ಈಗಿನ ಬಾಹ್ಯಾಕಾಶ ಕೇಂದ್ರವು 25 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ನಿವೃತ್ತಿಗೆ ಹತ್ತಿರವಾಗುತ್ತಿದೆ. ಇದರಲ್ಲೇ ನಾವು ಕೆಲ ಸಣ್ಣಪುಟ್ಟ ಸುಧಾರಣೆಗಳನ್ನು ಮಾಡಿಕೊಂಡಿದ್ದೇವೆ. ಆದರೆ ಅಗತ್ಯವಿರುವ ಎಲ್ಲಾ ಸುಧಾರಣೆಗಳನ್ನು ಇದರಲ್ಲಿ ಮಾಡಲಾಗದು.

 ಸುನಿತಾ ವಿಲಿಯಮ್ಸ್‌

ಗಗನಯಾತ್ರಿ

ಈಗಿನ ಬಾಹ್ಯಾಕಾಶ ಕೇಂದ್ರವು 25 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ನಿವೃತ್ತಿಗೆ ಹತ್ತಿರವಾಗುತ್ತಿದೆ. ಇದರಲ್ಲೇ ನಾವು ಕೆಲ ಸಣ್ಣಪುಟ್ಟ ಸುಧಾರಣೆಗಳನ್ನು ಮಾಡಿಕೊಂಡಿದ್ದೇವೆ. ಆದರೆ ಅಗತ್ಯವಿರುವ ಎಲ್ಲಾ ಸುಧಾರಣೆಗಳನ್ನು ಇದರಲ್ಲಿ ಮಾಡಲಾಗದು.

ಸಾಮಾನ್ಯವಾಗಿ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಪ್ರಶ್ನೆ ಮೂಡಿದಾಗ, ತಕ್ಷಣವೇ ಫೋನ್ ತೆಗೆದು ಉತ್ತರ ಕಂಡುಕೊಳ್ಳುತ್ತೀರಿ. ಆದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಇದು ಅಷ್ಟು ಸುಲಭವಲ್ಲ. ಅಲ್ಲಿ, ಕೇಳಿದ ಕೂಡಲೆ ಉತ್ತರ ಕೊಡಲು ನಮ್ಮ ಬಳಿ ಡೇಟಾಬೇಸ್ ಇರುವುದಿಲ್ಲ. ಹಾಗಾಗಿ ನಾವು ಅಂಥ ಸಂದರ್ಭಗಳಲ್ಲಿ ಭೂಮಿಯೊಂದಿಗಿನ ಸಂವಹನವನ್ನೇ ಅವಲಂಬಿಸಬೇಕಾಗುತ್ತದೆ. ನಾವು ಭೂಮಿಯಿಂದ ದೂರ ದೂರ ಹೋದಂತೆಲ್ಲ, ಅಲ್ಲಿಂದ ಉತ್ತರ ಸಿಗುವುದು ತಡವಾಗುತ್ತಾ ಹೋಗುತ್ತದೆ. ಅಂತೆಯೇ, ನಾವೇನಾದರೂ ಒಂದು ಪ್ರಯೋಗ ಮಾಡಿದರೆ, ವಿಶ್ಲೇಷಣೆಗೆ ಅದನ್ನು ಪ್ರತಿ ಬಾರಿ ಭೂಮಿಗೆ ಕಳಿಸಬೇಕಾಗುತ್ತದೆ.

ಒಂದುವೇಳೆ ಐಎಸ್‌ಎಸ್‌ನಲ್ಲೇ ಡೇಟಾಬೇಸ್‌ ಲಭ್ಯವಿದ್ದರೆ, ಏನಾದರೂ ಸಮಸ್ಯೆಯಾದಾಗ ದೂರದ ಭೂಮಿಯನ್ನು ಸಂಪರ್ಕಿಸುವ ಬದಲು ನಾವೇ ಅದನ್ನು ಸರಿ ಮಾಡಿಕೊಳ್ಳಬಹುದು. ಜತೆಗೆ ಪ್ರಯೋಗಗಳ ಪರೀಕ್ಷೆಯನ್ನೂ ಸುಲಭವಾಗಿ ಅಲ್ಲೇ ಮಾಡಬಹುದು. ಭವಿಷ್ಯದ ಬಾಹ್ಯಾಕಾಶ ನಿಲ್ದಾಣಗಳಲ್ಲಿ ಅಂತಹ ಡೇಟಾಬೇಸ್‌ಗಳು ಇರುವಂತೆ ತಂತ್ರಜ್ಞಾನ ಮಾಡುತ್ತದೆ ಎಂದು ಆಶಿಸುತ್ತೇನೆ.

