ಸಮುದ್ರದಲ್ಲಿ ತೈಲ ನಿಕ್ಷೇಪ ಪತ್ತೆಗೆ ಭರ್ಜರಿ ಯೋಜನೆ

60 ಕೋಟಿ ಮೆಟ್ರಿಕ್‌ ಟನ್ ಹೊಸ ನಿಕ್ಷೇಪ ಪತ್ತೆ ನಿರೀಕ್ಷೆ

==

ನವದೆಹಲಿ: ಜಾಗತಿಕ ಅಸ್ಥಿರತೆ ಹಾಗೂ ಅವಲಂಬನೆಯಿಂದಾಗಿ ದೇಶದಲ್ಲಿ ತೈಲಾನಿಲ ತತ್ವಾರ ತಲೆದೋರದಂತೆ ತಪ್ಪಿಸುವ ಉದ್ದೇಶದಿಂದ, ಸಮುದ್ರದಾಳದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪಗಳ ಅನ್ವೇಷಣೆಗೆ ಕೇಂದ್ರ ಸರ್ಕಾರ ಸಮುದ್ರ ಮಂಥನ ಎಂಬ ಯೋಜನೆ ಘೋಷಿಸಿದೆ. ಇದಕ್ಕಾಗಿ 84,084 ಕೋಟಿ ರು. ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

==


ಏನಿದು ಸಮುದ್ರ ಮಂಥನ ಯೋಜನೆ?

ತೈಲ ಮತ್ತು ಅನಿಲ ಬೇಡಿಕೆ ಪೂರೈಸಲು ಭಾರತದ ಸಮುದ್ರ ವ್ಯಾಪ್ತಿಯಲ್ಲೇ ತೈಲ ಸಂಶೋಧನೆ ಉದ್ದೇಶ ಈ ಯೋಜನೆಗಿದೆ. ಇದಕ್ಕಾಗಿ 2031ರ ಸರ್ಕಾರ 43,200 ಕೋಟಿ ರು. ವಿನಿಯೋಗಿಸಲಿದೆ. ಉಳಿದ 10 ಸಾವಿರ ಕೋಟಿ ರು.ಅನ್ನು ತೈಲ ಮತ್ತು ಅನಿಲದ ಉತ್ಪಾದನೆಗೆ ಅಗತ್ಯವಿರುವ ಮೂಲಸೌಕರ್ಯ ನಿರ್ಮಾಣಕ್ಕೆ, 28,534 ಕೋಟಿ ರು.ಅನ್ನು ಕರಾವಳಿಯಾಚೆಗಿನ ದತ್ತಾಂಶ ಸಂಗ್ರಹಣೆಗೆ, 2 ಸಾವಿರ ಕೋಟಿ ರು.ಅನ್ನು ತೈಲ ಮತ್ತು ಅನಿಲ ಉತ್ಪಾದನೆ ಹಾಗೂ ಸೇವಾ ವಲಯಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಖಾಸಗಿ ವಲಯ ತೋಡುವ ಪ್ರತಿ ಬಾವಿಗೆ ಸರ್ಕಾರ 650 ಕೋಟಿ ರು. ನೀಡಲಿದೆ. ಬಾವಿಯ ಆಳಕ್ಕೆ ತಕ್ಕಂತೆ ವೆಚ್ಚವೂ ಹೆಚ್ಚಲಿದೆ.

==

ಈ ಯೋಜನೆ ಉದ್ದೇಶವೇನು?

ಭಾರತವು ಸದ್ಯ ಅಗತ್ಯವಿರುವ ಕಚ್ಚಾತೈಲದ ಶೇ.88ರಷ್ಟನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿದೆ. ನೈಸರ್ಗಿಕ ಅನಿಲದ ವಿಷಯದಲ್ಲಿ ಈ ಪ್ರಮಾಣ ಶೇ.50ರಷ್ಟಿದೆ. ಈ ಅವಲಂಬನೆಯಿಂದಾಗಿ, ಮಧ್ಯಪ್ರಾಚ್ಯ ಸಂಘರ್ಷದಂತಹ ಸಂದರ್ಭಗಳಲ್ಲಿ ದೇಶ ತೈಲಾನಿಲ ಕೊರತೆಯನ್ನು ಅನುಭವಿಸುವಂತಾಗಿದೆ. ಜತೆಗೆ ಅವುಗಳ ಆಮದಿಗಾಗಿಯೇ ವಿದೇಶಿ ವಿನಿಮಯದ ಬಹುಪಾಲು ಖರ್ಚಾಗುತ್ತಿದೆ. ಹೀಗಿರುವಾಗ ಕಚ್ಚಾತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. 60 ಕೋಟಿ ಮೆಟ್ರಿಕ್‌ ಟನ್ ತೈಲ ಉತ್ಪಾದಿಸುವ ಸಾಮರ್ಥ್ಯದ ಹೊಸ ನಿಕ್ಷೇಪಗಳು ಪತ್ತೆಯಾಗುವ ನಿರೀಕ್ಷೆಯಿದೆ. ಇದು ಹೂಡಿಕೆಯನ್ನು ಆಕರ್ಷಿಸುವುದರ ಜತೆಗೆ ಉದ್ಯೋಗವನ್ನೂ ಸೃಷ್ಟಿಸುತ್ತದೆ.