್ಟರ್ ಓದದಿದ್ದರೂ ನಮಗೆ ಡಾಕ್ಟರ್‌ ಸಿದ್ದರಾಮಯ್ಯರೇ ಎಂದು ಕೂಗಿ ಶಿಳ್ಳೆ ಹಾಕಿದರು.

ಬೌರಿಂಗ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ₹297 ಕೋಟಿ : ನಿರ್ಮಾಣ ವೆಚ್ಚ

500: ಹಾಸಿಗೆ ಸಾಮರ್ಥ್ಯ

60: ಐಸಿಯು ಹಾಸಿಗೆ

10: ಒಟ್ಟು ಮಹಡಿ

2: ಮಹಡಿ ಒಪಿಡಿಗೆ ಮೀಸಲು

PREV

Recommended Stories

ರಾಜ್ಯಪಾಲರನ್ನೇ ಶಾಸಕರು ಅಡ್ಡಗಟ್ಟಿದ್ದು ಸರಿಯೇ?
ಕ್ಯಾನ್ಸರ್‌ ರೋಗದ ಬಗ್ಗೆ ಇರಲಿ ಜಾಗೃತಿ : ಅರ್ಬುದ ರೋಗದ ಚಿಹ್ನೆಗಳು - ಕಾರಣಗಳು ?