ಸೇನಾ ಸ್ಮಾರಕದಲ್ಲಿ ಇಂದು 75 ಅಡಿ ಎತ್ತರದ ಏಕಶಿಲ ವೀರಗಲ್ಲು ಅನಾವರಣ

| N/A | Published : Jul 26 2025, 01:30 AM IST / Updated: Jul 26 2025, 05:15 AM IST

Rajeev Chandrasekhar

ಸಾರಾಂಶ

ಕಾರ್ಗಿಲ್ ವಿಜಯ ದಿನಾಚರಣೆ ಸಂದರ್ಭದಲ್ಲಿ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಸ್ಥಾಪಿಸಿರುವ 75 ಅಡಿ ಎತ್ತರದ ಏಕಶಿಲ ‘ವೀರಗಲ್ಲು’ ಅನಾವರಣಗೊಳಿಸುತ್ತಿರುವುದನ್ನು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದಾರೆ.

 ಬೆಂಗಳೂರು :  ಕಾರ್ಗಿಲ್ ವಿಜಯ ದಿನಾಚರಣೆ ಸಂದರ್ಭದಲ್ಲಿ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಸ್ಥಾಪಿಸಿರುವ 75 ಅಡಿ ಎತ್ತರದ ಏಕಶಿಲ ‘ವೀರಗಲ್ಲು’ ಅನಾವರಣಗೊಳಿಸುತ್ತಿರುವುದನ್ನು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದಾರೆ.

ಶನಿವಾರ ‘ಕಾರ್ಗಿಲ್ ವಿಜಯ ದಿವಸ’ದ 26ನೇ ವರ್ಷಾಚರಣೆಗೆ 700 ಟನ್ ತೂಕದ ವೀರಗಲ್ಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸುವರು.

ಈ ಹಿನ್ನೆಲೆಯನ್ನು ಯೋಜನೆ ನಡೆದು ಬಂದ ಹಾದಿಯನ್ನು ಸ್ಮರಿಸಿರುವ ರಾಜೀವ್ ಚಂದ್ರಶೇಖರ್, ವೀರಗಲ್ಲು ಅನಾವರಣಗೊಳ್ಳುತ್ತಿರುವುದಕ್ಕೆ ನನಗೆ ಸಂತೋಷ ಮತ್ತು ಅತ್ಯಂತ ಹೆಮ್ಮೆಯಾಗುತ್ತಿದೆ. 16 ವರ್ಷಗಳ ಹಿಂದೆ ಆರಂಭವಾದ ಈ ಯೋಜನೆಗೆ ಅನೇಕ ಅಡೆ-ತಡೆಗಳು, ಅಡ್ಡಿ ಆತಂಕಗಳು ಮತ್ತು ಸೂಕ್ಷ್ಮತೆ ಇಲ್ಲದ ಕೆಲವು ವ್ಯಕ್ತಿಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಆದರೆ, ಈಗ ನಮ್ಮ ಸೇನಾಪಡೆಗಳ ಯೋಧರ ತ್ಯಾಗ, ಬಲಿದಾನ, ಶೌರ್ಯ, ಧೈರ್ಯ ಸಾಹಸದ ಪ್ರತೀಕವಾಗಿ ವೀರಗಲ್ಲು ಅನಾವರಣ ಆಗುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬಗಳಿಗೆ ಗೌರವವನ್ನು ಸಲ್ಲಿಸಿದಂತಾಗಿದೆ ಎಂದಿದ್ದಾರೆ.

ರಾಜೀವ್ ಚಂದ್ರಶೇಖರ್ ಅವರ ತಂದೆ ಎಂ.ಕೆ. ಚಂದ್ರಶೇಖರ್ ಅವರು ಭಾರತೀಯ ವಾಯುಪಡೆಯ ನಿವೃತ್ತ ಏರ್ ಕಮೋಡರ್ ಆಗಿದ್ದು, ಅವರಿಂದ ಸ್ಫೂರ್ತಿ ಪಡೆದು ಸ್ಮಾರಕ ಮತ್ತು ವೀರಗಲ್ಲು ನಿರ್ಮಿಸುವ ಯೋಜನೆಯನ್ನು ರೂಪಿಸಲಾಯಿತು.

