ಕನ್ನಡಪ್ರಭ ವಾರ್ತೆ ಬೆಂಗಳೂರುಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ನಗರದ ವಿವಿಧೆಡೆ ಪಾದಚಾರಿ ನಡಿಗೆ, ಸೈಕ್ಲಿಂಗ್, ಸಾಧಕಿಯರಿಗೆ ಸನ್ಮಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಹಿಳಾ ದಿನವನ್ನು ಸಂಭ್ರಮ, ಸಡಗರದೊಂದಿಗೆ ಆಚರಿಸಲಾಯಿತು.

ಉತ್ತರ ನಗರ ಪಾಲಿಕೆಯಿಂದ ಯಲಹಂಕ ಕೆರೆಯ ಬಳಿ 6 ಕಿ.ಮೀ ಪಾದಚಾರಿ ನಡಿಗೆಯನ್ನು ಆಯೋಜಿಸಲಾಗಿತ್ತು. ಆಯುಕ್ತ ಪಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ನಡೆದ ನಡಿಗೆಯಲ್ಲಿ ಮಹಿಳೆಯರು ಸೇರಿದಂತೆ 250ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ನಡಿಗೆ ವೇಳೆ ಎದುರಾದ ಅಡೆತಡೆಗಳನ್ನು ಸಾರ್ವಜನಿಕರೇ ಫೋಟೋ ಕ್ಲಿಕ್ಕಿಸಿಕೊಂಡು ದೂರು ಸಲ್ಲಿಸಿದರು.ಈ ವೇಳೆ ಮಾತನಾಡಿದ ಆಯುಕ್ತರು, ಎಲ್ಲಾ ವಾರ್ಡ್ ಪ್ರದೇಶಗಳನ್ನು ಸ್ವಚ್ಛವಾಗಿರಿಸುವುದು ನಮ್ಮ ಗುರಿ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಒಂದೇ ದಿನದಲ್ಲಿ 72 ಸ್ಥಳಗಳನ್ನು ಸ್ವಚ್ಛ ಮಾಡಿದ್ದೇವೆ. ಸ್ವಚ್ಛತೆಗಾಗಿ ಪ್ರತಿದಿನ ನಮ್ಮ ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ. ಎಲ್ಲೆಂದರಲ್ಲೇ ಕಸ ಬಿಸಾಡುವವರ ವಿರುದ್ಧ ದಂಡ ವಿಧಿಸುವುದಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಜನಸ್ನೇಹಿ ಪಾದಚಾರಿ ಮಾರ್ಗಕ್ಕಾಗಿ ಈವರೆಗೆ 122.68 ಕಿ.ಮೀ ಪಾದಚಾರಿ ನಡಿಗೆ ಮಾಡಲಾಗಿದೆ ಎಂದು ತಿಳಿಸಿದರು.

ಒರಾಯನ್ ಮಾಲ್‌ನಲ್ಲಿ ಸಿಸ್ಟ್ರಾ ರನ್:

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಒರಾಯನ್ ಮಾಲ್‌ನಲ್ಲಿ ಬೆಂಗಳೂರಿನ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.

''''''''ಸಿಸ್ಟರ್ ಇನ್ ಸ್ವೆಟ್'''''''' ಮತ್ತು ಒರಾಯನ್ ಮಾಲ್, ಮೆರಾಕಿ ಸ್ಪೋರ್ಟ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಸಹಯೋಗದೊಂದಿಗೆ ಆಯೋಜಿಸಿದ್ದ ''''''''ಸಿಸ್ಟ್ರಾ ರನ್'''''''' ನೊಂದಿಗೆ ಈ ಸಂಭ್ರಮಾಚರಣೆ ಪ್ರಾರಂಭವಾಯಿತು. ಈ ಓಟದಲ್ಲಿ 2.5 ಕಿ.ಮೀ, 5 ಕಿ.ಮೀ ಮತ್ತು 10 ಕಿ.ಮೀ ವಿಭಾಗಗಳಲ್ಲಿ ಸುಮಾರು 1,200 ಮಹಿಳೆಯರು ಭಾಗವಹಿಸಿದ್ದರು. ನಂತರ, ಪ್ರಮುಖ ಆರ್‌.ಜೆಗಳು, ಫ್ಯಾಷನ್ ಐಕಾನ್‌ಗಳು, ಲೈಫ್‌ ಸ್ಟೈಲ್ ಮತ್ತು ಫುಡ್ ಬ್ಲಾಗರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳ 25 ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಜಿಲ್ಲಾಡಳಿತದಿಂದ ಸೈಕ್ಲಿಂಗ್:


ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಯುವ ಸಬಲೀಕರಣ ಇಲಾಖೆ ಹಾಗೂ ವಿವಿಧ ಸ್ಕೈಲಿಂಗ್ ಕ್ಲಬ್‌ಗಳ ಸಹಯೋಗದಲ್ಲಿ ನಡೆದ ಸೈಕ್ಲಿಂಗ್‌ನಲ್ಲಿ 250 ಮಹಿಳೆಯರು ಭಾಗವಹಿಸಿದ್ದರು.