ಎಲೆಕ್ಟ್ರಿಷಿಯನ್ ಅಪ್ಪನಿಗೆ ಕಡ್ಲೆ ಬೀಜ ತಿನ್ನುವುದು ಅಭ್ಯಾಸ. ಮನೆಯಲ್ಲಿ ಏನಾದರೂ ವೆರೈಟಿ ಕುರುಕಲು ತಿಂಡಿ ಮಾಡಿದರೂ ಅದರಲ್ಲಿ ಕಡ್ಲೆ ಬೀಜ ಕಡ್ಡಾಯ. ಹೀಗೆ ಅಪ್ಪನ ಕಡ್ಲೆ ಬೀಜದ ವ್ಯಾಮೋಹ ಅರಿತಿದ್ದ ಅವರ ಗೆಳೆಯರೊಬ್ಬರು ಒಮ್ಮೆ ಬ್ಯಾಂಕಾಕ್ ಗೆ ಹೋದರು. ಅಲ್ಲಿಂದ ಬರುವಾಗ ಗೆಳೆಯನಿಗಾಗಿ ತಂದದ್ದು ತೆಂಗಿನ ಹಾಲಿನ ಕಡ್ಲೆ ಬೀಜದ ನಾಲ್ಕು ಪ್ಯಾಕೆಟ್. ತೆಂಗಿನ ಹಾಲಿನಿಂದ ತೋಯಿಸಿ ಹುರಿದಿದ್ದ ಆ ಕಡ್ಲೆ ಬೀಜ ಅಪ್ಪ ಕೃಷ್ಣಮೂರ್ತಿ ಅವರಿಗೆ ತುಂಬಾನೇ ಇಷ್ಟ ಆಯಿತು.
ಬ್ಯಾಂಕಾಕ್ ಕಡ್ಲೆ ಬೀಜದ ಬಗ್ಗೆ ಅಪ್ಪನ ಆಸೆ ನೋಡಿ 19 ವರ್ಷದ ಮಗಳು, ಪ್ಯಾಕೆಟ್ ಮೇಲೆ ಬರೆದಿದ್ದ ವಿವರ ನೋಡಿಕೊಂಡು ಬ್ಯಾಂಕಾಕ್ ಮಾದರಿಯಲ್ಲೇ ಕಡ್ಲೆ ಬೀಜ ರೆಡಿ ಮಾಡಿದಳು. ಅಪ್ಪ- ಮಗಳು ಸೇರಿ ಪ್ರತಿ ಬಾರಿ ಮಾಡುವಾಗಲೂ ಸುಧಾರಿಸುತ್ತಾ ಒಂದು ಹದ ಹಿಡಿದರು. ಆ ತೆಂಗಿನ ಹಾಲಿನ ಕಡ್ಲೆಬೀಜ ಮನೆಯವರಿಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೆ, ಗೆಳೆಯರಿಗೆ, ಬಂಧು- ಮಿತ್ರರಿಗೆಲ್ಲ ಪ್ರಿಯವಾಯಿತು. ತಿಂದವರೆಲ್ಲ ಸೂಪರ್.. ಸೂಪರ್... ಎನ್ನುತ್ತಿದ್ದರು. ಅದಕ್ಕವರು 'ಸೂಪರ್‌ನಟ್ಸ್' ಎಂದು ಹೆಸರಿಟ್ಟಿದ್ದಾರೆ.
ಕಪೆಕ್‌ನಿಂದ ಸಿಕ್ಕಿತು ಉದ್ಯಮರೂಪ: ದುಡ್ಡು ಕೊಡ್ತೀವಿ ಮಾಡಿಕೊಡು ಎಂದು ಕೃಷ್ಣಮೂರ್ತಿ ಅವರ ಮಗಳು 19 ವರ್ಷದ ಯೋಗಿತಾ ಮುಂದೆ ಬಂಧು ಮಿತ್ರರು ಬೇಡಿಕೆ ಇಟ್ಟರು. ಈ ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ಇವರ ಉತ್ಪನ್ನಕ್ಕೆ ವ್ಯಾಪಾರಿ ಸ್ವರೂಪ ದೊರೆತದ್ದು ಬೆಂಗಳೂರು ರಾಗಿಗುಡ್ಡದ ದೇವಸ್ಥಾನದಲ್ಲಿ ನಡೆಯುವ ಹನುಮ ಜಯಂತಿಯಲ್ಲಿ. ಯೋಗಿತಾ ತಾಯಿಯ ಗೆಳತಿಯಾದ, ಧಾರಾವಾಹಿ ನಟಿ ಪದ್ಮಕಲಾ ಅವರ ಪ್ರೇರಣೆ ಮತ್ತು ಸಹಕಾರದಿಂದ ಹನುಮ ಜಯಂತಿಯ ಎಕ್ಸಿಬಿಷನ್‌ನಲ್ಲಿ ಇವರ ಉತ್ಪನ್ನಗಳಿಗೆ ಮಳಿಗೆ ದೊರೆಯಿತು. ಓದುವಾಗಲೇ ಶುರುವಾದ ಈ ತೆಂಗಿನಹಾಲಿನ ಕಡ್ಲೆಬೀಜ ಹುರಿಯುವ ಕಾಯಕ ಈಗ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.
