ಆನೆ ಕಾಯೋರ ಕೆಲಸ ಹೇಗಿರುತ್ತೆ ಗೊತ್ತಾ ?

Published : Oct 08, 2026, 11:04 AM IST
elephant

ಸಾರಾಂಶ

ಆನೆ ನಾಡಿಗೆ ಬರದಂತೆ ಅತ್ಯಂತ ಆಳವಾದ ಕಂದಕ ತೋಡಿದ್ದರೆ ಅದಕ್ಕೆ ಕಾಲಿನಿಂದ ಒದ್ದು, ಮಣ್ಣು ತುಂಬಿ ದಾಟುತ್ತವೆ. ಸೋಲಾರ್‌ ವಿದ್ಯುತ್ತಿನ ಬೇಲಿ ಹಾಕಿದರೆ, ಒಣಗಿದ ಮರವನ್ನೋ ಅಥವಾ ತಮ್ಮ ದಂತದಿಂದ ಬೇಲಿಯನ್ನೇ ಕಿತ್ತೋ ಜಮೀನುಗಳಿಗೆ ನುಗ್ಗಲು ದಾರಿ ಮಾಡಿಕೊಳ್ಳುತ್ತವೆ.

ಆನೆ ನಾಡಿಗೆ ಬರದಂತೆ ಅತ್ಯಂತ ಆಳವಾದ ಕಂದಕ ತೋಡಿದ್ದರೆ ಅದಕ್ಕೆ ಕಾಲಿನಿಂದ ಒದ್ದು, ಮಣ್ಣು ತುಂಬಿ ದಾಟುತ್ತವೆ. ಸೋಲಾರ್‌ ವಿದ್ಯುತ್ತಿನ ಬೇಲಿ ಹಾಕಿದರೆ, ಒಣಗಿದ ಮರವನ್ನೋ ಅಥವಾ ತಮ್ಮ ದಂತದಿಂದ ಬೇಲಿಯನ್ನೇ ಕಿತ್ತೋ ಜಮೀನುಗಳಿಗೆ ನುಗ್ಗಲು ದಾರಿ ಮಾಡಿಕೊಳ್ಳುತ್ತವೆ. ಈಗ ಅತಿ ಹೆಚ್ಚು ಆನೆ ಸಂಘರ್ಷದ ಸ್ಥಳಗಳಲ್ಲಿ ಹಾಕಿರುವ ರೈಲ್ವೆ ಬೇಲಿಯನ್ನೇ ದಾಟಿ ಆನೆಗಳು ಜನವಸತಿ ಕಡೆ ಲಗ್ಗೆ ಇಡಲಾರಂಭಿಸಿವೆ.

ಆನೆ ಕಾಯೋದು ಅಂತಾ ಯಾರಾದರೂ ಕೇಳಿದ್ದೀರಾ.,.??

ದನ ಕಾಯೋದು….ಕುರಿ ಕಾಯೋದು ಕೇಳಿದ್ದೇವೆ. ಕೆಲವೊಮ್ಮೆ ಇದನ್ನು ಜನರು ಆಡುಭಾಷೆಯಲ್ಲಿ ಬೈಗುಳವಾಗಿಯೂ ಬಳಸುತ್ತಾರೆ. ಆದರೆ, ಆನೆ ಕಾಯೋದು ಅಂತಾ ಯಾರಾದರೂ ಕೇಳಿದ್ದೀರಾ.,.?? ಖಂಡಿತಾ ಇಲ್ಲ. ಅರಣ್ಯ ಇಲಾಖೆಯಲ್ಲಿ ಆನೆ ಕಾಯೋಕ್ಕೆ ಅಂತಾನೇ ಒಂದು ಪಡೆ ಇದೆ ಅಂದರೆ ನಂಬುತ್ತೀರಾ..? ನಂಬಲೇಬೇಕು. ಆನೆ ಕಾಯೋರನ್ನ ನಾವು ಬೈಯ್ಯುವಂತಿಲ್ಲ. ಏಕೆಂದರೆ, ಇವರು ಸ್ವಲ್ಪ ಎಚ್ಚರ ತಪ್ಪಿದರೂ, ಆನೆ ಮಾಡುವ ಅನಾಹುತ ಅಷ್ಟಿಷ್ಟಲ್ಲ.

