ಕಾನೂನು ನೆಪದಲ್ಲಿ ಹಿಂದುಗಳ ಧಾರ್ಮಿಕ ಆಚರಣೆಗಳ ಮೇಲೆ ಅತಿಯಾದ ನಿಯಂತ್ರಣ ಬೇಡ. ಒಂದು ಧರ್ಮವನ್ನು ಶ್ರೇಷ್ಟ ಎಂದು ಹೇಳುವಾಗ ಮತ್ತೊಂದು ಧರ್ಮಕ್ಕೆ ನೋವಾಗದಂತೆ ಎಚ್ಚರ ವಹಿಸಬೇಕು. ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸುವುದು ಸರ್ಕಾರದ ಕರ್ತವ್ಯ ಎಂದು ಸಂಸದ ಕೋಟ ಶ್ರಿನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿ: ಕಾನೂನು ನೆಪದಲ್ಲಿ ಹಿಂದುಗಳ ಧಾರ್ಮಿಕ ಆಚರಣೆಗಳ ಮೇಲೆ ಅತಿಯಾದ ನಿಯಂತ್ರಣ ಬೇಡ. ಒಂದು ಧರ್ಮವನ್ನು ಶ್ರೇಷ್ಟ ಎಂದು ಹೇಳುವಾಗ ಮತ್ತೊಂದು ಧರ್ಮಕ್ಕೆ ನೋವಾಗದಂತೆ ಎಚ್ಚರ ವಹಿಸಬೇಕು. ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸುವುದು ಸರ್ಕಾರದ ಕರ್ತವ್ಯ ಎಂದು ಸಂಸದ ಕೋಟ ಶ್ರಿನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವ, ಶಾರದೋತ್ಸವಗಳು ಹಿಂದೂಗಳ ಧಾರ್ಮಿಕ ನಂಬಿಕೆಗಳ ಪ್ರತೀಕ. ಆದರೆ ಉತ್ಸವ, ಮೆರವಣಿಗೆಗೆ ನಿರ್ಬಂಧ, ಅತಿಯಾದ ನಿಯಮಗಳು ಸರಿಯಲ್ಲ, ಅನುಮತಿ ಹೆಸರಲ್ಲಿ, ಸಮಯ ಪಾಲನೆ ನೆಪದಲ್ಲಿ ಕಠಿಣ ನಿಯಮ ಹೇರಿಕೆ ಬೇಡ, ಇಂತಹ ನಿಯಮಗಳಿಂದ ಗಣೇಶ ವಿಸರ್ಜನೆಯೇ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಬಾರದು. ಇಂತಹ ಕ್ರಮಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಬಹುದು ಎಂದು ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯಕ್ಕೂ ಗೌರವ ನೀಡಬೇಕು. ಯಾವುದೇ ಒಂದು ಧರ್ಮದ ಆಚರಣೆಗಳನ್ನು ಪರೋಕ್ಷವಾಗಿ ನಿಯಂತ್ರಿಸುವಂತಾಗಬಾರದು. ಸರ್ಕಾರ ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸಬೇಕು ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ‘ಭಾರತ್ ಜೋಡಣೆ’ ಹೆಸರಿನಲ್ಲಿ ಯುವಕರ ಸಂಘಟನೆ ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಯುವಕರಲ್ಲಿ ರಾಷ್ಟ್ರಭಕ್ತಿ, ಸಾಮಾಜಿಕ ಜವಾಬ್ದಾರಿ ಬೆಳೆಸುವುದು ಒಳ್ಳೆಯ ಉದ್ದೇಶವೇ, ಆದರೆ ಸರ್ಕಾರಿ ವೇದಿಕೆ ರಾಜಕೀಯ ಉದ್ದೇಶಕ್ಕೆ ಬಳಕೆಯಾಗಬಾರದು. ಸರ್ಕಾರದ ಹಣ ಬಳಕೆಯಲ್ಲೂ ಪಾರದರ್ಶಕತೆ ಅಗತ್ಯ. ಸರ್ಕಾರಿ ಹಣವನ್ನು ಸಂಘಟನೆ ಮೂಲಕ ರಾಜಕೀಯ ಉದ್ದೇಶಕ್ಕೆ ಪರೋಕ್ಷವಾಗಿ ಬಳಸಬಾರದು. ‘ಭಾರತ್ ಜೋಡೋ’ ಕಾರ್ಯಕ್ರಮದ ಹಿಂದೆ ರಾಜಕೀಯ ಉದ್ದೇಶದ ಅನುಮಾನ ಮೂಡಿದರೆ ಪ್ರಶ್ನಿಸುತ್ತೇವೆ, ಪ್ರತಿಪಕ್ಷವಾಗಿ ಸರ್ಕಾರದ ಕ್ರಮಗಳನ್ನು ಎಚ್ಚರಿಕೆಯಿಂದ ಗಮನಿಸುತ್ತೇವೆ ಎಂದು ಅವರು ಹೇಳಿದರು.