ವಿಶಿಷ್ಟ ಸೇವಾ ಪದಕ ಪುರಸ್ಕೃತ ಹೆಮ್ಮೆಯ ವಾಯು ಸೈನಿಕನ ಪುತ್ರನಾಗಿ ಈ ಯೋಜನೆ ಕೈಗೆತ್ತಿಕೊಂಡೆ. ಸಮವಸ್ತ್ರದ ಅವರ ಜೀವನವನ್ನು ಕಂಡ ನಾನು, ಸೈನಿಕರು ಮತ್ತು ಅವರ ಕುಟುಂಬದ ಗೌರವಕ್ಕಾಗಿ ಸ್ಮಾರಕ ನಿರ್ಮಾಣ ಯೋಜನೆಯನ್ನು ರೂಪಿಸಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ರಾಷ್ಟ್ರೀಯ ಸೈನಿಕ ಸ್ಮಾರಕ ಕೇವಲ ಸರ್ಕಾರದ ಮತ್ತೊಂದು ಯೋಜನೆಯಲ್ಲ. ದೇಶಕ್ಕಾಗಿ ಸೇವೆ ಸಲ್ಲಿಸಿರುವ, ಪ್ರಾಣ ತ್ಯಾಗ ಮಾಡಿದ ಸೈನಿಕರ ಕುಟುಂಬಗಳ ಪಾಲಿಗೆ ಪವಿತ್ರ ಸ್ಥಳವಾಗಿದೆ. ಸ್ವಾತಂತ್ರ್ಯ ನಂತರದಲ್ಲಿ ಸೇನಾಪಡೆಗಳಿಗೆ ಗೌರವಿಸುವ, ಸ್ಮರಿಸುವ ದೇಶದ ಮೊದಲ ಪ್ರಮುಖ ಸ್ಮಾರಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ. ಯುವ ಕನ್ನಡಿಗರು ಮತ್ತು ಭಾರತೀಯರಿಗೆ ಇದು ಸ್ಫೂರ್ತಿಯ ತಾಣವಾಗುತ್ತದೆ ಎಂದು ರಾಜೀವ್ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯೋಜನೆ ಸಾಕಾರಕ್ಕೆ ಬಿಎಸ್‌ವೈ, ಅನಂತ್‌ ಕೊಡುಗೆ:

ಸ್ಮಾರಕದಲ್ಲಿನ ಶಿಲೆಗಳ ಮೇಲೆ ಕೆತ್ತಿರುವ ಹೆಸರುಗಳು, ಭಾರತದ ಅತಿದೊಡ್ಡ ರಾಷ್ಟ್ರಧ್ವಜ ಸ್ತಂಭ, ವೀರಗಲ್ಲು, ಅಂಡರ್‌ಗ್ರೌಂಡ್ ಮ್ಯೂಸಿಯಂ ಒಳಗೊಂಡಂತೆ ಸ್ಮಾರಕದ ಪ್ರತಿಯೊಂದು ವಿನ್ಯಾಸವೂ ಯೋಧರ ಸ್ಮರಣೆ ಮತ್ತು ಯುವ ಸಮುದಾಯಕ್ಕೆ ಕಲಿಕೆಯ ಕೇಂದ್ರವಾಗಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಅವರು ಸ್ಮಾರಕ ನಿರ್ಮಾಣಕ್ಕೆ ಮಹತ್ವದ ಸಹಕಾರ ನೀಡಿದ್ದಾರೆ. ಸ್ಮಾರಕ ನಿರ್ಮಾಣ ಯೋಜನೆ ಸಾಕಾರಗೊಳ್ಳಲು ಈ ಇಬ್ಬರ ಕೊಡುಗೆಯು ಬಹಳಷ್ಟು ಇದೆ. ಇದರ ಗೌರವ ಅವರಿಗೂ ಸಲ್ಲಬೇಕು ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಸೈನಿಕ ಸ್ಮಾರಕ ಯೋಜನೆಯ ನೀಲನಕ್ಷೆಯಲ್ಲೇ ವೀರಗಲ್ಲು ಸ್ಥಾಪಿಸುವುದನ್ನು ನಿರ್ಧರಿಸಲಾಗಿತ್ತು. ಆದರೆ, ರಾಜಕೀಯ ನಿರ್ಲಕ್ಷ್ಯತನದಿಂದಾಗಿ ಅನೇಕ ವರ್ಷಗಳ ಕಾಲ ನೆನಗುದಿಗೆ ಬಿದ್ದಿತ್ತು. ವಿಳಂಬವಾಗದೆ ಇದ್ದಲ್ಲಿ ನವದೆಹಲಿಯ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೂ ಮೊದಲೇ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕವು ಸ್ವಾತಂತ್ರ್ಯ ನಂತರದ ಮೊದಲ ಪ್ರಮುಖ ಸ್ಮಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

ರಾಜಕೀಯ ಕಾರಣದಿಂದಾಗಿ ಒಂದು ಹಂತದಲ್ಲಿ ನಾನು ಸೈನಿಕ ಸ್ಮಾರಕ ಟ್ರಸ್ಟ್‌ನ ಸದಸ್ಯತ್ವ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಆದರೆ, ಅದನ್ನು ಪೂರ್ಣಗೊಳಿಸಬೇಕು ಎನ್ನುವ ಗುರಿ ಉದ್ದೇಶ ಮಾತ್ರ ಎಂದಿನಂತೆ ಮುಂದುವರಿಯಿತು. ಕಾರ್ಗಿಲ್ ವಿಜಯ್ ದಿವಸ ಆಚರಣೆಗೆ ಕೆಲವು ರಾಜಕೀಯ ನಾಯಕರು ಪ್ರತಿರೋಧ ವ್ಯಕ್ತಪಡಿಸಿದಾಗ, ಅದನ್ನು ಸಂಸತ್ತಿನಲ್ಲಿ ಧ್ವನಿ ಎತ್ತುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಆಚರಣೆ ಮಾಡುವಂತೆ ಮಾಡಿದ್ದನ್ನು ರಾಜೀವ್ ಚಂದ್ರಶೇಖರ್ ಸ್ಮರಿಸಿಕೊಂಡರು.

ಈ ವಿಶಿಷ್ಟ ಸ್ಮಾರಕವು ನಮ್ಮ ಸೇನಾಪಡೆಗಳ ಕುರಿತು ಸ್ಫೂರ್ತಿ ನೀಡುವ ಜೀವಂತ ತಾಣವಾಗಿರುವಂತೆ ನೋಡಿಕೊಳ್ಳುವ ಬದ್ಧತೆ ನಾಗರಿಕರಾದ ನಮ್ಮೆಲ್ಲರಿಗೂ ಇರಬೇಕು. ಹುತಾತ್ಮರಿಗೆ ಗೌರವ, ಅವರ ಕುಟುಂಬಗಳಿಗೆ ಸ್ಮರಣೆಯ ಪವಿತ್ರ ತಾಣವಾಗಿರಬೇಕು. ಸೈನಿಕರ ಸ್ಮರಣೆಯ ಕಾರ್ಯಕ್ರಮಗಳು ಜರುಗುತ್ತಿರಬೇಕು. ಯುವ ಭಾರತೀಯರಿಗೆ ಸ್ಫೂರ್ತಿ ನೀಡುತ್ತಿರಬೇಕು. ಸ್ವಾತಂತ್ರ್ಯದ ನಿಜವಾದ ಮೌಲ್ಯವನ್ನು ನೆನಪಿಸುತ್ತಿರಬೇಕು ಎಂದು ರಾಜೀವ್ ಚಂದ್ರಶೇಖರ್ ಒತ್ತಿ ಹೇಳಿದರು.

