ವಿದ್ಯುತ್ ಲೆಕ್ಕ ಗೊತ್ತಿರತ್ತೆ, ನೀರಿನ ಲೆಕ್ಕ ಗೊತ್ತಿದೆಯೇ: ವಿಶೇಷ ಬರಹ

KannadaprabhaNewsNetwork | Published : Dec 4, 2024 12:31 AM

ಸಾರಾಂಶ

ನೀರು ಉಳಿತಾಯ ಮಾಡುವುದು ಸದ್ಯದ ತುರ್ತು. ಆದರೆ ಆ ಕುರಿತು ನಾವು ಜಾಸ್ತಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಂತ್ರಜ್ಞಾನ ಬಳಸಿಕೊಂಡು ನೀರುಳಿಸುವುದರ ಕುರಿತು ರಘುನಂದನ್ ಪ್ರಸಾದ್ ಬರೆದ ವಿಶೇಷ ಲೇಖನ.

- ರಘುನಂದನ್ ಪ್ರಸಾದ್

ನಾವು ಪ್ರತಿಯೊಬ್ಬರೂ ಬೆಳಿಗ್ಗೆ ಎದ್ದು ಸುಲಭವಾಗಿ ನಲ್ಲಿಯನ್ನು ತಿರುಗಿಸಿ ನೀರು ಬಳಸುತ್ತೇವೆ. ಆದರೆ ನಮ್ಮ ಬೆರಳ ತುದಿಯಲ್ಲಿ ತುಂಬಾ ಸುಲಭವಾಗಿ ಸಿಗುವ ಈ ನೀರನ್ನು ಆ ನಲ್ಲಿಯವರೆಗೆ ತೆಗೆದುಕೊಂಡು ಬರಲು ಪಟ್ಟ ಶ್ರಮ, ಕಷ್ಟ ಆ ಕ್ಷಣಕ್ಕೆ ಅರಿವಿಗೆ ಬರುವುದಿಲ್ಲ. ಅದರಲ್ಲೂ ವಿಶೇಷವಾಗಿ ನಾವು ದಿನಕ್ಕೆ ಎಷ್ಟು ನೀರು ಖರ್ಚು ಮಾಡುತ್ತೇವೆ ಎಂಬುದರ ಕುರಿತು ಕಿಂಚಿತ್ತೂ ಗೊತ್ತಿರುವುದಿಲ್ಲ.

ನೀವೇ ಒಮ್ಮೆ ಯೋಚಿಸಿ ನೋಡಿ. ನಮಗೆ ನಾವು ವಿದ್ಯುತ್ ಎಷ್ಟು ಯುನಿಟ್ ಗಳನ್ನು ಖರ್ಚು ಮಾಡುತ್ತೇವೆ ಎಂಬ ಲೆಕ್ಕ ಗೊತ್ತಿರುತ್ತದೆ. ಆದರೆ ನಮ್ಮ ಮೂಲಭೂತ ಅಗತ್ಯವಾದ ನೀರನ್ನು ಎಷ್ಟು ಯುನಿಟ್ ಖರ್ಚು ಮಾಡುತ್ತೇವೆ ಎಂಬುದರ ಕುರಿತು ಬಹುತೇಕರಿಗೆ ಲೆಕ್ಕ ಇರುವುದಿಲ್ಲ. ಆದರೆ ಈ ಲೆಕ್ಕ ಇರಬೇಕಾದುದು ಅವಶ್ಯ. ಯಾಕೆಂದರೆ ನೀರು ಜೀವ ಜಲ. ನೀರಿಲ್ಲದಿದ್ದರೆ ನಾವಿಲ್ಲ.

ಒಮ್ಮೆ ನೀರು ಬಳಕೆಯ ಕುರಿತಾದ ಲೆಕ್ಕಾಚಾರವನ್ನು ನೋಡಿಕೊಂಡು ಬರೋಣ. ವಿಶ್ವಸಂಸ್ಥೆಯ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ ಅಂದಾಜು ಸರಾಸರಿ 50-100 ಲೀಟರ್ ನೀರನ್ನು ಬಳಸುತ್ತಾನೆ. ಆದರೆ ಈ ಲೆಕ್ಕ ಬೇರೆ ಬೇರೆ ಭಾಗದಲ್ಲಿ, ಬೇರೆ ಬೇರೆ ಸಾಮಾಜಿಕ ಆರ್ಥಿಕ ಸಂದರ್ಭಗಳಲ್ಲಿ ಬದಲಾಗುತ್ತದೆ. ಅನೇಕ ದೇಶಗಳಲ್ಲಿ ನೀರಿನ ಕೊರತೆ ದೊಡ್ಡ ಮಟ್ಟದಲ್ಲಿ ಇರುವುದರಿಂದ ಅಲ್ಲಿ ಇಷ್ಟು ನೀರಿನ ಬಳಕೆ ಆಗುವುದು ಕೊಂಚ ಕಷ್ಟವೇ. ಆದರೆ ನಾವು ಈ ಲೆಕ್ಕದಲ್ಲಿ ಕೊಂಚ ಅದೃಷ್ಟವಂತರೇ. ನಾವು ಚಿಂತೆ ಇಲ್ಲದೆ ನೀರು ಖರ್ಚು ಮಾಡುತ್ತೇವೆ.