ಆನೆ ಕಾರ್ಯಪಡೆ. ಅಂದರೆ, ಆಡು ಭಾಷೆಯಲ್ಲಿ ಆನೆ ಕಾಯುವವರು ಅಂತ. ಅರಣ್ಯ ಇಲಾಖೆ ಇತ್ತೀಚೆಗೆ ಹೊಸದಾಗಿ ರಚಿಸಿರುವ ಅತ್ಯಂತ ವಿಶಿಷ್ಟ ಪಡೆ ಇದು. ಹಗಲು ರಾತ್ರಿ ಆನೆ ಕಾಯೋದೇ ಇವರ ಕೆಲಸ. ನಿಂತರೂ ಆನೆ, ಕುಂತರೂ ಆನೆ. ಕರ್ನಾಟಕ ಇಡೀ ದೇಶದಲ್ಲೇ ಅತಿ ಹೆಚ್ಚು ಕಾಡಾನೆಗಳನ್ನು ಪೋಷಣೆ ಮಾಡುತ್ತಿರುವ ರಾಜ್ಯ. ನಮ್ಮ ಕಾಡುಗಳಲ್ಲಿ ಬರೋಬ್ಬರಿ 6 ಸಾವಿರಕ್ಕೂ ಹೆಚ್ಚು ಆನೆಗಳಿವೆ. ಆನೆಗಳು ಇವತ್ತು ಕರ್ನಾಟಕದ ನಾನಾ ಕಡೆ ಕಾಡಿನಿಂದ ಹೊರಬಂದು ಜನರಿಗೆ ಉಪಟಳ ಕೊಡಲಾರಂಭಿಸಿವೆ.

ರೈತರು ಕಾಡಿಗೆ ಅತ್ಯಂತ ಸಮೀಪದಲ್ಲೇ ಬಾಳೆ ಮತ್ತು ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾರಂಭಿಸಿದ್ದಾರೆ. ಒಮ್ಮೆ ಇವುಗಳ ರುಚಿ ಸಿಕ್ಕರೆ ಮುಗಿಯಿತು. ಆನೆಗಳು ಪದೇ ಪದೇ ಕಾಡಿನಿಂದ ಆಚೆ ಬರುವ ಪ್ರಯತ್ನ ಮಾಡಲು ಶುರು ಮಾಡುತ್ತವೆ. ಈ ಆನೆ-ಮಾನವ ಸಂಘರ್ಷವನ್ನು ಪರಿಣಾಮಕಾರಿ ತಡೆಯುವುದಕ್ಕಂತಲೇ ಅರಣ್ಯ ಇಲಾಖೆ ಆನೆ ಕಾರ್ಯಪಡೆಯನ್ನು ರೂಪಿಸಿದೆ.

ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡದ ಕೆಲ ಭಾಗ, ಚಾಮರಾಜನಗರ, ಬೆಂಗಳೂರು ದಕ್ಷಿಣ ಜಿಲ್ಲೆ(ರಾಮನಗರ) ಹೀಗೆ ಕೆಲವೊಂದು ಜಿಲ್ಲೆಗಳಲ್ಲಿ ಆನೆಗಳ ಕಾಟ ಬಹಳ ಹೆಚ್ಚಾಗಿದೆ. ಇಲ್ಲಿ ಕಾರ್ಯಪಡೆ ಕಾರ್ಯನಿರ್ವಹಿಸುತ್ತದೆ. ತಂಡದಲ್ಲಿ ವಾಚರ್‌, ಗಸ್ತು ಅರಣ್ಯ ಪಾಲಕ, ಉಪ ವಲಯ ಅರಣ್ಯಾಧಿಕಾರಿ, ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೊತೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿಗಳನ್ನು ವಿಶೇಷವಾಗಿ ನಿಯೋಜನೆ ಮಾಡಲಾಗುತ್ತದೆ. ಈ ಪಡೆಯು ತನ್ನದೇ ಆದ ನೆಟ್‌ ವರ್ಕ್‌ ರೂಪಿಸಿಕೊಂಡು ಕೆಲಸ ಶುರು ಮಾಡುತ್ತದೆ.

