ನಮ್ಮ ಬೇಡಿಕೆಗೆ ಹತ್ತಿರವಾದಂತಹ ವಿಡಿಯೋ ಸೃಷ್ಟಿಸಿಕೊಡುತ್ತದೆ ಡಿಫ್ಯೂಶನ್ ಮಾಡೆಲ್ ‘ಸೋರಾʼ ಓಪನ್ ಎಐ

ಸಾರಾಂಶ

ನನಗೆ ಇಂಥ ವೀಡಿಯೋ ಬೇಕು ಎಂದು ವಿಸ್ತೃತವಾಗಿ ಬರೆದುಕೊಟ್ಟರೆ ಸೋರಾ ನಮ್ಮ ಬೇಡಿಕೆಗೆ ಹತ್ತಿರವಾದಂತಹ ವಿಡಿಯೋ ಸೃಷ್ಟಿಸಿಕೊಡುತ್ತದೆ. ಈ ಮೊದಲು ನೀವು ಎಐ ಉಪಕರಣಗಳಿಂದ ಚಿತ್ರಗಳನ್ನು ಬರೆಸಿಕೊಂಡಿದ್ದರೆ ಇದು ಅದರ ಮುಂದುವರಿಕೆಯಷ್ಟೇ.

ಮಧು ವೈ ಎನ್

‘ಸೋರಾʼ ಎಂಬುದು ಓಪನ್ ಎಐ ಕಂಪನಿ ಡಿಸೆಂಬರ್ 2024ರಲ್ಲಿ ಬಿಡುಗಡೆಗೊಳಿಸಿರುವ ಪಠ್ಯದಿಂದ ವಿಡಿಯೋ ಸೃಷ್ಟಿಸುವ ಎಐ ಉಪಕರಣ. ನನಗೆ ಇಂಥ ವೀಡಿಯೋ ಬೇಕು ಎಂದು ವಿಸ್ತೃತವಾಗಿ ಬರೆದುಕೊಟ್ಟರೆ ಸೋರಾ ನಮ್ಮ ಬೇಡಿಕೆಗೆ ಹತ್ತಿರವಾದಂತಹ ವಿಡಿಯೋ ಸೃಷ್ಟಿಸಿಕೊಡುತ್ತದೆ. ಈ ಮೊದಲು ನೀವು ಎಐ ಉಪಕರಣಗಳಿಂದ ಚಿತ್ರಗಳನ್ನು ಬರೆಸಿಕೊಂಡಿದ್ದರೆ ಇದು ಅದರ ಮುಂದುವರಿಕೆಯಷ್ಟೇ.

ಇದರ ಹಿಂದಿನ ತಾಂತ್ರಿಕ ಶಕ್ತಿಯನ್ನು ಡಿಫ್ಯೂಶನ್ ಮಾಡೆಲ್ ಎನ್ನುತ್ತಾರೆ. ಸ್ಥೂಲವಾಗಿ ಇದು ಮಾಡುವುದು ಇಷ್ಟು. ತರಬೇತಿ ಸಮಯದಲ್ಲಿ ಲಭ್ಯವಿರುವ ವಿಡಿಯೋ ಮತ್ತು ಫೋಟೋಗಳನ್ನು ಎತ್ತಿಕೊಂಡು ಗಜಿಬಿಜಿ (adding noise) ಮಾಡುತ್ತದೆ. ಆನಂತರ ಅದನ್ನು ಚಿಂದಿ ಚಿಂದಿ (visual patches) ಮಾಡುತ್ತದೆ. ಭಾಷಾ ಮಾಡೆಲ್ಲುಗಳಲ್ಲಿ ಟೋಕನ್‌ಗಳಿದ್ದಂತೆ ಈ ಚಿಂದಿಗಳು.ಅದರ ನಂತರ ಈ ಅರ್ಥವಿಲ್ಲದ ಚಿಂದಿಗಳಿಂದ ಹೊಸತಾದ ಬೇರೆಯದೇ ಆದ ಅರ್ಥಪೂರ್ಣ ಫೋಟೋ ಅಥವಾ ವಿಡಿಯೋಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ತಪ್ಪು ಮಾಡುತ್ತ ತಿದ್ದಿಕೊಳ್ಳುತ್ತಾ ನಿರಂತರ ಶ್ರಮದಿಂದ ಬಳಕೆದಾರನ ಬೇಡಿಕೆಗೆ ತಕ್ಕಂತ ವಿಡಿಯೋ ಸೃಷ್ಟಿಸುವ ಕಲೆ ಕಲಿತುಕೊಳ್ಳುತ್ತದೆ. ಮಜಾ ಏನಂದರೆ ಕಲಿಕೆ ಸಾಧಾರಣ ವಿಡಿಯೋಗಳಿಂದಲೇ ಆದರೂ ತಾನು ಉತ್ಪಾದಿಸುವ ವಿಡಿಯೋಗಳು ಮಾತ್ರ ಜಗತ್ತಿನ ಶ್ರೇಷ್ಠ ಸ್ಟುಡಿಯೋಗಳು ಸೃಷ್ಟಿಸುವ ವಿಡಿಯೋಗಳಷ್ಟೇ ಗುಣಮಟ್ಟದ್ದಾಗಿವೆ.

