ಕನ್ನಡಪ್ರಭ ವಾರ್ತೆ ನಾಗಮಂಗಲ
ಸಮಾಜದ ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು ಗೌರವದಿಂದ ಕಂಡಾಗ ಮಾತ್ರ ಒಬ್ಬ ಮಹಿಳೆ ಕುಟುಂಬದ ಶಕ್ತಿಯಾಗಿ ನಿಲ್ಲಲು ಸಾಧ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದರು.ತಾಲೂಕಿನ ಸಂಪನಹಳ್ಳಿಯಲ್ಲಿ ಅಯೋಜಿಸಿದ್ದ ಶ್ರೀಕೆಂಪನಂಜುಂಡೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದಿರುವ ನಾನು ಹಳ್ಳಿ ಜನರ ಮತ್ತು ಹೆಣ್ಣು ಮಕ್ಕಳ ಕಷ್ಟ ನೋವು ನಲಿವುಗಳ ಜೊತೆ ಬೆಳೆದಿದ್ದೇನೆ. ಅದಕ್ಕಾಗಿ ರಾಜ್ಯದ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವ ಶಕ್ತಿಯನ್ನು ದೇವರು ನನಗೆ ಕರುಣಿಸಿದ್ದಾನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ನಂಬಿಕೆ ಭರವಸೆ ಇಟ್ಟು ಈ ಜವಾಬ್ದಾರಿ ವಹಿಸಿದ್ದಾರೆ. ಪ್ರತಿಯೊಂದು ಸಮಸ್ಯೆ ಪರಿಹಾರಕ್ಕೆ ಬೀಗದ ಚಾವಿ ಇರುವುದು ವಿಧಾನಸೌಧದಲ್ಲಿ. ನಾನು ಅಂತಹ ಚಾವಿಯಾಗಿ ಮಹಿಳೆಯರು, ಮಕ್ಕಳು ಮತ್ತು ಬಡ ಕುಟುಂಬಗಳಿಗೆ ಸರ್ಕಾರದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಬೇಕೆಂಬುದೇ ನನ್ನ ಮುಖ್ಯ ಉದ್ದೇಶವಾಗಿದೆ ಎಂದರು.ಸಂಪನಹಳ್ಳಿಯಲ್ಲಿ ಗ್ರಾಮ ಮಹಿಳಾ ಸಭೆ ಆಯೋಜಿಸಿ ನನ್ನನ್ನು ಆಹ್ವಾನಿಸಿದರೆ ಎಲ್ಲ ಸರ್ಕಾರದ ಇಲಾಖೆಗಳ ಅಧಿಕಾರಿಗಳನ್ನು ಜೊತೆಯಲ್ಲಿ ಕರೆತಂದು ಗ್ರಾಮದ ಮೂಲ ಸೌಕರ್ಯ ಹಾಗೂ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ರಮ ಮಾಡಲಾಗುವುದು ಎಂದರು.
ಗ್ರಾಮಕ್ಕೆ ಭೇಟಿ ಕೊಟ್ಟ ಡಾ.ನಾಗಲಕ್ಷ್ಮಿ ಚೌಧರಿ ಅವರಿಗೆ ಊರಿನ ಮಹಿಳೆಯರು ಕುರಿ ಕಂಬಳಿ ಹೊದಿಸಿ ಹಾರ ಹಾಕಿ ಹಣ್ಣಿನ ಬುಟ್ಟಿ ಕೊಟ್ಟು ಗೌರವಿಸಿದರು. ಜಿಪಂ ಮಾಜಿ ಸದಸ್ಯ ಎಂ.ಹುಚ್ಚೇಗೌಡ, ತಾಪಂ ಮಾಜಿ ಸದಸ್ಯ ವೇಣುಗೋಪಾಲ್, ಮುಖಂಡ ಮದ್ದೇನಹಟ್ಟಿ ಮಾಯಣ್ಣ ಸೇರಿದಂತೆ ಗ್ರಾಮದ ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಇದ್ದರು.ಇಂದಿನಿಂದ ಶ್ರೀಶನಿದೇವರ ಪೂಜಾ ಮಹೋತ್ಸವ
ಕೆ.ಎಂ.ದೊಡ್ಡಿ: ಸಮೀಪದ ಮೆಳ್ಳಹಳ್ಳಿ ಶ್ರೀಶನಿದೇವರ 74ನೇ ವರ್ಷದ ವಿಶೇಷ ಪೂಜಾ ಮಹೋತ್ಸವ ಮಾ.6 ರಿಂದ ಆರಂಭವಾಗಲಿದೆ. ಈ ವರ್ಷವು ಶ್ರೀ ವಿಶ್ವಾವಸುನಾಮ ಸಂವತ್ಸರದ ಪಾಲ್ಗುಣ ಮಾಸದ ಮಾ.6ರಂದು ಹೋಮ, ನವಗ್ರಹ ಪೂಜೆ, ಗಣಪತಿ ಹೋಮ ಇತ್ಯಾದಿಗಳು ಮಾ.7ರ ಬೆಳಗ್ಗೆ 7.30 ರಿಂದ ಅಭಿಷಕ ಪೂಜೆ ಮಹಾಮಂಗಳಾರತಿ, ಬೆಳಗ್ಗೆ 10.30 ರಿಂದ ವಿಶೇಷ ಪೂಜೆ ಮಧ್ಯಾಹ್ನ 12.30ಕ್ಕೆ ಬಾಯಿಬೀಗ, ಮುಡಿಸೇವೆ, ಮತ್ತು ಶ್ರೀ ಶನೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವ ಜರುಗಲಿದೆ. ಮಧ್ಯಾಹ್ನ 2.30ರಿಂದ ಭಕ್ತಾದಿಗಳಿಗ ‘ಅನ್ನಸಂತರ್ಪಣೆ’ ಕಾರ್ಯಕ್ರಮ ಏರ್ಪಡಿಸಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ದೇವಾಲಯದ ಪ್ರಧಾನ ಅರ್ಚಕ ಪೂಜಾರಿ ಮಹೇಶ ಮನವಿ ಮಾಡಿದ್ದಾರೆ.