ಆನೆ ಕಾರ್ಯಪಡೆ ಸದಾ ಅಲರ್ಟ್‌ ಆಗಿರುತ್ತದೆ. ಆನೆಗಳ ಸಂಚಾರದ ಮೇಲೆ ನಿಗಾ ಇಟ್ಟಿರುತ್ತದೆ. ಆನೆಗಳು ಸಾಮಾನ್ಯವಾಗಿ ಇಂತಹದ್ದೇ “ದಾಟು ಪ್ರದೇಶ”ಗಳ ಮೂಲಕ ನಾಡಿಗೆ ಹೋಗುತ್ತವೆ ಎನ್ನುವುದು ಸಿಬ್ಬಂದಿಗೆ ಗೊತ್ತಿರುತ್ತದೆ. ಆದ್ದರಿಂದ ಅಂತಹ ಗಡಿ ಪ್ರದೇಶಗಳಲ್ಲಿ ರಾತ್ರಿ ಇಡೀ ಬೆಂಕಿ ಹಾಕಿಕೊಂಡು ಕಾವಲು ಕಾಯುತ್ತಿರುತ್ತಾರೆ. ಅದೇ ಜಾಗದಲ್ಲಿ ಆನೆಗಳು ದಾಟುವ ಪ್ರಯತ್ನ ಪಟ್ಟರೆ ಅವುಗಳನ್ನು ಅಲ್ಲಿಂದಲೇ ಕಾಡಿಗೆ ಓಡಿಸಿಬಿಡುತ್ತಾರೆ. ಆದರೆ, ಅನೇಕ ಬಾರಿ ಆನೆಗಳೂ ತಮ್ಮ ಬುದ್ದಿವಂತಿಕೆ ಬಳಸಿ, ಹೊಸ ಜಾಗಗಳ ಮೂಲಕ ಕಾಡನ್ನು ದಾಟಿ ಬಿಡುತ್ತವೆ. ಆಗಲೇ, ನಿಜವಾದ ಸವಾಲು ಎದುರಾಗುವುದು. ಆನೆಗಳ ಓಡಾಟದ ಮಾಹಿತಿ ಬರುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸುವ ಸಿಬ್ಬಂದಿ, ಮೊದಲಿಗೆ ಅಕ್ಕ ಪಕ್ಕದ ಹಳ್ಳಿ ಜನರಿಗೆ ಆನೆಗಳ

ಸಂಚಾರದ ಮಾಹಿತಿ ನೀಡುತ್ತಾರೆ. ಮನೆಯಿಂದ ಆಚೆ ಬರದಂತೆ ಅಥವಾ ರಾತ್ರಿ ಹೊತ್ತು ಓಡಾಡದಂತೆ ತಾಕೀತು ಮಾಡಲಾಗುತ್ತದೆ. ಆನೆಗಳು ಸಾಗುವ ಮಾರ್ಗದಲ್ಲಿ ಬರುವ ಹಳ್ಳಿಗಳ ಜನರ ಫೋನ್‌ಗಳಿಗೆ ಎಸ್‌ಎಂಎಸ್‌ ಮತ್ತು ವಾಟ್ಸಾಪ್‌ ಮೂಲಕ ಎಚ್ಚರಿಕೆ ಸಂದೇಶಗಳು ರವಾನೆಯಾಗುತ್ತವೆ.

