ನುಗ್ಗೆಸೊಪ್ಪಿನಿಂದ ಆಹಾರ ಉದ್ಯಮ ಆರಂಭ : ಮಾಸ್ಟರ್ ಕಿಶನ್ ತಾಯಿ ಯಶೋಗಾಥೆ

| N/A | Published : Jul 26 2025, 10:00 AM IST

shailaja story

ಸಾರಾಂಶ

ಕೊರೋನಾ ಕಾಲದಲ್ಲಿ ರೋಗ ನಿರೋಧಕತೆ ಹೆಚ್ಚಿಸಲು ಶುರುವಾದ ಅಧ್ಯಯನ ಮತ್ತು ಸಂಶೋಧನೆಯ ಫಲವಾಗಿ ನ್ಯೂಟ್ರಿ ಮೊರಿಂಗಾ ಎಂಬ ಬ್ರ್ಯಾಂಡ್ ಹುಟ್ಟಿಕೊಂಡಿದೆ.

ಕೊರೋನಾ ಕಾಲದಲ್ಲಿ ಎಲ್ಲವೂ ಕೆಟ್ಟದ್ದೇ ಆಯಿತು ಎನ್ನೋ ಭಾವನೆ ಇತ್ತು. ಆದರೆ, ಕೊರೋನಾ ಕಾಲದಲ್ಲಿ ಕೆಲವರಿಗಾದರೂ ಒಂದಷ್ಟು ಒಳ್ಳೆಯದು ಆಗಿದೆ. ಕೊರೋನಾ ಕಾಲದಲ್ಲಿ ರೋಗ ನಿರೋಧಕತೆ ಹೆಚ್ಚಿಸಲು ಶುರುವಾದ ಅಧ್ಯಯನ ಮತ್ತು ಸಂಶೋಧನೆಯ ಫಲವಾಗಿ ನ್ಯೂಟ್ರಿ ಮೊರಿಂಗಾ ಎಂಬ ಬ್ರ್ಯಾಂಡ್ ಹುಟ್ಟಿಕೊಂಡಿದೆ. 

ನುಗ್ಗೆ ಸೊಪ್ಪಿನ ಆಹಾರ ವೈವಿಧ್ಯಗಳು ಈ ಬ್ರ್ಯಾಂಡ್‌ನಡಿ ಮಾರಾಟ ಆಗುತ್ತಿವೆ.  ಶ್ರೀಶೈಲ ಆರ್ಗ್ಯಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸ್ಥಾಪಿಸಿ ಇದಕ್ಕೆ ಉದ್ಯಮ ರೂಪ ನೀಡಿದ್ದಾರೆ ಕೇರಾಫ್ ಫುಟ್ಪಾತ್ ಸಿನಿಮಾ ಖ್ಯಾತಿಯ ಮಾಸ್ಟರ್ ಕಿಶನ್ ಅವರ ತಾಯಿ ಶೈಲಜಾ.

ನುಗ್ಗೆ ಸೊಪ್ಪಿನ ಪುಡಿ, ನುಗ್ಗೆ ಸೊಪ್ಪಿನ ಸೂಪ್ ವೈವಿಧ್ಯಗಳು, ನುಗ್ಗೆ ಸೊಪ್ಪು -ಸಿರಿಧಾನ್ಯ ಸೇರಿದ ಉಪಹಾರ, ನುಗ್ಗೆ ಸೊಪ್ಪಿನ ಚಟ್ನಿಪುಡಿ, ನುಗ್ಗೆಸೊಪ್ಪಿನ ಸಾಂಬರ್ ಪುಡಿ, ನುಗ್ಗೆಸೊಪ್ಪು-ಸಿರಿಧಾನ್ಯದ ಕುಕ್ಕೀಸ್, ನುಗ್ಗೆ ಸೊಪ್ಪಿನ ಮಜ್ಜಿಗೆ, ನುಗ್ಗೆಸೊಪ್ಪಿನ ರೊಟ್ಟಿ ಮಿಕ್ಸ್‌ಗಳನ್ನು ನೀವು www.nutrimoringa.com ವೆಬ್‌ಸೈಟ್‌ಗೆ ಭೇಟಿ ನೀಡಿ ಖರೀದಿಸಬಹುದು. ದಾಸವಾಳ ಸೇರಿದಂತೆ 11 ಬಗೆಯ ಟೀ ಕೂಡ ನಿಮಗೆ ನ್ಯೂಟ್ರಿಮೊರಿಂಗಾ ಬ್ರ್ಯಾಂಡ್‌ನಲ್ಲಿ ದೊರೆಯುತ್ತವೆ. ಬೆಂಗಳೂರಿನ ಚಂದ್ರಲೇಔಟ್‌ನಲ್ಲೇ ಇದೆಲ್ಲದರ ತಯಾರಿಕಾ ಘಟಕ ಸ್ಥಾಪಿಸಿ, ಮಧುಗಿರಿಯಿಂದ ಬೇಕಾಗುವ ನುಗ್ಗೆಸೊಪ್ಪು ತರುತ್ತಿದ್ದಾರೆ. ವಿಶೇಷ ಅಂದ್ರೆ ನುಗ್ಗೆ ಸೊಪ್ಪಿನಲ್ಲಿ ಇರುವ ಕಹಿ ಅಂಶ ತೆಗೆದು ತಯಾರಿಸಲಾದ ಆಹಾರಗಳಿವು.

