ಸಾರಾಂಶ
ಭಾರತದ ಒಳಗೆ ನುಗ್ಗಿನಮ್ಮ ಪರ್ವತ ಶ್ರೇಣಿಗಳನ್ನು ವಶಕ್ಕೆ ಪಡೆದಿದ್ದ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ್ದು ಕಾರ್ಗಿಲ್ ಯುದ್ಧ
ಅದು ಮೇ 3ನೇ ತಾರೀಕು. ಭಾರತೀಯ ಸೇನಾ ಪಡೆಗಳಿಗೆ ಸ್ಥಳೀಯ ಕುರಿ ಕಾಯುವ ವ್ಯಕ್ತಿ ಆಘಾತಕಾರಿ ಸಂಗತಿಯನ್ನು ತಲುಪಿಸಿದ್ದ. ಲೈನ್ ಆಫ್ ಕಂಟ್ರೋಲ್ ಬಳಿಯ ಪರ್ವತ ಶ್ರೇಣಿಗಳಲ್ಲಿ ಯಾರೋ ಕೆಲವು ವ್ಯಕ್ತಿಗಳು ಇರುವ ಸುಳಿವು ನೀಡಿದ. ಅಷ್ಟಕ್ಕೂ ಭಾರತೀಯ ಸೇನೆ ಅಲ್ಲಿ ಪಹರೆ ಕಾಯಲು ಇನ್ನೂ ಹೋಗಿರಲಿಲ್ಲ. ಫೆಬ್ರವರಿಯಲ್ಲಿ ಹಿಮ ಬೀಳಲು ಆರಂಭವಾಗುತ್ತದೆ.
ಆಗ ಉಷ್ಣಾಂಶ ಮೈನಸ್ 48 ಡಿಗ್ರಿಗೆ ಕುಸಿಯುತ್ತದೆ. ಹೀಗಾಗಿ ಅಲ್ಲಿ ಪಹರೆ ಕಾಯುವುದು ಕಷ್ಟಾ ಕಷ್ಟ. ಆದ್ದರಿಂದ ಭಾರತೀಯ ಮತ್ತು ಪಾಕಿಸ್ತಾನದ ಸೇನೆಗಳು ತಮ್ಮ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡು ಮೇನಲ್ಲಿ ಹಿಮಪಾತ ಕಡಿಮೆ ಆದ ಬಳಿಕ ಪಹರೆಗೆ ಹೋಗುತ್ತಾರೆ. ಆದರೆ ಅದಕ್ಕೂ ಮೊದಲು ಅಲ್ಲಿ ಇರುವವರು ಯಾರು ಎನ್ನುವ ಅನುಮಾನ ಭಾರತೀಯ ಸೇನಾಧಿಕಾರಿಗಳಿಗೆ ಶುರುವಾಯಿತು. ಪಹರೆಗೆ ಹೋದ ಸೈನಿಕರ ಮೇಲೆ ಪಾಕಿಸ್ತಾನದ ಸೈನಿಕರು ಗುಂಡಿನ ದಾಳಿ ನಡೆಸಿದ್ದರು. ಅಲ್ಲಿಗೆ ಭಾರತೀಯ ಸೇನೆಗೆ ಸ್ಪಷ್ಟ ಸಂದೇಶ ಸಿಕ್ಕಿತು. ನಂಬಿಕೆಗೆ ಎಂದೂ ಅರ್ಹ ಅಲ್ಲದ ಪಾಕಿಗಳು ಭಾರತೀಯ ಪೋಸ್ಟ್‌ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು.
