ಮನೇಲಿರುವ ಚಿನ್ನ ಬ್ಯಾಂಕಲ್ಲಿಡಿ, ಲಾಭ ಪಡಿ

Published : Jul 07, 2026, 01:31 PM IST
Gold

ಸಾರಾಂಶ

ಹಳೆ ಚಿನ್ನ ಆಪದ್ಧನವಾಗಿ ಹಲವರ ಮನೆಯಲ್ಲಿರುತ್ತದೆ. ಅದರ ಬಳಕೆ ಇರುವುದಿಲ್ಲ. ಮನೆಯಲ್ಲಿಟ್ಟುಕೊಂಡರೆ ಕದಿಯುವ ಭಯ, ಬ್ಯಾಂಕಲ್ಲಿ ಇಟ್ಟರೆ ಲಾಕರ್‌ಗೆ ಪ್ರತ್ಯೇಕ ಹಣ ನೀಡಬೇಕಾದ ಅರೆ ಮನಸ್ಸು. ಆದರೆ ನಿಮ್ಮ ಹಳೆ ಚಿನ್ನಕ್ಕೆ ಸೇಫ್ಟಿಕೊಟ್ಟು ಅದರ ಮೇಲಿಂದ ಬಡ್ಡಿಯೂ ಕೊಟ್ಟರೆ.

 ಹಳೆ ಚಿನ್ನ ಆಪದ್ಧನವಾಗಿ ಹಲವರ ಮನೆಯಲ್ಲಿರುತ್ತದೆ. ಅದರ ಬಳಕೆ ಇರುವುದಿಲ್ಲ. ಮನೆಯಲ್ಲಿಟ್ಟುಕೊಂಡರೆ ಕದಿಯುವ ಭಯ, ಬ್ಯಾಂಕಲ್ಲಿ ಇಟ್ಟರೆ ಲಾಕರ್‌ಗೆ ಪ್ರತ್ಯೇಕ ಹಣ ನೀಡಬೇಕಾದ ಅರೆ ಮನಸ್ಸು. ಆದರೆ ನಿಮ್ಮ ಹಳೆ ಚಿನ್ನಕ್ಕೆ ಸೇಫ್ಟಿಕೊಟ್ಟು ಅದರ ಮೇಲಿಂದ ಬಡ್ಡಿಯೂ ಕೊಟ್ಟರೆ.. ಅಂಥದ್ದೊಂದು ಸ್ಕೀಮ್‌ ಅನ್ನು ಕೇಂದ್ರ ಸರ್ಕಾರ ಕೆಲವೇ ದಿನಗಳಲ್ಲಿ ಜಾರಿಗೆ ತರಲಿದೆ. ಅದರ ಹೆಸರು ಗೋಲ್ಡ್ ಮಾನಿಟೈಸೇಶನ್‌ ಸ್ಕೀಮ್‌.

ಹಳೆ ಚಿನ್ನಕ್ಕೆ ಹೊಳಪು

ಮನೆಯಲ್ಲಿ ಲಾಕರ್‌ನಲ್ಲಿರುವ ಅಥವಾ ಧೂಳು ತಿನ್ನುತ್ತಿರುವ ಹಳೆಯ ಚಿನ್ನಕ್ಕೆ ಬಡ್ಡಿ ಗಳಿಸಿಕೊಡುವ ಯೋಜನೆ ಇದು. ಇದರಲ್ಲಿ ಹಳೆಯ ಒಡವೆಗಳು, ನಾಣ್ಯ ಅಥವಾ ಬಾರ್‌ಗಳ ರೂಪದಲ್ಲಿರುವ ಚಿನ್ನದಿಂದ ಅದರಿಂದ ನಿಯಮಿತವಾಗಿ ಆದಾಯ ಗಳಿಸುತ್ತ ಹೋಗಬಹುದು.

ಪ್ರಕ್ರಿಯೆ ಹೇಗೆ?

