ಯುಜಿಸಿ ಕರಡು ನಿಯಮದಲ್ಲಿ ಗೊಂದಲ, ಅನಾವಶ್ಯಕ ಅಂಶ: ಕೆಂಪರಾಜು ಬೇಸರ

KannadaprabhaNewsNetwork | Published : Feb 26, 2025 1:30 AM

ಸಾರಾಂಶ

ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ದ ಹೊಸ ಕರಡು ನಿಯಮಾವಳಿಗಳು ಅನೇಕ ಗೊಂದಲಗಳಿಗೆ ಎಡೆ ಮಾಡಿಕೊಡುವ ಜೊತೆಗೆ ಅನಾವಶ್ಯಕ ಅಂಶಗಳಿಂದಲೂ ಕೂಡಿವೆ. ಹಾಗಾಗಿ ಈ ನಿಯಮಾವಳಿಗಳನ್ನು ಪುನರ್‌ ಪರಿಶೀಲಿಸಬೇಕು ಎಂದು ಬೆಂಗಳೂರು ಉತ್ತರ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ದ ಹೊಸ ಕರಡು ನಿಯಮಾವಳಿಗಳು ಅನೇಕ ಗೊಂದಲಗಳಿಗೆ ಎಡೆ ಮಾಡಿಕೊಡುವ ಜೊತೆಗೆ ಅನಾವಶ್ಯಕ ಅಂಶಗಳಿಂದಲೂ ಕೂಡಿವೆ. ಹಾಗಾಗಿ ಈ ನಿಯಮಾವಳಿಗಳನ್ನು ಪುನರ್‌ ಪರಿಶೀಲಿಸಬೇಕು ಎಂದು ಬೆಂಗಳೂರು ಉತ್ತರ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕವು ಮಂಗಳವಾರ ಆಯೋಜಿಸಿದ್ದ ‘ಯುಜಿಸಿಯ ಹೊಸ ಕರಡು ನಿಯಮಾವಳಿಗಳ ಸಾಧಕ-ಬಾಧಕಗಳು’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಭಾರತದಲ್ಲಿ 12ರಿಂದ 13 ಶಿಕ್ಷಣ ನೀತಿಗಳನ್ನು ಕಂಡಿದ್ದೇವೆ. ಸದ್ಯ ಯುಜಿಸಿ ತಂದಿರುವ ಹೊಸ ಕರಡು ನಿಯಮಾವಳಿಗಳು ಈವರೆಗೆ ಸಹಾಯಕ ಪ್ರಾಧ್ಯಾಪಕನಾಗಬೇಕಾದರೆ ನಿರ್ದಿಷ್ಟ ವಿಷಯ ಜ್ಞಾನ ಮತ್ತು ಆಳವಾದ ಅಧ್ಯಯನದ ಅಗತ್ಯವನ್ನೇ ಸಡಿಲಗೊಳಿಸಿದೆ.

ಅಲ್ಲದೆ, ಪಿಎಚ್‌.ಡಿ ಅಗತ್ಯವನ್ನೂ ತಗ್ಗಿಸಿದೆ. ಇದರಿಂದ ಪ್ರಾಧ್ಯಾಪಕರಲ್ಲಿ ಸಂಶೋಧನಾ ಪ್ರವೃತ್ತಿ, ಸುದೀರ್ಘ ಅಧ್ಯಯನದ ಆಸಕ್ತಿ ಕುಂಟುತ್ತದೆ. ಪ್ರಾಧ್ಯಾಪಕರೇ ಸಂಶೋಧನಾ ಆಸಕ್ತಿ ರೂಡಿಸಿಕೊಳ್ಳದಿದ್ದರೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಅನ್ವೇಷಣಾ, ಅಧ್ಯಯನ ಪ್ರವೃತ್ತಿ ವೃದ್ಧಿಸಲು ಹೇಗೆ ಸಾಧ್ಯ? ಎಂದರು.

