ಒಂದು ಕಾಲವಿತ್ತು, ಹೆಣ್ಣು ಏನು ಉಡಬೇಕು, ಏನು ತೊಡಬೇಕು, ಎಷ್ಟನೇ ವಯಸ್ಸಿಗೆ ಮದುವೆ, ಗಂಡು ಯಾರು, ಯಾವ ಊರು ಹೀಗೆ ಯಾವುದರ ಬಗೆಗೂ ತನ್ನದೇ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವಷ್ಟು ಸ್ವಾತಂತ್ರ್ಯ ಕೂಡ ಆಕೆಗೆ ಇರಲಿಲ್ಲ.ಈಗಲೂ ಅಷ್ಟರ ಮಟ್ಟಿಗೆ ಇರದಿದ್ದರೂ ಸಮಾಜ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತಿದೆ. ಅಲ್ಲಲ್ಲಿ ಸ್ತ್ರೀ ಸ್ವಾತಂತ್ರ್ಯದ ಕೂಗು ಕೇಳಿಸುತ್ತಿರುತ್ತದೆ
- ಪೂರ್ಣಿಮಾ ಹೆಗ್ಗಡೆ
ಒಂದು ಕಾಲವಿತ್ತು, ಹೆಣ್ಣು ಏನು ಉಡಬೇಕು, ಏನು ತೊಡಬೇಕು, ಎಷ್ಟನೇ ವಯಸ್ಸಿಗೆ ಮದುವೆ, ಗಂಡು ಯಾರು, ಯಾವ ಊರು ಹೀಗೆ ಯಾವುದರ ಬಗೆಗೂ ತನ್ನದೇ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವಷ್ಟು ಸ್ವಾತಂತ್ರ್ಯ ಕೂಡ ಆಕೆಗೆ ಇರಲಿಲ್ಲ.ಈಗಲೂ ಅಷ್ಟರ ಮಟ್ಟಿಗೆ ಇರದಿದ್ದರೂ ಸಮಾಜ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತಿದೆ. ಅಲ್ಲಲ್ಲಿ ಸ್ತ್ರೀ ಸ್ವಾತಂತ್ರ್ಯದ ಕೂಗು ಕೇಳಿಸುತ್ತಿರುತ್ತದೆ. ವಿಪರ್ಯಾಸ ಎಂದರೆ ತನ್ನವರೇ ತನ್ನ ಸ್ವಾತಂತ್ರ್ಯ ಕಸಿದು ಪಂಜರದ ಗಿಣಿಯಂತೆ ಬಂಧಿಸುವುದು.
ಈ ಬಂಧನದೊಳಗೂ ತನ್ನ ಅಭಿಪ್ರಾಯವನ್ನು ಗಟ್ಟಿಯಾಗಿ ಹೇಳಲು ಆಗದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಅನಿಸಿದ್ದನ್ನು ಹಂಚಿಕೊಳ್ಳುವ, ತನ್ನ ಮನಸ್ಸಿನ ಭಾರವನ್ನು ಇಳಿಸಿಕೊಳ್ಳುವ, ಯಾವುದೇ ವಿಷಯದ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ಸ್ವಾತಂತ್ರ್ಯವನ್ನು ಹೆಣ್ಣು ಪಡೆದುಕೊಂಡಿದ್ದಾಳೆ. ತನ್ನದೇ ಮನೆಯಲ್ಲಿ ತನಗಾಗುವ ಅಸಮಾನತೆಗಳನ್ನು ಬರಹಗಳಲ್ಲಿಯಾದರೂ ವ್ಯಕ್ತಪಡಿಸಿ ತನ್ನ ಹೆಸರನ್ನು ಮರೆಮಾಚಿ ಬರಿಯ ನಿಟ್ಟುಸಿರು ಬಿಟ್ಟು ಶಾಂತಳಾಗುತ್ತಳೇ.