ಹಳೆಯ ಚಿನ್ನವನ್ನು ಬ್ಯಾಂಕ್‌ಗೆ ನೀಡಿದಾಗ, ಅದನ್ನು ಕರಗಿಸಿ ಅದರ ಶುದ್ಧತೆಯನ್ನು ಪರೀಕ್ಷಿಸಲಾಗುತ್ತದೆ. ನಂತರ ಆ ಚಿನ್ನದ ತೂಕಕ್ಕೆ ತಕ್ಕಂತೆ ನಿಮ್ಮ ಹೆಸರಿನಲ್ಲಿ ಚಿನ್ನದ ಉಳಿತಾಯ ಖಾತೆಯನ್ನು ತೆರೆಯಲಾಗುತ್ತದೆ. ಇಲ್ಲಿ ಮುಖ್ಯವಾದ ವಿಷಯವೆಂದರೆ, ನಿಮಗೆ ಬಡ್ಡಿ ಸಿಗುವುದು ಹಣದ ರೂಪದಲ್ಲಲ್ಲ, ಬದಲಿಗೆ ಚಿನ್ನದ ರೂಪದಲ್ಲಿ. ಅದನ್ನು ಮುಂದೆ ನಗದಾಗಿ ಪರಿವರ್ತಿಸಿಕೊಳ್ಳಬಹುದು.

ಹೂಡಿಕೆ ಮಾಡುವುದು ಹೇಗೆ?

ಮೊದಲು ಸರ್ಕಾರದ ಅಧಿಕೃತತೆ ಇರುವ ಪ್ಯೂರಿಟಿ ಟೆಸ್ಟಿಂಗ್ ಸೆಂಟರ್‌ಗೆ ಹೋಗಿ ಚಿನ್ನವನ್ನು ಕೊಡಬೇಕು. ಅವರು ನಮ್ಮ ಕಣ್ಣೆದುರಿಗೆ ಚಿನ್ನವನ್ನು ಕರಗಿಸಿ, ಅದರ ಶುದ್ಧತೆಯ ಪ್ರಮಾಣಪತ್ರವನ್ನು ನೀಡುತ್ತಾರೆ. ಈ ಸರ್ಟಿಫಿಕೇಟ್‌ನೊಂದಿಗೆ ಚಿನ್ನವನ್ನು ಬ್ಯಾಂಕ್‌ನಲ್ಲಿ ಜಮಾ ಮಾಡಿದರೆ, ನಿಮ್ಮ ಗೋಲ್ಡ್ ಮಾನಿಟೈಸೇಶನ್ ಖಾತೆ ಸಕ್ರಿಯವಾಗುತ್ತದೆ. ಕನಿಷ್ಠ 10 ಗ್ರಾಂ ಚಿನ್ನದಿಂದ ಹೂಡಿಕೆ ಆರಂಭಿಸಬಹುದು.

ಬಡ್ಡಿ ಹೇಗೆ ಸಿಗುತ್ತದೆ ಮತ್ತು ಲಾಭವೇನು?

