₹60 ಕೋಟಿ ಮೌಲ್ಯದ ಒತ್ತುವರಿ ಅರಣ್ಯ ಮರುವಶ!

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಪ್ರಸಕ್ತ ವರ್ಷದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಆದ್ಯತೆ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಂಗಳವಾರ ಸಭೆ ನಡೆಸಿ ಸೂಚನೆ ನೀಡಿದ ಬೆನ್ನಲ್ಲೇ, ಕಾರ್ಯಪ್ರವೃತ್ತರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ತುರಹಳ್ಳಿ ಮೀಸಲು ಅರಣ್ಯದ ಬಿಎಂ ಕಾವಲು ಸಂರಕ್ಷಿತ ವಲಯದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ್ದ 60 ಕೋಟಿ ರು. ಮೌಲ್ಯದ 6.5 ಎಕರೆ ಭೂಮಿಯನ್ನು ತೆರವು ಮಾಡಲಾಗಿದೆ.

ಪ್ರಸಕ್ತ ವರ್ಷದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಆದ್ಯತೆ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಂಗಳವಾರ ಸಭೆ ನಡೆಸಿ ಸೂಚನೆ ನೀಡಿದ ಬೆನ್ನಲ್ಲೇ, ಕಾರ್ಯಪ್ರವೃತ್ತರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ಬಿಎಂ ಕಾವಲಿನ ಸಂರಕ್ಷಿತ ವಲಯದಲ್ಲಿ ಮಧುಸೂಧನಾನಂದ ಸ್ವಾಮಿ ಎಂಬುವವರು 6.5 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಶೆಡ್‌ಗಳನ್ನು ನಿರ್ಮಿಸಿದ್ದರು. ಅಲ್ಲದೆ, ಆ ಜಾಗವನ್ನು ತಮಗೆ ಮಂಜೂರು ಮಾಡುವಂತೆ ಅರಣ್ಯ ಇಲಾಖೆಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು.

ಆದರೆ, ಮಧುಸೂದನಾನಂದ ಸ್ವಾಮಿ ಅವರ ಬಳಿ ಕಂದಾಯ ದಾಖಲೆ, ಕ್ರಯಪತ್ರ, ಮಂಜೂರಾತಿ ಪತ್ರ, ಸಾಗುವಳಿ ಚೀಟಿ ಸೇರಿದಂತೆ ಯಾವ ದಾಖಲೆಯೂ ಇಲ್ಲದ ಕಾರಣ 2017ರ ಆಗಸ್ಟ್‌ನಲ್ಲಿ ಎಸಿಎಫ್‌ ನ್ಯಾಯಾಲಯ ತೆರವಿಗೆ ಆದೇಶಿಸಿತ್ತು. ಆ ಬಳಿಕ ಸಿಸಿಎಫ್‌ ನ್ಯಾಯಾಲಯದಲ್ಲಿ ಮಧುಸೂಧನಾನಂದ ಸ್ವಾಮಿ ಮೇಲ್ಮನವಿ ಸಲ್ಲಿಸಿದ್ದರಾದರೂ 2023ರ ಡಿಸೆಂಬರ್‌ 29ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್‌ ಅವರು 6.5 ಎಕರೆ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಆದೇಶ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ, ಭೂಮಿ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ನಗರ ಡಿಸಿಎಫ್‌ ರವೀಂದ್ರ ಕುಮಾರ್‌, ಎಸಿಎಫ್‌ ಸುರೇಶ್‌, ಆರ್‌ಎಫ್‌ಒ ಗೋವಿಂದರಾಜ್‌ ನೇತೃತ್ವದಲ್ಲಿ 20ಕ್ಕೂ ಹೆಚ್ಚಿನ ಸಿಬ್ಬಂದಿ, ಜೆಸಿಬಿ ಮೂಲಕ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ತೆರವುಗೊಳಿಸಿ ಭೂಮಿ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯಲಾದ ಭೂಮಿಯ ಗಡಿಯಲ್ಲಿ ಬಿದಿರು ಸೇರಿದಂತೆ ಇನ್ನಿತರ ಜಾತಿಯ ಸಸಿಗಳನ್ನು ನೆಡಲಾಗಿದೆ.

Share this article