ಅಡಗಿ ಹೋಗಿದ್ದ ದನಿ ಅಕ್ಷರಗಳoತೆ ಹೊರ ಬರುತ್ತಿವೆ. ನನ್ನಂತೆ ಹೆಣ್ಣಾದರೂ ಗಟ್ಟಿಯಾಗಿ ದನಿ ಏರಿಸುತ್ತಿರುವವರ ಕಂಡು ನನಗೂ ಈ ಸ್ವಾತಂತ್ರ್ಯ ಬೇಕು, ನಾನು ನನ್ನ ಹಕ್ಕುಗಳನ್ನ ಪಡೆದುಕೊಳ್ಳಬೇಕು, ಎಲ್ಲರಂತೆ ಸಮ ಸಮಾಜದಲ್ಲಿ ನನ್ನದು ಒಂದು ಗುರುತು ಸೃಷ್ಟಿಸಬೇಕು ಎಂದು ಹಪಾಹಪಿಸುತ್ತಿದೆ.
ತನ್ನದೇ ಅಭಿರುಚಿಗಳುಳ್ಳ ಇತರ ಮನಸ್ಸುಗಳನ್ನು ಸಂಧಿಸಲು, ವಿಚಾರ ವಿನಿಮಯ ಮಾಡಿಕೊಳ್ಳಲು ಸಾಮಾಜಿಕ ಜಾಲತಾಣಗಳು ಸಂಪರ್ಕ ಮಾಧ್ಯಮಗಳಾಗಿವೆ.
ಇಂಥದೊಂದ್ದು ಕಲೆಯಲ್ಲಿ ನಾನು ನಿಪುಣಳು ಎಂದು ಹೆಮ್ಮೆಯಿಂದ ತೋರ್ಪಡಿಸಿಕೊಳ್ಳಲು ಇದು ವೇದಿಕೆಯಾಗಿದೆ. ಹೀಗೆ ತೋರ್ಪಡಿಸಿದ ಕಲೆಗಳು ಜನಪ್ರಿಯವಾಗಿ ಆರ್ಥಿಕವಾಗಿಯೂ ಆಕೆಯನ್ನು ಬಲಪಡಿಸುತ್ತಿವೆ. ತನ್ನದೇ ಕಲೆಯಿಂದ ತನ್ನ ಕಾಲ ಮೇಲೆ ತಾನು ನಿಂತು ಇದ್ದಲ್ಲಿಂದಲೇ ಗಳಿಸುವ ಅವಕಾಶಗಳು ಆಕೆಗೆ ದೊರೆತಿವೆ.
ಎಷ್ಟೇ ಒಳ್ಳೆ ವಿಚಾರ ವ್ಯಕ್ತ ಪಡಿಸಿದರೂ ಅದಕ್ಕೊಂದು ಕೊಂಕು ಎಲ್ಲಿಂದಾದರೂ ಬಂದು ಮನಸು ಕೆಡಿಸುವ ಕ್ಷುದ್ರಗಳು ಅಲ್ಲಲ್ಲಿ ಇರುತ್ತವೆ. ಅವುಗಳ ಆತ್ಮಕ್ಕೆ ಇನ್ನಾದರೂ ಶಾಂತಿ ಸಿಗಲಿ, ಹೆಣ್ಣು ತನ್ನ ತನವನ್ನು ಯಾರ ಹೆದರಿಕೆಯು ಇಲ್ಲದೆ ವ್ಯಕ್ತ ಪಡಿಸುವ ಸಮಾಜ ನಿರ್ಮಾಣವಾಗಲಿ, ಹೆಣ್ಣು ಬಂಧ ಮುಕ್ತಳಾಗಲಿ.
ನನ್ನ ಪ್ರಕಾರ ಮಹಿಳಾ ದಿನ ಪುರುಷರಷ್ಟೇ ಸಮಾನ ಅವಕಾಶಗಳು ಸಿಗುವಂತಾಗಲಿ
- ಅಕ್ಷತಾ ಪಾಂಡವಪುರ, ನಟಿ
ಪುರುಷರಷ್ಟೇ ಮಹಿಳೆಯರಿಗೆ ಸಮಾನ ಅವಕಾಶಗಳು, ಹಕ್ಕುಗಳು, ಸೌಲಭ್ಯಗಳು ಸಿಕ್ಕಾಗಲೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂಬುದು ನನ್ನ ನಂಬಿಕೆ. ಅಂದರೆ ನನ್ನ ಪ್ರಕಾರ ಮಹಿಳಾ ದಿನಾಚರಣೆಯನ್ನು ನಾವು ನಿಜವಾಗಲೂ ಸಂಭ್ರಮಿಸುವುದು ಕೂಡ ಇಂಥ ಸಮಾನತೆ ಬಂದಾಗಲೇ. ಭಾರತದಲ್ಲಿ ಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿದ್ದಾರೆ. ಮತ್ತು ಇದ್ದೇವೆ ಕೂಡ. ಆದರೆ, ಅವಕಾಶಗಳು ಮಾತ್ರ ಮೀಸಲಾಯಿತಿ ರೂಪದಲ್ಲಿ ಸಿಗುತ್ತಿವೆ. ಇದು ಯಾವ ನ್ಯಾಯ?