ಸರಿ, ಸೋರಾದ ಸಾಮರ್ಥ್ಯಗಳೇನು?

ಇದು ಸೆಕೆಂಡುಗಳಿಂದ ಹಿಡಿದು ನಿಮಿಷದಷ್ಟು ಉದ್ದದ, ಪರದೆಗಳ ವಿಧವಿಧ ಗಾತ್ರಕ್ಕೆ ತಕ್ಕ ಹಾಗೆ ವಿಡಿಯೋಗಳನ್ನು ಸೃಷ್ಟಿಸಬಲ್ಲದು. ನಾವು ಹೆಚ್ಚು ವಿವರಗಳನ್ನು ಕೊಟ್ಟಷ್ಟೂ ಅದು ನಮ್ಮನಿರೀಕ್ಷೆಗೆ ಹತ್ತಿರವಾದ ವಿಡಿಯೋಗಳನ್ನು ಮಾಡಿಕೊಡುತ್ತದೆ. ಬಳಕೆದಾರರು ಸೋಂಬೇರಿ ಇರ್ತಾರೆ ಅಂತಲೇ ಸೋರಾ ಒಂದು ಹೊಸ ಐಡಿಯಾ ಕಂಡುಕೊಂಡಿದೆ. ನಾವು ಬರೆದ ಹರುಕು ಮುರುಕು ಸಾಲುಗಳನ್ನು ಚಾಚ್‌ ಜಿಪಿಟಿಗೆ ಕೊಟ್ಟು ಅದರಿಂದ ವಿಸ್ತ್ರೃತವಾದ ಸಾಲುಗಳನ್ನು ಬರೆಸಿಕೊಳ್ಳುತ್ತದೆ. ಈಗಾಗಲೇ ನಮ್ಮ ಬಳಿ ಇರುವ ಫೋಟೋ ಅಥವಾ ವಿಡಿಯೋ ಕೊಟ್ಟು ಇದನ್ನು ಹೀಗೆ ಮಾರ್ಪಡಿಸು ಎಂದು ಕೇಳಿದರೆ ಅದರಂತೆ ಬದಲಾಯಿಸಿ ಕೊಡುತ್ತದೆ. ಉದಾಹರಣೆಗೆ ಒಣ ಕಾಡಿನಲ್ಲಿ ಚಿತ್ರೀಕರಿಸಿದ ದೃಶ್ಯವನ್ನು ಕೊಟ್ಟು ಈ ಕಾಡನ್ನು ಹಸಿರನ್ನಾಗಿಸು ಅಥವಾ ಮಳೆ ಬರಿಸು ಎಂದರೆ ಸಲೀಸಾಗಿ ಮಾಡಿಕೊಡುತ್ತದೆ.ಒಂದು ವಿಡಿಯೋ ಸೃಷ್ಟಿಸಿದ ನಂತರ, ಅದರ ಹಿಂದೆ ಏನಾಗಿತ್ತು, ಅದರ ನಂತರ ಏನಾಗುತ್ತದೆ ಎಂಬ ವಿವರಣೆ ಕೊಟ್ಟರೆ ಅದಕ್ಕೆ ತಕ್ಕಂತೆ ಸೋರಾ ಕತೆಯ ಹಿಂದಿನ ಮತ್ತು ಮುಂದಿನ ದೃಶ್ಯವನ್ನು ಸೃಷ್ಟಿಸಿ ವಿಡಿಯೋವನ್ನು ವಿಸ್ತರಿಸಿಕೊಡುತ್ತದೆ. ಹೀಗೆ ಹಿಗ್ಗಿಸುವ ಗುಣ ಮಿಡ್‌ಜರ್ನಿಗಳಂತಹ ಫೋಟೋ ಸೃಷ್ಟಿಸುವ ಎಐ ಉಪಕರಣಗಳಲ್ಲಿ ಈಗಾಗಲೇ ಇತ್ತು. ಫೋಟೋವನ್ನು ಝೂಮ್-ಔಟ್ ಮಾಡಿದಾಗ ಅಥವಾ ಚಿತ್ರವನ್ನು ಎಡಕ್ಕೆ ಅಥವಾ ಬಲಕ್ಕೆ ಜರುಗಿಸಿದಾಗ ನಮ್ಮ ಬೇಡಿಕೆಗೆ ತಕ್ಕಂತೆ ಅದರ ಸುತ್ತ ಇರುವ ಚಿತ್ರವನ್ನು ಕಲ್ಪಿಸಿ ವಿಸ್ತರಿಸುತ್ತಿತ್ತು. ಸೋರಾ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಹಳೆಯ ಫೋಟೋ ಕೊಟ್ಟರೆ ಆ ದಿನ ಆ ಕ್ಷಣ ಹಿಂದಿನ ಮತ್ತು ಮುಂದಿನ ದೃಶ್ಯವನ್ನು ಊಹಿಸಿಕೊಂಡು ವಿಡಿಯೋ ಮಾಡಿಕೊಡುತ್ತದೆ. ಅಂತೆಯೇ ಎರಡು ಸಂಬಂಧವೇ ಇರದ ವಿಡಿಯೋಗಳನ್ನು ಕೊಟ್ಟು ಒಂದನ್ನು ಇನ್ನೊಂದರಂತೆ ಮಾರ್ಪಡಿಸು(ರಿಮಿಕ್ಸ್) ಎಂದರೆ ಮಾಡಿಕೊಡುತ್ತದೆ. ಉದಾಹರಣೆಗೆ ಮಂಜು ಉದುರುವ ವಿಡಿಯೋ ನೀಡಿ ಹೂ ಉದುರುವಂತೆ ಮಾಡಿಕೊಡು ಎಂದರೆ ಅದು ಮಂಜಿನ ತುಣುಕಿನ ಜಾಗದಲ್ಲಿ ಹೂಗಳನ್ನಿಟ್ಟು ಮಾರ್ಪಡಿಸುತ್ತದೆ. ಅಂತೆಯೇ ಎರಡು ಭಿನ್ನ ವಿಡಿಯೋಗಳನ್ನು ನಯಸ್ಸಾಗಿ ಜೋಡಿಸಿ(ಬ್ಲೆಂಡ್) ಒಂದೇ ವಿಡಿಯೋ ಮಾಡಿಕೊಡುವ ಶಕ್ತಿಯಿದೆ. ಉದಾಹರಣೆಗೆ ಒಂದು ಡ್ರೋನ್ ಹಾರುವ ಇನ್ನೊಂದು ಚಿಟ್ಟೆ ಹಾರುವ ವಿಡಿಯೋಗಳನ್ನು ಕೊಟ್ಟರೆ ಡ್ರೋನು ಚಿಟ್ಟೆಯಾಗಿ ರೂಪಾಂತರಗೊಂಡಂತೆ ಜೋಡಿಸಿಕೊಡುತ್ತದೆ. ಇದರ ಇನ್ನೊಂದು ವಿಶೇಷವೆಂದರೆ ಕ್ಯಾಮೆರಾವನ್ನು ಹಿಂಗಿಂಗೇ ಚಲಿಸು ಎಂದು ಕೇಳುತ್ತಾ ಕ್ಯಾಮೆರಾ ಚಲಿಸಿದಂತೆಲ್ಲಾ ದೃಶ್ಯದಲ್ಲಿನ ವ್ಯಕ್ತಿಗಳು ದೃಶ್ಯದಿಂದ ಹೊರಹೋಗಿ ಪುನಃ ದೃಶ್ಯಕ್ಕೆ ಮರಳಿದಾಗ ಅದೇ ಬಟ್ಟೆಯ ಅದೇ ವ್ಯಕ್ತಿಗಳಿದ್ದು ಒಂದು ವೇಳೆ ಅವರು ರಸ್ತೆಯನ್ನು