ನೀರಿನ ಕೊರತೆಯಿಂದ ಆಹಾರ ಉದ್ಯಮಿಯಾದ ಎಂಟೆಕ್ ಪದವೀಧರ..!

| N/A | Published : Jul 27 2025, 10:19 AM IST

Dathu

ಸಾರಾಂಶ

ನೀರಿನ ಕೊರತೆಯಿಂದ ಆಹಾರ ಉದ್ಯಮಿಯಾದ ಎಂಟೆಕ್ ಪದವೀಧರ, ಕಡಿಮೆ ನೀರು ಬಳಕೆಯ ಉದ್ಯಮ ಮಾಡಲು ಯೋಚಿಸಿದಾಗ ಹೊಳೆದದ್ದೇ ಆಹಾರ ಉದ್ಯಮ. ಸ್ವಂತ ಕೆಲಸ ಮಾಡಬೇಕು ಎಂದುಕೊಂಡು ಅದನ್ನೇ ಮಾಡಿ ಯಶಸ್ವಿಯಾಗಿದ್ದಾರೆ

 ತಂದೆ ಮೈಸೂರಿನಲ್ಲಿ ಸೀಮೆಂಟ್ ಪೈಪ್ ಫ್ಯಾಕ್ಟರಿ ನಡೆಸುತ್ತಿದ್ದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಹಂಚಿಕೆಯಾಯ್ತು. ಅಲ್ಲಿಗೆ ಫ್ಯಾಕ್ಟರಿ ಶಿಫ್ಟ್ ಮಾಡೋಣ ಅಂದ್ರೆ ಅಲ್ಲಿಗೆ ನೀರಿನ ಸಂಪರ್ಕವೇ ಇರಲಿಲ್ಲ. ಸೀಮೆಂಟ್ ಫ್ಯಾಕ್ಟರಿಗೆ ನಿತ್ಯ ಕನಿಷ್ಠ 25 ಸಾವಿರ ಲೀಟರ್ ನೀರಿನ ಅಗತ್ಯವಿತ್ತು. ಕಡಿಮೆ ನೀರು ಬಳಕೆಯ ಉದ್ಯಮ ಮಾಡಲು ಯೋಚಿಸಿದಾಗ ಹೊಳೆದದ್ದೇ ಆಹಾರ ಉದ್ಯಮ. 

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿ ಚಾಮರಾಜನಗರವು ಅರಿಶಿಣ ಉತ್ಪನ್ನಕ್ಕೆ ಆಯ್ಕೆಯಾಗಿತ್ತು. ಅದರಂತೆ ಅರಿಶಿಣ ಸಂಸ್ಕರಣೆಗೆ ತೊಡಗಿಸಿಕೊಂಡರು ಮೈಸೂರಿನ ಬಿ.ಎಸ್ ಭಾನುಪ್ರಸಾದ್. ಭಾನುಪ್ರಸಾದ್ ಪರಿಸರ ಇಂಜಿನಿಯರಿಂಗ್ನಲ್ಲಿ ಬಿ.ಇ, ಎಂಟೆಕ್ ಪದವಿ ಪಡೆದರೂ ಎಂದೂ ಕೆಲಸಕ್ಕೆ ಹೋಗಲಿಲ್ಲ. ಸ್ವಂತದ್ದೇ ಮಾಡಬೇಕು ಎಂದುಕೊಂಡು ಅದನ್ನೇ ಮಾಡಿ ಯಶಸ್ವಿಯಾಗಿದ್ದಾರೆ. ಜೊತೆಗೆ ಕಟ್ಟಡ ನಿರ್ಮಾಣದ ಖಾಸಗಿ ಕಂಟ್ರಾಕ್ಟರ್ ಕೆಲಸವನ್ನೂ ಮಾಡುವ ಭಾನುಪ್ರಸಾದ್ ಅವರ ಆಹಾರ ಉದ್ಯಮಿ ಜರ್ನಿ ಕುತೂಹಲಕಾರಿಯಾಗಿದೆ. ಧಾತು ಎಂಟರ್ಪ್ರೈಸಸ್ ಎಂಬ ಕಂಪನಿ ಹುಟ್ಟು ಹಾಕಿ ಧಾತು ಅಂಡ್ ನೇಚರ್ಸ್ ಬ್ರ್ಯಾಂಡ್ ಆಗಿ ಬೆಳೆಸಿದ್ದಾರೆ. www.dhaatuindia.com ಗೆ ಲಾಗಿನ್ ಆದರೆ ಆರೋಗ್ಯ ಪೂರ್ಣ 33 ಬಗೆಯ ಆಹಾರ, ಮಸಾಲೆ ಉತ್ಪನ್ನಗಳನ್ನು ನೀವು ಖರೀದಿಸಬಹುದು. 