ಸೇನೆ ಅಲ್ಲಿಗೆ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರ ನೇತೃತ್ವದಲ್ಲಿ ಮೇ 15ರಂದು ಸೈನಿಕರಾದ ಅರ್ಜುನ್ ರಾಮ್, ಭನ್ವರ್ ಲಾಲ್ ಬಂಗಾರಿಯಾ, ಭೀಕ ರಾಮ್, ಮೂಲರಾಮ್, ನರೇಶ್ ಸಿಂಗ್‌ರನ್ನು ಪಹರೆಗೆ ಹೋಗಲು ನಿರ್ದೇಶಿಸಿತು. ಹಾಗೆ ಹೋದ ಸೈನಿಕರನ್ನು ಪಾಕಿಸ್ತಾನದ ಸೇನಾ ನೇತೃತ್ವದ ಉಗ್ರರು ವಶಕ್ಕೆ ಪಡೆದುಕೊಂಡರು. ಈ ವಿಷಯವನ್ನು ಅಲ್ಲಿನ ರೇಡಿಯೋದಲ್ಲಿ ತಿಳಿಸಲಾಯಿತು. ಈ ಸೈನಿಕರನ್ನು ಕೊಂದು ಹಾಕಿದ್ದ ಪಾಕ್, ಅವರ ದೇಹಗಳನ್ನು ಜೂ.7ರಂದು ಹಸ್ತಾಂತರಿಸಿತು. ಸೈನಿಕರ ದೇಹಗಳನ್ನು ಕಂಡ ಇಡೀ ವಿಶ್ವವೇ ಬೆಚ್ಚಿ ಬಿದ್ದಿತ್ತು. ಸೈನಿಕರನ್ನು ಅತ್ಯಂತ ವಿಕೃತ, ನಿರ್ದಯವಾಗಿ ಪಾಕ್ ನಡೆಸಿಕೊಂಡಿದ್ದಕ್ಕೆ ಸೈನಿಕರ ದೇಹದ ಮೇಲೆ ಇದ್ದ ಗುರುತುಗಳು ಸಾಕ್ಷಿ ಹೇಳುತ್ತಿದ್ದವು. ಸೈನಿಕರ ದೇಹವನ್ನು ಸಿಗರೆಟ್‌ನಿಂದ ಸುಡಲಾಗಿತ್ತು. ತುಟಿಗಳನ್ನು ಸೀಳಲಾಗಿತ್ತು. ಮೂಳೆಗಳನ್ನು ಮುರಿದು ಹಾಕಲಾಗಿತ್ತು. ಕಿವಿಗಳನ್ನು ಕಾದ ರಾಡ್‌ನಿಂದ ಇರಿಯಲಾಗಿತ್ತು.
ಸೈನಿಕರ ಕೆಚ್ಚೆದೆಯ ಹೋರಾಟ: ಆಗ ಕಾರ್ಗಿಲ್, ಲಡಾಕ್ ಜಿಲ್ಲೆಯ ತಾಲೂಕು ಅಗಿತ್ತು. ಕಾಶ್ಮೀರದಿಂದ 200 ಕಿ.ಮೀ. ದೂರದಲ್ಲಿ ಇರುವ ಕಾರ್ಗಿಲ್ ಮೂಲಕ ರಾಷ್ಟ್ರೀಯ ಹೆದ್ದಾರಿ 1 ಹಾದು ಹೋಗುತ್ತಿತ್ತು. ಪರ್ವತದ ಮೇಲಿಂದ ಈ ರಸ್ತೆಯಲ್ಲಿನ ಚಲನವಲನ ಸ್ಪಷ್ಟವಾಗಿ ಗೋಚರಿಸುತಿತ್ತು. ಇದನ್ನು ಪಾಕ್ ವಶಕ್ಕೆ ಪಡೆದರೆ ಭಾರತಕ್ಕೆ ಲಡಾಕ್‌ನೊಂದಿಗೆ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇತ್ತ ಭಾರತೀಯ ಸೇನೆ ತನ್ನ ಪೋಸ್ಟ್‌ಗಳನ್ನು ವಶಕ್ಕೆ ಪಡೆಯಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿತ್ತು. ಅದನ್ನು ಪಾಕಿಸ್ತಾನ ಸುಟ್ಟು ಭಸ್ಮ ಮಾಡಿತ್ತು. ಅಲ್ಲದೆ ಕಾಶ್ಮೀರದ ಗಡಿಯಲ್ಲಿ ನಿರಂತವಾಗಿ ಗುಂಡಿನ ದಾಳಿ ಮಾಡಲು ಆರಂಭಿಸಿತ್ತು.