ಎಷ್ಟು ಸಮಯಕ್ಕೆ ಚಿನ್ನವನ್ನು ಇಡುತ್ತೇವೆ ಎಂಬ ಅವಧಿಯ ಆಧಾರದ ಮೇಲೆ (ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿ) ಬ್ಯಾಂಕುಗಳು ಶೇಕಡಾ 2.25 ರಿಂದ 2.50ರವರೆಗೆ ವಾರ್ಷಿಕ ಬಡ್ಡಿಯನ್ನು ನೀಡುತ್ತವೆ. ಇದು ಹೇಗೆ ಲಾಭದಾಯಕ ಎಂದರೆ, ಒಂದು ಕಡೆ ಚಿನ್ನಕ್ಕೆ ವಾರ್ಷಿಕ ಬಡ್ಡಿ ಹಣ ಸಿಗುತ್ತಿರುತ್ತದೆ. ಇನ್ನೊಂದು ಕಡೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾದಂತೆ ನಿಮ್ಮ ಹೂಡಿಕೆಯ ಮೌಲ್ಯವೂ ಬೆಳೆಯುತ್ತಾ ಹೋಗುತ್ತದೆ. ಅಲ್ಲಿಗೆ ಈ ಯೋಜನೆಯಿಂದ ಬಡ್ಡಿ ಬರುತ್ತದೆ, ಹೂಡಿಕೆಯನ್ನೂ ಮಾಡಿದಂತಾಗುತ್ತದೆ, ಜೊತೆಗೆ ಇಲ್ಲಿ ಚಿನ್ನದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಈ ಸ್ಕೀಮ್‌ ಮೆಚ್ಯೂರ್‌ ಆದ ಮೇಲೆ ಅಸಲು ಮತ್ತು ಬಡ್ಡಿಯನ್ನು ಚಿನ್ನದ ರೂಪದಲ್ಲಿ ಅಥವಾ ಆ ಹೊತ್ತಿಗೆ ನಾವು ಇಟ್ಟ ಚಿನ್ನಕ್ಕೆ ಎಷ್ಟು ಬೆಲೆ ಇರುತ್ತದೋ ಆ ಮೊತ್ತವನ್ನು ನಗದು ರೂಪದಲ್ಲಿ ಹಿಂಪಡೆಯಬಹುದು.

ಸುರಕ್ಷತೆ ಹೇಗೆ?

ಚಿನ್ನವನ್ನು ಮನೆಯಲ್ಲಿಟ್ಟರೆ ಕಳ್ಳತನವಾಗುವ ಭಯ. ಆದರೆ ಈ ಯೋಜನೆಯಲ್ಲಿ ನಮ್ಮ ಚಿನ್ನ ನೇರವಾಗಿ ಸರ್ಕಾರದ ಉಸ್ತುವಾರಿಯಲ್ಲಿ ಬ್ಯಾಂಕ್‌ಗಳ ಬಳಿ ಇರುವುದರಿಂದ ನೂರಕ್ಕೆ ನೂರು ಸುರಕ್ಷತೆ ಇರುತ್ತದೆ. ಲಾಕರ್ ಬಾಡಿಗೆ ಕಟ್ಟುವ ಕಿರಿಕಿರಿ ಇರುವುದಿಲ್ಲ.

ಇನ್ನೊಂದು ವಿಚಾರ ಎಂದರೆ ಇಲ್ಲಿ ಚಿನ್ನವನ್ನು ಕರಗಿಸಿ ಸಂಗ್ರಹ ಮಾಡಲಾಗುತ್ತದೆ. ಪಾರಂಪರಿಕ ಡಿಸೈನ್‌ನ ಒಡವೆಗಳನ್ನು ಕರಗಿಸುವ ಮನಸ್ಸಿಲ್ಲದಿದ್ದರೆ ಇದು ಪ್ರಯೋಜನಕ್ಕೆ ಬರದು. ಆದರೆ ಮನೆಯಲ್ಲಿ ಬಳಕೆಗೆ ಸಿಗದಂತೆ ಸುಮ್ಮನೆ ಬಿದ್ದಿರುವ ಚಿನ್ನವನ್ನು ಇದರಲ್ಲಿ ಹೂಡಿಕೆ ಮಾಡಬಹುದು. ಇದರಿಂದ ದೇಶದ ಆರ್ಥಿಕತೆಗೂ ಸಣ್ಣ ಕೊಡುಗೆ ನೀಡಿದ ಹಾಗಾಗುತ್ತದೆ. ವೈಯಕ್ತಿಕವಾಗಿಯೂ ಲಾಭ ಸಿಗುತ್ತದೆ.

PREV
Read more Articles on

Recommended Stories

ಭಾರತಾಂಬೆಯ ಹೆಮ್ಮೆಯ ಪುತ್ರ ಡಾ। ಶ್ಯಾಮ ಮುಖರ್ಜಿ
ಕಲಬುರಗಿ ಲೀಡರ್‌ ಮಂದಿ ಸ್ಟ್ರಾಂಗ್‌ ಮಾತಾಡೋದಿಲ್ವಾ?