ದಾಟಲು ಕಾಯುತ್ತಾ ನಿಂತಿದ್ದರೆ ಪುನಃ ದೃಶ್ಯಕ್ಕೆ ಮರಳಿದಾಗ ರಸ್ತೆಯನ್ನು ದಾಟಿರುತ್ತಾರೆ! ಇದನ್ನು temporal ಮತ್ತು spatial consistency ಎನ್ನುತ್ತಾರೆ. ಅರ್ಥಾತ್‌ ಸೋರಾ ದೃಶ್ಯದ ಸಮಯ ಮತ್ತು ಸ್ಥಳಗಳ ಒಟ್ಟಂದವನ್ನುಕಾಪಾಡಿಕೊಳ್ಳುತ್ತದೆ. ಒಂದು ವಿಡಿಯೋದ ಪರದೆ ಮೇಲಿರುವ ಪರದೆ ಮೇಲಿಲ್ಲದ ಎಲ್ಲಾ ಫ್ರೇಮುಗಳ ಬಗ್ಗೆಯೂ ಒಟ್ಟೊಟ್ಟಿಗೆ(ಪ್ಯಾರಲಲ್) ಕಾಳಜಿ ತೋರಿಸುವ ಮೂಲಕ ಸೋರಾಗೆ ಇದು ಸಾಧ್ಯವಾಗಿದೆ. ನಾಟಕಗಳಲ್ಲಿ ಪಾತ್ರದಾರಿಗಳು ತೆರೆ ಹಿಂದೆ ಹೋದಾಗ ಕತೆಯ ಹೊರಬಂದು ನೀರು ಕುಡಿಯಬಹುದು, ಬೀಡಿ ಸೇದಬಹುದು. ಸಿನಿಮಾಗಳಲ್ಲಿ ನಟಿ ಛತ್ರಿ ನಿಲ್ಲಿಸಿಕೊಂಡು ಸೆಕೆ ಬೀಸಿಕೊಳ್ಳಬಹುದು. ಇಲ್ಲಿ ಹಾಗಲ್ಲ. ಪಾತ್ರಗಳು ಜಿಪಿಯುಗಳಲ್ಲಿ ಪಾತ್ರಗಳಾಗಿಯೇ ಅಡ್ಡಾಡುತ್ತಿರುತ್ತವೆ(ರೂಪಕ!). ಇನ್ನೊಂದು ವಿಶೇಷಣವೆಂದರೆ ಸೋರಾ ಮಾಡಿಕೊಟ್ಟ ವಿಡಿಯೋವನ್ನು ನಾವು ಝೂಮೌಟ್ ಮಾಡು ಎಂದು ಕೇಳಿದರೆ ಅದಕ್ಕೆ ತಕ್ಕಂತೆ ಪರದೆಯ ಹೊರಗಿದ್ದುದನ್ನು ಕಲ್ಪಿಸಿಕೊಂಡು ಕ್ಯಾನ್ವಾಸನ್ನು ನೈಜವಾಗಿ ಹಿಗ್ಗಿಸಿ ಕೊಡುತ್ತದೆ. ಅಂತೆಯೇ ದೃಶ್ಯಗಳ ಹರಿವಿನ ಸಮಗ್ರತೆಯನ್ನೂ ಕಾಪಾಡುತ್ತದೆ.ಒಬ್ಬ ವ್ಯಕ್ತಿ ಬರ್ಗರ್ ತಿಂದಾಗ ಬರ್ಗರಿನ ಮೇಲೆ ಹಲ್ಲುಗಳ ಗುರುತು ಬೀಳುತ್ತದೆ. ಅವನು ಎದ್ದು ಹೋಗಿ ನೀರು ಕುಡಿದು ಮರಳಿದಾಗ ಆ ಬರ್ಗರು ಮತ್ತು ಅದರ ಮೇಲಿನ ಹಲ್ಲಿನ ಗುರುತು ಹಾಗೇ ಇರುತ್ತದೆ.

