ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ‘ಸ್ವಸ್ಥ ನಾರಿ’ ಯೋಜನೆಯ ಭಾಗವಾಗಿ 14 ವರ್ಷದ ಮೇಲಿನ ಎಲ್ಲಾ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕೆ ಕೊಡುವ ಅಭಿಯಾನವನ್ನು ಅತಿ ಶೀಘ್ರದಲ್ಲಿ ಆರಂಭಿಸುವುದಾಗಿ ಘೋಷಿಸಿದೆ.
- ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಲಭ್ಯ
- ₹4000 ಲಸಿಕೆಯ 1 ಡೋಸ್ ಉಚಿತಪಿಟಿಐ ನವದೆಹಲಿ
ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ‘ಸ್ವಸ್ಥ ನಾರಿ’ ಯೋಜನೆಯ ಭಾಗವಾಗಿ 14 ವರ್ಷದ ಮೇಲಿನ ಎಲ್ಲಾ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕೆ ಕೊಡುವ ಅಭಿಯಾನವನ್ನು ಅತಿ ಶೀಘ್ರದಲ್ಲಿ ಆರಂಭಿಸುವುದಾಗಿ ಘೋಷಿಸಿದೆ.ಇದು ಜಾರಿಯಾದಲ್ಲಿ, ಎಚ್‌ಪಿವಿ ಲಸಿಕೆಯನ್ನು ರಾಷ್ಟ್ರೀಯ ರೋಗನಿರೋಧಕ ಪಟ್ಟಿಗೆ ಸೇರಿಸಿರುವ 160 ರಾಷ್ಟ್ರಗಳ ಪಟ್ಟಿಗೆ ಸೇರಲಿದೆ. ಈಗಾಗಲೇ 90 ರಾಷ್ಟ್ರಗಳಲ್ಲಿ 1 ಡೋಸ್ ಲಸಿಕೆ ನೀಡಲಾಗುತ್ತಿದೆ.
ಕೋವಿಡ್ ಸಮಯದಲ್ಲಿ ದೇಶವ್ಯಾಪಿ ಜನರಿಗೆ ಉಚಿತ ಲಸಿಕೆ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಹೆಣ್ಣು ಮಕ್ಕಳ ಗರ್ಭಕಂಠ ಕ್ಯಾನ್ಸರ್ ಸಮಸ್ಯೆಗೆ ದೊಡ್ಡ ಪರಿಹಾರ ಕಲ್ಪಿಸಿದೆ.ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ, ‘ಎಚ್‌ಪಿವಿ ಟೈಪ್ 6, 11, 16 ಮತ್ತು 18’ರಿಂದ ಈ ಲಸಿಕೆಯ ಒಂದೇ ಡೋಸ್ ರಕ್ಷಣೆ ನೀಡಲಿದೆ. ಇದು ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಸಾಬೀತಾಗಿದೆ. 14 ವರ್ಷದವರು ಈ ಲಸಿಕೆ ಪಡೆದಲ್ಲಿ ಅದು ಅತಿಹೆಚ್ಚು ಪರಿಣಾಮಕಾರಿಯಾಗುವುದು.
ಅನುಷ್ಠಾನ ಹೇಗೆ?:ವಿಶ್ವ ಆರೋಗ್ಯ ಸಂಸ್ಥೆಯು ಎಚ್‌ಪಿವಿ ಲಸಿಕೆಯನ್ನು ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನೆಗೆ ಜಾಗತಿಕ ಕಾರ್ಯತಂತ್ರದ ಕೇಂದ್ರ ಸ್ತಂಭವೆಂದು ಪರಿಗಣಿಸಿದ್ದು, ಅದರ ಸಾಕಾರಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ಅಭಿಯಾನವನ್ನು ಜಾರಿಗೆ ತರಲಿದೆ.
