ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಕುತೂಹಲ ಬೆಳೆಸುವ ಜತೆಗೆ ಅವರನ್ನು ಬಾಹ್ಯಾಕಾಶ ವಿಜ್ಞಾನದತ್ತ ಪ್ರೇರೇಪಿಸುವ ಹಿಮಾಲಯನ್ ಸ್ಪೇಸ್ ಸೆಂಟರ್‌ನ ನಿರಂತರ ಪ್ರಯತ್ನಗಳು ಶ್ಲಾಘನೀಯವಾಗಿವೆ.
ಹುಬ್ಬಳ್ಳಿ:
ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಕುತೂಹಲ ಬೆಳೆಸುವ ಜತೆಗೆ ಅವರನ್ನು ಬಾಹ್ಯಾಕಾಶ ವಿಜ್ಞಾನದತ್ತ ಪ್ರೇರೇಪಿಸುವ ಹಿಮಾಲಯನ್ ಸ್ಪೇಸ್ ಸೆಂಟರ್‌ನ ನಿರಂತರ ಪ್ರಯತ್ನಗಳು ಶ್ಲಾಘನೀಯವಾಗಿವೆ ಎಂದು ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ್ ಹೇಳಿದರು.ನಗರದ ಗೋಕುಲ ರಸ್ತೆಯ ಹೆಬ್ಸೂರ ಭವನದಲ್ಲಿ ಈಚೆಗೆ ಹಿಮಾಲಯನ್ ಸ್ಪೇಸ್ ಸೆಂಟರ್ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನ-2026ರ ಅಂತರ್‌ಶಾಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ 16 ಶಾಲೆಗಳ ಸುಮಾರು 550 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಪ್ರಾಥಮಿಕ ಹಂತದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಅಂತಿಮ ಹಂತದಲ್ಲಿ ಐದು ವಿಭಾಗಗಳಲ್ಲಿ ಸ್ಪರ್ಧಿಸಿದರು. ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಫ್ಯಾನ್ಸಿ ಡ್ರೆಸ್, 1ರಿಂದ 3ನೇ ತರಗತಿಗೆ ಚಿತ್ರಕಲೆ, 4ರಿಂದ 6ನೇ ತರಗತಿಗೆ ಚಿತ್ರಕಲೆ, 7 ಮತ್ತು 8ನೇ ತರಗತಿಗೆ ಮಾದರಿ ತಯಾರಿಕೆ ಹಾಗೂ 9 ಮತ್ತು 10ನೇ ತರಗತಿಗೆ ಪ್ರಸ್ತುತಿ ಸ್ಪರ್ಧೆ ಆಯೋಜಿಸಲಾಗಿತ್ತು.ಐದು ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಒಟ್ಟು 18 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ನೋಂದಾಯಿಸಿ ಭಾಗವಹಿಸುವಂತೆ ಮಾಡಿದ ಕೆಎಲ್‌ಇ ಎಂ.ಆರ್. ಸಾಖರೆ ಸಿಬಿಎಸ್‌ಇ ಇಂಗ್ಲಿಷ್ ಮೀಡಿಯಂ ಶಾಲೆಯನ್ನು ‘ಟಾಪ್ ರಿಜಿಸ್ಟರ್ಡ್ ಸ್ಕೂಲ್’ ಎಂದು ಗೌರವಿಸಲಾಯಿತು.
ಎಂ.ಟೆಕ್ (ಗೈಡೆಡ್ ಮಿಸೈಲ್ಸ್) ಪದವೀಧರೆ ಹಾಗೂ ಹಿಮಾಲಯನ್ ಸ್ಪೇಸ್ ಸೆಂಟರ್‌ನ ಯಂಗ್ ಆಸ್ಟ್ರೋನಾಟ್ ಪ್ರೋಗ್ರಾಂನ ಮೊದಲ ಬ್ಯಾಚ್‌ನ ವಿದ್ಯಾರ್ಥಿನಿ ಮೇಘನಾ ತಾಳವಾಯಿ ಮಾತನಾಡಿದರು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ಡಾ. ನಾಗರೇಖಾ ಹೆಬ್ಸೂರ, ಕಾರ್ಯಕ್ರಮದ ಅಧ್ಯಕ್ಷೆ ಶ್ರೀದೇವಿ ರೂಗಿ ಹಾಗೂ ಡಾ. ವಿದ್ಯಾ ಹೊನವಾಡ ಇದ್ದರು.