3ಡಿ ಪ್ರಿಂಟಿಂಗ್‌ ಸವಾಲು:

ಬಾಹ್ಯಾಕಾಶದಲ್ಲಿ 3ಡಿ ಪ್ರಿಂಟಿಂಗ್‌ ಬಹುದೊಡ್ಡ ಸವಾಲಾಗಿರುತ್ತದೆ. ಅಲ್ಲಿ ಕಾಗದದ ಮೇಲೆ ಏನನ್ನಾದರೂ ಮುದ್ರಿಸುವುದು ಅತಿ ಕಷ್ಟದ ಕೆಲಸ. ಇದನ್ನು ಎಲ್ಲಾ ಗಗನಯಾನಿಗಳು ಅನುಭವಿಸಿಯೇ ಇರುತ್ತಾರೆ. ಕಾರಣ, ಆ ಉಪಕರಣಗಳು ಗುರುತ್ವಾಕರ್ಷಣೆಯ ಮೇಲೆ ಅವಲಂಬಿತವಾಗಿರುತ್ತವೆ ಹಾಗೂ ಅಂತರಿಕ್ಷದಲ್ಲಿ ಗ್ರಾವಿಟಿ ಇರದು. ಆದ್ದರಿಂದ, ಮುಂದೆ ಗುರುತ್ವಾಕರ್ಷಣೆಯ ಅಗತ್ಯವಿಲ್ಲದಂತಹ 3ಡಿ ಪ್ರಿಂಟರ್‌ಗಳ ಅಭಿವೃದ್ಧಿ ಅಗತ್ಯವಿದೆ.

ಹೊಸ ಐಎಸ್‌ಎಸ್‌ ಹೇಗಿರಬೇಕು?:

ಈಗಿನ ಬಾಹ್ಯಾಕಾಶ ಕೇಂದ್ರವು 25 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ನಿವೃತ್ತಿಗೆ ಹತ್ತಿರವಾಗುತ್ತಿದೆ. ಇದರಲ್ಲೇ ನಾವು ಕೆಲ ಸಣ್ಣಪುಟ್ಟ ಸುಧಾರಣೆಗಳನ್ನು ಮಾಡಿಕೊಂಡಿದ್ದೇವೆ. ಆದರೆ ಅಗತ್ಯವಿರುವ ಎಲ್ಲಾ ಸುಧಾರಣೆಗಳನ್ನು ಇದರಲ್ಲಿ ಮಾಡಲಾಗದು. ಈ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯು ಅಮೆರಿಕದ ಬಾಹ್ಯಾಕಾಶ ಪರಿಶೋಧನೆಯ ಗುರಿಗಳನ್ನು ಸಾಧಿಸಲು ನೆರವಾಗದ ಹೊರತು, ಅವುಗಳಿಗಾಗಿ ಹಣ ಮತ್ತು ಸಂಪನ್ಮೂಲಗಳನ್ನು ವ್ಯಯಿಸಲು ಅಮೆರಿಕ ಸರ್ಕಾರ ಬಯಸದಿರಬಹುದು. ಒಂದು ರೀತಿಯಲ್ಲಿ, ಕಟ್ಟುನಿಟ್ಟಾದ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಹೊಂದಿರುವುದು ಒಳ್ಳೆಯದು. ಏಕೆಂದರೆ ಅವು ಬಾಹ್ಯಾಕಾಶ ನಿಲ್ದಾಣವನ್ನು ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿರಿಸಲು ಸಹಾಯ ಮಾಡುತ್ತವೆ. ಆದರೆ ವರ್ಷ ಕಳೆದಂತೆ ಐಎಸ್‌ಎಸ್‌ನಲ್ಲಿ ಕೆಲಸ ಹೆಚ್ಚಿದೆ.