ಪುರುಷರಷ್ಟೇ ಸಮಾನವಾಗಿ ಅವಕಾಶಗಳನ್ನು ನೀಡದೆ ಮಹಿಳೆಯರಿಗೆ ಮೀಸಲಾತಿ ಆಧಾರದಲ್ಲಿ ನೀಡುತ್ತಿರುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ಅಂದರೆ ಇಂಥ ಜಾತಿ, ಧರ್ಮಕ್ಕೆ ಇಷ್ಟಿಷ್ಟು ಮೀಸಲಾತಿ ನೀಡುವಂತೆ ಮಹಿಳೆಯರಿಗೂ ಮೀಸಲಾತಿ ನೀಡುತ್ತಿದ್ದಾರೆ. ಎಲ್ಲಾ ವಿಷಯಗಳಲ್ಲೂ ಹೀಗೆಯೇ ಆಗುತ್ತಿದೆ. ನನ್ನ ಪ್ರಕಾರ ಇಂಥ ವರ್ಗಿಕರಣದ ಮೀಸಲಾತಿ ಅಗತ್ಯ ಇಲ್ಲ. ಸಮಾನವಾಗಿ ಅಲಕಾಶಗಳನ್ನು ಕೊಡಿ. ಉದಾಹರಣೆ ರಾಜಕೀಯ ಕ್ಷೇತ್ರದಲ್ಲಿ ಪುರುಷರು ಎಷ್ಟು ಸಂಖ್ಯೆಯಲ್ಲಿರುತ್ತಾರೋ ಮಹಿಳೆಯರು ಕೂಡ ಅಷ್ಟೇ ಸಂಖ್ಯೆಯಲ್ಲಿರಬೇಕು ಎಂಬುದು ನನ್ನ ನಿಲುವು.
ಎಲ್ಲಾ ಕ್ಷೇತ್ರ ಮತ್ತು ಅಧಿಕಾರದ ವಲಯದಲ್ಲಿ ಯಾವಾಗ ಹೀಗೆ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಅವಕಾಶಗಳು, ಹಕ್ಕುಗಳು ದೊರೆಯುತ್ತವೋ ಆಗ ನಾನು ಮಹಿಳಾ ದಿನಾಚರಣೆಯನ್ನು ಅತ್ಯಂತ ಖುಷಿಯಿಂದ ಸಂಭ್ರಮಿಸುತ್ತೇನೆ. ನನ್ನ ಪ್ರಕಾರ ಇದೇ ನಿಜವಾದ ಮಹಿಳಾ ದಿನಾಚರಣೆ ಎಂದು ಹೇಳಬಹುದು. ಎಲ್ಲಾ ಜಾತಿಗಳಂತೆ ಹೆಣ್ಣು ಕೂಡ ಒಂದು ಜಾತಿ ಎನ್ನುವ ಲೆಕ್ಕಾಚಾರದಲ್ಲಿ ಮೀಸಲಾತಿ ಮಾಡಿರುವುದು ನನಗೆ ಇಷ್ಟ ಇಲ್ಲ. ಇದು ಬದಲಾಗಬೇಕು.
