ರೈತರು ಒಗ್ಗಟ್ಟಾದರೆ ಪ್ರತಿ ಬೆಳೆಗೂ ಬೆಲೆ ಇದೆ! ಸಮಾನ ಮನಸ್ಕ ರೈತರು ಸೇರಿ ಕಟ್ಟಿರುವ ನೆಲಸಿರಿ

| N/A | Published : Jul 25 2025, 11:35 AM IST

Nelasiri
ರೈತರು ಒಗ್ಗಟ್ಟಾದರೆ ಪ್ರತಿ ಬೆಳೆಗೂ ಬೆಲೆ ಇದೆ! ಸಮಾನ ಮನಸ್ಕ ರೈತರು ಸೇರಿ ಕಟ್ಟಿರುವ ನೆಲಸಿರಿ
Share this Article
  • FB
  • TW
  • Linkdin
  • Email

ಸಾರಾಂಶ

-ರೈತರೇ ಷೇರುದಾರರಾಗಿರುವ ನೆಲಸಿರಿ ರೈತ ಉತ್ಪಾದಕ ಸಂಸ್ಥೆ । ರೈತರಿಂದಲೇ ತಮ್ಮ ಬೆಳೆಗಳಿಗೆ ಬೆಲೆ ನಿಗದಿ ।

ತೆಂಗು, ಹಲಸಿನಹಣ್ಣು, ಬಾಳೆ ಬೆಳೆ ಸಂಸ್ಕರಿಸಿ ಮೌಲ್ಯ ವರ್ಧನೆಗೊಳಿಸಿ ಮಾರಾಟ ಮಾಡುತ್ತಿರುವ ರೈತರು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಹಳೇ ಮಾತು. ರೈತರ ಒಗ್ಗಟ್ಟಾದರೆ ಪ್ರತಿ ಬೆಳೆಗೂ ಬೆಲೆ ಇದೆ. ಹೌದು ಉತ್ತರ ಕನ್ನಡ ಜಿಲ್ಲೆಯ ನೆಲಸಿರಿ ರೈತ ಉತ್ಪಾದಕ ಸಂಸ್ಥೆಯು 5 ವರ್ಷಗಳಲ್ಲಿ ಬೆಳೆದು ನಿಂತಿರುವ ಪರಿ ನೋಡಿದರೆ ನೀವು ಹಾಗೇ ಹೇಳುತ್ತೀರಿ. ಸಮಾನ ಮನಸ್ಕ ರೈತರು ಸೇರಿ ಕಟ್ಟಿರುವ ನೆಲಸಿರಿ ರೈತ ಉತ್ಪಾದಕ ಸಂಸ್ಥೆಯಲ್ಲಿ 127 ರೈತರು ಷೇರುದಾರರಾಗಿದ್ದಾರೆ. ಐದು ವರ್ಷದಲ್ಲಿ ಈ ಸಂಸ್ಥೆಯ ವಹಿವಾಟು ₹5 ಕೋಟಿ ಮುಟ್ಟಿದೆ.

ಕಪೆಕ್‌ ನೀಡಿದ ನೆರವು

ತನ್ನ ಷೇರುದಾರ ರೈತರ ಬೆಳೆಗಳು, ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಅತ್ಯುತ್ತಮ ಬೆಲೆ ಕೊಡಿಸುವ ಜೊತೆ ಜೊತೆಗೇ ಸಂಸ್ಥೆಯೂ ದೇಶವ್ಯಾಪಿ ಅಸ್ತಿತ್ವ ಪಡೆದುಕೊಳ್ಳುತ್ತಿದೆ. ವಿದೇಶಕ್ಕೆ ನೇರ ರಫ್ತು ಆರಂಭಿಸಲು ಸಿದ್ಧತೆ ನಡೆದಿದೆ. ಈ ಸಂಸ್ಥೆ ನೋಂದಣಿಯಾಗಿ ಆರಂಭವಾಗಿದ್ದು 2019ರಲ್ಲಿ ಆದರೂ ಕೊರೋನಾದಿಂದಾಗಿ 1 ವರ್ಷ ಕುಂಟುತ್ತಾ ಸಾಗಿತು. ಬಳಿಕ ನಬಾರ್ಡ್‌ ಹಾಗೂ ಕರ್ನಾಟಕ ರಾಜ್ಯ ಕೃಷಿ ಸಂಸ್ಕರಣೆ ಹಾಗೂ ರಫ್ತು ನಿಗಮ (ಕಪೆಕ್)ದ ಪಿಎಂಎಫ್ಎಂಇ ಯೋಜನೆಯ ನೆರವು ಪಡೆದು ಬೆಳೆಯತೊಡಗಿತು. ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಬೆಳೆಗಳ ಮೌಲ್ಯ ವರ್ಧನೆ ಮತ್ತು ಆನ್ಲೈನ್ ಮಾರುಕಟ್ಟೆ ಮೂಲಕ ಅವುಗಳಿಗೆ ಉತ್ತಮ ಬೆಲೆ ಕೊಡಿಸುವ ಉದ್ದೇಶದೊಂದಿಗೆ ಶುರುವಾದ ನೆಲಸಿರಿ ಈಗ ತನ್ನ ಗುರಿ ಸಾಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಬೆಳೆಗಳಾದ ತೆಂಗು, ಹಲಸಿನಹಣ್ಣು ಮತ್ತು ಬಾಳೆ ಬೆಳೆಯ ಮೌಲ್ಯ ವರ್ಧಿತ ಉತ್ಪನ್ನಗಳು ಆನ್ಲೈನ್ ಮಾರುಕಟ್ಟೆಯಲ್ಲಿ ‘ಕದಂಬ’ ಹೆಸರಿನಲ್ಲಿ ಬೇಡಿಕೆ ಗಿಟ್ಟಿಸಿಕೊಂಡಿವೆ.