ಸ್ಮಾರಕ, ವೀರಗಲ್ಲು ಯೋಜನೆ ಅನುಷ್ಠಾನಕ್ಕೆ ಕೊಡುಗೆ ನೀಡಿ, ಜೊತೆಯಾಗಿ ದೃಢವಾಗಿ ನಿಂತ ನಿವೃತ್ತ ಯೋಧರು ಮತ್ತು ಅವರ ಕುಟುಂಬಗಳು ಹಾಗೂ ಅಸಂಖ್ಯಾತ ಜನರ ನಿರಂತರ ಸಹಕಾರ ಮತ್ತು ಬೆಂಬಲದಿಂದ ಸ್ಮಾರಕ ಸಿದ್ಧವಾಗಿದೆ. ಇದೇ ವೇಳೆ ಸ್ಮಾರಕಕ್ಕೆ ಸಲ್ಲಬೇಕಾದ ಗೌರವವನ್ನು ನೀಡಿರುವ ರಾಜ್ಯದ ಮುಖ್ಯಮಂತ್ರಿಯವರಿಗೂ ರಾಜೀವ್ ಚಂದ್ರಶೇಖರ್ ಧನ್ಯವಾದ ತಿಳಿಸಿದ್ದಾರೆ.

ತಂದೆಗೆ ವಿಶೇಷ ಗೌರವ:

ಸೈನಿಕ ಸ್ಮಾರಕದಲ್ಲಿ ವಿಮಾನಗಳು, ಟ್ಯಾಂಕ್‌ಗಳು, ವಿವಿಧ ನೌಕೆಗಳ ಮಾದರಿಗಳು ಮತ್ತು ಭಾರತೀಯ ಸೇನಾಪಡೆಗಳ ಮೊದಲ ಮುಖ್ಯಸ್ಥರ ಪುತ್ಥಳಿಗಳ ಸ್ಥಾಪನೆ ಸೇರಿದಂತೆ ಸ್ಮಾರಕಕ್ಕೆ ಒಂದು ರೂಪ ನೀಡಲು ಮತ್ತು ವೀರಗಲ್ಲು ಸ್ಥಾಪನೆಗಾಗಿ ತಂದೆ ಎಂ.ಕೆ. ಚಂದ್ರಶೇಖರ್ ಅವರು ಭಾರತೀಯ ಸೇನೆ, ನೌಕ ಪಡೆ, ವಾಯು ಪಡೆ ಮತ್ತು ಇಸ್ರೋ ಸಂಸ್ಥೆಗಳ ಜೊತೆಗೆ ನಿರಂತರವಾಗಿ ಕೆಲಸ ಮಾಡಿರುವುದನ್ನು ರಾಜೀವ್ ಚಂದ್ರಶೇಖರ್ ಸ್ಮರಿಸಿದರು.

ಅಧಿಕಾರಿ ವರ್ಗ ಮತ್ತು ರಾಜಕೀಯ ವರ್ಗದಿಂದ ಆಗುತ್ತಿದ್ದ ವಿಳಂಬಗಳ ನಡುವೆಯೂ ಯೋಜನೆ ಪೂರ್ಣಗೊಳಿಸಲು ಅವರು ಶ್ರಮ ವಹಿಸಿದರು. ಭಾರತದ ಸೇನಾ ಪಡೆಗಳ ಮೊದಲ ಮುಖ್ಯಸ್ಥರ ಪುತ್ಥಳಿಗಳನ್ನು ಕೇವಲ ಸಾಂಕೇತಿಕವಾಗಿ ಸ್ಥಾಪಿಸದೆ, ಹೊಸ ತಲೆಮಾರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಲು ಪ್ರಯತ್ನಿಸಿದ್ದಾರೆ. ಅವರ 16 ವರ್ಷಗಳ ನಿರಂತರ ಶ್ರಮವು ವೀರಗಲ್ಲು ಅನಾವರಣಗೊಳ್ಳುವ ಮೂಲಕ ಫಲ ನೀಡುತ್ತಿರುವುದು ಸಂತೋಷ ತಂದಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Read more Articles on