2021ರಲ್ಲಿ ಗುಂಡ್ಲುಪೇಟೆ ಕೈಗಾರಿಕಾ ಪ್ರದೇಶದಲ್ಲಿ ತಂದೆಯ ಹೆಸರಿಗೆ ಹಂಚಿಕೆಯಾಗಿದ್ದ ನಿವೇಶನದಲ್ಲಿ ಧಾತು ಎಂಟರ್ಪ್ರೈಸಸ್ ಆರಂಭಿಸಿದರು. ಅರಿಶಿಣ ಸಂಸ್ಕರಣೆ ಕುರಿತು ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕಪೆಕ್) ದ ಮೂಲಕ ಮೈಸೂರಿನ ಸಿಎಫ್ಟಿಆರ್ಐನಲ್ಲಿ ತರಬೇತಿ ಪಡೆದರು. ಅರಿಶಿಣದ ಮೂಲಕ ಏನೇನು ಮಾಡಬಹುದು ಎಂದು ತಿಳಿಯುವ ಜೊತೆಗೆ ಆಹಾರದ ಇತರ ಉತ್ಪನ್ನಗಳು, ರೈತ ಉತ್ಪಾದಕ ಸಂಸ್ಥೆಗಳ ಪರಿಚಯವೂ ತರಬೇತಿಯಲ್ಲಿ ಆಯಿತು. 2022ರಲ್ಲಿ ಅಧಿಕೃತವಾಗಿ ಅರಿಶಿಣ ಸಂಸ್ಕರಣೆ ಆರಂಭಿಸಿದರು. ಅರಿಶಿಣದ ಜೊತೆಗೆ ಐದು ಬಗೆಯ ಮಸಾಲೆ ಸೇರಿಸಿ ನೀರು ಅಥವಾ ಹಾಲಿನಲ್ಲಿ ಕುದಿಸಿ ಕುಡಿಯುವ ಅರಿಶಿಣ- ಶುಂಠಿ ಲಾಟೆ ಪೌಡರ್ ತಯಾರಿಸಿದರು. ಅರಿಶಿಣ, ಶುಂಠಿ, ಏಲಕ್ಕಿ, ಕರಿಮೆಣಸು, ಚಕ್ಕೆಯನ್ನ ಸರಿಯಾದ ಪ್ರಮಾಣದಲ್ಲಿ ಸೇರಿಸಿದ ಮಿಶ್ರಣ ಇದಾಗಿದೆ. ಬೇರೆ ಬೇರೆ ಕಡೆ ಅಧ್ಯಯನ ಮಾಡಿ ಸ್ವತಃ ಇದನ್ನು ರೂಪಿಸಿದ ಭಾನುಪ್ರಸಾದ್, ಇದರ ಆರೋಗ್ಯ ಅನುಕೂಲಗಳ ಕುರಿತು ಖಚಿತಪಡಿಸಿಕೊಂಡು ಮಾರುಕಟ್ಟೆಗೆ ಬಿಟ್ಟರು. ಅದೀಗ ಜನರಿಂದ ಬಹುಬೇಡಿಕೆ ಸೃಷ್ಟಿಸಿಕೊಂಡಿದೆ. 

