ಸಾರಾಂಶ
ಬೀದರ್ ನಗರದಲ್ಲಿ ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿದ್ದರು ಧನರಾಜ್. ಕಿರಾಣಿ ಅಂಗಡಿಗೆ ಬೇಕಾದ ಸಾಮಾನುಗಳ ಪೈಕಿ ಗೋಧಿ ಹಿಟ್ಟು ಇತ್ತು. ಆದರೆ ಡಿಮ್ಯಾಂಡ್‌ಗೆ ತಕ್ಕ ಪೂರೈಕೆ ಇರಲಿಲ್ಲ, ಇದೇ ವ್ಯವಹಾರಕ್ಕೆ ಪ್ರೇರಣೆಯಾಯ್ತು
ಬೀದರ್ ನಗರದಲ್ಲಿ ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿದ್ದರು ಧನರಾಜ್. ಕಿರಾಣಿ ಅಂಗಡಿಗೆ ಬೇಕಾದ ಸಾಮಾನುಗಳ ಪೈಕಿ ಗೋಧಿ ಹಿಟ್ಟು ಇತ್ತು. ಆದರೆ, ಅದನ್ನು ಸರಬರಾಜು ಮಾಡುವವ ಕೇಳಿದಷ್ಟು ಹಿಟ್ಟು ಕೊಡುತ್ತಿರಲಿಲ್ಲ. ಐದು ಕೆಜಿ ಕೇಳಿದರೆ ಮೂರು ಕೆಜಿ ಕೊಡುತ್ತಿದ್ದ. ಇದಕ್ಕೆ ಇಷ್ಟು ಡಿಮ್ಯಾಂಡ್ ಇರೋದಾದರೆ ತಾನೇ ಅದನ್ನ ಮಾಡಬಾರದೇಕೆ ಎಂಬ ಪ್ರಶ್ನೆ ಹಾಕಿಕೊಂಡ ಧನರಾಜ್ ಬೆಂಬಲಕ್ಕೆ ಬಂದಿದ್ದು ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಹಾಗೂ ಪಿಎಂಎಫ್ಎಂಇ ಸಾಲ ಯೋಜನೆ.
ಈಗ ಧನರಾಜ್ ಆ ಕಿರಾಣಿ ಅಂಗಡಿ ಮುಚ್ಚಿದ್ದಾರೆ. ಶ್ರೀಯಾಂಶ್ ಆಗ್ರೋ ಪ್ರಾಡಕ್ಟ್ಸ್ ಕಂಪನಿ ಸ್ಥಾಪಿಸಿ ಅದರ ಮೂಲಕ ನಂದಿ ಬ್ರ್ಯಾಂಡಿನ ಗೋಧಿ ಹಿಟ್ಟು ಉತ್ಪಾದಿಸುತ್ತಿದ್ದಾರೆ. ಪ್ರತಿ ತಿಂಗಳು 150 ರಿಂದ 180 ಟನ್ ಗೋಧಿ ಹಿಟ್ಟು ತಯಾರಿಸಿ ಮಾರುತ್ತಿದ್ದಾರೆ. 1 ಕೆಜಿ ಮತ್ತು 5 ಕೆಜಿ ಪ್ಯಾಕುಗಳಲ್ಲಿ ಮಾರಾಟವಾಗುವ ನಂದಿ ಗೋಧಿ ಹಿಟ್ಟಿಗೆ ಬೀದರ್ ಪಕ್ಕದ ಆಂಧ್ರಪ್ರದೇಶದ ಜಿಲ್ಲೆಯಾದ ಜಹೀರಾಬಾದ್, ಮಹಾರಾಷ್ಟ್ರದ ಜಿಲ್ಲೆಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದೆ.