ಮೇ 24ರಂದು ಭಾರತೀಯ ಸೇನೆಯು ತನ್ನ ವಾಯು ದಳವನ್ನು ಬಳಸಲು ನಿರ್ಧರಿಸಿತ್ತು. ಬಾಂಬಿಂಗ್‌ಗಾಗಿ ಹೋದ ಮಿಗ್ 21 ಅನ್ನು ಪಾಕ್ ಹೊಡೆದುರಳಿಸಿತು. ಅಲ್ಲದೆ ಮಿಗ್ 27 ವಿಮಾನವನ್ನು ಪಾಕ್ ವಶಕ್ಕೆ ಪಡೆದು ಯುದ್ಧ ಕೈದಿ ಎಂದು ಘೋಷಿಸಿತು. ಕಾರ್ಗಿಲ್‌ನಲ್ಲಿ ಶತ್ರು ಕುಳಿತಿದ್ದಾನೆ ಎಂದು ಭಾರತೀಯ ಸೇನೆಗೆ ತಿಳಿದು ಬರೋಬ್ಬರಿ 20 ದಿನಗಳು ಕಳೆದಿತ್ತು. ಆದರೆ ಭಾರತಕ್ಕೆ ಸಣ್ಣ ಜಾಗವನ್ನೂ ವಶಕ್ಕೆ ಪಡೆಯಲು ಸಾಧ್ಯವೇ ಆಗಿಲಿಲ್ಲ. ಭಾರತ ಇನ್ನೇನ್ನಿದ್ದರೂ ಪಾಕಿಸ್ತಾನದ ಮುಂದೆ ಮಂಡಿ ಊರಬೇಕಾಗುತ್ತದೆ ಎಂದು ವಿದೇಶಿ ಮಾಧ್ಯಮಗಳು ವಿಮರ್ಶೆ ಮಾಡಲು ಆರಂಭಿಸಿದ್ದವು. ವಿಶ್ವದಲ್ಲೇ ಬಲಿಷ್ಠ ಸೇನೆ ಹೊಂದಿರುವ ಭಾರತಕ್ಕೆ ಕಠಿಣ ಸವಾಲು ಒಡ್ಡಿದ ದಿನಗಳವು. ಸಣ್ಣ ಸಣ್ಣ ಪರ್ವತಗಳನ್ನು ಭಾರತೀಯ ಸೇನೆಯ ಕೆಚ್ಚೆದೆ ಸೈನಿಕರು ಒಂದೊಂದಾಗಿಯೇ ವಶಕ್ಕೆ ಪಡೆಯಲು ಆರಂಭಿಸಿದ್ದರು.
