ಈಜಿಪುರ ಮೇಲ್ಸೇತುವೆ ಕಾಮಗಾರಿ ಚುರುಕು: 2025 ವರ್ಷಾಂತ್ಯಕ್ಕೆ 7 ಜಂಕ್ಷನ್‌ ಸಿಗ್ನಲ್‌ ಫ್ರೀ?

KannadaprabhaNewsNetwork |  
Published : Jun 26, 2025, 01:32 AM ISTUpdated : Jun 26, 2025, 08:17 AM IST
Ejipura flyover 1 | Kannada Prabha

ಸಾರಾಂಶ

  ಈಜಿಪುರ ಫ್ಲೈಓವರ್‌ ನಿರ್ಮಾಣ ಕಾಮಗಾರಿಗೆ ವೇಗ ದೊರೆತಿದ್ದು, ಶೇ.50ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ. ವರ್ಷಾಂತ್ಯದ ವೇಳೆಗೆ ಈಜಿಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನದ ಜಂಕ್ಷನ್‌ ವರೆಗಿನ 2.5 ಕಿ.ಮೀ. ಉದ್ದದ ರಸ್ತೆಯ 7 ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ.

 ಬೆಂಗಳೂರು :  ಬಿಬಿಎಂಪಿಯು ಪ್ರತ್ಯೇಕ ಎಂಜಿನಿಯರ್ ತಂಡ ನಿಯೋಜನೆಯ ಬಳಿಕ ಈಜಿಪುರ ಫ್ಲೈಓವರ್‌ ನಿರ್ಮಾಣ ಕಾಮಗಾರಿಗೆ ವೇಗ ದೊರೆತಿದ್ದು, ಶೇ.50ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ. ವರ್ಷಾಂತ್ಯದ ವೇಳೆಗೆ ಈಜಿಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನದ ಜಂಕ್ಷನ್‌ ವರೆಗಿನ 2.5 ಕಿ.ಮೀ. ಉದ್ದದ ರಸ್ತೆಯ 7 ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ.

ಬರೋಬ್ಬರಿ ಎಂಟು ವರ್ಷದಿಂದ ನೆನೆಗುದಿಗೆ ಬಿದ್ದಿರುವ ನಿರ್ಮಾಣ ಹಂತದ ಈಜಿಪುರ ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ಬಿಬಿಎಂಪಿಯ ಮುಖ್ಯ ಆಯುಕ್ತರು ಪ್ರತ್ಯೇಕ ಎಂಜಿನಿಯರ್ ತಂಡ ರಚಿಸಿ ಮಾರ್ಚ್‌16ಕ್ಕೆ ಆದೇಶಿಸಿದ್ದರು. ಇದರಿಂದ ಕಾಮಗಾರಿಗೆ ವೇಗ ಸಿಕ್ಕಿದ್ದು, ಕಳೆದ ಮೂರು ತಿಂಗಳಲ್ಲಿ 78 ಪ್ರಿಕಾಸ್ಟ್ ಸೆಗ್‌ಮೆಂಟ್‌ಗಳ ನಿರ್ಮಾಣ ಹಾಗೂ 103 ಸೆಗ್‌ಮೆಂಟ್‌ಗಳ ಅಳವಡಿಕೆ ಮಾಡಲಾಗಿದೆ.

ಒಟ್ಟಾರೆ ಈವರೆಗೆ 424 ಸೆಗ್‌ಮೆಂಟ್‌ಗಳನ್ನು ಕಾಸ್ಟಿಂಗ್‌ (ರಚನೆ) ಹಾಗೂ 314 ಸೆಂಗ್‌ಮೆಂಟ್‌ಗಳನ್ನು ಫ್ಲೈಓವರ್‌ಗೆ ಆಳವಡಿಕೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನೂ 338 ಸೆಗ್‌ಮೆಂಟ್‌ ಕಾಸ್ಟಿಂಗ್‌ ಸೇರಿದಂತೆ 448 ಸೆಗ್‌ಮೆಂಟ್‌ಗಳ ಅಳವಡಿಕೆ ಕಾಮಗಾರಿ ಮಾತ್ರ ಬಾಕಿ ಇದೆ. ನವೆಂಬರ್‌ ಅಂತ್ಯದೊಳಗೆ ಬಾಕಿ ಇರುವ ಸೆಗ್‌ಮೆಂಟ್‌ ಕಾಸ್ಟಿಂಗ್‌ ಮತ್ತು ಡಿಸೆಂಬರ್‌ ಒಳಗೆ ಸೆಗ್‌ಮೆಂಟ್‌ ಅಳವಡಿಕೆ ಮಾಡುವುದಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ.

