ಮಾತೃಭಾಷೆಯನ್ನು ಮರೆತರೆ ಹೆತ್ತತಾಯಿಯನ್ನು ಮರೆತಂತೆ

KannadaprabhaNewsNetwork | Published : Nov 23, 2023 1:45 AM

ಸಾರಾಂಶ

ನಾವು ಮಾತೃಭಾಷೆ ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ, ಹಾಗಾಗಿ ಇತರೆ ಭಾಷೆಗಳನ್ನು ಗೌರವಿಸಿ, ನಮ್ಮ ಕನ್ನಡ ಭಾಷೆಯನ್ನು ಮಾತ್ರ ಪ್ರೀತಿಸಬೇಕು. ಗ್ರಾಮೀಣ ಜನರಿಂದ ಮಾತ್ರ ಕನ್ನಡ ಭಾಷೆಯು ಜೀವಂತವಾಗಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅಭಿಪ್ರಾಯಪಟ್ಟರು.ಮಧುಗಿರಿಯ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಗಡಿನಾಡ ಸಾಹಿತ್ಯ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬರಗೂರು ರಾಮಚಂದ್ರಪ್ಪ ಗಡಿನಾಡ ಸಾಹಿತ್ಯ ಸಮ್ಮೇಳನ ನಡೆಸಲು ಸಚಿವ ರಾಜಣ್ಣನವರಿಗೆ ಸಲಹೆ ನೀಡಿದ ಹಿನ್ನೆಲೆ ಸಚಿವರು ಗಡಿನಾಡ ಭಾಷೆಯ ಕವಿಗಳನ್ನು ಒಗ್ಗೂಡಿಸಿ, ಮಾರ್ಚ್ ತಿಂಗಳಲ್ಲಿ ತಾಲೂಕಿನಲ್ಲಿಯೇ ಗಡಿನಾಡ ಸಾಹಿತ್ಯ ಸಮ್ಮೇಳನ ನಡೆಸಲು ಭರವಸೆ ನೀಡಿ, ಅವರು ಮಾತನಾಡಿದರು.

ಮಧುಗಿರಿಯ ಕನ್ನಡ ಭವನದಲ್ಲಿ ಗಡಿನಾಡ ಸಾಹಿತ್ಯ ಸಂಚಲನ ಕಾರ್ಯಕ್ರಮ । ಸಚಿವ ಕೆ.ಎನ್. ರಾಜಣ್ಣ ಅಭಿಮತ

ಕನ್ನಡಪ್ರಭವಾರ್ತೆ ಮಧುಗಿರಿ

ನಾವು ಮಾತೃಭಾಷೆ ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ, ಹಾಗಾಗಿ ಇತರೆ ಭಾಷೆಗಳನ್ನು ಗೌರವಿಸಿ, ನಮ್ಮ ಕನ್ನಡ ಭಾಷೆಯನ್ನು ಮಾತ್ರ ಪ್ರೀತಿಸಬೇಕು. ಗ್ರಾಮೀಣ ಜನರಿಂದ ಮಾತ್ರ ಕನ್ನಡ ಭಾಷೆಯು ಜೀವಂತವಾಗಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅಭಿಪ್ರಾಯಪಟ್ಟರು.

ಮಧುಗಿರಿಯ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಗಡಿನಾಡ ಸಾಹಿತ್ಯ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬರಗೂರು ರಾಮಚಂದ್ರಪ್ಪ ಗಡಿನಾಡ ಸಾಹಿತ್ಯ ಸಮ್ಮೇಳನ ನಡೆಸಲು ಸಚಿವ ರಾಜಣ್ಣನವರಿಗೆ ಸಲಹೆ ನೀಡಿದ ಹಿನ್ನೆಲೆ ಸಚಿವರು ಗಡಿನಾಡ ಭಾಷೆಯ ಕವಿಗಳನ್ನು ಒಗ್ಗೂಡಿಸಿ, ಮಾರ್ಚ್ ತಿಂಗಳಲ್ಲಿ ತಾಲೂಕಿನಲ್ಲಿಯೇ ಗಡಿನಾಡ ಸಾಹಿತ್ಯ ಸಮ್ಮೇಳನ ನಡೆಸಲು ಭರವಸೆ ನೀಡಿ, ಅವರು ಮಾತನಾಡಿದರು. ಬೇರೆ ಭಾಷೆ ಕಲಿಯಲು ನಮ್ಮ ವಿರೋಧವಿಲ್ಲ, ನಮ್ಮ ಜ್ಞಾನ ಸಂಪಾದನೆಗೆ ಅಗತ್ಯವಿರುವ ಎಲ್ಲ ಭಾಷೆಗಳನ್ನು ಕಲಿಯಲು ಅವಕಾಶವಿದೆ. ಆದರೆ ನಮ್ಮ ಮಾತೃ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಈ ಭಾಷೆಯನ್ನು ಉಳಿಸಿ ಬೆಳಸಲು ಸರ್ವರೂ ಮುಂದಾಗಬೇಕು. ಸಮಾಜಕ್ಕೆ ಗೌರವ, ಸ್ವಾಭಿಮಾನ ತರುವುದು ವಿದ್ಯೆ ಮಾತ್ರ.ಅದು ಎಲ್ಲ ಸಂಪತ್ತನ್ನೂ ತಂದು ಕೊಡುತ್ತದೆ.ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಡೋಜ ಬರಗೂರು ರಾಮಚಂದ್ರಪ್ಪ, ನಾವು ಕನ್ನಡವನ್ನು ಸಮ್ಮೋಹನದ ಅನುಕೂಲಕ್ಕಾಗಿ ಬಳಸುತ್ತೇವೆ. ಜನ ಸಾಮಾನ್ಯರಿಗೆ ವ್ಯವಹಾರದಲ್ಲಿ ತಿಳಿಯುವ ರೀತಿ ಮಾತನಾಡಿದರೆ ಸಾಕು. ಇಂಗ್ಲೀಷ್‌ ಪದಗಳಿಗೆ ಕೊಂಬು ಕೊಟ್ಟರೆ ಕನ್ನಡ ಪದಗಳಾಗುತ್ತವೆ. ಉದಾಹರಣೆಗೆ ಪೋಲಿಸ್‌ ಸ್ಟೇಷನ್‌, ಬಸ್‌ ಸ್ಟ್ಯಾಂಡ್‌ ರೈಲು, ಬಸ್ಸು ಮುಂತಾದ ಪದಗಳು ಜನಸಾಮಾನ್ಯರಿಗೆ ಅರ್ಥವಾಗುತ್ತವೆ. ಭಾಷೆ ಇರುವುದೇ ಸಂವಹನದ ಅನುಕೂಲಕ್ಕಾಗಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಲ್ಲೂ ಬರೆಯಲು ಅವಕಾಶವಿದೆ. ಈಗಾಗಲೇ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗದಲ್ಲಿ ಶೇ.5 ರಷ್ಟು ಮೀಸಲಾತಿಯಿದೆ ಎಂದರು.

