ಹೆಬ್ಬಾಳ ಮೂಲಕ ಏರ್ಪೋರ್ಟ್‌ಗೆ ಸಂಚರಿಸುವ ವಾಹನಗಳಿಗೆ ಪೂರ್ಣ ಸಿಗ್ನಲ್‌ ಫ್ರೀ ವ್ಯವಸ್ಥೆಗೆ ನಿರ್ಧಾರ

KannadaprabhaNewsNetwork |  
Published : Nov 29, 2024, 01:01 AM ISTUpdated : Nov 29, 2024, 07:03 AM IST
ಹೆಬ್ಬಾಳ ಮೇಲ್ಸೇತುವೆ | Kannada Prabha

ಸಾರಾಂಶ

ಹೆಬ್ಬಾಳ ಮೂಲಕ  ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳಿಗೆ ಪೂರ್ಣ ಪ್ರಮಾಣದ ಸಿಗ್ನಲ್‌ ಫ್ರೀ ವ್ಯವಸ್ಥೆ ಮಾಡಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  ಅತಿಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿರುವ ಸಾದಹಳ್ಳಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

ಗಿರೀಶ್‌ ಗರಗ

 ಬೆಂಗಳೂರು : ಹೆಬ್ಬಾಳ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಚರಿಸುವ ವಾಹನಗಳಿಗೆ ಪೂರ್ಣ ಪ್ರಮಾಣದ ಸಿಗ್ನಲ್‌ ಫ್ರೀ ವ್ಯವಸ್ಥೆ ಮಾಡಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅತಿಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿರುವ ಸಾದಹಳ್ಳಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿತ್ಯ 750 ವಿಮಾನಗಳು ಹಾರಾಟ ನಡೆಸುತ್ತಿದ್ದು, 1 ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುವವರಲ್ಲಿ ಶೇ. 80ರಷ್ಟು ಪ್ರಯಾಣಿಕರು ಹೆಬ್ಬಾಳ ಮಾರ್ಗವಾಗಿಯೇ ಬರುತ್ತಾರೆ. ಹೀಗೆ ಹೆಬ್ಬಾಳ ಮೂಲಕವಾಗಿ ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳಿಗಾಗಿ ಎನ್‌ಎಚ್‌ಎಐ ಹೆಬ್ಬಾಳ ಎಸ್ಟೀಂ ಮಾಲ್‌ ಮುಂಭಾಗದಿಂದ ಯಲಹಂಕ ವಾಯುನೆಲೆವರೆಗೆ ಸುಮಾರು 13 ಕಿಮೀವರೆಗೆ ಮೇಲ್ಸೇತುವೆ ನಿರ್ಮಿಸಿದೆ. ಅದಾದ ನಂತರವೂ ಸಿಗುವ ಗ್ರಾಮಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಿ ಸಿಗ್ನಲ್‌ ಫ್ರೀ ಮಾಡಲಾಗಿದೆ.

ಆದರೆ, ಟೋಲ್‌ಪ್ಲಾಜಾ ಬಳಿಯ ಸಾದಹಳ್ಳಿ ಜಂಕ್ಷನ್‌ನಲ್ಲಿ ಯಾವುದೇ ರೀತಿಯ ಕೆಳ ಅಥವಾ ಮೇಲ್ಸೇತುವೆ ಇಲ್ಲದ ಕಾರಣ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರು ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಅನಾನುಕೂಲವಾಗುತ್ತಿದೆ. ಅದನ್ನು ನಿವಾರಿಸಲು ಇದೀಗ ಸಾದಹಳ್ಳಿ ಜಂಕ್ಷನ್‌ ಬಳಿ ಮೇಲ್ಸೇತುವೆ ನಿರ್ಮಿಸಲು ಎನ್‌ಎಚ್‌ಎಐ ಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

2 ಲಕ್ಷಕ್ಕೂ ಹೆಚ್ಚಿನ ವಾಹನಗಳಿಗೆ ಅನುಕೂಲ:

ಹೆಬ್ಬಾಳವರೆಗಿನ ರಸ್ತೆಯನ್ನು ಬಿಡಿಎ ನಿರ್ವಹಣೆ ಮಾಡಿದರೆ ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗಿನ 28 ಕಿಮೀಗೂ ಹೆಚ್ಚಿನ ಉದ್ದದ ಮಾರ್ಗವನ್ನು ಎನ್‌ಎಚ್‌ಎಐ ನಿರ್ವಹಣೆ ಮಾಡುತ್ತದೆ. ಹೀಗಾಗಿಯೇ ಸಾದಹಳ್ಳಿ ಜಂಕ್ಷನ್‌ಗಿಂತ ಮುಂದೆ ಟೋಲ್‌ ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ, ಸಾದಹಳ್ಳಿ ಜಂಕ್ಷನ್‌ನಲ್ಲಿ ಕೆಳ ಮತ್ತು ಮೇಲ್ಸೇತುವೆ ಇಲ್ಲದ ಕಾರಣ ಅಲ್ಲಿ ಸಂಚಾರ ಸಿಗ್ನಲ್‌ಯಿದ್ದು, ಅದರಿಂದ ಸಂಚಾರ ದಟ್ಟಣೆ ವಿಪರೀತ ಹೆಚ್ಚುತ್ತದೆ. 