ಫ್ಲೈಓವರ್‌ನ ಎರಡು ಬದಿಯಲ್ಲಿ ತಲಾ ಒಂದೊಂದು ಸೆಗ್‌ಮೆಂಟ್‌ಗಳ ಅಳವಡಿಕೆಯ ಗಿರ್ಡರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳಿಗೆ ಸುಮಾರು 275 ಮೀಟರ್‌ ನಷ್ಟು ಫ್ಲೈಓವರ್ ನಿರ್ಮಾಣದ ಸಾಮರ್ಥ್ಯವನ್ನು ಹೊಂದಿದ್ದು, ಮೂರು ಪ್ರಿಕಾಸ್ಟ್ ಸೆಗ್‌ಮೆಂಟ್‌ ಬೆಡ್‌ಗಳನ್ನು ಸುಮಾರು 8 ಎಕರೆ ಪ್ರದೇಶದಲ್ಲಿ ಅಳವಡಿಕೆ ಮಾಡಿಕೊಳ್ಳಲಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸೂಚನೆ ನೀಡಲಾಗಿದೆ ಎಂದು ಮುಖ್ಯ ಎಂಜಿನಿಯರ್‌ ರಾಘವೇಂದ್ರ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಈಜಿಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗಿನ 2.5 ಕಿ.ಮೀ. ಉದ್ದದ ಮೇಲ್ಸೇತುವೆ ಒಟ್ಟು 84 ಪಿಲ್ಲರ್‌ (ಕಂಬ) ಬರಲಿದ್ದು, ಈ ಪೈಕಿ ಈಗಾಗಲೇ 70 ಪಿಲ್ಲರ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇನ್ನೂ 14 ಪಿಲ್ಲರ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದ್ದು, ಅದನ್ನು ಆಗಸ್ಟ್‌ ಅಂತ್ಯದೊಳಗೆ ಪರಿಹಾರ ಮಾಡಿಕೊಂಡು ಕಾಮಗಾರಿಯನ್ನೂ ಪೂರ್ಣಗೊಳಿಸಲಾಗುವುದು. ಐದು ಬೀಮ್‌ ಅಳವಡಿಕೆ ಮಾಡಬೇಕಾಗಿದ್ದು, ಸೆಪ್ಟಂಬರ್ ಅಂತ್ಯದೊಳಗೆ ಕಾಸ್ಟಿಂಗ್‌ ಕಾರ್ಯ ಮುಗಿಸಿ ಅಳವಡಿಕೆ ಮಾಡಲಾಗುವುದು.

ಮಳೆಗಾಲ ಆರಂಭಗೊಂಡಿರುವುದರಿಂದ ಫ್ಲೈಓವರ್ ಅಕ್ಕ-ಪಕ್ಕದ ಕಾಲುವೆ ನಿರ್ಮಾಣ ಹಾಗೂ ಪಾದಚಾರಿ ಮಾರ್ಗ ಕಾಮಗಾರಿ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರವೂ ಡಿಸೆಂಬರ್‌ 31ರ ಒಳಗೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಗಡುವು ನೀಡಿದೆ. ಆ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ರಾಘವೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

ವಿಘ್ನಗಳ ನಡುವೆ ಇದೀಗ ವಾಹನ ಸವಾರರ ನಿಟ್ಟುಸಿರು:

2017ರಲ್ಲಿ ಸುಮಾರು 203 ಕೋಟಿ ರು. ವೆಚ್ಚದಲ್ಲಿ ಫ್ಲೈಓವರ್‌ ಕೆಲಸ ಕಾಮಗಾರಿ ಆರಂಭಿಸಲಾಗಿತ್ತು. ಗುತ್ತಿಗೆ ಪಡೆದ ಸಿಂಪ್ಲೆಕ್ಸ್‌ ಕಂಪೆನಿಯು 2019ರ ನವೆಂಬರ್‌ಗೆ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಕಂಪನಿ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬಾಕಿ ಉಳಿದ ಕಾಮಗಾರಿಗೆ ಮರು ಟೆಂಡರ್ ಆಹ್ವಾನಿಸಿ 2023ರಲ್ಲಿ ಬಿಎಸ್‌ಸಿಪಿಎಲ್‌ ಸಂಸ್ಥೆಗೆ ಕಾಮಗಾರಿ ಪೂರ್ಣಕ್ಕೆ ಮರುಗುತ್ತಿಗೆ ನೀಡಿತ್ತು.

ಆ ನಂತರವೂ ವಿವಿಧ ಸಮಸ್ಯೆ ನಡುವೆ ಒಂದು ವರ್ಷ ಕಾಮಗಾರಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಕೊನೆಗೆ ಬಿಬಿಎಂಪಿಯ ಮುಖ್ಯ ಆಯುಕ್ತರು ಕಳೆದ ಮಾರ್ಚ್‌ನಲ್ಲಿ ಕಾಮಗಾರಿ ಪೂರ್ಣಕ್ಕೆ ಗುಣನಿಯಂತ್ರಣ ವಿಭಾಗದ ಮುಖ್ಯ ಎಂಜಿನಿಯರ್‌ ರಾಘವೇಂದ್ರ ಪ್ರದಾಸ್‌ ನೇತೃತ್ವದಲ್ಲಿ ಪ್ರತ್ಯೇಕ ಎಂಜಿನಿಯರ್ ತಂಡ ರಚನೆ ಮಾಡಿದ್ದರು. ಆ ಬಳಿಕ ಕಾಮಗಾರಿಗೆ ಒಂದಿಷ್ಟು ಪ್ರಗತಿ ಕಂಡಿದ್ದು, ಈಗ ಭಾಗದ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

PREV
Read more Articles on

Recommended Stories

ರಾಜ್ಯಪಾಲರನ್ನೇ ಶಾಸಕರು ಅಡ್ಡಗಟ್ಟಿದ್ದು ಸರಿಯೇ?
ಕ್ಯಾನ್ಸರ್‌ ರೋಗದ ಬಗ್ಗೆ ಇರಲಿ ಜಾಗೃತಿ : ಅರ್ಬುದ ರೋಗದ ಚಿಹ್ನೆಗಳು - ಕಾರಣಗಳು ?