ಸಾರಾಂಶ
ಕೊಪ್ಪಳ:
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಸ್ಮರಿಸುವುದು ಮತ್ತು ಅವರ ಕುಟುಂಬ ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.ನಗರದ ನಿವೃತ್ತಿ ಸೈನಿಕರ ಸಂಘದ ಕಾರ್ಯಾಲಯದಲ್ಲಿ ಸೇನೆ ವತಿಯಿಂದ ನಡೆದ ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮದಡಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹುತಾತ್ಮರನ್ನು ಸ್ಮರಿಸಲು ಕೇಂದ್ರ ಸರ್ಕಾರ ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಆ ಹೋರಾಟವನ್ನು ನಾಡಿಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದರು.
ಕಾರ್ಗಿಲ್ ಯುದ್ಧದ ರೋಚಕತೆ, ಅಲ್ಲಿಯ ವಾತಾವರಣದಲ್ಲಿ ಸೇನೆ ನಡೆಸಿದ ಹೋರಾಟವನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ ಎಂದ ಅವರು, ನಾನು ಸಹ ಆ ಯುದ್ಧದಲ್ಲಿ ಭಾಗಿಯಾಗಿದ್ದೆ ಎಂದು ಸ್ಮರಿಸಿಕೊಂಡರು.ತಾಲೂಕಿನ ಅಳವಂಡಿ ವೀರಯೋಧ ಮಲ್ಲಯ್ಯ ಮೇಗಳಮಠ ಈ ಯುದ್ಧದಲ್ಲಿ ಹುತಾತ್ಮರಾಗಿದ್ದು ಅವರನ್ನು ಸ್ಮರಿಸುವುದು ಮತ್ತು ಅವರ ಕುಟುಂಬ ಸನ್ಮಾನಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.
ನಿವೃತ್ತ ಸೈನಿಕರ ಸಾಕಷ್ಟು ಬೇಡಿಕೆಗಳಿದ್ದು ಅವುಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಕೆಲವೊಂದು ಪ್ರಕರಣಕ್ಕೆ ಕಾನೂನು ತೊಡಕುಗಳಿದ್ದು ನಿವಾರಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.ಹುತಾತ್ಮರನ್ನು ಕಾರ್ಗಿಲ್ ವಿಜಯ ದಿವಸ ದಿನ ಸ್ಮರಿಸಿ ಬಳಿಕ ಮರೆಯುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮಾರುತಿ ಗೊಂದಿ, ನಿವೃತ್ತ ಸೈನಿಕರಿಗೆ ಗೌರವ, ಸವಲತ್ತು ಸಿಗುತ್ತಿಲ್ಲ. ಇದಕ್ಕಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಸೇನೆಯ ಪರವಾಗಿ ಆಗಮಿಸಿದ್ದ ನಾಯಕ ಸುಭೇದಾರ ತಿಲಕ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ದೇಶದ 521 ಯೋಧರ ಕುಟುಂಬ ಭೇಟಿಯಾಗಿ ಗೌರವಿಸಲಾಗುತ್ತಿದೆ. ರಾಜ್ಯದಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು ಎಂದು ತಿಳಿಸಿದರು.ಕೊಪ್ಪಳದಲ್ಲಿ ಮಲ್ಲಯ್ಯ ಮೇಗಳಮಠ ಪತ್ನಿ ಸರೋಜಾ ಹಾಗೂ ಶಿವಬಸಯ್ಯ ಕುಲಕರ್ಣಿ ಪತ್ನಿ ನಿರ್ಮಲಾ ಅವರನ್ನು ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮದಡಿ ಸ್ಥಳೀಯ ನಿವೃತ್ತ ಸೈನಿಕರ ಸಂಘದ ಸಹಯೋಗದಲ್ಲಿ ಸನ್ಮಾನಿಸಿ, ಪ್ರಸಂಶನಾ ಪತ್ರ ನೀಡಲಾಗಿದೆ ಎಂದರು.
ಈ ವೇಳೆ ತಹಸೀಲ್ದಾರ್ ವಿಠ್ಠಲ್ ಚೌಗಲಿ, ಸಂತರಾಮ ಭಟ್, ದ್ರಾಕ್ಷಾಯಿಣಿ ಕೊಪ್ಪಳ, ಸರೋಜಮ್ಮ ಮೇಗಳಮಠ, ನಿರ್ಮಲಾ ಕುಲಕರ್ಣಿ, ಸೈನಿಕರಾದ ರಜೀಸ್, ಲಕ್ಷ್ಮಣ ಅಸುಂಡಿ, ಸೈಯೂಜ್, ಉಮೇಶ ಕಾಮನೂರು, ಇಂಧುದರ ಸೊಪ್ಪಿಮಠ, ಕಾರ್ಯದರ್ಶಿ ನಿಂಗಪ್ಪ ಗಾಣಿಗೇರ, ಮಲ್ಲಿಕಾರ್ಜುನ ಸಜ್ಜನ ಇದ್ದರು.ನಿವೃತ್ತ ಸೈನಿಕರ ಸಂಘದ ಉಪಾಧ್ಯಕ್ಷ ಶ್ರೀಧರ ಪೊಲೀಸ್‌ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.