ದೇಶದ ಸಂವಿಧಾನ ರಚನೆಯಲ್ಲಿ ಭಾಗಿಯಾಗಿದ್ದ 15 ಮಹಿಳೆಯರು, ಅವರ ಹಿನ್ನೆಲೆ ನಿಮಗೆ ಗೊತ್ತೆ?

ಸಾರಾಂಶ

ಭಾರತದ ಸಂವಿಧಾನ ಇಂದು ಜಗತ್ತಿನಲ್ಲಿಯೇ ವಿಭಿನ್ನ ಸಂವಿಧಾನವಾಗಿ ಮನ್ನಣೆ ಪಡೆದಿದೆ. ಪ್ರಪಂಚದ ಅತಿದೊಡ್ಡ ಸಂವಿಧಾನವಾಗಿರುವ ದೇಶದ ಸಂವಿಧಾನ ರಚನೆಯ ಹಿಂದೆ ನಾರಿಶಕ್ತಿಯರ ಸಹಕಾರವೂ ಇದೆ. ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜೊತೆ ಸಂವಿಧಾನ ರಚನೆಯಲ್ಲಿ ಕೈ ಜೋಡಿಸಿದ್ದರು ಮಹಿಳೆಯರ ಪರಿಚಯ ಇಲ್ಲಿದೆ.

ಬಲಿಷ್ಠ ಸಂವಿಧಾನದ ಹಿಂದಿತ್ತು ನಾರಿಶಕ್ತಿ

- ದೇಶದ ಸಂವಿಧಾನ ರಚನೆಯಲ್ಲಿ ಭಾಗಿಯಾಗಿದ್ದ 15 ಮಹಿಳೆಯರು, ಅವರ ಹಿನ್ನೆಲೆ ನಿಮಗೆ ಗೊತ್ತೆ?

ನಾಳೆ ಅಂತಾರಾಷ್ಟ್ರೀಯ

ಮಹಿಳಾ ದಿನಾಚರಣೆ

ಡಾ। ಸುಧಾಕರ ಹೊಸಳ್ಳಿ

ಭಾರತದ ಸಂವಿಧಾನ ಇಂದು ಜಗತ್ತಿನಲ್ಲಿಯೇ ವಿಭಿನ್ನ ಸಂವಿಧಾನವಾಗಿ ಮನ್ನಣೆ ಪಡೆದಿದೆ. ಪ್ರಪಂಚದ ಅತಿದೊಡ್ಡ ಸಂವಿಧಾನವಾಗಿರುವ ದೇಶದ ಸಂವಿಧಾನ ರಚನೆಯ ಹಿಂದೆ ನಾರಿಶಕ್ತಿಯರ ಸಹಕಾರವೂ ಇದೆ. ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜೊತೆ ಸಂವಿಧಾನ ರಚನೆಯಲ್ಲಿ ಕೈ ಜೋಡಿಸಿದ್ದರು ಮಹಿಳೆಯರ ಪರಿಚಯ ಇಲ್ಲಿದೆ.

ಪ್ರಜೆಗಳಿಗೆ ನೀಡಿರುವ ಹಕ್ಕು, ರಾಜಕೀಯ ಪ್ರಾತಿನಿಧ್ಯ, ವಯೋವೃದ್ಧರ ಕ್ಷೇಮಾಭಿವೃದ್ಧಿ, ಜನ ಕಲ್ಯಾಣ ಯೋಜನೆಗಳ ಮೂಲಕ ಜಗತ್ತಿನಲ್ಲಿಯೇ ದೇಶದ ಸಂವಿಧಾನವು ಮನ್ನಣೆ ಪಡೆದಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ನೇತೃತ್ವದ ಕರಡು ರಚನಾ ಸಮಿತಿಯು ತಮ್ಮ ಮುಂದೆ ಬಂದ ಎಲ್ಲಾ ಪ್ರಸ್ತಾಪಗಳನ್ನು ಅಂತಿಮಗೊಳಿಸುವಾಗ ಈ ರೀತಿಯ ನಾಗರಿಕ ನಿಯಮಗಳನ್ನು ಚೌಕಟ್ಟಾಗಿ ಇಟ್ಟುಕೊಂಡಿದ್ದು ಶ್ರೇಷ್ಠವಾದ ನಡವಳಿಕೆ.