ಮಹಿಳೆಯರು ಹಿಂದೆ ಉಳಿದಿಲ್ಲ, ಬದಲಾವಣೆ ಆಗಿದೆ
- ನೀತು, ನಟಿ
ಮಹಿಳಾ ಸಬಲೀಕರಣ ಅಥವಾ ಮಹಿಳಾ ಸಮುದಾಯದ ಹೋರಾಟದ ನೆನಪಿನ ಸಂಭ್ರಮ ಇದು. ನಾವೆಲ್ಲ ಅತ್ಯಂತ ಹೆಮ್ಮೆಯಿಂದ ಸಂಭ್ರಮಿಸುವ ದಿನ ಅಂತ ಹೇಳುತ್ತೇನೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಅಥವಾ ಆ ದಿನದ ಹಿನ್ನೆಲೆ ನೋಡಿದಾಗ ಹಿಂದಿನಂತೆ ಮಹಿಳೆಯರು ಈಗ ಇಲ್ಲ. ಸಮಾನತೆ, ಅವಕಾಶಗಳ ವಿಚಾರದಲ್ಲಿ ಹಾಗೂ ಸಾಧನೆಯ ಹಾದಿಯಲ್ಲಿ ಮಹಿಳೆಯರು ಹಿಂದೆ ಉಳಿದಿಲ್ಲ. ಹಾಗೆ ನೋಡಿದರೆ ಗಂಡಸರು ಕೂಡ ಮಹಿಳೆಯರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಸಕರಾತ್ಮಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಹಿಳಾ ದಿನಾಚರಣೆಯನ್ನು ನೋಡಬೇಕಿದೆ.
ತುಂಬಾ ಹಿಂದೆ ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗಿದ್ದರು. ಮಕ್ಕಳ ಲಾಲನೆ-ಪಾಲನೆ, ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದರು. ಹಾಗೆ ಸೀಮಿತ ಮಾಡಲಾಗಿತ್ತು ಕೂಡ. ಆದರೆ, ಮಕ್ಕಳ ಪಾಲನೆ ಜೊತೆಗೆ ಅವರಿಗೆ ತಮ್ಮ ಹಕ್ಕುಗಳ ತಿಳುವಳಿಕೆ ಮತ್ತು ಅರಿವು ಈಗ ಇದೆ. ಸಾಧ್ಯವಾದಷ್ಟು ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ. ಈ ವಿಚಾರದಲ್ಲಿ ಮಹಿಳಾ ಸಮುದಾಯ ಹಿಂದೆ ಉಳಿದಿಲ್ಲ. ಗ್ರಾಮೀಣ ಪ್ರದೇಶದ ಮಹಿಳೆಯರು ಕೂಡ ತಿಳವಳಿಕೆಯಲ್ಲಿ ಹಿಂದೆ ಉಳಿದಿಲ್ಲ ಎಂಬುದೇ ನನ್ನ ಭಾವನೆ. ಇದೇ ಭಾವನೆಯಲ್ಲಿ ನಾನು ಮಹಿಳಾ ದಿನಾಚರಣೆಯನ್ನು ಆಚರಿಸುತ್ತೇನೆ ಮತ್ತು ನೋಡುತ್ತೇನೆ.
ನನ್ನ ಪ್ರಕಾರ ಗಂಡು- ಹೆಣ್ಣು ಎನ್ನುವ ಲಿಂಗ ತಾರತಮ್ಯ ಇದೆ. ಆದರೆ, ಮಹಿಳೆಯ ಕತ್ತಲಲ್ಲಿ ಉಳಿದುಕೊಂಡಿಲ್ಲ. ಆಕೆ ಬೆಳಕಿನ ಕಡೆ ಹೆಜ್ಜೆ ಹಾಕಿದ್ದಾಳೆ. ಇದು ಮಹಿಳಾ ಚಳವಳಿ, ಹೋರಾಟಗಳ ಫಲ ಅಂತ ಹೇಳಬಹುದು. ಈಗಿನ ಜನರೇಷನ್ ಇಂಥ ಕ್ರಾಂತಿಕಾರ ಬದಲಾವಣೆಗಳ ಜೊತೆಗೆ ಮಹಿಳಾ ದಿನಾಚರಣೆಯನ್ನು ಆಚರಿಸುವಂತಾಗಬೇಕು.