ಕಳೆದ ವರ್ಷ 2 ಕೋಟಿ ರೂಪಾಯಿವರೆಗೂ ವಹಿವಾಟು ನಡೆಸಿರುವ ನಂದಿ ಗೋಧಿ ಹಿಟ್ಟು ಈ ಬಾರಿ 2 ಕೋಟಿ ರೂಪಾಯಿ ದಾಟಲಿದೆ. ಎರಡು ವರ್ಷದ ಹಿಂದೆ ಮೊದಲಿಗೆ ಕಪೆಕ್ ಮೂಲಕ ಪಿಎಂಎಫ್ಎಂಇ ಯೋಜನೆಯ 10 ಲಕ್ಷ ರೂಪಾಯಿ ಸಾಲ ಪಡೆದು ಉದ್ಯಮ ಆರಂಭಿಸಿದರು. ಅದಾದ ನಂತರ ಅಗತ್ಯಕ್ಕೆ ತಕ್ಕಂತೆ ಈವರೆಗೆ 40 ಲಕ್ಷ ರೂ.ಗೂ ಹೆಚ್ಚು ಬಂಡವಾಳ ಹಾಕಿರುವ ಧನರಾಜ್, ಸಾಂಪ್ರದಾಯಿಕ ಶೈಲಿಯಲ್ಲೇ ಮಾರ್ಕೆಟಿಂಗ್ ನಡೆಸುತ್ತಿದ್ದಾರೆ. ಬೀದರ್, ಹುಮನಾಬಾದ್, ಕಲಬುರಗಿ, ಜಹಿರಾಬಾದ್ ಹಾಗೂ ಮಹಾರಾಷ್ಟ್ರದ ಉದ್ಗೀರ್ ನಲ್ಲಿ ಡಿಸ್ಟ್ರಿಬ್ಯೂಟರ್ಗಳನ್ನು ನೇಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.
ಮುಂದಿನ ಒಂದು ವರ್ಷದಲ್ಲಿ ಹೈದ್ರಾಬಾದ್ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಡಿಸ್ಟ್ರಿಬ್ಯೂಟರ್ ನೇಮಿಸುವ ಉದ್ದೇಶವಿದೆ. ಅದಕ್ಕೂ ಮೊದಲು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಯಾವುದೇ ಆನ್ಲೈನ್ ಮಾರ್ಕೆಟಿಂಗ್ ವ್ಯವಹಾರ ಇವರದು ಇಲ್ಲ. ಮೂಲತಃ ರೈತ ಕುಟುಂಬದ ಧನರಾಜ್ ಅವರ ಕುಟುಂಬ ಸದಸ್ಯರು ಈಗಲೂ ಕೃಷಿ ನಡೆಸುತ್ತಾರೆ.
ಜೋಳ ಮತ್ತಿತರ ಧಾನ್ಯ ಬೆಳೆದರೂ ಗೋಧಿ ಹಿಟ್ಟು ಮಾತ್ರ ತಯಾರಿಸುತ್ತಾರೆ. ಬೀದರ್ನಲ್ಲಿ ಗೋಧಿ ಬೆಳೆಯೋ ರೈತರಿಂದಲೂ ಗೋಧಿ ಖರೀದಿಸುವ ಧನರಾಜ್, ಹೆಚ್ಚಾಗಿ ಗೋಧಿಯನ್ನು ಮಧ್ಯಪ್ರದೇಶದಿಂದ ಖರೀದಿಸುತ್ತಾರೆ. ಬಹುಧಾನ್ಯ ಹಿಟ್ಟು, ಕಡ್ಲೆ ಹಿಟ್ಟು ತಯಾರಿಸುವ ಆಲೋಚನೆ ಇದೆ. ಆದರೆ, ಗೋಧಿ ಹಿಟ್ಟಿನಲ್ಲೇ ನಾವು ಬ್ರ್ಯಾಂಡ್ ಆಗಬೇಕು. ಜನಪ್ರಿಯ ಆಗಬೇಕು ಎನ್ನೋದು ನಮ್ಮ ಉದ್ದೇಶ. ಉತ್ತಮ ಗೋಧಿ ಹಿಟ್ಟಿಗೆ ನಂದಿ ಬ್ರ್ಯಾಂಡ್ ಹೆಸರಾಗಬೇಕು. ಅದಾಗೋವರೆಗೂ ಬೇರೆ ಯೋಚನೆ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ತಮ್ಮ ಉದ್ಯಮದ ಹಾದಿ ವಿವರಿಸಿದರು ಧನರಾಜ್.