ಆದ್ದರಿಂದ ಭವಿಷ್ಯದಲ್ಲಿ ಬಾಹ್ಯಾಕಾಶ ನಿಲ್ದಾಣಗಳನ್ನು ನಿರ್ಮಿಸಿದಾಗ, ಗಗನಯಾತ್ರಿಗಳು ಭೂ-ನಿಯಂತ್ರಣ ಕೇಂದ್ರವನ್ನು ಅವಲಂಬಿಸುವ ಬದಲು ಸ್ವತಃ ವಿಶ್ಲೇಷಣೆ ನಡೆಸಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿರುವಂತೆ ವ್ಯವಸ್ಥೆ ಮಾಡಬೇಕು.

ಭಾರತ ಸಾಹಸಕ್ಕೆ ಸಿದ್ಧ:

ಭಾರತವು ಭವಿಷ್ಯಕ್ಕಾಗಿ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸಲು ಸಿದ್ಧವಾಗಿದೆ. ಇದು ಸುಲಭದ ಕೆಲಸ ಅಲ್ಲದೆ ಇರಬಹುದು. ಆದರೆ ಭಾರತವು ಎಲ್ಲಾ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ ಹಾಗೂ ಅಲ್ಲಿರುವ ಬುದ್ಧಿವಂತರು ಇದನ್ನು ಮಾಡಿ ತೋರಿಸುತ್ತಾರೆ.

ಬಾಹ್ಯಾಕಾಶ ಸಹಕಾರ ಮುಖ್ಯ:

ನಾವು ಒಂದು ದೇಶಕ್ಕೆ ಸೇರಿದವರು ಎಂದು ಯೋಚಿಸುವ ಬದಲು, ಮಾನವಕುಲದ ಪ್ರತಿನಿಧಿಗಳಾಗಿ ಚಂದ್ರನ ಅಂಗಳಕ್ಕೆ ಹಾಗೂ ಬಾಹ್ಯಾಕಾಶದ ಆಳಕ್ಕೆ ತೆರಳುವಂತಹ ಕಾರ್ಯಾಚರಣೆಗಳಿಗೆ ಅಂತಾರಾಷ್ಟ್ರೀಯ ಸಹಕಾರ ಅತ್ಯಗತ್ಯವಾಗಿದೆ. ಇದು, ವಿವಿಧ ಮಾಡ್ಯೂಲ್‌ಗಳು, ಬಾಹ್ಯಾಕಾಶ ಉಡುಪುಗಳು ಮತ್ತು ಪ್ರಯೋಗಗಳನ್ನು ಹೋಲಿಸಲು ಹಾಗೂ ಅವುಗಳ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಜತೆಗೆ, ಅನ್ಯ ರಾಷ್ಟ್ರದವರು ಹೇಗೆ ಯೋಚನೆ ಮಾಡುತ್ತಾರೆ ಹಾಗೂ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬುದನ್ನೂ ತಿಳಿದುಕೊಳ್ಳಬಹುದು. ಇದೇ ಕಾರಣಕ್ಕೆ ನನಗೆ ಬಾಹ್ಯಾಕಾಶ ಕೇಂದ್ರ ಇಷ್ಟವಾಗುತ್ತದೆ.

ಭೂಮಿಯ ಕೆಳಕಕ್ಷೆಯನ್ನು ಬಿಟ್ಟು ನಾವು ಮೇಲೆ ಹಾರಿದಂತೆಲ್ಲಾ, ಆ ಮೊದಲು ಊಹಿಸಿಕೊಂಡಿರದ ಸಮಸ್ಯೆಗಳೆಲ್ಲಾ ಉದ್ಭವಿಸುತ್ತವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಲು, ಎಲ್ಲರ ಅನುಭವಗಳನ್ನು ಕೇಳಿ ತಿಳಿದುಕೊಂಡಿರುವುದು ಮುಖ್ಯವಾಗುತ್ತದೆ.

ರೋಬೋಟ್‌ ಜತೆ ಕೆಲಸ:

ಮನುಷ್ಯರು, ತಂತ್ರಜ್ಞಾನ ಮತ್ತು ರೋಬೊಟಿಕ್ಸ್ ಒಟ್ಟಾಗಿ ಕೆಲಸ ಮಾಡಬೇಕಿದೆ. ನಾನು ಮೂಲತಃ ಹೆಲಿಕಾಪ್ಟರ್ ಪೈಲಟ್ ಆಗಿದ್ದಾಕೆ. ಚಂದ್ರ ಅಥವಾ ಮಂಗಳ ಗ್ರಹಕ್ಕೆ ನಾವು ರೋಬೊಟ್‌ಗಳನ್ನು ಕಳುಹಿಸುವಾಗ, ಅವು ನಮಗಾಗಿ ಇಳಿಯಲು ಸೂಕ್ತವಾದ ಸ್ಥಳವನ್ನು ಹುಡುಕುತ್ತವೆ. ಅಲ್ಲಿಗೆ ತೆರಳಿ, ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ಅಲ್ಲಿನ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಅವು ನಮ್ಮ ರಕ್ಷಣೆಯ ಅಥವಾ ಪರಿಶೋಧನೆಯ ಮೊದಲ ಹಂತವಾಗಿ ಕಾರ್ಯನಿರ್ವಹಿಸುತ್ತವೆ. ಕೃತಕ ಬುದ್ಧಿಮತ್ತೆ (ಎಐ) ಕೂಡ ನಮಗೆ ಸಹಾಯ ಮಾಡುತ್ತದೆ ನಿಜ. ಆದರೆ ನಿರ್ಧಾರ ತೆಗೆದುಕೊಳ್ಳಲು ಮತ್ತು ಮುಂದಿನ ಹಂತಗಳನ್ನು ನಿರ್ಧರಿಸಲು ಒಬ್ಬ ಮನುಷ್ಯನ ಉಪಸ್ಥಿತಿ ಇರಲೇಬೇಕು. ನಾವು ಬಾಹ್ಯಾಕಾಶದ ಆಳಕ್ಕೆ ಪ್ರಯಾಣಿಸುತ್ತಾ ಹೊಸ ಪ್ರದೇಶಗಳನ್ನು ಅನ್ವೇಷಿಸುತ್ತಿರುವಾಗ, ತಂತ್ರಜ್ಞಾನ, ರೋಬೊಟಿಕ್ಸ್ ಮತ್ತು ಮನುಷ್ಯರ ನಡುವೆ ಒಂದು ಉತ್ತಮವಾದ ಪರಸ್ಪರ ಪೂರಕ ಸಂಬಂಧ ಬೆಳೆಯುತ್ತದೆ.

ಮೇಲಿಂದ ನೋಡಿದಾಗ..:

ಬಾಹ್ಯಾಕಾಶದಿಂದ ಕೆಳಗಿಣುಕಿ ನೋಡಿದಾಗ ನನಗೆ ಶಿಕ್ಷಕರು ಹೇಳಿದ ಪಾಠ ನೆನಪಾಗುತ್ತದೆ. ಭೂಮಿ ಸಮತಟ್ಟಾಗಿಲ್ಲ, ಬದಲಿಗೆ ಗುಂಡಾಗಿದೆ ಎಂಬುದರ ಅರಿವಾಗುತ್ತದೆ. ಆ ಕ್ಷಣ ನನ್ನ ಮನಸ್ಸಿನಲ್ಲಿ ಬಂದಿದ್ದಿಷ್ಟೇ, ನನಗೆ ಪರಿಚಯವಿರುವ ಪ್ರತಿಯೊಬ್ಬರೂ, ಪ್ರತಿಯೊಂದು ಸಸ್ಯ ಮತ್ತು ಪ್ರತಿಯೊಂದು ಪ್ರಾಣಿಯೂ ಇಲ್ಲೇ ಇವೆ. ಇದೇ ನಮ್ಮ ಮನೆ ಮತ್ತು ನಾವು ಇದನ್ನು ರಕ್ಷಿಸಬೇಕು. ನಾನು ಅಮೆರಿಕನ್ ಎಂಬ ವಿಷಯವಾಗಲಿ ಅಥವಾ ನನ್ನ ತಂದೆ ಭಾರತದವರು ಮತ್ತು ತಾಯಿ ಸ್ಲೊವೇನಿಯಾದವರು ಎಂಬ ವಿಷಯವಾಗಲಿ ನನ್ನ ಮನಸ್ಸಿಗೆ ಬಂದಿರಲಿಲ್ಲ. ನಾವೆಲ್ಲರೂ ಒಂದೇ ಗ್ರಹದಲ್ಲಿದ್ದೇವೆ. ಹೀಗಿರುವಾಗ ನಮ್ಮ ನಡುವೆ ಭಿನ್ನತೆಗಳಿರುವುದು ವಿಚಿತ್ರವೆನಿಸುತ್ತದೆ.