ಸಾರಾಂಶ
ಸರ್ಕಾರದ ಸಹಕಾರ – ಉದ್ಯಮಕೆ ಶ್ರೀಕಾರ
ಸಕ್ಸಸ್ ಸ್ಟೋರಿ - ಅಮ್ಮ, ಅಜ್ಜಿ, ಯೂಟ್ಯೂಬ್‌ನಿಂದ ಕಲಿತ ರೆಸಿಪಿಗಳನ್ನೇ ಬಳಸಿ ಹೆಲ್ತ್ ಮಿಕ್ಸ್‌ಗಳ ಉದ್ಯಮ ಆರಂಭಿಸಿದ ಪಾವನ । www.nutriio.inನಲ್ಲೀಗ 30ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳು ಲಭ್ಯ
ಕೊರೋನಾ ಕಾಲದಲ್ಲಿ ಉದ್ಯೋಗ ಕಳೆದುಕೊಂಡವರು, ಉದ್ಯಮ ಮುಚ್ಚಿದವರು ಅಸಂಖ್ಯ. ಕೊರೋನಾ ಜೀವವನ್ನು ಮಾತ್ರವಲ್ಲ ಕೋಟ್ಯಂತರ ಜನರ ಜೀವನವನ್ನೂ ಕಿತ್ತುಕೊಂಡಿತು. ಆದರೆ, ಬೆಂಗಳೂರಿನ ಗೃಹಿಣಿಯೊಬ್ಬರು ಕೊರೋನಾ ಕಾಲದಲ್ಲೇ ಉದ್ಯಮಿಯಾಗಿ ಬೆಳೆದು ನಿಂತರು. ಮೂಲತಃ ಚಿತ್ರದುರ್ಗದ ವೈ.ಜೆ ಪಾವನ ಅವರು ಮದುವೆಯಾದ ನಂತರ ಬೆಂಗಳೂರಲ್ಲೇ ನೆಲೆ ನಿಂತಿದ್ದಾರೆ. ಟೆಕ್ಸ್‌ಟೈಲ್ ಎಂಜಿನಿಯರಿಂಗ್ ಪದವೀಧರೆಯಾದ ಇವರು ಎಂಬಿಎ ಪೂರೈಸಿ ಸಾಫ್ಟ್‌ವೇರ್ ಕಂಪನಿಯೊಂದರ ಎಚ್ಆರ್ ಕೂಡ ಆಗಿದ್ದರು. ಮಕ್ಕಳಿಗಾಗಿ ಕೆಲಸ ಬಿಟ್ಟು ಗೃಹಿಣಿಯಾಗಿ ಮಕ್ಕಳ ಆರೈಕೆಯಲ್ಲಿ ತೊಡಗಿದ ಪಾವನ, ಮಕ್ಕಳಿಗಾಗಿ ಆರೋಗ್ಯ ಪೂರ್ಣ ಆಹಾರ ತಯಾರಿಕೆಗಾಗಿ ಅನೇಕ ಪ್ರಯೋಗ, ಸಂಶೋಧನೆಗಳಲ್ಲಿ ತೊಡಗಿಸಿಕೊಂಡ್ರು.
ಅಮ್ಮ ಹೇಳಿಕೊಟ್ಟಿದ್ದು, ಅಜ್ಜಿ ಮಾಡಿಕೊಟ್ಟಿದ್ದು, ಯೂಟ್ಯೂಬ್‌ನಲ್ಲಿ ನೋಡಿದ್ದು ಹೀಗೆ ಅನೇಕ ಮೂಲಗಳಿಂದ ತಿಳಿದುಕೊಳ್ಳುತ್ತಾ ತಮ್ಮದೇ ಆದ ರೆಸಿಪಿ ಸಿದ್ಧಗೊಳಿಸಿದ್ದಾರೆ. ಪರಿಚಯಸ್ಥರಿಗೆ ನೀಡಿ ಪ್ರತಿಕ್ರಿಯೆ ಕೇಳಿಟ್ಟುಕೊಳ್ಳುವುದನ್ನು ಮಾಡಿದ್ದಾರೆ. ಯಾವುದರಲ್ಲಿ ಏನೇನು ಪೋಷಕಾಂಶ ಇದೆ ಎಂಬ ಪರೀಕ್ಷೆಯನ್ನೂ ಮಾಡಿಕೊಂಡಿದ್ದಾರೆ.