ಇತ್ತ ಹಲವು ಉಗ್ರರನ್ನು ಸೆದೆ ಬಡಿದು ಹೆಸರು ಮಾಡಿದ್ದ ಕ್ಯಾಪ್ಟನ್ ವಿಕ್ರಮ ಭಾತ್ರಾ ಅವರ ನೇತೃತ್ವದಲ್ಲಿ 5140 ಪಾಯಿಂಟ್‌ಅನ್ನು ವಶಕ್ಕೆ ಪಡೆಯಲು ತುಕಡಿಯನ್ನು ಕಳುಹಿಸಿತು. ಪಾಯಿಂಟ್ 4875ನಲ್ಲಿ ಪಾಕಿಸ್ತಾನದ ಸೈನಿಕರು ನಮ್ಮವರ ಮೇಲೆ ಗುಂಡಿನ ಮಳೆಗರೆದರು. ವಿರೋಚಿತ ಹೋರಾಟದಲ್ಲಿ ಕನ್ನಡಿಗರೇ ಆದ ಕ್ಯಾಪ್ಟನ್ ನಾಗಪ್ಪ ಅವರು ಗ್ರೆನೇಡ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡರು. ಇವರ ರಕ್ಷಣೆಗೆ ಬಂದ ವಿಕ್ರಮ್ ಭಾತ್ರಾ ಅವರು ಪಾಕಿಗಳ ಗುಂಡಿನಿಂದ ಗಾಯಗೊಂಡು ವೀರ ಮರಣನ್ನಪ್ಪಿದರು. ಆದರೆ ಟೈಗರ್ ಮತ್ತು ಪಾಯಿಂಟ್ 4875 ವಶಕ್ಕೆ ಪಡೆಯುವ ಮೂಲಕ ಭಾರತೀಯ ಸೇನೆ ಗೆಲುವು ಸಾಧಿಸಿತ್ತು. ಇದಾದ ಬಳಿಕ ಟೊಲೊಲಿಂಗ್ ಪರ್ವತವನ್ನೂ ವಶಕ್ಕೆ ಪಡೆದ ಸೇನೆ ವಿದೇಶಿ ಮಾಧ್ಯಮಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು.
ಭಾರತೀಯ ಸೇನೆಯ ತಾಕತ್ತು ಏನು ಎಂದು ತೋರಿಸಿಕೊಟ್ಟರು. ಅಲ್ಲಿಂದ ಭಾರತ ಸಾಧಿಸಿದ ವಿಜಯ ಪಾಕಿಸ್ತಾನ ಮಿಲಿಟರಿ ಪ್ರಾಯೋಜಿತ ಉಗ್ರರು ಒಂದೊಂದೇ ಸ್ಥಳಗಳನ್ನು ಬಿಟ್ಟು ಹೋಗದೆ ವಿಧಿಯೇ ಇರಲಿಲ್ಲ. ದೇಶಕ್ಕಾಗಿ ಹೋರಾಡಿದ ಭಾರತೀಯ ಸೈನಿಕರು ಪರ್ವತದ ಕೆಳ ಹಂತದಲ್ಲಿ ಇದ್ದು, ಶತ್ರುಗಳ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ಮದ್ದು ಗುಂಡುಗಳನ್ನು ಬೆನ್ನ ಮೇಲೆ ಹೊತ್ತು ಬೆಟ್ಟಗಳನ್ನು ಹತ್ತುವುದು ಸೇರಿದಂತೆ ಹಲವು ಅನಾನುಕೂಲಗಳ ನಡುವೆ ಗೆಲ್ಲುವುದು ಹೇಗೆ ಎಂಬುದನ್ನು ವಿಶ್ವಕ್ಕೆ ಪ್ರದರ್ಶಿಸಿದರು. ಪಾಕಿಸ್ತಾನ ಕುತಂತ್ರದಿಂದ ವಶಕ್ಕೆ ಪಡೆದಿದ್ದ ಎಲ್ಲ ಪ್ರದೇಶಗಳನ್ನು ಗೆಲ್ಲುವ ಮೂಲಕ ಪಾಕಿಸ್ತಾನಕ್ಕೆ ಮತ್ತೆ ಸೋಲಿನ ರುಚಿ ತೋರಿಸಿತು. 1999ರ ಮೇ 3ರಂದು ಶುರುವಾದ ಯುದ್ಧ ಜುಲೈ 26ಕ್ಕೆ ಮುಕ್ತಾಯವಾಯಿತು. ಪಾಕಿಸ್ತಾನ ಕೊನೆ ಕೊನೆಗೆ ಭಾರತೀಯ ಗುಂಡಿಗೆ ಬಲಿಯಾದ ತನ್ನ ಸೈನಿಕರ ಮೃತ ದೇಹವನ್ನೂ ತೆಗೆದುಕೊಂಡು ಹೋಗಲು ಹಿಂಜರಿಯಿತು. ಅವರನ್ನು ಭಾರತವೇ ಅವರ ಧರ್ಮದ ಅನುಸಾರ ಅಂತ್ಯ ಸಂಸ್ಕಾರ ಮಾಡಿತು. ಈ ಮೂಲಕ ಸೈನಿಕ ಧರ್ಮ ಎಂದರೇನು ಎಂಬುದನ್ನು ಸ್ಪಷ್ಟವಾಗಿ ತನ್ನ ನಡುವಳಿಕೆಯಲ್ಲಿಯೇ ತೋರಿಸಿತು. ಕಾರ್ಗಿಲ್ ಯುದ್ಧದಲ್ಲಿ 527 ವೀರ ಪುತ್ರರನ್ನು ಭಾರತ ಕಳೆದುಕೊಂಡಿತು. ಶತ್ರುಗಳನ್ನು ಹುಟ್ಟಡಗಿಸಿ ದಿಟ್ಟತನ ತೋರಿದ ಸೈನಿಕರಿಗೆ ಸಲಾಂ.