ಕುಲಪತಿ ನೇಮಕದಲ್ಲೂ ಸಾಕಷ್ಟು ಸಡಿಲಿಕೆ ತರಲಾಗಿದೆ. ಶಿಕ್ಷಣ ವ್ಯವಸ್ಥೆಯ ಅರಿವಿಲ್ಲದವರು ಕುಲಪತಿಗಳಾಗಬಹುದು ಎಂಬ ಚಿಂತನೆ ಸಮಂಜಸವಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿದ ಮಾತ್ರಕ್ಕೆ ಪ್ರಾಧ್ಯಾಪಕರಿಗೆ ಎಚ್ಎ‌ಎಲ್, ಬಿಹೆಚ್ಇಎಲ್‌‌‌ ಸಂಸ್ಥೆಗಳಲ್ಲಿ ನಿರ್ದೇಶಕ ಹುದ್ದೆ ಪಡೆಯಲು ಸಾಧ್ಯವೇ? ಬೇರೆ ಕ್ಷೇತ್ರದಲ್ಲಿ ಇಲ್ಲದ ಸಡಿಲಿಕೆ, ಉದಾರತೆ ಉನ್ನತ ಶಿಕ್ಷಣದಲ್ಲಿ ಮಾತ್ರ ಏಕೆ ಎಂದು ಪ್ರಶ್ನಿಸಿದರು. ಅಲ್ಲದೆ, ಕುಲಪತಿ ನೇಮಕದಲ್ಲಿ ರಾಜ್ಯ ಸರ್ಕಾರದ ಅಧಿಕಾರ ಮೊಟಕುಗೊಳಿಸುವುದು ಸರಿಯಲ್ಲ, ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಈ ಎಲ್ಲ ಕಾರಣಗಳಿಂದ ಯುಜಿಸಿ ತನ್ನ ಹೊಸ ನಿಯಮಗಳನ್ನು ಪುನರ್‌ ಪರಿಶೀಲಿಸಬೇಕು. ಶಿಕ್ಷಣದ ಸಮಗ್ರ ಅಧ್ಯಯನ ಮತ್ತು ಪರಾಮರ್ಶೆಯಿಂದ ಮಾತ್ರ ಸದೃಡ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸೌಲಭ್ಯ ತಲುಪಿಸುವ ಶಿಕ್ಷಣ ನೀತಿ ಅನುಷ್ಠಾನವಾಗಬೇಕು. ಆ ನಿಟ್ಟಿನಲ್ಲಿ ಯುಜಿಸಿ ಶಿಕ್ಷಣ ವ್ಯವಸ್ಥೆ ಮಾರ್ಪಾಡುಗಳನ್ನು ಮಾಡಬೇಕು. ದೇಶದಲ್ಲಿ ಒಂದು ಸಾವಿರಕ್ಕಿಂತ ಅಧಿಕ ವಿಶ್ವವಿದ್ಯಾಲಯ,40 ಸಾವಿರಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಅಸ್ತಿತ್ವದಲ್ಲಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯ ವೃದ್ದಿಸುವುದು, ಆವಿಷ್ಕಾರ, ಸಂಶೋಧನೆ, ತಾಂತ್ರಿಕ ವಿಷಯಗಳ ಅಧ್ಯಯನ ಸೇರಿ ಗ್ರಾಮೀಣ ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಶಿಕ್ಷಣ ನೀತಿಯನ್ನು ಯುಜಿಸಿ ರೂಪಿಸಬೇಕು ಎಂದರು.

ವಿಚಾರಗೋಷ್ಠಿಯಲ್ಲಿ ಕೋಶಾಧಿಕಾರಿ ಜಿ.ಕೃಷ್ಣಮೂರ್ತಿ, ವಿಜ್ಞಾನ ವಿಭಾಗದ ಡೀನ್‌ ಪ್ರೊ.ಅಶೋಕ್ ಡಿ.ಹಂಜಗಿ, ಶಿಕ್ಷಣ ವಿಭಾಗದ ಡೀನ್‌ ಪ್ರೊ. ಪಿ.ಸಿ.ಕೃಷ್ಣಮೂರ್ತಿ, ಪ್ರೊ.ಮುರುಳಿಧರ್ ಉಪಸ್ಥಿತರಿದ್ದರು.

Share this article