2023ರಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಹಾಗು ರಫ್ತು ನಿಗಮ (ಕಪೆಕ್) ಮೂಲಕ ಪಿಎಂಎಫ್ಎಂಇ ಯೋಜನೆಯ ಸಾಲಕ್ಕೆ ಅರ್ಜಿ ಹಾಕಿದರು. 2024ರ ನವೆಂಬರ್‌ನಿಂದ ಅಧಿಕೃತವಾಗಿ ನ್ಯೂಟ್ರಿ ಮೊರಿಂಗಾ ಆರಂಭವಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯತೊಡಗಿದೆ. ಕಪೆಕ್‌ನಿಂದ ಸಬ್ಸಿಡಿ ದೊರೆಯುವ ಭರವಸೆಯೂ ಸಿಕ್ಕಿದೆ. ‘ಪೌಷ್ಠಿಕ ಆಹಾರ, ಆರೋಗ್ಯ ಆಹಾರ ನಮ್ಮ ಮನೆಯ ಎಂದಿನ ಅಭ್ಯಾಸವಾಗಿತ್ತು. ಕೊರೋನಾ ಸಂದರ್ಭದಲ್ಲಿ ಮನೆಯವರ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಾಡಿದ ಅಧ್ಯಯನವು ನುಗ್ಗೆ ಸೊಪ್ಪಿನ ಶಕ್ತಿಯನ್ನು ತಿಳಿಸಿಕೊಟ್ಟಿತು. ನುಗ್ಗೆಸೊಪ್ಪಿನಲ್ಲಿ ಅತೀ ಹೆಚ್ಚು ಕಬ್ಬಿಣಾಂಶ ಹಾಗೂ ಪ್ರೊಟೀನ್ ಇದೆ.  

ಆರೋಗ್ಯಕ್ಕೆ ತುಂಬಾ ಅನುಕೂಲಕರ. ಇದರಿಂದ ಏನೇನು ಮಾಡಬಹುದು ಎಂದು ತಿಳಿಯುತ್ತಾ ಹೋದೆ. ನಾವು ಇದನ್ನು ಸರಿಯಾಗಿ ಬಳಸುತ್ತಲೇ ಇಲ್ಲವಲ್ಲ ಎನಿಸಿತು. ಮಧುಗಿರಿಯಲ್ಲಿರುವ ನಮ್ಮ ತೋಟದಲ್ಲೇ ನುಗ್ಗೆ ಸೊಪ್ಪು ಬೆಳೆಸಿದೆವು. ಸುಮಾರು ಎರಡು ವರ್ಷದ ಅಧ್ಯಯನ ಮತ್ತು ಪ್ರಯೋಗದಿಂದ ನುಗ್ಗೆ ಸೊಪ್ಪು, ಸಿರಿಧಾನ್ಯದ ಮಹತ್ವ ಮತ್ತು ಮಾಡುವ ವಿಧಾನ ತಿಳಿದುಕೊಂಡೆ’ ಎನ್ನುತ್ತಾ ‘ಕನ್ನಡಪ್ರಭ’ಕ್ಕೆ ತಮ್ಮ ಉದ್ಯಮದ ಪ್ರಯಾಣ ವಿವರಿಸಿದರು ಶೈಲಜಾ. ಸಿಎಫ್‌ಟಿಆರ್‌ಐ ನೆರವು ‘ನುಗ್ಗೆಸೊಪ್ಪಿನ ಮಹತ್ವ ತಿಳಿದಂತೆಲ್ಲ ಇದನ್ನು ಉದ್ಯಮ ಮಾಡಬೇಕು ಎನ್ನುವ ಆಲೋಚನೆ ಬಲವಾಯಿತು.

