ಕನ್ನಡಪ್ರಭ ವಾರ್ತೆ ಪಾಂಡವಪುರ

ರಾಜ್ಯ ಸರ್ಕಾರ ಹೊಸದಾಗಿ 56 ಸಾವಿರ ಹುದ್ದೆಗಳ ಭರ್ತಿ ಮಾಡುವ ವೇಳೆ ಒಳ ಮೀಸಲಾತಿ ಜಾರಿಗೊಳಿಸಿ ನೇಮಕಾತಿ ಮಾಡದಿದ್ದರೆ ರಾಜ್ಯ ವ್ಯಾಪಿ ಮಾದಿಗ ಸಮುದಾಯ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಮಾದಾರ ಮಹಾಸಭಾ ತಾಲೂಕು ಅಧ್ಯಕ್ಷ ಶಂಭೂನಹಳ್ಳಿ ರವಿಕುಮಾರ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು 56 ಸಾವಿರ ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಒಳ ಮೀಸಲಾತಿ ಜಾರಿಗೊಳಿಸದೆ ನೇಮಕಾತಿಗೆ ಮುಂದಾಗಿರುವುದು ಮಾದಿಗ ಸಮುದಾಯಕ್ಕೆ ಮರಣ ಶಾಸನವಾಗಿ ಪರಿಣಮಿಸಿದೆ ಎಂದು ಎಚ್ಚರಿಸಿದರು.

ಮಾದಿಗ ಸಮುದಾಯದ ಉದ್ಯೋಗ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ನೇಮಕಾತಿಯಲ್ಲಿ ಅವಕಾಶ ಇಲ್ಲದಂತಾಗಿದೆ. ಸಂವಿಧಾನ ಜಾರಿಗೊಂಡ ದಿನದಿಂದಲೂ ಈದುವರೆಗೂ ಸಮುದಾಯದವರಿಗೆ ಅವಕಾಶ ಸಿಕ್ಕಿಲ್ಲ. ಎಲ್ಲವೂ ಬಲಿತ ದಲಿತ ಸಮುದಾಯದ ಪಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 35 ವರ್ಷಗಳಿಂದಲೂ ಒಳಮೀಸಲಾತಿಗಾಗಿ ಹೋರಾಟ ನಡೆಸಿದರ ಪರಿಣಾಮ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ಇದರ ಆಧಾರದ ಮೇರೆಗೆ ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ರಚಿಸಿ ವರದಿ ತರಿಸಿಕೊಂಡು ಅದನ್ನು ಪರಿಷ್ಕರಣೆ ಮಾಡಿ ಸದನದಲ್ಲಿ ಮಸೂದೆ ಮಂಡಿಸಿ ರಾಜ್ಯಪಾಲರ ಅನುಮೋದನೆ ಪಡೆದಿದೆ. ಆದರೆ, ಸಚಿವ ಸಂಪುಟದ ಸಚಿವರು ಮಾದಿಗ ಸಮುದಾಯದ ಹೋರಾಟವನ್ನು ಗಾಳಿಗೆ ತೂರಿ ಮಸೂದೆ ತಿರಸ್ಕರಿಸಿ ಕೇವಲ ಒಂದು ಸಮುದಾಯದ ಹಿತ ಕಾಯಲು ಮುಂದಾಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.


ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಗೃಹಮಂತ್ರಿ ಡಾ.ಜಿ.ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಮಂತ್ರಿ ಪ್ರಿಯಾಂಕ ಖರ್ಗೆ ಅವರೆಲ್ಲರೂ ತಮ್ಮ ಪ್ರಭಾವ ಬೀರಿ ಒಳ ಮೀಸಲಾತಿಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಸಚಿವ ಸಂಪುಟ ಸಭೆ ಕರೆದು ಹೊಸ ನೇಮಕಾತಿಗೆ ಒಳಮೀಸಲಾತಿಯನ್ನು ಜಾರಿಗೊಳಿಸದೆ ನೇಮಕಾತಿಗೆ ಮುಂದಾಗಿದೆ. ಒಂದು ವೇಳೆ ಒಳಮೀಸಲಾತಿ ಜಾರಿಗೊಳಿಸದಿದ್ದರೆ ಇಡೀ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಮಾದಿಗ ಸಮುದಾಯ ಉಗ್ರ ಪ್ರತಿಭಟನೆ ನಡೆಸುವ ಮುಖಾಂತರ ಧಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಕಡಬಾ ಪುಟ್ಟರಾಜು, ಎಸ್.ರಾಚಯ್ಯ, ಟೌನ್ ಚಂದ್ರು, ಆಟೋ ಮಲ್ಲೇಶ್, ಪಾಂಡವಪುರ ಮಲ್ಲಿಕಾರ್ಜುನ್, ಚಿಕ್ಕಾಯಿರಹಳ್ಳಿ ರಾಜೇಶ್, ಸಿ.ಎಸ್.ಶಿವಯ್ಯ, ಬಸ್ತಿಹಳ್ಳಿ ಯೋಗೇಶ್, ವದೇಸಮುದ್ರ ಮೋಹನ್ ಕುಮಾರ್, ಪಾಂಡವಪುರ ತುಕರಾಮ್, ಶಶಿಧರ, ಮುರಳೀಧರ ಸೇರಿದಂತೆ ಹಲವರು ಉಪಸ್ಥಿತರಿದ್ದರು.