ಎರಡನೇ ಮಗು ಚೂರು ಬೆಳೆದು ಬಿಡುವು ಸಿಗುತ್ತಿದ್ದಂತೆ ಇದನ್ನೇಕೆ ಒಂದು ಉದ್ಯಮವಾಗಿಸಬೇಕು ಎಂದು ತಮ್ಮ ಉಳಿತಾಯದ ಹಣ ಹಾಕಿ ಮನೆಯಲ್ಲೇ ನಾಲ್ಕು ಬಗೆಯ ಹೆಲ್ತ್ ಮಿಕ್ಸ್‌ಗಳನ್ನು ಸಿದ್ಧಗೊಳಿಸಲು ಆರಂಭಿಸಿದರು. ಮೊದಲು ಎರಡೆರಡು ಕೆ.ಜಿ. ಉತ್ಪಾದಿಸಿ ವ್ಯಾಪಾರ ಶುರುವಾಗಿದೆ. ಇದಕ್ಕೆ ಒಳ್ಳೇ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಒಂದಷ್ಟು ಬಂಡವಾಳ ಹಾಕಿ ಮಷಿನರಿಯನ್ನು ಖರೀದಿಸಿ ನ್ಯೂಟ್ರಿಯೋ ಎಂಬ ಬ್ರ್ಯಾಂಡ್ ನೇಮ್ ಇಟ್ಟು ಉದ್ಯಮ ಶುರು ಮಾಡಿದ್ದಾರೆ. ಮಾರ್ಕೆಟಿಂಗ್‌ಗಾಗಿ ಬೆಂಗಳೂರಲ್ಲಿ ನಡೆಯೋ ವಾಕಥಾನ್, ಮ್ಯಾರಥಾನ್, ಪಾರ್ಕ್ ಮತ್ತಿತರ ಕಡೆ ಸ್ಯಾಂಪಲ್ ವಿತರಿಸಿ ಪ್ರಚಾರವನ್ನು ಮಾಡಿದ್ದಾರೆ. ಆದರೆ, ಶುರು ಮಾಡಿದ ನಾಲ್ಕೇ ತಿಂಗಳಲ್ಲಿ ಕೊರೋನಾ ತಾಂಡವ ಶುರುವಾಗಿದೆ.