www.spiceboat.in ವೆಬ್ಸೈಟ್ ಮೂಲಕ ನೆಲಸಿರಿಯ ಕದಂಬ ಉತ್ಪನ್ನಗಳಾದ ಹಪ್ಪಳ, ಚಿಪ್ಸ್, ಜೇನು, ಮಸಾಲೆ ಪದಾರ್ಥಗಳು, ಸಾವಯವ ಬೆಳೆ, ಉತ್ಪನ್ನಗಳು ದೇಶವ್ಯಾಪಿ ಗ್ರಾಹಕರನ್ನು ಹೊಂದಿವೆ. ಉತ್ತರ ಕನ್ನಡ ಫೆಡರೇಶನ್, ಕದಂಬ ಮಾರ್ಕೆಟಿಂಗ್ ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ಸಹಯೋಗದಲ್ಲಿ ನೆಲಸಿರಿ ರೈತ ಉತ್ಪಾದಕ ಸಂಸ್ಥೆಯು ದೊಡ್ಡ ರೈತ ಸಂಸ್ಥೆಯಾಗಿ ಬೆಳೆಯುತ್ತಿದೆ. ಸಿರಸಿಯಲ್ಲಿ ಉತ್ಪನ್ನ ಘಟಕ ಕಪೆಕ್ ಪಿಎಂಎಫ್ಎಂಇ ಯೋಜನೆ ಮೂಲಕ ನೀಡಿರುವ ಸಬ್ಸಿಡಿ ಸಾಲದ ನೆರವಿನಿಂದ ಶಿರಸಿಯಲ್ಲಿ ಕೇಂದ್ರಿತ ಪ್ರಾಸೆಸ್ಸಿಂಗ್ ಘಟಕ ಸ್ಥಾಪಿಸಲಾಗಿದೆ. ನೆಲಸಿರಿ ರೈತ ಉತ್ಪಾದಕ ಸಂಸ್ಥೆಯು ತನ್ನ ಷೇರುದಾರ ರೈತರ ಉತ್ಪನ್ನಗಳ ಮೌಲ್ಯವರ್ಧನೆಗೆ ಅವಕಾಶ ಕಲ್ಪಿಸಿದೆ. ಜೊತೆಗೆ ತನ್ನ ಷೇರುದಾರ ರೈತರ ಉತ್ಪನ್ನಗಳಿಗೆ ಸ್ಪೈಸ್ಬೋಟ್ ಆನ್ಲೈನ್ ಮಾರಾಟ, ಎಲ್ಲಾ ಅಧ್ಯಯನ ಪ್ರವಾಸಗಳ ಮೂಲಕ ಉತ್ಪನ್ನಗಳು, ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗ್ ಅವಕಾಶಗಳ ಕುರಿತು ತರಬೇತಿ ನೀಡುತ್ತಿದ್ದೇವೆ. ಕಪೆಕ್ ಅನೇಕ ರಾಷ್ಟ್ರೀಯ ಮೇಳಗಳಲ್ಲಿ ಉಚಿತ ಮಳಿಗೆ ನೀಡಿದೆ ಎಂದು ನೆಲಸಿರಿ ರೈತ ಉತ್ಪಾದಕ ಸಂಸ್ಥೆಯ ಸಿಇಓ ಮಂಜುನಾಥ ಹೆಗಡೆ ವಿವರಿಸಿದರು.