ಎಸ್ಎಸ್‌ವಿ ಫುಡ್ಸ್ (ಶ್ರೀ ಸಿದ್ದಿ ವಿನಾಯಕ ಫುಡ್ಸ್) ಸಂಸ್ಥಾಪಕಿ ಯೋಗಿತಾ ಜೊತೆಗೆ ಹೆಗಲು ಜೋಡಿಸಿದ್ದಾರೆ ಪತಿ ರಘುನಾಥ್. ಎಸ್‌ಎಸ್‌ವಿ ಫುಡ್‌ನ ಸೂಪರ್‌ನಟ್ ಈಗ ಎಲ್ಲೆಡೆ ಬೇಡಿಕೆ ಸೃಷ್ಟಿಸಿಕೊಂಡಿದೆ. ತೆಂಗಿನ ಹಾಲಿನದು ಮಾತ್ರವಲ್ಲದೆ ಒಟ್ಟು 9 ಬಗೆಯ ಹುರಿದ, ಕರಿದ ಕಡ್ಲೆಬೀಜಗಳು ಸೂಪರ್‌ನಟ್ಸ್ ಹೆಸರಲ್ಲಿ ತಯಾರಾಗುತ್ತಿವೆ. ಇತ್ತೀಚೆಗೆ ಸಿರಿಧಾನ್ಯ ಲೇಪನದ ಕಡ್ಲೆ ಬೀಜವನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಸ್‌ಎಸ್ ಫುಡ್ ನ ಯೋಗಿತಾ, 2001ರಿಂದಲೇ ಈ ಕೆಲಸಮಾಡುತ್ತಿದ್ದರೂ ಇದಕ್ಕೆ ಉದ್ಯಮದ ರೂಪ, ಸ್ವರೂಪ ಬಂದಿದ್ದು ಕಪೆಕ್‌ನಿಂದ ಎನ್ನುತ್ತಾರೆ ಯೋಗಿತಾ.
ಬೆನ್ನುಬಿದ್ದ ಅಧಿಕಾರಿಗಳು: 2001ರಿಂದಲೇ ಮನೆಯಲ್ಲಿ ಎಲ್ಲರ ಜೊತೆ ಸೇರಿ ಕಡ್ಲೆ ಬೀಜ ಹುರಿಯುವ ಕಾಯಕ ಮಾಡುತ್ತಲೇ, ಎಂಕಾಂ ಪದವಿ ಪಡೆದುಕೊಂಡರು ಯೋಗಿತಾ. ಮದುವೆಯಾಗಿ ಮಕ್ಕಳಾದ ನಂತರ ಅಂದರೆ 2010ರಲ್ಲಿ ಈ ಕೆಲಸಕ್ಕೆ ವಿರಾಮ ಹೇಳಿ ಮಕ್ಕಳನ್ನು ಸಲಹುವ ಕೆಲಸದಲ್ಲಿ ಬ್ಯುಸಿ ಯಾದರು. ಪತಿ ರಘುನಾಥ್ ಬೇರೆ ಕಂಪನಿ ಕೆಲಸದಲ್ಲಿದ್ದರು. 2017ರಲ್ಲಿ ತಮ್ಮ ವಿಶಿಷ್ಟ ತಯಾರಿಕಾ ಶೈಲಿಯಿಂದ ತಯಾರಿಸುತ್ತಿದ್ದ ಕಡ್ಲೆ ಬೀಜ ಉತ್ಪನ್ನವನ್ನೇ ಎಸ್‌ಎಸ್‌ಎ ಫುಡ್ಸ್ ಹೆಸರಲ್ಲಿ ಉದ್ಯಮ ವಾಗಿ ಪರಿವರ್ತಿಸಲು ದಂಪತಿ ಜೊತೆಯಾಗಿ ನಿಂತರು.