ಆಹಾರ ಉದ್ಯಮದಲ್ಲಿ ಅವಕಾಶ ಹೆಚ್ಚು ಇರುವುದು ಅರಿವಾಗಿ ಇದಕ್ಕೆ ಉದ್ಯಮ ರೂಪ ನೀಡಲೇಬೇಕು ಎಂದು ತೀರ್ಮಾನಿಸಿದೆ. ಆದರೆ, ನುಗ್ಗೆಸೊಪ್ಪಿನಲ್ಲಿರುವ ಕಹಿ ಅಂಶದಿಂದಾಗಿ ಕೆಲವರು ನುಗ್ಗೆಸೊಪ್ಪಿನ ವೈವಿಧ್ಯ ಇಷ್ಟಪಡುತ್ತಿರಲಿಲ್ಲ. ನುಗ್ಗೆಸೊಪ್ಪಿನ ಕಹಿ ತೆಗೆಯಲು ಮೈಸೂರಿನ ಸಿಎಫ್‌ಟಿಆರ್‌ಐ ನೆರವು ಕೇಳಿದೆ. ಅವರು ನೀಡಿದ ಸಲಹೆ ಮತ್ತು ತಾಂತ್ರಿಕತೆಯಿಂದ ನುಗ್ಗೆ ಸೊಪ್ಪಿನ ಕಹಿ ತೆಗೆಯುವಲ್ಲಿ ಯಶಸ್ವಿಯಾದೆ. ಪ್ರತಿ ಆಹಾರದ ವಿಧವನ್ನು ಅಲ್ಲೇ ಪರೀಕ್ಷಿಸಿ, ಅದರಲ್ಲಿರುವ ಪೌಷ್ಠಿಕಾಂಶಗಳು, ಅದರಿಂದಾಗುವ ಪ್ರಯೋಜನಗಳ ಕುರಿತು ಸರ್ಟಿಫೈಡ್ ಮಾಹಿತಿ ಪಡೆದ ಮೇಲಷ್ಟೇ ಮಾರುಕಟ್ಟೆಗೆ ಆಹಾರ ಕಳಿಸಲು ಶುರು ಮಾಡಿದ್ದೇನೆ’ ಎನ್ನುತ್ತಾರೆ ಶೈಲಜಾ.

ಮಧುಮೇಹ- ಕೊಬ್ಬು ಕರಗಲು ಸಹಕಾರಿ: ‘ನುಗ್ಗೆಸೊಪ್ಪಿನ ಆಹಾರ ಉತ್ಪನ್ನಗಳ ಬಳಕೆಯಿಂದ ಡಯಾಬಿಟೀಸ್ ಬಾಧಿತರಿಗೆ ಅನುಕೂಲ ಆಗಲಿದೆ. ಜೊತೆಗೆ ದೇಹದಲ್ಲಿನ ಕೆಟ್ಟ ಕೊಬ್ಬನ್ನೂ ಕರಗಿಸುತ್ತೆ. ಸ್ವತಃ ನಾನೇ ಡಿಸ್ಕ್ ಬಲ್ಜ್ ಸಮಸ್ಯೆಯಿಂದ ಬಳಲುತ್ತಿದ್ದೆ. ನುಗ್ಗೆಸೊಪ್ಪಿನ ಆಹಾರ ಬಳಕೆ ಶುರು ಮಾಡಿದ ಮೇಲೆ ಅದರಿಂದ ಬಹುತೇಕ ಮುಕ್ತಿ ಪಡೆದಿದ್ದೇನೆ. ಶಸ್ತ್ರಚಿಕಿತ್ಸೆಯನ್ನು ತಪ್ಪಿಸಿಕೊಂಡಿದ್ದೇನೆ. ನಮ್ಮ ಯಾವ ಉತ್ಪನ್ನಕ್ಕೂ ಮೈದಾ, ಸಕ್ಕರೆ, ಗೋಧಿ ಅಥವಾ ಯಾವುದೇ ರಸಾಯನಿಕ ಬಳಸುವುದಿಲ್ಲ. ಸಂಪೂರ್ಣ ಆರೋಗ್ಯಯುತ ಆಹಾರ ಒದಗಿಸುವುದೇ ಗುರಿ. ಮುಂದೆ ಬೇಡಿಕೆ ಹೆಚ್ಚಾದಂತೆಲ್ಲ ನಮಗೆ ನಮ್ಮ ತೋಟದ ನುಗ್ಗೆ ಸೊಪ್ಪು ಸಾಲುವುದಿಲ್ಲ. ಅದಕ್ಕಾಗಿಯೇ ನಮ್ಮ ತೋಟದಲ್ಲೇ ಅನೇಕ ರೈತರಿಗೆ ನುಗ್ಗೆ ಸೊಪ್ಪು ಬೆಳೆಯುವ ಮತ್ತು ಅದರ ಬಳಕೆಯ ಬಗ್ಗೆ ತರಬೇತಿ ನೀಡಿ, ಅನೇಕ ರೈತರನ್ನು ನುಗ್ಗೆ ಬೆಳೆಯಲು ಪ್ರೇರೇಪಿಸುವ ಕಾರ್ಯವನ್ನೂ ಶುರು ಮಾಡಿದ್ದೇವೆ.