ಹಾಗಂತ ಒಂದು ಕಾದಂಬರಿಯ ಪುಸ್ತಕ ಕೊಟ್ಟು ಇದರ ಚಿತ್ರೀಕರಣ ಮಾಡಿಕೊಡು ಎಂದರೆ ಮಾಡಿಕೊಡುತ್ತದೆಯೇ? ಆಸೆ ಸ್ವಲ್ಪ ಜಾಸ್ತಿಯಾಯ್ತು ಅಲ್ಲವಾ? ಅದು ಸಧ್ಯಕ್ಕೆ ಸಾಧ್ಯವಿಲ್ಲ. ಆದರೆ ಅದೇ ದೀರ್ಘ ಕಾದಂಬರಿಯ ಪ್ರತಿ ಪುಟವನ್ನು ಒಂದು ದೃಶ್ಯದಂತೆ ವಿಂಗಡಿಸಿಕೊಂಡು ‘ಸೀನ್ʼಗಳನ್ನು ಬರೆದು ಒಂದು ನಿಮಿಷದ ವಿಡಿಯೋಗಳನ್ನು ಸೃಷ್ಟಿಸಿಕೊಂಡು ಆನಂತರ ಅವುಗಳನ್ನು ಒಂದಕ್ಕೊಂದು ಜೋಡಿಸಬಹುದು. ಸೋರಾದಲ್ಲಿ ಸ್ಟೋರಿಬೋರ್ಡ್ ಎಂಬುದು ಇದೆ. ಹೀಗಂದರೆ ಇಂತಿಂತ ಗಳಿಗೆಯಲ್ಲಿ ಇಂತಿಂಥ ಫ್ರೇಮುಗಳಲ್ಲಿ ಈ ದೃಶ್ಯವಿರಬೇಕು, ಹೀಗೆ ಬದಲಾಗಬೇಕು ಎಂದೆಲ್ಲ ದೃಶ್ಯ ವಿವರಗಳನ್ನು ಬರೆದು ಆಯಾ ಗಳಿಗೆಯ ಸ್ಕೇಲಿನ ಮೇಲೆ ಅಂಟಿಸಬಹುದು. ಅರ್ಥಾತ್ ನಾವೇನೋ ಕೇಳಿದಾಗ ಅದು ಏನು ಮಾಡಿಕೊಡುತ್ತದೋ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬೇಕಿಲ್ಲ. ಡಿಟ್ಟೋ ನಿರ್ದೇಶಕರು ಪ್ರತಿ ದೃಶ್ಯವನ್ನು ನಿರ್ದೇಶಿಸಿದಂತೆ ಇಲ್ಲಿಯೂ ನಮ್ಮ ವಿಡಿಯೋಗಳನ್ನು ಫ್ರೇಮುಗಳ ಮಟ್ಟದಲ್ಲಿ ನಿರ್ದೇಶಿಸಬಹುದು.

ಇನ್ನೂ ಬಹಳಷ್ಟಿದೆ. ವಿಷಯಕ್ಕೆ ಬರುವ. ಸೋರಾ ಸದ್ಯಕ್ಕೆ ಹಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಮನರಂಜನಾ ಲೋಕದಲ್ಲಿ ಸಂಚಲನ ಹುಟ್ಟಿಸಿದೆ. ಓಪನ್ಎಐ ಕಂಪನಿ ಮತ್ತು ಕೆಲವುಸ್ಟುಡಿಯೋಗಳು ಪರಸ್ಪರ ಕೈಜೋಡಿಸಲು ಉತ್ಸುಕವಾಗಿವೆ. ಇನ್ನು ಕೆಲವು ಸ್ಟುಡಿಯೋಗಳು ಅದು ಭೂತವೆಂದು ಪರಿಗಣಿಸಿಹೆದರಿ ದೂರವಿಡುವುದೇ ಸೂಕ್ತವೆಂಬಂತೆ ವರ್ತಿಸುತ್ತಿವೆ. ಸೋರಾವನ್ನು ಅಪ್ಪಿಕೊಂಡರೆ ಸಿನಿಮಾ ಕಾರ್ಮಿಕರು ದಂಗೆಯೇಳಬಹುದೆಂಬ ಭಯ ಹುಟ್ಟಿದೆ. ಟೆಕ್ ಕಂಪನಿಗಳ ಹಿಂದೆ ಹೋದರೆ ಅವರು ನಮ್ಮ ಸಿನಿಮಾಗಳನ್ನೆಲ್ಲ ತಮ್ಮ ಕಲಿಕೆಗಾಗಿ ಬಳಸಿಕೊಂಡು ನಮ್ಮನ್ನು ಮೀರಿಸಿಬಿಡಬಹುದು ಎಂಬ ಭಯವೂ ಇದೆ. ಆದರೆ ಇದೆಲ್ಲ ಎಷ್ಟು ದಿವಸ ಮುಂದುವರೆಯುತ್ತದೋ ಗೊತ್ತಿಲ್ಲ. ಯಾಕೆಂದರೆ ಇಂದು ಇದನ್ನು ಸಿನಿಮಾದವರು ದೂರ ಇಟ್ಟು ನಾಳೇ ಜನಸಾಮಾನ್ಯರು ಅಪ್ಪಿಕೊಂಡುಬಿಟ್ಟರೆ ಜನ ಸಿನಿಮಾದವರನ್ನೇ ಮರೆತುಬಿಡುವ ಸಂಭವವಿದೆ. ಕಾರಣ ನಾವು ಒಪ್ಪುತ್ತೇವೋ ಇಲ್ಲವೋ ರೀಲ್ಸ್‌ಗಳ ಮೂಲಕ ಇನ್‌ಸ್ಟಾಗ್ರಾಮ್ ಮನರಂಜನೆಯ ಉತ್ಪಾದನೆಯನ್ನು ಡೆಮಾಕ್ರಟೈಸ್ ಮಾಡಿಬಿಟ್ಟಿದೆ. ಈಗ ಮನೆಗೊಂದು ನಟ, ನಟಿ, ನೃತ್ಯಪಟು, ಹಾಡುಗಾರ್ತಿ, ಕತೆಗಾರ, ಹಾಸ್ಯಗಾರ ಇದಾರೆ. ಒಬ್ಬನೇ ಒಂದು ಸಿನಿಮಾದಷ್ಟು ದೊಡ್ಡ ಶಕ್ತಿಯಲ್ಲದಿದ್ದರೂ ಅನೇಕ ಮಂದಿಯ ಭಾಗವಹಿಸುವಿಕೆಯಿಂದ ಸಿನಿಮಾಗಿಂದ ಅಧಿಕ ಮನರಂಜನೆ ರೀಲ್ಸ್‌ಗಳಿಂದ ಸಿಗುತ್ತಿದೆ. ಮುಂಚೆ ವ್ಯಕ್ತಿ ದಿನಕ್ಕೊಂದು ಸಿನಿಮಾ ನೋಡ್ತಿದ್ದನೋ ಇಲ್ಲವೋ ಇಂದು ಪ್ರತಿನಿತ್ಯ ಎರಡು ಸಿನಿಮಾಗಳಷ್ಟು ಸಮಯವನ್ನು ರೀಲ್ಸ್‌ಗಳಿಗಾಗಿ ವ್ಯಯ ಮಾಡುತ್ತಿದ್ದಾನೆ. ಇದರಿಂದಾಗಿಯೇ ಜನ ಥಿಯೇಟರಿಗೆ ಹೋಗುವುದು ನಿಲ್ಲಿಸಿರುವುದು. ಆದ್ದರಿಂದ ಮನರಂಜನಾಲೋಕಕ್ಕೆ ಬಹುಶಃ ಸೋರಾವನ್ನು ಅಪ್ಪಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಮೊದಲ ಹೆಜ್ಜೆಯಾಗಿ ಸ್ಟುಡಿಯೋಗಳು ಯಾವುದೇ ಚಿತ್ರೀಕರಣಕ್ಕೆ ಮುನ್ನ ಸೋರಾವನ್ನು proof of conceptಗಾಗಿ ಬಳಸಿಕೊಳ್ಳಬಹುದಾಗಿದೆ. (pre production). ಇದು ಚಿತ್ರೀಕರಣದ ವೆಚ್ಚ ತಗ್ಗಿಸಲು, ಗುಣಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿರ್ದೇಶಕ ಮತ್ತು ನಿರ್ಮಾಪಕ ಇಬ್ಬರಿಗೂ ಹೊರಗೆ ಕಾಲಿಡುವ ಮುನ್ನ ಒಂದು ಸ್ಪಷ್ಟತೆ ಒದಗಿಸುತ್ತದೆ. ಸಿನಿಮಾ ಬಿಡುಗಡೆಗೂ ಮುನ್ನ ಯತೇಚ್ಛವಾದ ಟ್ರೈಲರ್, ಪ್ರಮೋಷನ್, ಮಾರ್ಕೆಟಿಂಗ್‌ಗೆ ಬಳಸಿಕೊಳ್ಳಬಹುದಾಗಿದೆ. ಚಿತ್ರೀಕರಣದ ನಂತರ ಸಣ್ಣ ಸಣ್ಣ ಬದಲಾವಣೆ ಬೇಕಿದ್ದಲ್ಲಿ ಮತ್ತೆ ಎಲ್ಲರನ್ನೂ ಕರೆದು ಶೂಟಿಂಗಿಗೆ ಹೋಗಬೇಕಿಲ್ಲ. ಸೋರಾ ಮೂಲಕ ಅಂತಹದನ್ನು ನೀಗಿಸಿಕೊಳ್ಳಬಹುದಾಗಿದೆ. (Post production). ಈ ತನಕದ ದೃಶ್ಯ ವೈಭವೀಕರಣಗಳು(VFXs) ಹಣ, ಸಮಯ ಮತ್ತು ಮಾನವ ಸಂಪನ್ಮೂಲ- ಮೂರನ್ನೂ ಸಿಕ್ಕಾಪಟ್ಟೆ ಎಳೆದುಕೊಳ್ಳುತ್ತಿದ್ದವು. ಸೋರಾ ಅದಕ್ಕಿಂತ ಅತ್ಯಧಿಕ ಗುಣಮಟ್ಟದ ವೈಭವೀಕರಣವನ್ನು ಅತ್ಯಂತ ಕಡಿಮೆ ಸಮಯ, ಹಣ ಮತ್ತು ಸಂಪನ್ಮೂಲಗಳಿಂದ ಮಾಡಿಕೊಡುತ್ತದೆ. ಆದ್ದರಿಂದ ಅನಿಮೇಶನ್ ಮತ್ತು ವಿಎಫ್ಎಕ್ಸ್ ವಲಯದ ತಂತ್ರಜ್ಞರ ಉದ್ಯೋಗಗಳಿಗೆ ಕತ್ತರಿ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಸ್ವತಂತ್ರ ನಿರ್ದೇಶಕರಿಗೆ ಇದು ವರವಾಗಬಹುದು. ಇನ್‌ಸ್ಟಾಗ್ರಾಮ್ ಮನರಂಜನೆಯನ್ನು ಡೆಮಾಕ್ರಟೈಸ್ ಮಾಡಿದಂತೆ ಸೋರಾ ಸಿನಿಮಾ ಮೇಕಿಂಗ್ ಅನ್ನು ಡೆಮಾಕ್ರಟೈಸ್ ಮಾಡಲಿದೆ. ಈ ತನಕ ದೊಡ್ಡ ಸ್ಟುಡಿಯೋಗಳಷ್ಟೇ ದೊಡ್ಡ ಮಟ್ಟದ ಸಿನಿಮಾಗಳನ್ನು ತಯಾರಿಸುತ್ತಿದ್ದವು. ಇನ್ನು ಮುಂದೆ ಸ್ವತಂತ್ರ ನಿರ್ದೇಶಕರೂ ತಮ್ಮ ಕನಸುಗಳನ್ನು ಟೈಟಾನಿಕ್, ಜುರಾಸಿಕ್ ಪಾರ್ಕಿನಷ್ಟು ಹಿಗ್ಗಿಸಿಕೊಳ್ಳಬಹುದಾಗಿದೆ.

ಇತ್ತೀಚೆಗೆ ಒಬ್ಬ ಮ್ಯೂಸಿಶಿಯನ್ ಒಂದು ಹಾಡನ್ನು ಸಂಪೂರ್ಣವಾಗಿ ಸೋರಾ ಮೂಲಕ ಅತ್ಯುತ್ತಮವಾಗಿ ಚಿತ್ರೀಕರಿಸಿದ್ದಾನೆ. ಅಂತೆಯೇ ಅಸಂಭಾವ್ಯ, ಅವಾಸ್ತವಿಕ ದೃಶ್ಯ ಕಲ್ಪನೆಗಳಲ್ಲಿ ಮನುಷ್ಯನ ಮಿತಿಯಿದೆ. ಸಂಕೀರ್ಣ ದೃಶ್ಯಗಳನ್ನು ಕಲ್ಪಿಸಿಕೊಳ್ಳುವಲ್ಲಿ ಆತ ಸೋಲುತ್ತಾನೆ. ಅದು ಹೋಗಲಿ ಮನುಷ್ಯ ತಾನು ನೋಡಿರದ ಊರನ್ನು ತಾನು ನೋಡಿರದ ಬಣ್ಣವನ್ನೇ ಕಲ್ಪಿಸಿಕೊಳ್ಳಲಾರ. ಎಐ ಇಂತಹ ಎಲ್ಲಾ ಮನುಷ್ಯ ಮಿತಿಗಳನ್ನು ಮೀರಿ ಕಲ್ಪನೆಯನ್ನು ವಿಸ್ತರಿಸುವಲ್ಲಿ ಸಹಾಯ ಮಾಡಲಿದೆ. ಪಾತ್ರಗಳನ್ನು ಕಲ್ಪಿಸಿಕೊಳ್ಳುವಲ್ಲಿ ಅವರಿಗೆ ವಿಧವಿಧ ಪೋಷಾಕು ತೊಡಿಸುವಲ್ಲಿ ಅವರ ಹಾವಭಾವಗಳನ್ನು ಪರೀಕ್ಷಿಸುವಲ್ಲಿಯೂ ಸೋರಾ ಸಹಾಯ ಮಾಡಬಹುದು. ಮನುಷ್ಯಾತೀತ ಲೋಕ ಸೃಷ್ಟಿಸುವಲ್ಲಿಯೂ ಸಹ.