ಪ್ರಸ್ತುತ ವಾರ್ಷಿಕ ₹5 ಕೋಟಿ ಇರುವ ವಹಿವಾಟನ್ನು 2028-29ರ ಹೊತ್ತಿಗೆ ₹30 ಕೋಟಿಗೆ ಹೆಚ್ಚಿಸಲು ಯೋಜಿಸಿದ್ದೇವೆ. ಕ್ವಿಕ್ ಇ ಕಾಮರ್ಸ್ ತಾಣಗಳ ಸಹಯೋಗ ಪಡೆಯಲು ನಿರ್ಧರಿಸಲಾಗಿದೆ. ಪ್ರಸ್ತುತ ವಿದೇಶದಲ್ಲಿರುವ ಕನ್ನಡಿಗರು ಮಾತ್ರ ಇಲ್ಲಿಂದ ಹೋಗುವಾಗ ನಮ್ಮ ಉತ್ಪನ್ನ ಖರೀದಿಸಿ ಒಯ್ಯುತ್ತಿದ್ದಾರೆ. ನಾವೇ ನೇರವಾಗಿ ರಫ್ತು ಆರಂಭಿಸಲು ಅಗತ್ಯ ಸಿದ್ಧತೆ ನಡೆಸಿದ್ದೇವೆ. ನಮ್ಮ ಆನ್ಲೈನ್ ತಾಣವನ್ನೂ ಎಐ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲು ಮಾತುಕತೆ ನಡೆಯುತ್ತಿದೆ ಎಂದು ಭವಿಷ್ಯದ ಯೋಜನೆಗಳ ವಿವರ ನೀಡಿದರು ಮಂಜುನಾಥ ಹೆಗಡೆ. 6 ಜನ ನಿರ್ದೇಶಕರ ಆಡಳಿತ ಮಂಡಳಿ ನಿತ್ಯ ಚಟುವಟಿಕೆಯಲ್ಲಿ ನೇರವಾಗಿ ತೊಡಗಿಸಿಕೊಂಡಿದೆ. 6 ಜನರಿಗೆ ನೇರ ಉದ್ಯೋಗ ನೀಡಲಾಗಿದೆ. 231.42 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿಯನ್ನು ನೆಲಸಿರಿ ಮೂಲಕ ಪ್ರೋತ್ಸಾಹಿಸಲಾಗಿದೆ. ಸಾವಯವ ಬೆಳೆಗಳಿಗೆ ನೆಲಸಿರಿಯೇ ಉತ್ತಮ ಮಾರುಕಟ್ಟೆ ಒದಗಿಸುವ ಕೆಲಸವನ್ನೂ ಮಾಡುತ್ತಿದೆ. ಜೊತೆಗೆ ರೈತರೂ ಕಪೆಕ್ ಮೂಲಕ ಪಿಎಂಎಫ್ಎಂಇ ಯೋಜನೆಯ ಸಬ್ಸಿಡಿ ಸಾಲದ ಮೂಲಕ ಸಂಸ್ಕರಣ ಘಟಕ ಸ್ಥಾಪಿಸಲು ಸಹ ನೆರವಾಗುತ್ತಿದ್ದೇವೆ ಎಂದರು.

ಅಡಕೆ ಈಗ ಸಿಹಿ ಸುಪಾರಿ

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಬೆಳೆಯಾದ ಅಡಕೆಯನ್ನು ಸಿಹಿ ಸುಪಾರಿಯಾಗಿಸಿ ಸಣ್ಣ ಸ್ಯಾಚೆಟ್‌ಗಳನ್ನು ರೆಡಿ ಮಾಡಲಾಗಿದೆ. ಸದ್ಯ ಅದನ್ನು ನೇರ ಮಾರಾಟಕ್ಕೆ ಮಾತ್ರ ಬಿಡಲಾಗಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ಬೇಡಿಕೆ ಬರುತ್ತಿದೆ. ಸದ್ಯದಲ್ಲೇ ಅದು ಕೂಡ ಆನ್ಲೈನ್ನಲ್ಲಿ ದೊರೆಯುವಂತೆ ಮಾಡುತ್ತೇವೆ. ನೆಲಸಿರಿ ರೈತ ಉತ್ಪಾದಕ ಸಂಸ್ಥೆಯು ತಾನು ಬೆಳೆಯುವ ಜೊತೆ ಜೊತೆಗೆ ತನ್ನ ಷೇರುದಾರರನ್ನು ಬೆಳೆಸುತ್ತಿದೆ. ನಮ್ಮ ಉತ್ಪನ್ನಗಳ ಬೆಲೆ ಅಂದರೆ ರೈತರೇ ತಮ್ಮ ಬೆಳೆಗಳಿಗೆ ಇಲ್ಲಿ ಬೆಲೆ ನಿಗದಿ ಮಾಡುತ್ತಿದ್ದಾರೆ. ರೈತರು ಒಗ್ಗಟ್ಟಿನ ಮೂಲಕ ತಮ್ಮ ಪ್ರತಿ ಬೆಳೆಗೂ ಸರಿಯಾದ ಬೆಲೆ ಪಡೆಯಬಹುದು ಎಂದು ನೆಲಸಿರಿ ಸಾಬೀತು ಮಾಡಿದೆ. ನೆಲಸಿರಿಯ ಕದಂಬ ಉತ್ಪನ್ನಗಳಿಗೆ ಸಂಪರ್ಕಿಸಿ – 9483613900 ಅಥವಾ www.spiceboat.in ಲಾಗಿನ್ ಆಗಿ.

15 ಲಕ್ಷ ರೂ. ಸಬ್ಸಿಡಿ ಪಡೆಯಿರಿ

ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ

ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ.

ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ

ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್​ಲೈನ್ ಸಂಪರ್ಕಿಸಿ - 080 – 22271192 ಅಥವಾ

22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ.

www.kappec.karnataka.gov.in ವೆಬ್​ಸೈಟ್​ನಲ್ಲೂ ಮಾಹಿತಿ ಪಡೆಯಬಹುದು.

Read more Articles on