ಸಗಟು ವ್ಯಾಪಾರದಲ್ಲೂ ನಾವು ಮುಂದಿದ್ದೇವೆ. 30 ಕೆಜಿ ಬ್ಯಾಗ್ನಲ್ಲೂ ಗೋಧಿ ಹಿಟ್ಟು ಸಿಗುತ್ತದೆ. ಏಳು ಜನರಿಗೆ ನೇರ ಉದ್ಯೋಗ ನೀಡಿದ್ದೇನೆ. ಐದು ಡಿಸ್ಟ್ರಿಬ್ಯೂಟರ್ಗಳಿಗೂ ಇದರಿಂದ ವ್ಯವಹಾರ ಸಿಕ್ಕಿದೆ. ಜಿಲ್ಲೆಯಲ್ಲೂ ಡಿಸ್ಟ್ರಿಬ್ಯೂಟರ್ ನೇಮಕವಾದರೆ ಹೆಚ್ಚೆಚ್ಚು ಉದ್ಯೋಗ ನೀಡಿದಂತೆಯೂ ಆಗುತ್ತದೆ. ಫೋರ್ಟಿಫೈಡ್ ಸರ್ಟಿಫಿಕೇಟ್ ಕೂಡ ಪಡೆದಿದ್ದೇವೆ. ಬೀದರ್ನ ಗಾಂಧಿ ಗಂಜ್ನಲ್ಲಿ ಒಂದು ಔಟ್ಲೆಟ್ ಆರಂಭಿಸುವ ಯೋಜನೆ ಇದೆ.
ಸ್ಥಳೀಯ ಮಾರ್ಕೆಟ್ನಲ್ಲಿ ಹೆಸರು ಮಾಡಿದ ಮೇಲೆ ಉಳಿದದ್ದು ತಾನಾಗಿಯೇ ಬರುತ್ತದೆ. ಕೇವಲ ಎರಡು ವರ್ಷದಲ್ಲಿ ಇಷ್ಟು ಆಗಿದೆ ಎಂದು ಖುಷಿ ಹಂಚಿಕೊಂಡರು ಧನರಾಜ್. ನಾವು ಕೇಳಿದಷ್ಟು ಸಪ್ಲೈ ಸಿಕ್ಕಿದ್ದರೆ ಈ ಯೋಚನೆಯೇ ನಮಗೆ ಬರುತ್ತಿರಲಿಲ್ಲ. ಇದನ್ನು ಶುರು ಮಾಡಿ ಕೈ ಹಿಡಿಯೋ ತನಕ ತಂದೆ ಕಿರಾಣಿ ಅಂಗಡಿ ನೋಡಿಕೊಂಡರು. ದಿನಕ್ಕೆ ಐದು ಸಾವಿರ ವ್ಯಾಪಾರ ಆದರೆ ದೊಡ್ಡದಿತ್ತು. ಈಗ ಅದನ್ನು ಮುಚ್ಚಿ ಸಂಪೂರ್ಣವಾಗಿ ಗೋಧಿ ಹಿಟ್ಟಿನ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮ ವ್ಯಾಪಾರ ವಿಸ್ತರಣೆಗೆ ದೊಡ್ಡ ಮೊತ್ತದ ಸಾಲದ ಅಗತ್ಯ ಈಗ ಕಾಣ್ತಿದೆ. ಅದೂ ಕೂಡ ಸಿಗಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದರು ಧನರಾಜ್.
15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ
ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.