ಅದಾದ ನಂತರ ಟೋಲ್‌ ಶುಲ್ಕ ಪಾವತಿಸಲು ವಾಹನಗಳು ಮತ್ತೆ ನಿಲ್ಲಲಿವೆ. ಹೀಗಾಗಿ ಎರಡೆರಡು ಕಡೆಗಳಲ್ಲಿ ವಾಹನಗಳು ಸಂಚಾರ ದಟ್ಟಣೆ ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಸಾದಹಳ್ಳಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸುವುದರಿಂದ ಈ ಸಂಚಾರ ದಟ್ಟಣೆಯಲ್ಲಿ ಸಿಲುಕುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೆ, ಈ ಕ್ರಮದಿಂದಾಗಿ ನಿತ್ಯ ಸಂಚರಿಸಲಿರುವ 2 ಲಕ್ಷಕ್ಕೂ ಹೆಚ್ಚಿನ ವಾಹನಗಳಿಗೆ ಅನುಕೂಲವಾಗಲಿದೆ.

ಮೇಲ್ಸೇತುವೆ ಕೆಳಭಾಗದ ಸಿಗ್ನಲ್‌ಗಳಲ್ಲೂ ಪರ್ಯಾಯ ವ್ಯವಸ್ಥೆ?

ಹೆಬ್ಬಾಳದಿಂದ ಯಲಹಂಕ ವಾಯುನೆಲೆವರೆಗಿನ ಮೇಲ್ಸೇತುವೆಯ ಕೆಳಭಾಗದಲ್ಲಿ ಕೊಡಿಗೆಹಳ್ಳಿ, ಬ್ಯಾಟರಾಯನಪುರ, ಜಕ್ಕೂರು, ಅಲ್ಲಾಳಸಂದ್ರ ಸೇರಿ ಮತ್ತಿತರ ಕಡೆಗಳಲ್ಲಿ ಸಂಚಾರ ಸಿಗ್ನಲ್‌ಗಳು ಸಿಗುತ್ತವೆ. ಅಲ್ಲದೆ, ವಾಹನಗಳು ಹೆಬ್ಬಾಳದಲ್ಲಿ ಮೇಲ್ಸೇತುವೆಯನ್ನು ಹತ್ತದೇ ಮಧ್ಯಭಾಗದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಬಳ್ಳಾರಿ ರಸ್ತೆಗೆ ಬಂದರೆ ಮತ್ತೆ ಮೇಲ್ಸೇತುವೆ ಹತ್ತಲು ಸಾಧ್ಯವಿಲ್ಲ. ಹೀಗಾಗಿ, ಸಿಗ್ನಲ್‌ಗಳ ನಡುವೆ ಸಿಲುಕಿಯೇ ಯಲಹಂಕ ವಾಯುನೆಲೆವರೆಗೆ ತೆರಳಿ ಅಲ್ಲಿಂದ ಸಿಗ್ನಲ್‌ ಮುಕ್ತ ರಸ್ತೆಯಲ್ಲಿ ಸಂಚರಿಸಬೇಕಿದೆ. ಹೀಗಾಗಿ ಮೇಲ್ಸೇತುವೆ ಕೆಳಭಾಗದಲ್ಲಿ ಸಂಚರಿಸುವ ವಾಹನಗಳಿಗೂ ಸಿಗ್ನಲ್‌ ಮುಕ್ತವನ್ನಾಗಿಸುವ ಸಲುವಾಗಿ ಸಿಗ್ನಲ್‌ಗಳ ಬಳಿ ಕೆಳಸೇತುವೆ ನಿರ್ಮಿಸುವ ಕುರಿತಂತೆಯೂ ಚರ್ಚೆಗಳನ್ನು ನಡೆಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗಾಗಿ ಸಾದಹಳ್ಳಿ ಜಂಕ್ಷನ್‌ವರೆಗೆ ಸಿಗ್ನಲ್‌ ಮುಕ್ತ ವ್ಯವಸ್ಥೆಯಿದೆ. ಹೆಬ್ಬಾಳದಿಂದ ಆರಂಭವಾಗುವ ಮೇಲ್ಸೇತುವೆಯು ವಾಹನಗಳಿಗೆ ಯಾವುದೇ ಸಂಚಾರ ಸಿಗ್ನಲ್‌ ಸಿಗದಂತೆ ಮಾಡಲಿದೆ. ಆದರೆ, ಸಾದಹಳ್ಳಿ ಜಂಕ್ಷನ್‌ ಬಳಿ ಸಂಚಾರ ಸಿಗ್ನಲ್‌ ಇರುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಅಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜಿಸಲಾಗಿದ್ದು, ಶೀಘ್ರದಲ್ಲಿ ಅದರ ಕಾರ್ಯ ಆರಂಭಿಸಲಾಗುವುದು.

- ವಿ.ಪಿ.ಬ್ರಹ್ಮಂಕರ್‌, ಪ್ರಾದೇಶಿಕ ಅಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

PREV

Recommended Stories

ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಅತ್ಯಂತ ಮನಮೋಹಕ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 650