ಹಾಗಾದರೆ ಸಂವಿಧಾನ ರಚನೆಯು ತಾಯಿ ಕಣ್ಣಿನಿಂದ ನೋಡಲು ಸಾಧ್ಯವಾದದ್ದು ಹೇಗೆ? ಎಂಬ ಪ್ರಶ್ನೆ ಉಗಮಿಸುವುದು ಸಹಜ. ಅದಕ್ಕೆ ಉತ್ತರವೂ ಸಿಗುತ್ತದೆ. ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾಲು ಕೂಡ ಇದೆ. ಸಂವಿಧಾನ ರಚನಾ ಕಾರ್ಯಕ್ಕೆ ಒಟ್ಟು 389 ಸದಸ್ಯರು ಆಯ್ಕೆಯಾಗಿದ್ದರು. ಸ್ವಾತಂತ್ರ್ಯಾನಂತರ ಆ ಸಂಖ್ಯೆ 299ಕ್ಕೆ ಕುಸಿದಾಗ ಅದರೊಳಗೆ 15 ಮಂದಿ ಮಾತೆಯರಿದ್ದರು.

ಈ ನೆಲೆಯಲ್ಲಿ ಸಂವಿಧಾನ ತಾಯಿ ಸ್ವರೂಪಿಯಾಗಿಯೂ ಕಾಣಿಸುತ್ತದೆ. ಅಂದಿನಿಂದ ಇಂದಿನವರೆಗೂ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ. ಇಂದು ದೇಶ ಸಂವಿಧಾನದ ಅಡಿಯಲ್ಲಿ ನಿಯಮಗಳನ್ನು ರೂಪಿಸಿಕೊಂಡಿದೆ. ಈ ಶ್ರೇಷ್ಠ ಕೆಲಸವನ್ನು ಮಾಡಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಹೆಗಲು ನೀಡಿದ, ಸಂವಿಧಾನ ರೂಪವಾಗಲು ಅನುಭವವನ್ನು ಧಾರೆ ಎರೆದ ಮಹಿಳೆಯರ ಕುರಿತು ವಿಶೇಷ ಚರ್ಚೆಯಾಗಿಲ್ಲ. ಸಂವಿಧಾನದ ಸ್ವರೂಪ ರಚನೆಯ ಕಾರ್ಯಕ್ಕೆ ಮಹಿಳೆಯರ ಕೊಡುಗೆಯನ್ನು ಸ್ಮರಿಸುವ, ವಿಶ್ಲೇಷಿಸುವ, ಪರಾಮರ್ಶಿಸುವ ಔಚಿತ್ಯವೂ ಇದೆ. ಭಾರತದ ಸಂವಿಧಾನದ ನಿರ್ಮಾಣದಲ್ಲಿ ವಿಶೇಷ ಪಾತ್ರ ವಹಿಸಿದ ಮಹಿಳೆಯರ ಕುರಿತಾದ ವಿವರ ಇಲ್ಲಿದೆ.

ಅಮ್ಮು ಸ್ವಾಮಿನಾಥನ್, ಮದ್ರಾಸ್

ಇವರು 1917ರಲ್ಲಿ ವುಮೆನ್ಸ್ ಇಂಡಿಯಾ ಅಸೋಸಿಯೇಷನ್ ಪ್ರಾರಂಭಿಸಿದ್ದರು, ಜಾತಿ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಸಂವಿಧಾನ ರಚನೆಯ ಸಂದರ್ಭ ಮಹಿಳಾ ಹಕ್ಕುಗಳು, ಕಾರ್ಮಿಕ ಕಾನೂನುಗಳು, ರಾಜ್ಯನೀತಿ ನಿರ್ದೇಶಕ ತತ್ವಗಳ ಬಗೆಗೆ ಚರ್ಚೆ ಕೈಗೊಂಡಿದ್ದರು. ಅದರಲ್ಲೂ ಮೂಲಭೂತ ಹಕ್ಕುಗಳನ್ನು ನೀಡುವಲ್ಲಿ ಅತ್ಯಂತ ಉದಾರತೆಯನ್ನು ತೋರಬೇಕೆಂದು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ವಿವಿಧ ವಿಭಾಗಗಳನ್ನು ಆಧಾರಸಹಿತ ತೆರೆದಿಟ್ಟು, ಪ್ರಜೆಗಳಿಗೆ ಗರಿಷ್ಠ ಮಟ್ಟದ ಮೂಲಭೂತ ಹಕ್ಕುಗಳನ್ನು ನೀಡಬೇಕು ಎಂದು ಸಂವಿಧಾನ ರಚನಾ ಸಭೆಯು ನಿರ್ಣಯಿಸುವಂತೆ ಪ್ರಭಾವಿಸುವಲ್ಲಿ ಯಶಸ್ವಿಯಾಗಿದ್ದರು.