ಮೊದಲಿಗೆ ಸಿಬ್ಬಂದಿ ಆನೆಗಳ ಜಾಡನ್ನು ಪತ್ತೆ ಹಚ್ಚುತ್ತದೆ. ಆದಷ್ಟು ಆನೆಗಳ ಆ ಜಾಗದಿಂದ ಹೆಚ್ಚು ದೂರ ಸಂಚರಿಸದಂತೆ ತಡೆಯೊಡ್ಡಲಾಗುತ್ತದೆ. ಸಾಮಾನ್ಯವಾಗಿ ರಾತ್ರಿ ಹೊತ್ತು ಆನೆಗಳನ್ನು ಮರಳಿ ಕಾಡಿಗೆ ಸೇರಿಸುವ ಕೆಲಸ ಶುರು ಮಾಡುತ್ತಾರೆ. ಹಗಲಿನಲ್ಲಾದರೆ, ಜನ ಸಂಚಾರವಿರುತ್ತದೆ. ಆನೆಗಳು ಜನರ ಮೇಲೆ ದಾಳಿ ಮಾಡಬಹುದು ಎನ್ನುವ ಕಾರಣಕ್ಕೆ ರಾತ್ರಿ ವಾಪಸ್‌ ಓಡಿಸುವ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಒಂದೇ ದಿನದಲ್ಲಿ ಆನೆಗಳನ್ನು ಕಾಡಿಗೆ ಕಳಿಸುವಲ್ಲಿ ಯಶಸ್ವಿಯಾದರೆ, ಮತ್ತೆ ಕೆಲವೊಮ್ಮೆ ಎರಡು ಮೂರು ದಿನಗಳೇ ಹಿಡಿಯುತ್ತವೆ. ಕಾಡಿನಿಂದ ನಾಡಿಗೆ ಬಂದಾಗಲೂ ತಿಂದು ಹಾಳು ಮಾಡಿದ್ದಕ್ಕಿಂತಲೂ ಆನೆಗಳು ತುಳಿದು ಬೆಳೆ ಹಾಳು ಮಾಡುತ್ತವೆ. ಅದೇ ರೀತಿ ಕಾಡಿಗೆ ವಾಪಸ್‌ ಓಡಿಸುವಾಗಲೂ ಕೃಷಿ ಭೂಮಿ ಮೂಲಕ ಹಾದು ಹೋದಲ್ಲಿ, ಭಾರಿ ಪ್ರಮಾಣದ ಬೆಳೆ ಹಾನಿ ಉಂಟಾಗುತ್ತದೆ. ಆಗ ಆನೆಗಳನ್ನು ಓಡಿಸುವ ಸಾಹಸದ ಜೊತೆಗೆ ಜನರ ಆಕ್ರೋಶವನ್ನೂ ಸಹ ಸಿಬ್ಬಂದಿ ಎದುರಿಸಬೇಕಾಗುತ್ತದೆ. ಜನರು ಇಲಾಖೆಯ ನೆರವಿಗೆ ಬರುವುದು ಹಾಗಿರಲಿ, ಆನೆ ನೋಡಿ ಸೆಲ್ಫಿ ತೆಗೆದುಕೊಳ್ಳುತ್ತಾ, ಅವುಗಳಿಗೆ ಕಲ್ಲು ಹೊಡೆದು ಇನ್ನಷ್ಟು ಕೆರಳಿಸುತ್ತಾ, ಸಿಬ್ಬಂದಿಯ ಶ್ರಮವನ್ನು ಇನ್ನಷ್ಟು ಕಠಿಣ ಮಾಡಿಬಿಡುತ್ತಾರೆ.