ನಾನು ಮುಕ್ತಳಾದ ಘಳಿಗೆ ಮೌಂಟ್ ಕಾರ್ಮೆಲ್ ಕಾಲೇಜಿನ ದಿನಗಳು
- ಸಿರಿ ರವಿಕುಮಾರ್
ನಾನು ಬೆಂಗಳೂರಿನ ಜಯನಗರದಲ್ಲಿ ಬೆಳೆದ ಹುಡುಗಿ. ಜಯನಗರ, ಬನಶಂಕರಿ ಅಂದರೆ ಸ್ವಲ್ಪ ಸಂಪ್ರದಾಯಸ್ಥರಿರುವ ಪ್ರದೇಶ. ಎಷ್ಟೇ ಲಿಬರಲ್ ಅಂದರೂ ಮುಕ್ತ ಅನಿಸುವ ವಾತಾವರಣ ಇರೋದಿಲ್ಲ. ಇಂಥಾ ಕಡೆಯಲ್ಲಿದ್ದ ಹುಡುಗಿಯೊಬ್ಬಳನ್ನು ಬೆಂಗಳೂರಿನ ಹೃದಯ ಭಾಗದಲ್ಲಿರುವ ಸರ್ವ ಸಂಸ್ಕೃತಿಗಳ ಕಲರವದಂತಿರುವ ಮೌಂಟ್ ಕಾರ್ಮೆಲ್ ಕಾಲೇಜ್‌ಗೆ ಸೇರಿಸಿದರೆ ಹೇಗಿರಬಹುದು!
ಉಳಿದವರಿಗೆ ಹೇಗಿರುತ್ತೋ ಗೊತ್ತಿಲ್ಲ, ಅಲ್ಲಿ ಮೊದಲ ಸಲ The moment of my liberation ಅನ್ನು ಅನುಭವಿಸಿದೆ. ಎಷ್ಟೊಂದು ಭಾಷೆ, ಎಂತೆಂಥಾ ಮನೋಭಾವ, ಯಾವ್ಯಾವ ಬಗೆಯ ವ್ಯಕ್ತಿತ್ವಗಳು.. ಇದೆಲ್ಲ ನೋಡಿ ಬೆಕ್ಕಸ ಬೆರಗಾಗಿದ್ದೆ.
ಈ ಪರಿಸರದಲ್ಲೇ ನನ್ನ ಅಭಿಪ್ರಾಯವನ್ನು ಧೈರ್ಯದಿಂದ ಹೇಳುವ, ಸರಿ ಅನಿಸದ್ದನ್ನು ಪ್ರಶ್ನೆ ಮಾಡುವ ದಿಟ್ಟತನ ನನ್ನ ವ್ಯಕ್ತಿತ್ವಕ್ಕೆ ಸೇರಿಕೊಳ್ಳುತ್ತ ಹೋಯ್ತು. ಇಲ್ಲಿ ನನ್ನ ಸಬ್ಜೆಕ್ಟ್ ಇಂಗ್ಲಿಷ್ ಸಾಹಿತ್ಯ, ಮನಃಶಾಸ್ತ್ರ ಮತ್ತು ಪತ್ರಿಕೋದ್ಯಮ. ಹೆನ್ರಿಕ್ ಇಬ್ಸನ್‌ನಂಥವರ ಸಾಹಿತ್ಯದ ಓದು ರಂಗಭೂಮಿ, ಸಿನಿಮಾ ಕ್ಷೇತ್ರದ ನಟನೆಗೆ ಪೂರಕವಾಯ್ತು. ಪಾತ್ರದ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು, ಅದರ ಸೂಕ್ಷ್ಮ ಸಂವೇದನೆ, ವ್ಯವಸ್ಥೆಯ ಬಗೆಗಿನ ಸಿಟ್ಟು ಇತ್ಯಾದಿಗಳನ್ನು ಸರಿಯಾಗಿ ಗ್ರಹಿಸಿ ಅಭಿವ್ಯಕ್ತಿಸುವುದು ನನಗೆ ಸಲೀಸಾಯಿತು.