ಇಷ್ಟಿದ್ದರೂ ಸಿನಿಮಾ ದೊಡ್ಡ ಮಟ್ಟದ ಕಲೆ. ಕಲಾವಿದರ ಅಗತ್ಯ ಅಲ್ಲಿ ಇದ್ದೇ ಇರುತ್ತದೆ. ಆದರೆ ಜಾಹೀರಾತುಗಳು, ಧಾರಾವಾಹಿಗಳು, ಪೋಸ್ಟರುಗಳು ಮುಂತಾಗಿ ಎಲ್ಲೆಲ್ಲಿ ಗುಣಮಟ್ಟ ಕಡಿಮೆಯಿದ್ದರೂ ಪರವಾಗಿಲ್ಲ ತುರ್ತಾಗಿ ಆಗಬೇಕು, ಕಡಿಮೆ ದುಡ್ಡಿನಲ್ಲಿ ಆಗಬೇಕು ಎಂದಿರುತ್ತದೋ ಅಲ್ಲೆಲ್ಲ ಸೋರಾದಂತಹ ಎಐ ಉಪಕರಣಗಳು ಬಹುಬೇಗ ಆಕ್ರಮಿಸುತ್ತವೆ. ಮುಂದಿನ ದಿನಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿಯೂ ಬರುತ್ತದೆ. ಸಿನಿಮಾದಲ್ಲಿನ ತಂತ್ರಜ್ಞರು ಎಐ ಉಪಕರಣಗಳನ್ನು ಉಪಯೋಗಿಸಿಕೊಳ್ಳುವುದು ಕಲಿತು ತಮ್ಮನ್ನು ತಾವು ಚಾಲನೆಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ನಟರು, ಕತೆಗಾರರು, ನಿರ್ದೇಶಕರು ಮುಂತಾಗಿ ಕಲಾವಿದರು ತಮ್ಮ ಕಲೆಯನ್ನೇ ಇನ್ನಷ್ಟು ಹರಿತಗೊಳಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಸಾಧಾರಣತೆಯನ್ನು ಪುನರಾವರ್ತನೆಯನ್ನು ಎಐ ತುಂಬಲಿದೆ. ಮನುಷ್ಯನಿಗೆ ಪಾಲಿಗೆ ಉಳಿಯುವುದು ವಿಶಿಷ್ಠತೆಯೊಂದೇ. ಗಮನಿಸಿ ಸೋರಾದಂತಹ ಯಾವುದೋ ಒಂದು ಉಪಕರಣ ಅಲ್ಲೋಲ ಕಲ್ಲೋಲ ಸೃಷ್ಟಿಸಲ್ಲ. ಪಠ್ಯದಿಂದ ಫೋಟೋ, ಪಠ್ಯದಿಂದ ಮಾತು, ಪಠ್ಯದಿಂದ ಹಾಡು, ಪಠ್ಯದಿಂದ ವಿಡಿಯೋ, ಆಟೋಮ್ಯಾಟಿಕ್ ಲಿಪ್ ಸಿಂಕ್ ಮುಂತಾಗಿ ಹಲವಾರು ಉಪಕರಣಗಳ ದಂಡು ಒಟ್ಟಿಗೆ ದಾಳಿ ಮಾಡುತ್ತದೆ. ಆಗ ‘ಇಂಡಷ್ಟ್ರಿ ಶೇಕ್ʼ ಆಗುತ್ತದೆ.

Share this article