ಅಯ್ಯೋ ಕೋವಿಡ್ ಲಾಕ್‌ಡೌನ್ ಅಂತ ಎಲ್ಲ ಉದ್ಯಮಿಗಳು ಅಂದುಕೊಂಡಂತೆ ಇವರೂ ಅಂದುಕೊಂಡು ಆತಂಕ ಪಡುತ್ತಿರುವಾಗ, ವಾಕಥಾನ್, ಮ್ಯಾರಥಾನ್‌ನಲ್ಲಿ ಹಂಚಿದ್ದ ಸ್ಯಾಂಪಲ್ಲು, ಪಾಂಪ್ಲೆಟ್ಟುಗಳಲ್ಲಿದ್ದ ಇವರ ಫೋನ್ ನಂಬರಿಗೆ ಕರೆ ಬರಲು ಶುರುವಾಗಿದೆ. 2 ಕೆಜಿಯಿಂದ ಶುರುವಾದ ವ್ಯಾಪಾರ ಕೊರೋನಾ ಕಾಲದಲ್ಲಿ ತಿಂಗಳಿಗೆ 150 ಕೆ.ಜಿ.ವರೆಗೂ ಬೇಡಿಕೆ ಹೆಚ್ಚಾಯಿತು ಎಂದು ತಮ್ಮ ಉದ್ಯಮದ ಪಯಣವನ್ನ ‘ಕನ್ನಡಪ್ರಭ’ಕ್ಕೆ ವಿವರಿಸಿದರು ಪಾವನ.ಕೊರೋನಾ ಕಳೆದ ನಂತರ ಕಪೆಕ್‌ನ ಮತ್ತೊರ್ವ ಯಶಸ್ವಿ ಉದ್ಯಮಿಯಾದ ನವೀನ್ ಅವರ ನೆರವಿನಿಂದ ಕಪೆಕ್ ಮತ್ತು ಪಿಎಂಎಫ್ಎಂಇ ಯೋಜನೆಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಿದ್ದಾರೆ. ಉದ್ಯಮ ವಿಸ್ತರಣೆಗಾಗಿ ಹಣ ಮಂಜೂರಾಗಿದೆ. ಜೊತೆಗೆ ರಾಜ್ಯ ಹಾಗೂ ರಾಷ್ಟ್ರೀಯ ಆಹಾರ ಮೇಳಗಳಲ್ಲಿ ಉಚಿತ ಮಳಿಗೆ ನೀಡಿ ಇವರ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯುವಂತೆ ಆಗಿದೆ. ಈ ಮೇಳಗಳಲ್ಲಿ ಭಾಗವಹಿಸಿದ್ದರಿಂದ ಆಹಾರ ಕಂಪನಿಗಳಿಗೆ ಸಗಟು ವ್ಯವಹಾರ ಸಿಕ್ಕಿದೆ ಎಂದು ಪಾವನ ಖುಷಿಯಿಂದ ಹೇಳಿಕೊಂಡಿದ್ದಾರೆ.
2 ಕೆಜಿಯಿಂದ 2 ಟನ್‌ವರೆಗೆ!ಮೊಳಕೆ ಕಾಳು, ಸಿರಿಧಾನ್ಯ, ದ್ವಿದಳ ಧಾನ್ಯವೇ ಇವರ ಎಲ್ಲ ಹೆಲ್ತ್ ಮಿಕ್ಸ್‌ಗಳು, ಆಹಾರಗಳ ಮೂಲ ವಸ್ತುವಾಗಿದೆ. ನಾಲ್ಕು ಬಗೆಯ ಹೆಲ್ತ್ ಮಿಕ್ಸ್‌ಗಳಿಂದ ಶುರುವಾದ ನ್ಯೂಟ್ರಿಯೋ ಈಗ 30ಕ್ಕೂ ಹೆಚ್ಚು ಬಗೆಯ ಆಹಾರ ಉತ್ಪನ್ನಗಳನ್ನು ಹೊಂದಿದೆ. www.nutriio.in ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಇವರ ಉತ್ಪನ್ನಗಳನ್ನು ನೋಡಬಹುದು. ನೇರವಾಗಿ ಅಲ್ಲಿಯೇ ಕೊಳ್ಳಲೂಬಹುದು.
‘ರೆಡಿ ಟು ಕುಕ್ ಆಹಾರವನ್ನೂ ಸಿದ್ಧಪಡಿಸುತ್ತಿದ್ದೇವೆ. ಬಾಳೆ ಕಂದಿನಿಂದ ಮಾಡಿದ ಇಡ್ಲಿ ಮತ್ತು ದೋಸೆ ಹಿಟ್ಟು ಕೂಡ ನಮ್ಮಲ್ಲಿದೆ. 2 ಕೆ.ಜಿ.ಯಿಂದ ಶುರುವಾದ ನ್ಯೂಟ್ರಿಯೋ ಇಂದು 2 ರಿಂದ 3 ಟನ್‌ವರೆಗೂ ಬೇಡಿಕೆ ಸೃಷ್ಟಿಸಿಕೊಂಡಿದೆ. ವಾರ್ಷಿಕ 20 ಲಕ್ಷ ರು. ಇರುವ ವಹಿವಾಟನ್ನು 1 ಕೋಟಿ ರು.ಗೆ ಏರಿಸುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ’ ಎನ್ನುತ್ತಾರೆ ಪಾವನ ಮತ್ತು ರಾಜಾ ದೀಪಕ್.