ಕನ್ನಡ ಮಾಧ್ಯಮದಲ್ಲಿ ಓದಿದವರು ಕೀಳರಿಮೆ ಬೆಳಸಿಕೊಳ್ಳಬೇಡಿ, ಕನ್ನಡ ಮಾಧ್ಯಮದಲ್ಲಿ ಓದಿದವರು ಉನ್ನತ ಹುದ್ದೆಗಳನ್ನು ಅಲಂಕರಸಿದ್ದಾರೆ. ಭಾಷಾ ವಿಜ್ಞಾನಿಗಳು ಹೇಳಿರುವ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಜೀವಂತವಾಗಿರುವ ಭಾಷೆ ಕನ್ನಡ. ಈ ಭಾಷೆಗೆ ಸವಾಲುಗಳಿವೆ ಹೊರತು ಸಾವಿಲ್ಲ. ಜ್ಞಾನ ಮನುಷ್ಯ ನಿರ್ಮಿತ, ಆದರೆ ತಂತ್ರಜ್ಞಾನವನ್ನು ಮನುಷ್ಯನೇ ಕಂಡುಕೊಂಡಿದ್ದು ಪರಸ್ಪರ ಪೂರಕ ಹಾಗೂ ಪ್ರೇರಕ. ಮನುಷ್ಯನ ಜ್ಞಾನವಿಲ್ಲದೆ ತಂತ್ರಜ್ಞಾನವಿಲ್ಲ, ಇವೆರಡರ ಸಮತೋಲನ ಅತಿ ಮುಖ್ಯವಾಗಿದೆ. ಹೊಸ ಅವಿಷ್ಕಾರವನ್ನು ಸ್ವಾಗತಿಸಿ, ಅತ್ಯಂತ ವಿವೇಕದಿಂದ ಬಳಸಬೇಕು ಎಂದರು.

ಇದೇ ವೇಳೆ ಮುಂದಿನ ದಿನಗಳಲ್ಲಿ ಮಧುಗಿರಿ ಗಡಿ ಭಾಗದಲ್ಲಿ ರಾಜ್ಯ ಮಟ್ಟದ ಗಡಿನಾಡ ಸಾಹಿತ್ಯ ಸಮ್ಮೇಳನ ನಡೆಸುವಂತೆ ಸಹಕಾರ ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಾವಗಡದ ಜಪಾನಂದ ಮಹಾರಾಜ್‌ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಗಡಿನಾಡ ಸಾಹಿತ್ಯ ಸಂಚಲನದ ಅಧ್ಯಕ್ಷೆ ಶಮಂತಜಿ, ಲೇಖಕಿ ಶೈಲಾ ನಾಗರಾಜ್‌, ಪ್ರಾಂಶುಪಾಲ ಮುನೀಂದ್ರ ಕುಮಾರ್‌,ಹಿರಿಯ ಸಾಹಿತಿ ಪ್ರೊ.ಮಲನ ಮೂರ್ತಿ,ಕಸಾಪದ ಎಂ.ಎಸ್‌.ಶಂಕರನಾರಾಣ್‌. ರಂಗಧಾಮಯ್ಯ, ಉಪನ್ಯಾಸಕ ಎನ್‌.ಮಹಾಲಿಂಗೇಶ್‌ ಇತರರಿದ್ದರು.

Share this article