ಉದ್ಯಮ ಇನ್ನೇನು ಕೈ ಹಿಡಿಯಬೇಕು ಎನ್ನುವಷ್ಟರಲ್ಲಿ ಬಂದ ಕೊರೋನಾ ಈ ಸ್ಟಾರ್ಟ್ ಅಪ್ ಅನ್ನು ಲಾಕ್‌ಅಪ್ ಮಾಡಿಸುವ ಪರಿಸ್ಥಿತಿಗೆ ತಂದು ನಿಲ್ಲಿಸಿತು. ಸಾಲದ ಮೇಲೆ ನೀಡುತ್ತಿದ್ದ ಸರಕು ವ್ಯವಹಾರವನ್ನು ನಿಲ್ಲಿಸಿ, ನೇರ ವ್ಯಾಪಾರ ಮಾತ್ರ ಮುಂದುವರೆಸಿ ಹಾಗೋ ಹೀಗೋ ವ್ಯಾಪಾರ ತಳ್ಳುತ್ತಿದ್ದರು. '2022 ಏಪ್ರಿಲ್‌ನಲ್ಲಿ ಸರ್ಕಾರದ ಸರಸ್ ಮೇಳದಲ್ಲಿ ಕಪೆಕ್‌ನವರು ಮಳಿಗೆ ಹಾಕಿ ಸರ್ಕಾರದ ನೆರವಿನ ಮಾಹಿತಿ ನೀಡುತ್ತಿದ್ದರು. ಅಲ್ಲಿ ನಮ್ಮ ಹೆಸರು ನೊಂದಾಯಿಸಿ ಮಾಹಿತಿ ಪಡೆದು ಬಂದಿದ್ದೆವು.
ಸರ್ಕಾರದಿಂದ ನೆರವು ಪಡೆಯೋದು, ಅಲೆಯೋದು ಕಷ್ಟ ಎಂದುಕೊಂಡು ಸುಮ್ಮನಾಗಿದ್ದೆವು. ಆದರೆ, ನಮ್ಮ ಮಾಹಿತಿ ಪಡೆದಿದ್ದ ಕಪೆಕ್ ಅಧಿಕಾರಿಗಳು ನಮ್ಮ ಉತ್ಪಾದನಾ ಘಟಕಕ್ಕೇ ಬಂದರು. ನಮ್ಮ ಬೆನ್ನು ಬಿದ್ದು ದಾಖಲೆಗಳನ್ನು ಪಡೆದು ಕೇವಲ ಎರಡು ತಿಂಗಳಲ್ಲಿ ಅಂದರೆ ಜೂನ್‌ನಲ್ಲಿ 14.80 ಲಕ್ಷ ರು. ಸಬ್ಸಿಡಿ ಸಹಿತ 32 ಲಕ್ಷ ರು. ವೆಚ್ಚದಲ್ಲಿ ನಮ್ಮ ಘಟಕ ತಲೆ ಎತ್ತಲು ಕಾರಣರಾದರು. ಒಂದು ರೀತಿ ಕಣ್ಮುಚ್ಚಿ ಬಿಡುವುದರಲ್ಲಿ ಅಂತಾರಲ್ಲ ಹಾಗೆ ಕೇವಲ ಎರಡೂವರೆ ತಿಂಗಳಲ್ಲಿ ನಮ್ಮ ಚಿಲ್ಲರೆ ವ್ಯಾಪಾರ ಉದ್ಯಮವಾಗಿ ಬದಲಾಗಿತ್ತು' ಎಂದು ಕಪೆಕ್ ಸಹಕಾರವನ್ನು ಸಂತಸದಿಂದ ವಿವರಿಸುತ್ತಾರೆ ಯೋಗಿತಾ. ಕಪೆಕ್ ಸಹಕಾರದಿಂದ ಐದು ವರ್ಷದಲ್ಲಿ ಆಗುವ ಬೆಳವಣಿಗೆ ಕೇವಲ ಒಂದು ವರ್ಷದಲ್ಲಿ ಸಾಧ್ಯವಾಯ್ತು ಎನ್ನುವ ಯೋಗಿತಾ, ಅಂದು ಸುಮ್ಮನೆ ಕುರುಕಲು ಎಂದು ಮಾಡಿದ ಪ್ರಯೋಗ ಬದುಕು ಕಟ್ಟಿಕೊಟ್ಟಿತು ಅಂತ ಮನೆಯಲ್ಲಿ ನಾವು ಅನೇಕ ಬಾರಿ ಅಂದುಕೊಂಡಿದ್ದೇವೆ. ಈಗ ವಾರ್ಷಿಕ 60 ಲಕ್ಷ ರುಪಾಯಿ ವಹಿವಾಟು ನಡೆಸುತ್ತಿದ್ದೇವೆ. ಮುಂದಿನ ವರ್ಷ ಒಂದು ಕೋಟಿ ದಾಟುವ ಗುರಿ ಇದೆ. ರಫ್ರಿಗೂ ಸಿದ್ದತೆ ನಡೆಯುತ್ತಿದೆ ಎನ್ನುತ್ತಾರೆ. ಎಸ್‌ಎಸ್‌ವಿ ಫುಡ್ಸ್‌ನ ಉತ್ಪನ್ನಗಳಿಗೆ- 98452- 63716 ಸಂಪರ್ಕಿಸಬಹುದು.
ನೀವೂ ಉದ್ಯಮಿಗಳಾಗಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರು.ವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಸ್‌ಲೈನ್ ಸಂಪರ್ಕಿಸಿ - 080 - 22271192 & 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ. www.kappec. karnataka.gov.in