ಅನ್ನಿ ಮಸ್ಕರೆನ್, ತಿರುವಂಕೂರು

ಮಹಿಳೆಯರಿಗೆ ವಿಶೇಷ ಹಕ್ಕುಗಳು ದೊರಕಬೇಕೆಂದು ಕಠಿಣ ಪ್ರತಿಪಾದನೆ ಮಾಡಿದ್ದರು.

ಬೇಗಂ ಅಜೀಜ್ ರಸುಲ್, ಯುನೈಟೆಡ್ ಪ್ರಾವಿನ್ಸಸ್

ಸಂವಿಧಾನ ರಚನಾ ಸಭೆಯ ಏಕೈಕ ಮುಸ್ಲಿಂ ಮಹಿಳೆ. ಇವರು ರಾಷ್ಟ್ರೀಯ ಭಾಷೆ, ಮೀಸಲಾತಿ, ಆಸ್ತಿ ಹಕ್ಕು, ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ತಮ್ಮದೇ ವಿಶೇಷ ದೃಷ್ಟಿಕೋನ ತೆರೆದಿಟ್ಟಿದ್ದರು. ಮುಸ್ಲಿಮರಿಗೆ ಪ್ರತ್ಯೇಕ ಮತದಾನ ಕ್ಷೇತ್ರದ ಅವಕಾಶದ ವಿರುದ್ಧ ಗುಡುಗಿದ್ದರು. ಮದುವೆ, ವಿಚ್ಛೇದನದ ಬಗ್ಗೆ ನಿಯಮ ಮಾಡುವಾಗ ಯಾವೆಲ್ಲ ಮೂಲಭೂತ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸದನಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ದ್ರಾಕ್ಷಾಯಿಣಿ ವೇಲಾಯುದನ್, ಮದ್ರಾಸ್

ಸಂವಿಧಾನ ರಚನಾ ಸಭೆಯು ಒಳಗೊಂಡಿದ್ದ ಏಕೈಕ ದಲಿತ ಮಹಿಳೆ. ಭಾರತದ ಮೊದಲ ದಲಿತ ಪದವೀಧರ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜನವಾಗಿದ್ದರು. ಅಸ್ಪೃಶ್ಯತೆ, ಬಲವಂತದ ದುಡಿಮೆ, ಮೀಸಲಾತಿ, ಮಹಿಳಾ ಶಿಕ್ಷಣದ ಬಗ್ಗೆ ವಿಶೇಷ ಆಸಕ್ತಿ ತೋರಿಸಿದರು. ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಬೇಕೆಂಬ ಆಗ್ರಹಕ್ಕೆ ವಿರೋಧ ವ್ಯಕ್ತಪಡಿಸಿ ಐಕ್ಯ ಭಾರತದ ಸಂಕಲ್ಪವನ್ನು ಇದು ಚೂರು ಮಾಡುತ್ತದೆ ಎಂದು ಪ್ರತಿಭಟಿಸಿದ್ದರು.

ಜಿ ದುರ್ಗಾಬಾಯಿ ದೇಶಮುಖ್, ಮದ್ರಾಸ್

ಭಾರತದ ಸ್ವಾತಂತ್ರ್ಯ ಹೋರಾಟಕ್ಕೋಸ್ಕರ ಬಾಲ್ಯದಲ್ಲೇ ಶಾಲೆ ಬಿಟ್ಟು, ಮುಂದೆ ವಕೀಲೆಯೂ ಆಗಿದ್ದರು. ರಾಷ್ಟ್ರಭಾಷೆಯಾಗಿ ಹಿಂದುಸ್ತಾನಿ ಇರಬೇಕೆಂದು ಆಗ್ರಹಪಡಿಸಿದ್ದರು.

ಜೀವ ಹನ್ಸ್ ರಾಜ್ ಮೆಹತಾ, ಬಾಂಬೆ

ಲೇಖಕಿ , ಸಾಮಾಜಿಕ ಹೋರಾಟಗಾರ್ತಿ. 1946ರ ಆಲ್ ಇಂಡಿಯಾ ವುಮೆನ್ಸ್ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ್ದರು. ಮೂಲಭೂತ ಹಕ್ಕುಗಳು, ಮೀಸಲಾತಿ ಕುರಿತಾದ ನಿಯಮಗಳ ಬಗೆಗೆ ಅನೇಕ ತೌಲನಿಕ ನಿದರ್ಶನಗಳನ್ನು ಸದನದ ಮುಂದಿರಿಸಿದ್ದರು. ಸಂವಿಧಾನ ರಚನಾ ಕಾರ್ಯಕ್ಕಾಗಿ ರಚನೆಯಾದ ತಾತ್ಕಾಲಿಕ ಸಂವಿಧಾನ ಸಮಿತಿ (ಪ್ರಾವಿನ್ಷಿಯಲ್ ಕಾನ್ಸ್ಟಿಟ್ಯೂಷನ್ ಕಮಿಟಿ) ಸದಸ್ಯರಾಗಿದ್ದರು. ಏಕರೂಪ ನಾಗರಿಕ ಸಂಹಿತೆಯ ಜಾರಿಗಾಗಿ ಬದ್ಧತೆ ಪ್ರದರ್ಶಿಸಿದರು. ಪರ್ಧಾ ಪದ್ಧತಿಯ ನಿಷೇಧಕ್ಕಾಗಿ ನಿಯಮ ಮಾಡುವಂತೆ ಒತ್ತಾಯ ಮಾಡಿದ್ದರು. ಕೋಟಾಗಳು, ಪ್ರತ್ಯೇಕ ಮಹಿಳಾ ಮತಕ್ಷೇತ್ರವನ್ನು ವಿರೋಧ ಮಾಡಿದ್ದರು. ರಾಷ್ಟ್ರಧ್ವಜದ ನಿಯಮ ರೂಪಿಸುವಲ್ಲಿ ಪ್ರಮುಖ ಪಾತ್ರ ಇವರದ್ದಾಗಿದೆ.

ಕಮಲ ಚೌಧರಿ, ಯುನೈಟೆಡ್ ಪ್ರಾವಿನ್ಸಸ್

ಕಾನೂನು ಭಂಗ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಹಾಗೂ 54ನೇ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಮಹಿಳಾ ಶಿಕ್ಷಣ ಸಮಾಜ ಕಲ್ಯಾಣ, ಲಿಂಗ ತಾರತಮ್ಯ ವಿಚಾರದಲ್ಲಿ ಕಾನೂನು ತರಬೇಕೆಂದು ಆಶಿಸಿದರು.

ಲೀಲಾ ರಾಯ್, ಪಶ್ಚಿಮ ಬಂಗಾಳ

ಸುಭಾಷ್ ಚಂದ್ರ ಬೋಸ್ ನಿಕಟವರ್ತಿಯಾಗಿದ್ದ ಇವರು ಮಹಿಳೆ ಮತ್ತು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ಆದ್ಯತೆ ನೀಡಿದರು. ನಾರಿ ಶಿಕ್ಷಣ ಮಂದಿರ ಮತ್ತು ಶಿಕ್ಷಭವನ್ ಸ್ಥಾಪನೆ ಮಾಡಿದ್ದರು. ಕೊಲ್ಕತ್ತಾದಲ್ಲಿ ಮಹಿಳೆಯರಿಗಾಗಿ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಿದ್ದರು. ಭಾರತದ ವಿಭಜನೆಯನ್ನು ಖಂಡಿಸಿ ಸಂವಿಧಾನ ರಚನಾ ಸಭೆಗೆ ರಾಜೀನಾಮೆಯನ್ನು ನೀಡಿದರು.

ಮಾಲತಿ ಚೌಧರಿ, ಒಡಿಶಾ

ಗಾಂಧೀಜಿಯವರ ಜೊತೆ 1934ರಲ್ಲಿ ಪಾದಯಾತ್ರೆ ಕೈಗೊಂಡಿದ್ದರು. 1921, 1936, 1942ರಲ್ಲಿ ಸೆರೆವಾಸವನ್ನು ಅನುಭವಿಸಿದರು, ಬಲವಂತದ ದುಡಿಮೆಯ ವಿರುದ್ಧ ಕಾನೂನು ರೂಪಿಸುವಲ್ಲಿ ಕೊಡುಗೆ ನೀಡಿದರು

ಪೂಣಿರ್ಮಾ ಬ್ಯಾನರ್ಜಿ, ಯುನೈಟೆಡ್ ಪ್ರಾವಿನ್ಸಸ್

1930ರಿಂದ 40ರ ಕಾಲಘಟ್ಟದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಹೋರಾಟಗಾರ್ತಿಯಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಮಹಿಳಾ ಶಿಕ್ಷಣದ ಬಗ್ಗೆ ವಿಶೇಷ ಕಾನೂನುಗಳ ರೂಪವಾಗಬೇಕು ಎಂದು ಪ್ರತಿಪಾದಿಸಿದರು.