ಶುಂಠಿ ಬೆಳ್ಳುಳ್ಳಿ ಪೌಡರ್: ಕಪೆಕ್ನವರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಮುಂದುವರೆದ ಭಾನುಪ್ರಸಾದ್ ರಾಜ್ಯ ಮತ್ತು ಹೊರ ರಾಜ್ಯಗಳ ರೈತ ಉತ್ಪಾದಕ ಸಂಸ್ಥೆಗಳನ್ನು ಭೇಟಿ ಮಾಡಿದರು. ವಿವಿಧ ರೈತ ಉತ್ಪಾದಕ ಸಂಸ್ಥೆಗಳು ಮಾಡುತ್ತಿರುವ ಬೆಳೆಯುತ್ತಿರುವ ಮಸಾಲೆ ಉತ್ಪನ್ನ ಹಾಗೂ ಜೇನು ಉತ್ಪನ್ನಗಳನ್ನು ಧಾತು ಬ್ರ್ಯಾಂಡಿನಡಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಏಲಕ್ಕಿ, ಶುಂಠಿ, ಲವಂಗ, ಚಕ್ಕೆ, ಮೆಣಸು ಇತ್ಯಾದಿ ಮಸಾಲೆ ಪದಾರ್ಥಗಳು ಹಿಡಿಯಾಗಿ ಹಾಗೂ ಪೌಡರ್ ರೂಪದಲ್ಲೂ ಇವರಲ್ಲಿ ಖರೀದಿಸಬಹುದು. ಜನ ಇತ್ತೀಚೆಗೆ ಸಿದ್ಧಪಡಿಸಿದ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಹೆಚ್ಚು ಬಳಸುತ್ತಾರೆ. ಆದರೆ, ಈ ಪೇಸ್ಟ್ ಬಹಳದಿನ ಇಡಲಾಗದು. ಅದಕ್ಕೆಂದೇ ಇವರು ಶುಂಠಿ ಬೆಳ್ಳುಳ್ಳಿ ಪೌಡರ್ ರೂಪಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಬಹುಕಾಲ ಇಡಬಹುದಾದ ಇದಕ್ಕೆ ಬೇಡಿಕೆ ಹೆಚ್ಚಾಗಿದೆ.

 ಉತ್ತರ ಪ್ರದೇಶದ ರೈತ ಉತ್ಪಾದಕ ಸಂಸ್ಥೆಯಿಂದ ಜೇನು ತರಿಸಲಾಗುತ್ತಿದೆ. ತುಂಬಾ ಗುಣಮಟ್ಟದ ಜೇನು ಇದಾಗಿದೆ. ಕೇರಳದ ಕೆಲವೆಡೆಯಿಂದಲೂ ಕೃಷಿ ಉತ್ಪನ್ನ ತರಿಸಿ, ಸಂಸ್ಕರಿಸಿ ಪ್ಯಾಕೇಟ್ ಮಾಡುತ್ತಿದ್ದೇವೆ. ಅರಿಶಿಣ ಮತ್ತು ನುಗ್ಗೆಸೊಪ್ಪಿನ ಲಾಟೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಅದು ಸಕ್ಸಸ್ ಆಗುತ್ತಿದ್ದಂತೆ ಮಾರುಕಟ್ಟೆಗೆ ಪರಿಚಯಿಸಲಿದ್ದೇವೆ. ಅದೇ ರೀತಿ ಅಶ್ವಗಂಧದಿಂದಲೂ ಲಾಟೆ ಮಾಡುವ ಯೋಚನೆ ಇದೆ. ಭಾರತದ ಎಲ್ಲ ಕಡೆಯಿಂದ ಕೃಷಿ ಉತ್ಪನ್ನ ತರಿಸುವುದರಿಂದಾಗಿ ನಮ್ಮ ವೆಬ್ಸೈಟ್ಗೆ ಧಾತು ಇಂಡಿಯಾ ಹೆಸರಿಟ್ಟಿದ್ದೇವೆ. 