ಸಿಂಗಾಪುರ, ಕೆನಡಾದಲ್ಲೂ ಬೇಡಿಕೆ!‘ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್ ಶಾಪಿಂಗ್ ಅನ್ನು ಹೆಚ್ಚು ಬಳಸಿಕೊಂಡು ವ್ಯವಹಾರ ಬೆಳೆಸಿದ್ದೇವೆ. ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಬಹುತೇಕ ಆಹಾರ ಉತ್ಪನ್ನ ದೊರೆಯುವ ಎಲ್ಲ ಆನ್‌ಲೈನ್ ಅಂಗಡಿಯಲ್ಲಿ ನಮ್ಮ ಉತ್ಪನ್ನವಿದೆ. ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಪತಿ ರಾಜಾ ದೀಪಕ್ ಅವರೂ ಇದರಲ್ಲಿ ತೊಡಗಿಸಿಕೊಂಡು ನೆರವಿಗೆ ನಿಂತಿದ್ದಾರೆ. ಕೆನಡಾ ಮತ್ತು ಸಿಂಗಾಪುರದಲ್ಲೂ ನಮ್ಮ ಗ್ರಾಹಕರಿದ್ದಾರೆ. ಅಮೆರಿಕಾದಲ್ಲೂ ಮಾರಾಟ ಮಾಡಲು ಮಾತುಕತೆ ಜಾರಿಯಲ್ಲಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಪಾವನ.
ರೈತರಿಂದಲೇ ಖರೀದಿ, ಮಹಿಳೆಯರಿಗೂ ನೆರವು‘ಎಲ್ಲ ಕಾಳು, ಧಾನ್ಯಗಳನ್ನ ನೇರವಾಗಿ ಸ್ಥಳೀಯ ರೈತರಿಂದಲೇ ಖರೀದಿಸುತ್ತೇವೆ. ಆಸಕ್ತ ರೈತರಿಗೆ ತರಬೇತಿಯನ್ನೂ ನೀಡಿದ್ದೇನೆ. ನನ್ನಂತೆಯೇ ಹೊಸ ಪ್ರಯೋಗಕ್ಕೆ, ಉದ್ಯಮ ಆರಂಭಿಸಲು ಪರದಾಡುವ ಮಹಿಳೆಯರಿಗೂ ನೆರವಾಗುತ್ತಿದ್ದೇನೆ. ಮಹಿಳೆಯರು ಮನೆಯಲ್ಲೇ ಮಾಡಿ ತರುವ ವಸ್ತುಗಳ ಪ್ಯಾಕಿಂಗ್, ಬ್ರ್ಯಾಂಡಿಂಗ್ ಮಾಡಿಕೊಡುತ್ತೇನೆ. ನಮ್ಮಲ್ಲೇ ಎಲ್ಲ ರೆಡಿ ಮಾಡಿ ಅವರ ಬ್ರ್ಯಾಂಡಿಂಗ್ ಹಾಕಿ ಕೊಡುವ ಕೆಲಸವನ್ನೂ ಮಾಡುತ್ತಿದ್ದೇನೆ. ಖುಷಿ ಇದೆ’ ಎನ್ನುತ್ತಾರೆ ಯಶಸ್ವಿ ಉದ್ಯಮಿ ಪಾವನ.
15 ಲಕ್ಷ ರೂ. ಸಬ್ಸಿಡಿ ಪಡೆಯಿರಿಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.