ಮುಂದೆ ನನ್ನ ಮೊದಲ ಸಿನಿಮಾ ‘ಸಕುಟುಂಬ ಸಮೇತ’ದಲ್ಲಿ ಸಿದ್ಧ ಮಾದರಿ ವ್ಯವಸ್ಥೆಯನ್ನು ಪ್ರಶ್ನಿಸುವ ದಿಟ್ಟ ಹೆಣ್ಣಿನ ಪಾತ್ರ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ಸಾವಿನ ಸಮೀಪದಲ್ಲಿರುವ ವ್ಯಕ್ತಿಯಿಂದ ತನ್ನೊಳಗಿನ ಲಿಬರೇಶನ್ ಅನ್ನು ಕಂಡುಕೊಳ್ಳುವ ಬಗೆ, ಡಾ.ಯು.ಆರ್. ಅನಂತಮೂರ್ತಿ ಅವರ ‘ಅವಸ್ಥೆ’ ನಾಟಕದ ಗೌರಿ ದೇಶಪಾಂಡೆ ಪಾತ್ರ.. ಇವೆಲ್ಲ ನನಗೆ ಬಂದ ಗಟ್ಟಿ ಪಾತ್ರಗಳು, ಅವುಗಳ ಸ್ವತಂತ್ರ ವ್ಯಕ್ತಿತ್ವ ನಟಿಯಾಗಿ ನನಗೆ ಒಳ್ಳೆಯ ಅನುಭವ ದಯಪಾಲಿಸಿತು.
ನಟಿಸುವ ಪಾತ್ರಕ್ಕೆ ಕಟ್ಟುಪಾಡುಗಳ ಹಂಗಿಲ್ಲ
- ದಿಶಾ ರಮೇಶ್
ಕಲಾವಿದರ ಮನೆಯಲ್ಲಿ ಹುಟ್ಟಿ ಬೆಳೆದ ಹುಡುಗಿ ನಾನು. ಹಾಗಾಗಿ ಸ್ವಾತಂತ್ರ್ಯ ಜಾಸ್ತಿ ಇರುತ್ತದೆ ಎಂಬುದು ಸಾಮಾನ್ಯ ಅಭಿಪ್ರಾಯವಾದರೂ, ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದಿಷ್ಟು ಕಟ್ಟುಪಾಡಿಗೆ ಒಳಗಾಗಲೇ ಬೇಕಾಗುತ್ತದೆ. ಅದರಲ್ಲೂ ಹುಡುಗರಿಗೆ, ಹುಡುಗಿಯರಿಗೆ ಪ್ರತ್ಯೇಕ ಹೇರಿಕೆ ಇರುತ್ತದೆ.
ಈ ಎಲ್ಲವುಗಳಿಂದ ಮುಕ್ತಿ ಸಿಗುವುದು ಮತ್ತು ಇದು ನನ್ನ ಪಾಲಿನ ಮೊಮೆಂಟ್ ಆಫ್ ಲಿಬರೇಶನ್ ಅನಿಸೋದು ಪ್ರತೀ ಬಾರಿ ಸ್ಟೇಜ್ ಹತ್ತಿದಾಗ. ನಾನಲ್ಲದ ಇನ್ನೊಂದು ಪಾತ್ರದ ಅಂತರಂಗವನ್ನು ಹೊಕ್ಕು ರಂಗದ ಬೆಳಕಿನಲ್ಲಿ ಅದನ್ನು ಪ್ರೇಕ್ಷಕರಿಗೆ ಕಾಣಿಸುತ್ತ ಹೋದಾಗ. ಅದೊಂದು ಮ್ಯಾಜಿಕಲ್ ಸ್ಪೇಸ್!
ಬಹಳಷ್ಟು ಸಂಗತಿಗಳನ್ನು ನಮಗೆ ಸಮಾಜದೆದುರು ನಿರ್ಭೀತವಾಗಿ ವ್ಯಕ್ತಪಡಿಸೋದಕ್ಕಾಗಲ್ಲ. ಆದರೆ ಸ್ಟೇಜ್ ಹತ್ತಿದಾಗ ಆ ಬಂಧನ ಇಲ್ಲ. ಪಾತ್ರದ ಎಷ್ಟು ಆಳಕ್ಕೂ ಇಳಿಯಬಹುದು, ಎಷ್ಟು ಎತ್ತರಕ್ಕೂ ಏರಬಹುದು, ಸ್ವಚ್ಛಂದವಾಗಿ ಹಾರಬಹುದು, ಕುಣಿಯಬಹುದು!
ಶೋ ಎಲ್ಲಾ ಮುಗಿಸಿ ಗ್ರೀನ್ ರೂಮಿಗೆ ಬರುವಾಗ ಹಗೂರ ಮನಸ್ಸು, ಬಿಡುಗಡೆಯ ಭಾವ. ಅದು ಕಲಾವಿದರಿಗಷ್ಟೇ ಸಿಗುವ ಮುಕ್ತಿಯ ಕ್ಷಣ!