ಕಳೆದ ವರ್ಷ 1 ಕೋಟಿ ರೂ.ವರೆಗೂ ವಹಿವಾಟು ನಡೆಸಿದ್ದೇವೆ. ಹರ್ಬಲ್ ಟೀ ಮಾಡುವ ಯೋಚನೆ ಇದೆ. 15 ಜನರಿಗೆ ಉದ್ಯೋಗ ನೀಡಿದ್ದೇವೆ. ಮೈಸೂರಿನ ಎರಡು ಆರ್ಗ್ಯಾನಿಕ್ ಅಂಗಡಿಗಳು ಮತ್ತು ಆಯುರ್ವೇದಿಕ್ ಅಂಗಡಿಗಳಲ್ಲಿ ನಮ್ಮ ಉತ್ಪನ್ನ ಮಾರಲಾಗುತ್ತಿದೆ. ಅಮೆಜಾನ್ನಲ್ಲೂ ನಮ್ಮ ಉತ್ಪನ್ನ ದೊರೆಯುತ್ತಿದೆ. ಬೆಂಗಳೂರು ಮಾರ್ಕೆಟ್ ಪ್ರವೇಶಿಸುವ ಯೋಜನೆ

ಇದೆ. ನಮ್ಮ ಉತ್ಪನ್ನಗಳಿಗೆ ವಿದೇಶದಲ್ಲೂ ಬೇಡಿಕೆ ಸೃಷ್ಟಿಯಾಗೋ ಮುನ್ಸೂಚನೆ ಸಿಕ್ಕಿದೆ. ಅದಕ್ಕೆಂದೇ ರಫ್ತು ಲೈಸೆನ್ಸ್ ರೆಡಿ ಮಾಡಿರುವೆ ಎಂದು ತಮ್ಮ ಆಹಾರ ಉದ್ಯಮದ ಜರ್ನಿಯ ವಿವರ ಹಂಚಿಕೊಂಡರು ಭಾನುಪ್ರಸಾದ್ ಬಿ.ಎಸ್. ನೀರಿನ ಕೊರತೆ ಇಲ್ಲದಿದ್ದರೆ ಸೀಮೆಂಟ್ ಪೈಪ್ ಫ್ಯಾಕ್ಟರಿಯೇ ಮಾಡುತ್ತಿದ್ದೆವು. ಈಗ ನೀರಿನ ಪೈಪ್ ಹಾಕಿ ಹೋಗಿದ್ದಾರೆ. ಸ್ವಲ್ಪದಿನದಲ್ಲಿ ನೀರ ಬರಬಹುದು. ಸೀಮೆಂಟ್ ಪೈಪ್ ಫ್ಯಾಕ್ಟರಿ ಮಾಡಿದ್ದರೆ ದಿನಕ್ಕೆ ನಾಲ್ಕು ಟ್ಯಾಂಕರ್ ನೀರು ಬೇಕಾಗುತಿತ್ತು. ಸದ್ಯ ತಿಂಗಳಲ್ಲಿ ಎರಡು ಅಥವಾ ಮೂರು ಬಾರಿ ಟ್ಯಾಂಕರ್ನಲ್ಲಿ ನೀರು ತರಿಸುತ್ತಿದ್ದೇವೆ. ನೀರಿನ ಕೊರತೆಯಿಂದಾಗಿ ಶುರು ಮಾಡಿದ ಉದ್ಯಮ ಈಗ ಕೈ ಹಿಡಿದಿದೆ. ದೊಡ್ಡದಾಗಿ ಬೆಳೆಯುವ ಆಸೆ, ಆಸಕ್ತಿಯೂ ಮೂಡಿದೆ. ಪಿಎಂಎಫ್ಎಂಇ ಯೋಜನೆ ಹಾಗು ಕಪೆಕ್ ಅಧಿಕಾರಿಗಳ ಮಾರ್ಗದರ್ಶನದಿಂದ ಎಲ್ಲಾ ಸಾಧ್ಯವಾಯ್ತು ಎಂದು ಸಂತಸ ವ್ಯಕ್ತಪಡಿಸಿದರು ಭಾನುಪ್ರಸಾದ್.

 ಧಾತು ಇಂಡಿಯಾ ಉತ್ಪನ್ನಗಳಿಗೆ ಸಂಪರ್ಕಿಸಿ – 9008239293 ಅಥವಾ www.dhaatuindia.com ಲಾಗಿನ್ ಆಗಿ.

 15 ಲಕ್ಷ ರೂ. ಸಬ್ಸಿಡಿ ಪಡೆಯಿರಿ :  ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.

Read more Articles on