ಆಯುರ್ವೇದದಲ್ಲಿ ನುಗ್ಗೆ ಸೊಪ್ಪಿನ ಎಣ್ಣೆ, ಬಣ್ಣದ ಬಗೆಗೂ ಪ್ರಸ್ತಾಪವಿದೆ. ಇದಕ್ಕಾಗಿ ಇದನ್ನು ‘ಮಿರಾಕಲ್ ಟ್ರೀ’ ಎಂದೂ ಕೆಲವರು ಕರೆಯುತ್ತಾರೆ. ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ನುಗ್ಗೆಸೊಪ್ಪಿನ ಇಡ್ಲಿ- ದೋಸೆ ಮಿಕ್ಸ್ ಪರಿಚಯಿಸಲಿದ್ದೇನೆ. ಕಪೆಕ್‌ನವರಿಂದಾಗಿ ವರ್ಲ್ಡ್ ಫುಡ್ ಇಂಡಿಯಾ ಮೇಳದಲ್ಲಿ ಉಚಿತ ಮಳಿಗೆ ದೊರೆಯಿತು. ಅಲ್ಲಿ ನಮ್ಮ ಉತ್ಪನ್ನಗಳು ಅನೇಕ ರಾಜ್ಯದ ಜನರಿಗೆ ಪರಿಚಯವಾಗಿ ನಮಗೆ ಬುಕ್ಕಿಂಗ್ ಶುರುವಾಗಿದೆ. ಅಮೆಜಾನ್‌ನಲ್ಲೂ ನಮ್ಮ ಉತ್ಪನ್ನ ದೊರೆಯುತ್ತಿದೆ. ವಿದೇಶಕ್ಕೆ ರಫ್ತು ಮಾಡಲು ಅಗತ್ಯ ಸಿದ್ಧತೆ ಶುರು ಮಾಡಿದ್ದೇನೆ. ನನ್ನ ಮಗ ಮಾಸ್ಟರ್ ಕಿಶನ್ ಸದ್ಯ ವೈದ್ಯಕೀಯ ಶಿಕ್ಷಣದ ಉದ್ಯಮದಲ್ಲಿ ಬ್ಯೂಸಿ ಇದಾನೆ. ಸದ್ಯದಲ್ಲೇ ಸ್ಯಾಂಡಲ್‌ವುಡ್‌ಗೆ ಮತ್ತೆ ಹೊಸ ಸಿನಿಮಾದೊಂದಿಗೆ ಬರಲಿದ್ದಾನೆ’ ಎಂದು ಮಾತು ಮುಗಿಸಿದರು ಶೈಲಜಾ. 

ನ್ಯೂಟ್ರಿ ಮೊರಿಂಗಾ ಉತ್ಪನ್ನಗಳಿಗಾಗಿ ಸಂಪರ್ಕಿಸಿ: 9980610540 ಅಥವಾ www.nutrimoringa.com ವೆಬ್‌ಸೈಟ್‌ಗೆ ಭೇಟಿ ನೀಡಿ.

15 ಲಕ್ಷ ರೂ. ಸಬ್ಸಿಡಿ ಪಡೆಯಿರಿ: ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.

Read more Articles on