ಉದಾಹರಣೆಗೆ ನಾವು ಎಷ್ಟು ನೀರು ಬಳಸುತ್ತೇವೆ ಎಂಬುದನ್ನು ಈ ಕೆಳಗೆ ನೋಡೋಣ:

● ಒಮ್ಮೆ ಟಾಯ್ಲೆಟ್ ಫ್ಲಶ್ ಮಾಡಿದರೆ 6-8 ಲೀಟರ್ ನೀರು ಬಳಕೆಯಾಗುತ್ತದೆ.

● ಸ್ನಾನಕ್ಕೆ ಬಳಸುವ ಶವರ್ ಪ್ರತಿ ನಿಮಿಷಕ್ಕೆ ಸುಮಾರು 10-15 ಲೀಟರ್‌ ನೀರನ್ನು ಬಳಸುತ್ತದೆ.

● ವಾಷಿಂಗ್ ಮೆಷಿನ್ ನಲ್ಲಿ ಒಮ್ಮೆ ಬಟ್ಟೆ ಒಗೆದರೆ ಸುಮಾರು 50-70 ಲೀಟರ್‌ ನೀರು ಬಳಕೆಯಾಗುತ್ತದೆ.

● ನಲ್ಲಿ ಸೋರುತ್ತಿದ್ದರೆ ಅದರಿಂದ ದಿನಕ್ಕೆ 15 ಲೀಟರ್‌ ಗಳಷ್ಟು ನೀರು ವ್ಯರ್ಥವಾಗಬಹುದು

● ಕಾರು ತೊಳೆಯಲು ಅಂದಾಜು 200 ಲೀಟರ್ ನೀರು ಬೇಕಾಗಬಹುದು.

ಇಷ್ಟೆಲ್ಲಾ ನೋಡಿದ ಮೇಲೆ ಅಷ್ಟೆಲ್ಲಾ ನೀರು ಖರ್ಚಾಗುತ್ತದಾ ಎಂಬ ಆಲೋಚನೆ ನಿಮ್ಮಲ್ಲಿ ಹುಟ್ಟಿಕೊಂಡಿರಬಹುದು. ಹೌದು ಅದು ನಿಜ. ಆದರೆ ಈ ಸಂದರ್ಭದಲ್ಲಿ, ಈ ಕಾಲಘಟ್ಟದಲ್ಲಿ ಯೋಚನೆ ಮಾಡಬೇಕಾದುದು ಏನೆಂದರೆ ನೀರನ್ನು ಉಳಿಸುವುದು ಹೇಗೆ ಎಂದು.

ನೀರು ಉಳಿಸಲು ಬಳಸಬಹುದಾದ ತಂತ್ರಗಳು:

1. ದೈನಂದಿನ ನೀರಿನ ಬಳಕೆಯ ಕುರಿತು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುವುದು ನೀರುಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ದೈನಂದಿನ ನೀರಿನ ಬಳಕೆ ಕುರಿತು ಅರಿವು ಮೂಡಿದರೆ ನೀರು ಉಳಿಸುವುದಕ್ಕೆ ಪ್ರೋತ್ಸಾಹ ದೊರೆಯುವುದು ಸಾಧ್ಯವಾಗಲಿದೆ.

2. ದೈನಂದಿನ ನೀರು ಬಳಕೆಯಲ್ಲಿ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳುವುದರಿಂದ ನೀರು ಉಳಿಸಬಹುದು. ನಲ್ಲಿಗಳಿಗೆ ಫಿಕ್ಷರ್ ಗಳನ್ನು ಬಳಸಿಕೊಳ್ಳುವುದರಿಂದ, ಸೋರುವ ನಲ್ಲಿಗಳನ್ನು ಸರಿ ಪಡಿಸುವುದರಿಂದ, ವಿವೇಚನೆಯಿಂದ ನೀರು ಬಳಸುವುದರಿಂದ ಶೇ.30ರಷ್ಟು ನೀರು ಉಳಿಸಬಹುದು.

3. ಈಗ ತಂತ್ರಜ್ಞಾನ ಬಹಳ ಮುಂದುವರಿದಿರುವುದರಿಂದ ತಂತ್ರಜ್ಞಾನ ಬಳಕೆಯಿಂದಲೂ ನೀರು ಉಳಿಸಬಹುದು. ಉದಾಹರಣೆಗೆ ಈಗ ಸ್ಮಾರ್ಟ್ ವಾಟರ್ ಮೀಟರ್ ಗಳು ಲಭ್ಯವಾಗುತ್ತವೆ. ಅದನ್ನು ಬಳಸುವ ಮೂಲಕ ನೀರನ್ನು ಉಳಿಸುವ ಪ್ರಕ್ರಿಯೆಯ ಚಾಲನೆ ನೀಡಬಹುದು. ಜೊತೆಗೆ ನೀರು ಲೀಕ್ ಆಗುವುದನ್ನು ಪತ್ತೆ ಹಚ್ಚುವ ವ್ಯವಸ್ಥೆ, ನೀರಿನ ಮರುಬಳಕೆ ತಂತ್ರಜ್ಞಾನ ಮುಂತಾದುವನ್ನೂ ಬಳಸಬಹುದು.

2025ರ ಹೊತ್ತಿಗೆ ಜಾಗತಿಕ ಜನಸಂಖ್ಯೆಯ ಮೂರನೇ ಎರಡರಷ್ಟು ಮಂದಿ ನೀರಿನ ಸಮಸ್ಯೆ ಎದುರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಎಲ್ಲರೂ ಈಗಿನಿಂದಲೇ ಎಚ್ಚೆತ್ತುಕೊಂಡು ನೀರು ಉಳಿಸಲು ಮುಂದಾಗುವುದು ಒಳಿತು.

Share this article