ಭಾರತದ ಉದಾರ ನೀತಿಗೆ ಪಾಕ್ ಇರಿತ: ಭಾರತದ ಅಂದಿನ ಪ್ರಧಾನಿ ದಿವಂಗತ ವಾಜಪೇಯಿ ಅವರು ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗೆ ಮುಂದಾಗಿದ್ದರು. ಅದರ ಭಾಗವಾಗಿ ಪಾಕಿಸ್ತಾನದ ಲಾಹೋರ್‌ಗೆ ಬಸ್‌ನಲ್ಲಿ ಹೋಗಿ ಬಂದಿದ್ದರು. ಈ ಮೂಲಕ ಪಾಕಿಸ್ತಾನ ಹುಟ್ಟಿದಾಗಿನಿಂದ ದ್ವೇಷ ಸಾಧಿಸುತ್ತಿದ್ದ ಪಾಕಿಸ್ತಾನದೊಂದಿಗೆ ಇನ್ನು ಸುಧಾರಣೆ ಸಾಧ್ಯವಾಗುತ್ತದೆ ಎನ್ನುವ ಆಶಾಭಾವ ಮೂಡಿಸಿದರು. ಇತ್ತ ಪಾಕಿಸ್ತಾನ ಒಳಗೊಳಗೇ ತಂತ್ರ ಹೆಣೆದು ಕಾರ್ಗಿಲ್‌ನಲ್ಲಿ ಭಾರತಕ್ಕೆ ಶಾಕ್ ನೀಡಿತ್ತು. ಭಾರತದೊಂದಿಗೆ ನಡೆದ ಯಾವುದೇ ಯುದ್ಧ ಗೆದ್ದ ಇತಿಹಾಸವೇ ಇಲ್ಲದ ಪಾಕಿಸ್ತಾನಕ್ಕೆ ಮತ್ತೆ ಭಾರತೀಯ ಸೈನಿಕರು ಸೋಲಿನ ರುಚಿ ತೋರಿಸಿದರು. ಕಾರ್ಗಿಲ್ ಕರಾಳ ದಿನಗಳು ಮುಗಿದು 26 ವರ್ಷಗಳೇ ಅಗಿವೆ. ಆದರೆ ಕಳೆದುಕೊಂಡ ಸೈನಿಕರ ವಿರೋಚಿತ ಕಥೆ ಎಂದಿಗೂ ಮುಗಿಯುವುದಿಲ್ಲ. ಅವರ ಹೋರಾಟ, ಧೈರ್ಯ, ಶೌರ್ಯ ಭಾರತೀಯರ ಮನಗಳಲ್ಲಿ, ವಿಶ್ವ ಯುದ್ಧದ ಕಥೆಗಳಲ್ಲಿ ಶಾಶ್ವತ ಸ್ಥಾನ ಪಡೆದಿದೆ.