ಮಾರುಕಟ್ಟೆಯಲ್ಲಿ ಈ ಲಸಿಕೆಯನ್ನು ಖರೀದಿಸಲು ಹೋದರೆ, 15 ವರ್ಷದ ಒಳಗಿನವರಿಗೆ 3,927 ರು.ನ 2 ಡೋಸ್ ಲಸಿಕೆ ಹಾಗೂ 15 ವರ್ಷ ಮೇಲ್ಪಟ್ಟವರಿಗೆ 3 ಡೋಸ್ ನೀಡಬೇಕಾಗುವುದು. ಹೀಗಿರುವಾಗ, ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನಗಳನ್ನು ಮೀರಿ ಸ್ತ್ರೀಯರ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಲುವಾಗಿ ಸರ್ಕಾರದ ಕಡೆಯಿಂದ ಎಲ್ಲರಿಗೂ ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಇವುಗಳು ಆಯುಷ್ಮಾನ್ ಆರೋಗ್ಯ ಮಂದಿರ ಸೇರಿದಂತೆ ಸರ್ಕಾರಿ ಕೇಂದ್ರಗಳಲ್ಲಿ ಲಭ್ಯವಿರಲಿವೆ. ಇದಕ್ಕಾಗಿ ಸರ್ಕಾರವು ಲಸಿಕೆ ಒಕ್ಕೂಟವಾದ ಗವಿ ಜತೆ ಒಪ್ಪಂದ ಮಾಡಿಕೊಂಡಿದೆ.ಶೇ.93ರಷ್ಟು ಸುರಕ್ಷಿತ:
ಈ ಲಸಿಕೆಯ ಹಲವರ ಪಾಲಿಗೆ ಹೊಸತಾಗಿರುವ ಕಾರಣ ಆತಂಕ, ಸಂಶಯ ಸಹಜ. ಆದರೆ ಇದರ ಅಗತ್ಯವಿಲ್ಲ. ಕಾರಣ, 2006ರಲ್ಲಿ ಪರಿಚಯಿಸಲಾಗಿರುವ ಈ ಲಸಿಕೆಯು ಹಲವು ಅಧ್ಯಯನಗಳಿಗೆ ಒಳಪಟ್ಟಿದ್ದು, ಶೇ.93ರಷ್ಟು ಸುರಕ್ಷಿತ ಎಂದು ಸಾಬೀತಾಗಿದೆ. ಜತೆಗೆ ಈವರೆಗೆ ವಿಶ್ವಾದ್ಯಂತ 50 ಕೋಟಿಗೂ ಅಧಿಕ ಡೋಸ್‌ಗಳನ್ನು ನೀಡಲಾಗಿದ್ದು, ಹಲವು ದೇಶಗಳಲ್ಲಿ ಎಚ್‌ಪಿವಿ ಸೋಂಕು, ಗರ್ಭಕಂಠದ ಕ್ಯಾನ್ಸರ್‌ನಲ್ಲಿ ಗಣನೀಯ ಇಳಿಕೆಯಾಗಿದೆ.ಅಗತ್ಯವೇನು?:
ಭಾರತದ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳಲ್ಲಿ ಅರ್ಧದಷ್ಟು ಗರ್ಭಕಂಠದ ಕ್ಯಾನ್ಸರ್ ಆಗಿರುತ್ತದೆ. ಪ್ರತಿ ವರ್ಷ ಇದರ 80 ಸಾವಿರ ಪ್ರಕರಣಗಳು ದಾಖಲಾಗುತ್ತವೆ ಹಾಗೂ 42 ಸಾವಿರ ಮಂದಿ ಸಾವನ್ನಪ್ಪುತ್ತಾರೆ. ಇದರ ತಡೆಗೆ ತೆಗೆದುಕೊಳ್ಳಬೇಕಾಗಿರುವ ಲಸಿಕೆ ಬಹಳ ದುಬಾರಿ. ಹೀಗಿರುವಾಗ ಮಹಿಳೆಯ ಸ್ವಾಸ್ಥ್ಯ ಕಾಪಾಡಲು ಮತ್ತು ಸಾವಿನ ಸಂಖ್ಯೆಯನ್ನು ತಗ್ಗಿಸಲು ಈ ಉಪಕ್ರಮ ಅತ್ಯಗತ್ಯ.