ಒಂದು ಕಡೆ, ಪಟಾಕಿಗಳನ್ನು ಹೊಡೆದು ಆನೆಗಳನ್ನು ಬೆದರಿಸಬೇಕು. ಜೀಪು, ಬೈಕುಗಳ ಮೂಲಕ ಓಡಾಡಿ ಆನೆಗಳು ಎಲ್ಲೆಲ್ಲೋ ಚದುರಿ ಹೋಗದಂತೆ ನೋಡಿಕೊಳ್ಳಬೇಕು. ಜನರ ಜೀವಕ್ಕೆ ಹಾನಿಯಾಗದಂತೆ ಜೋಪಾನ ಮಾಡುವುದರ ಜೊತೆಗೆ ಸಿಬ್ಬಂದಿ ತಮ್ಮ ಜೀವಕ್ಕೂ ಯಾವುದೇ ಅಪಾಯವಾಗದಂತೆ ಅತ್ಯಂತ ಎಚ್ಚರಿಕೆಯಿಂದ ಆನೆ ಓಡಿಸುವ ಕೆಲಸ ಮಾಡುತ್ತಾರೆ. ಗುಂಪಿನಲ್ಲೋ ಅಥವಾ ಒಂಟಿ ಆನೆಯನ್ನೋ ಕಾಡಿಗೆ ವಾಪಸ್‌ ಕಳಿಸುವ ಕಾರ್ಯಾಚರಣೆ ಮಾಡುವ ಈ ಕಾರ್ಯಪಡೆ, ಸದಾ ಜನ ವಸತಿ ಪ್ರದೇಶಗಳಿಗೆ ಲಗ್ಗೆ ಇಡುವ, ಜನರನ್ನು ಕಂಡರೆ ಲವಲೇಶವೂ ಭಯಪಡದೇ ಜನರ ಮೇಲೆ ಮುನ್ನುಗ್ಗಿ, ಪದೇ ಪದೇ ಜೀವಹಾನಿ ಮಾಡುವ ಆನೆಗಳನ್ನು ಹಿಡಿಯುವ ಕೆಲಸವನ್ನೂ ಮಾಡಬೇಕಾಗುತ್ತದೆ. ಸಾವಿರಾರು ಕೆಜಿ ತೂಗುವ ಆನೆಯನ್ನು ಮಣಿಸಿ, ಕಾಡಿಗೆ ಮರಳಿಸಲು ಸಿಬ್ಬಂದಿ ಬಹಳ ಶ್ರಮಪಡಬೇಕಾಗುತ್ತದೆ. ಜೀವ ಕೈಯ್ಯಲ್ಲಿ ಹಿಡಿದು ಕೆಲಸ ಮಾಡಬೇಕು. ಆನೆ ಓಡಿಸಲು ಹೋಗಿ ಅನೇಕ ಸಿಬ್ಬಂದಿ ತಮ್ಮ ಜೀವವನ್ನೇ ಕಳೆದುಕೊಂಡವರಿದ್ದಾರೆ. ಆದ್ದರಿಂದ ಆನೆ ಕಾರ್ಯಪಡೆ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡಬೇಕು. ಕಾಡಂಚಿನ ಜನರೂ ಜೊತೆಗೂಡಿದರೆ ಆನೆ ದಾಳಿ ಪ್ರಕರಣಗಳಿಗೆ ಒಂದು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

-ವಿನೋದಕುಮಾರ್‌ ಬಿ ನಾಯ್ಕ್‌

PREV
Read more Articles on

Recommended Stories

ಪೋಸ್ಟ್‌ ಪೇಯ್ಡ್ ಪ್ಲಾನ್‌ ಗಳಲ್ಲಿ ಉಚಿತ ಇಂಟರ್‌ ನ್ಯಾಷನಲ್ ರೋಮಿಂಗ್ ನೀಡಿದ ಏರ್‌ಟೆಲ್
ಆನ್‌ಲೈನ್ ಎಐ ಕೋರ್ಸ್‌ ಕಲಿಯುವವರು ಗಮನಿಸಲೇಬೇಕಾದ ಕೆಲವು ಪ್ರಮುಖ ಅಂಶಗಳು