ರಾಜಕುಮಾರಿ ಅಮೃತ್ ಕೌರ್, ಯುನೈಟೆಡ್ ಪ್ರಾವಿನ್ಸಸ್

ರಾಜಕಾರಣದಲ್ಲಿ ಮಹಿಳಾ ಪ್ರಾತಿನಿಧ್ಯ, ಆದ್ಯತೆಯ ಭಾಗವಾಗಬೇಕೆಂದು ಹೋರಾಟ ಮಾಡಿದ್ದರು. ಭಾರತದ ಮೊದಲ ಆರೋಗ್ಯ ಮಹಿಳಾ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ರೇಣುಕಾ ರಾಯ್, ಪಶ್ಚಿಮ ಬಂಗಾಳ

ಸಂವಿಧಾನ ರಚನಾ ಸಭೆಯ ಅತ್ಯಂತ ಕ್ರಿಯಾಶೀಲ ಸದಸ್ಯರಾಗಿದ್ದರು, ದ್ವಿಶಾಸನ ವ್ಯವಸ್ಥೆ ಹಾಗೂ ಮಹಿಳಾ ಹಕ್ಕುಗಳ ಅನುಷ್ಠಾನಕ್ಕಾಗಿ ಚರ್ಚಿಸಿದ್ದರು. ಸರೋಜಿನಿ ನಾಯ್ಡು ಭಾರತ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ಹೋರಾಟಗಾರ್ತಿಯಾಗಿದ್ದ ಇವರು ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ ಹಾಗೂ ಸಂವಿಧಾನವು ಮಹಿಳಾಪರವಾದ ಕಾನೂನುಗಳನ್ನು ರೂಪಿಸುವಲ್ಲಿ ಪ್ರಭಾವ ಬೀರಿದ್ದರು.

ಸುಚೇತಾ ಕೃಪಲಾನಿ. ಯುನೈಟೆಡ್ ಪ್ರಾವಿನ್ಸಸ್

1942ರ ಕ್ವಿಟ್ ಇಂಡಿಯಾ ಮೂಮೆಂಟ್‌ನಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದ ಹಾಗೂ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ ಆಗಿದ್ದರು. ರಾಜ್ಯ ನೀತಿ ನಿರ್ದೇಶಕ ತತ್ವಗಳ ಬಗೆಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ವಿಜಯಲಕ್ಷ್ಮಿ ಪಂಡಿತ್, ಯುನೈಟೆಡ್ ಪ್ರಾವಿನ್ಸಸ್

ಮಹಿಳಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಬ್ರಿಟಿಷ್ ಇಂಡಿಯಾದಲ್ಲಿ ಮೊದಲ ಭಾರತೀಯ ಮಹಿಳಾ ಮಂತ್ರಿಯಾಗಿದ್ದರು. ಕೇಂದ್ರ ರಾಜ್ಯ ಸಂಬಂಧಗಳ ಬಗ್ಗೆ ರೂಪವಾದ ಕಾನೂನುಗಳಲ್ಲಿ ಇವರ ಪಾತ್ರ ವಿಶೇಷವಾದದ್ದು. ಸಂವಿಧಾನ ಶಿಲ್ಪಿ ಅಂಬೇಡ್ಕರರು ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹಾಗೂ ವಿಶೇಷ ಕೊಡುಗೆಯ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದ್ದರು. ಸಂವಿಧಾನದಲ್ಲಿ ಭಾರತೀಯತೆ ಮೈದಾಳುವಂತೆ, ನೆಲಮೂಲದ ಚಿಂತನೆ ಸಂವಿಧಾನದ ಆದ್ಯ ಭಾಗವಾಗುವಂತೆ ಪ್ರೇರೇಪಿಸುವಲ್ಲಿ ಮಹಿಳೆಯರ ಪಾತ್ರ ಅವಿಸ್ಮರಣೀಯ.

Share this article