ಆರೋಗ್ಯಕ್ಕಾಗಿ ಒಂದಾದ 6 ಗೆಳೆಯರಿಂದ ಶುರುವಾಯ್ತು ಎಣ್ಣೆ ಗಾಣದ ಉದ್ಯಮ ಸಿಲ್ಕ್​ ಸಿಟಿ

| N/A | Published : Jul 28 2025, 11:07 AM IST

Oil Mill
ಆರೋಗ್ಯಕ್ಕಾಗಿ ಒಂದಾದ 6 ಗೆಳೆಯರಿಂದ ಶುರುವಾಯ್ತು ಎಣ್ಣೆ ಗಾಣದ ಉದ್ಯಮ ಸಿಲ್ಕ್​ ಸಿಟಿ
Share this Article
  • FB
  • TW
  • Linkdin
  • Email

ಸಾರಾಂಶ

  ರಿಫೈನ್ಡ್​​ ಎಣ್ಣೆಯೇ ಆರೋಗ್ಯದ ಮೊದಲ ಶತ್ರು ಎಂದು ಅರಿತ ಆಯುರ್ವೇದ ವೈದ್ಯ ದಂಪತಿ ಗಾಣದ ಎಣ್ಣೆ ಬಳಸತೊಡಗಿದರು. ನಮ್ಮೂರಲ್ಲೇ ಶೇಂಗಾ ಇಷ್ಟೊಂದು ಬೆಳೆಯುವಾಗ ನಾವು ಬೆಂಗಳೂರಿಂದ ಎಣ್ಣೆ ತರ್ತೀವಲ್ಲ ಅಂತ ಶುರುವಾದ ಯೋಚನೆ ತಾವೇ ಮರದ ಎಣ್ಣೆ ಗಾಣ ಹಾಕುವ ನಿರ್ಧಾರವಾಗಿ ಬದಲಾಗಿದೆ.

ಆರೋಗ್ಯಕ್ಕಾಗಿ ಒಂದಾದ 6 ಗೆಳೆಯರಿಂದ ಶುರುವಾಯ್ತು ಸಿಲ್ಕ್​ ಸಿಟಿ ರಿಫೈನ್ಡ್​​ ಎಣ್ಣೆಯೇ ಆರೋಗ್ಯದ ಮೊದಲ ಶತ್ರು ಎಂದು ಅರಿತ ಆಯುರ್ವೇದ ವೈದ್ಯ ದಂಪತಿ ಗಾಣದ ಎಣ್ಣೆ ಬಳಸತೊಡಗಿದರು. ಇದನ್ನು ನೋಡಿದ ಅವರ ಇನ್ನ ನಾಲ್ಕು ಗೆಳೆಯರು ಬೆಂಗಳೂರಿಂದ ಮರದ ಗಾಣದ ಶೇಂಗಾ ಎಣ್ಣೆ ತರಿಸತೊಡಗಿದರು. ವಿಶೇಷ ಅಂದ್ರೆ ಅತೀ ಹೆಚ್ಚು ಶೇಂಗಾ ಬೆಳೆಯುವ ಮೊಳಕಾಲ್ಮೂರಿನವರು ಈ ಆರು ಜನರು. ನಮ್ಮೂರಲ್ಲೇ ಶೇಂಗಾ ಇಷ್ಟೊಂದು ಬೆಳೆಯುವಾಗ ನಾವು ಬೆಂಗಳೂರಿಂದ ಎಣ್ಣೆ ತರ್ತೀವಲ್ಲ ಅಂತ ಶುರುವಾದ ಯೋಚನೆ ತಾವೇ ಮರದ ಎಣ್ಣೆ ಗಾಣ ಹಾಕುವ ನಿರ್ಧಾರವಾಗಿ ಬದಲಾಗಿದೆ. 

ಆಯುರ್ವೇದ ವೈದ್ಯರಾದ ಡಾ.ಪಿ.ಎಂ. ಮಂಜುನಾಥ್, ಅವರ ವೈದ್ಯ ಪತ್ನಿ ಡಾ| ಜ್ಯೋತಿ ಹಾಗು ಗೆಳೆಯರಾದ ಕಿರಣ್ ಗಾಯಕ್ವಾಡ್​, ಹರೀಶ್​ ಕುಮಾರ್​, ಲಕ್ಷ್ಮಣ್​, ಹೇಮಂತ್​ಕುಮಾರ್ ಜೊತೆಯಾಗಿ ಸಿಲ್ಕ್ ಸಿಟಿ ಎಂಟರ್​​ಪ್ರೈಸಸ್​ ಎಂಬ ಕಂಪನಿ ಸ್ಥಾಪಿಸಿದ್ದಾರೆ. ಮೊಳಕಾಲ್ಮೂರು ರೇಷ್ಮೆಗೆ ಜನಪ್ರಿಯ. ಹೀಗಾಗಿ ತಮ್ಮೂರಿನ ಜನಪ್ರಿಯತೆಯ ಹೆಸರನ್ನೇ ಅಂದ್ರೆ ಸಿಲ್ಕ್ ಸಿಟಿ ಹೆಸರನ್ನ ತಮ್ಮ ಎಣ್ಣೆ ಉತ್ಪನ್ನದ ಬ್ರ್ಯಾಂಡ್ ನೇಮ್ ಮಾಡಿ ಉದ್ಯಮ ಶುರು ಮಾಡಿದ್ದಾರೆ. ಸಿಲ್ಕ್ ಸಿಟಿ ತೈಲ ಉತ್ಪನ್ನಗಳು ವಾರ್ಷಿಕ 2 ಕೋಟಿ ರೂ. ವಹಿವಾಟು ತಲುಪಿದೆ. ಆರು ಗೆಳೆಯರು ಕೆಲಸಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು ಉತ್ಪಾದನಾ ಘಟಕದ ಉಸ್ತುವಾರಿ ನೋಡಿಕೊಂಡರೆ, ಮತ್ತೊಬ್ಬರು ಎಣ್ಣೆ ಕಾಳು ಖರೀದಿ ನೋಡಿಕೊಳ್ತಾರೆ. ಅಕೌಂಟ್ಸ್ ನೋಡಿಕೊಳ್ಳೋದು ಹೀಗೆ ಎಲ್ಲರೂ ಕೆಲಸ ಹಂಚಿಕೊಂಡು ಮಾಡುತ್ತಿದ್ದಾರೆ. 

ಮರದ ಗಾಣದಲ್ಲಿ ಶೇಂಗಾ, ಕುಸುಬಿ, ಸೂರ್ಯಕಾಂತಿ, ಎಳ್ಳು, ಸಾಸಿವೆ, ದೀಪದ ಎಣ್ಣೆ, ಹರಳೆಣ್ಣೆ, ಕೊಬ್ಬರಿ ಎಣ್ಣೆ ತಯಾರಿಸುತ್ತಿದ್ದಾರೆ. ಅತಿ ಹೆಚ್ಚು ನಮಇವರಲ್ಲಿ ಶೇಂಗಾ ಎಣ್ಣೆಗೆ ಬೇಡಿಕೆ ಇದೆ. ಪ್ರಾರಂಭದಲ್ಲಿ ತಿಂಗಳಿಗೆ 250 ಲೀಟರ್ ಇಂದ ಶುರುವಾದ ವ್ಯಾಪಾರ ಈಗ ತಿಂಗಳಿಗೆ 5,500 ಲೀಟರ್​​ಗೆ ಹೆಚ್ಚಾಗಿದೆ. ಇದರಲ್ಲಿ 3,500ಕ್ಕೂ ಹೆಚ್ಚು ಲೀಟರ್ ಶೇಂಗಾ ಎಣ್ಣೆಯೇ ಆಗಿರುತ್ತದೆ. 

ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕಪೆಕ್​)ದ ಮೂಲಕ ಪಿಎಂಎಫ್​ಎಂಇ ಯೋಜನೆಯಿಂದ ಸಾಲ ಪಡೆದು 14.92 ಲಕ್ಷ ರೂಪಾಯಿ ಸಬ್ಸಿಡಿಯನ್ನೂ ಪಡೆದಿದೆ. ಕಪೆಕ್​​ ನೀಡಿದ ಮೇಳಗಳಲ್ಲಿನ ಮಳಿಗೆ ನೆರವು ಹಾಗು ಇತರ ಮಾರ್ಗದರ್ಶನವು ಮಾರ್ಕೆಟಿಂಗ್​ಗೆ ತುಂಬಾ ಅನುಕೂಲ ಮಾಡಿದೆ. ಅತ್ಯಗತ್ಯವಾದ ಎಫ್​ಎಸ್​ಎಸ್​ಎಐ ಹಾಗು ಝಡ್ ಸರ್ಟಿಫಿಕೇಶನ್​ ಮಾಡಿಸಲಾಗಿದೆ. ಆಕರ್ಷಕ ಪ್ಯಾಕಿಂಗ್ ಕೂಡ ಮಾಡಿದ್ದೇವೆ. ಯಾವುದೇ ದೊಡ್ಡ ಕಂಪನಿಯ ಉತ್ಪನ್ನಕ್ಕೆ ಕಡಿಮೆ ಇಲ್ಲದಂತೆ ನಮ್ಮ ಉತ್ಪನ್ನವಿದೆ ಎಂದು ಸಿಲ್ಕ್ ಸಿಟಿ ಎಂಟರ್​ಪ್ರೈಸಸ್​ನ ಡಾ.ಪಿ.ಎಂ ಮಂಜುನಾಥ್​ ಕನ್ನಡಪ್ರಭಕ್ಕೆ ವಿವರಿಸಿದರು. ಆಹಾರ ಕಲಬೆರಕೆಯ ಸರಪಳಿ ಕಟ್​ ಮಾಡುವುದೇ ನಮ್ಮ ಉದ್ದೇಶ. ನಾವು ಎಣ್ಣೆಕಾಳುಗಳನ್ನು ರೈತ ಉತ್ಪಾದಕ ಸಂಸ್ಥೆಗಳಿಂದ ಖರೀದಿಸುತ್ತೇವೆ. ಮೊದ ಮೊದಲಿಗೆ ನಾವು ಅದೇ ರೈತ ಉತ್ಪಾದಕ ಸಂಸ್ಥೆಗಳಲ್ಲಿ ಎಣ್ಣೆ ಮಾರಾಟ ಆರಂಭಿಸಿದೆವು. ರೈತರಿಂದ ರೈತರಿಗಾಗಿ ಎನ್ನುತ್ತಾ ಶುರು ಮಾಡಿದ ವ್ಯಾಪಾರ ಈಗ ಕರ್ನಾಟಕದ ಬಹುತೇಕ ಜಿಲ್ಲೆಗಳನ್ನು ತಲುಪಿದೆ.

 ಬೆಂಗಳೂರಿನ ತ್ಯಾಗರಾಜನಗರದಲ್ಲಿ ನಮ್ಮದೇ ಅಂಗಡಿಯನ್ನೂ ಸ್ಥಾಪಿಸಿದ್ದೇವೆ. ಬಳ್ಳಾರಿ, ರಾಯದುರ್ಗ ಸೇರಿದಂತೆ ಒಟ್ಟು ನಾಲ್ಕು ಅಂಗಡಿಗಳನ್ನು ಸ್ಥಾಪಿಸಿದ್ದೇವೆ. ಅಮೆಜಾನ್ ಮತ್ತು ಸ್ವಿಗ್ಗಿ ಮಿನಿಯಲ್ಲೂ ನಮ್ಮ ಎಣ್ಣೆ ಉತ್ಪನ್ನಗಳು ಸಿಗುತ್ತಿವೆ. ಅಲ್ಲದೇ ನಮ್ಮ ವೆಬ್​ಸೈಟ್ www.silkcitynaturals.com ಲಾಗಿನ್​ ಆಗಿ ನೇರ ಖರೀದಿಸಲೂಬಹುದು ಎಂದರು. 14 ಜನರಿಗೆ ನೇರ ಉದ್ಯೋಗ ನೀಡಿದ್ದೇವೆ. ವೈಟ್ ಲೇಬಲ್ಲಿಂಗ್ ಅಂದ್ರೆ ಕೆಲವು ಆರ್ಗ್ಯಾನಿಕ್ ಉತ್ಪನ್ನದ ಅಂಗಡಿಯವರಿಗೂ ಅವರ ಲೇಬಲ್​ ಹಾಕಿ ಮಾರಲು ಅನುಕೂಲ ಆಗುವಂತೆ ಎಣ್ಣೆ ಮಾಡಿಕೊಡುತ್ತಿದ್ದೇವೆ. ಬೆಂಗಳೂರಿನ ಅನೇಕ ಬ್ರ್ಯಾಂಡ್​ಗಳಿಗೆ ನಾವೇ ಸರಬರಾಜು ಮಾಡುತ್ತಿದ್ದೇವೆ. ಈ ರೀತಿಯ ವ್ಯವಹಾರ ಹೆಚ್ಚಾಗಲು ಕಪೆಕ್​ ಕೊಡಿಸಿರುವ ಸಂಪರ್ಕಗಳೇ ಕಾರಣ. ಕೆಲವು ರಫ್ತು ಕಂಪನಿಗಳು ನಮ್ಮ ಜೊತೆ ಮಾತುಕತೆ ಶುರು ಮಾಡಿದ್ದಾರೆ. ಎಲ್ಲವೂ ಸರಿಯಾದರೆ ನಮ್ಮ ಎಣ್ಣೆಯ ರಫ್ತು ಕೂಡ ಶುರುವಾಗುತ್ತದೆ. ಇದಕ್ಕೆ ಬೇಕಾದ ಸಿದ್ಧತೆಯೂ ಆರಂಭವಾಗಿದೆ ಎಂದರು ಡಾ.ಪಿ.ಎಂ. ಮಂಜುನಾಥ್​. ಹುಣಸೆ - ಮೆಣಸಿನಕಾಯಿ:

ಎಣ್ಣೆ ಉತ್ಪನ್ನದಿಂದ ನಮ್ಮ ಜಿಲ್ಲೆಯ ಪ್ರಮುಖ ಬೆಳೆಯಾದ ಶೇಂಗಾ ಬೆಳೆಯೋ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಿದ್ದೇವೆ. ಅದೇ ರೀತಿಯಾಗಿ ನಮ್ಮಲ್ಲಿ ಹುಣಸೆ ಮತ್ತು ಮೆಣಸಿನಕಾಯಿಯನ್ನೂ ಹೆಚ್ಚು ಬೆಳೆಯುತ್ತಾರೆ. ಆ ಎರಡು ಉತ್ಪನ್ನಗಳನ್ನು ಮಾಡಲು ತೀರ್ಮಾನಿಸಿದ್ದೇವೆ. ನಮ್ಮ ಸದಸ್ಯರೊಬ್ಬರು ಸಿಎಫ್​ಟಿಆರ್​ಐಗೆ ಹುಣಸೆಹಣ್ಣು ಕುರಿತು ತರಬೇತಿಗೆ ಹೋಗಿ ಬಂದಿದ್ದಾರೆ. ಹುಣಸೆಹಣ್ಣಿನ ಕೇಕ್ ತಯಾರಿಸುವುದು, ಹುಣಸೆ ರಸ ಸಂಸ್ಕರಿಸಿ ಬಾಟ್ಲಿಂಗ್ ಮಾಡುವುದು, ಪೇಸ್ಟ್ ರೀತಿ ಮಾಡುವುದರ ಕುರಿತು ಕಲಿತು ಬಂದಿದ್ದಾರೆ. ಅದರ ಸಂಸ್ಕರಣೆ ಇನ್ನೊಂದು ವರ್ಷದೊಳಗೆ ಶುರು ಮಾಡುವ ಆಲೋಚನೆ ಇದೆ ಎಂದರು ಡಾ|ಪಿ.ಎಂ. ಮಂಜುನಾಥ್​​

 ಸಿಲ್ಕ್ ಸಿಟಿ ನ್ಯಾಚುರಲ್ಸ್ ಉತ್ಪನ್ನಗಳಿಗೆ ಸಂಪರ್ಕಿಸಿ – 9902942965 ಅಥವಾ 9741169569 ಅಥವಾ www.silkcitynaturals.com ಗೆ ಲಾಗಿನ್ ಆಗಿ. 

15 ಲಕ್ಷ ರೂ. ಸಬ್ಸಿಡಿ ಪಡೆಯಿರಿ 

ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್​ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್​ಸೈಟ್​ನಲ್ಲೂ ಮಾಹಿತಿ ಪಡೆಯಬಹುದು.

Read more Articles on