ಹೂಡಿಕೆ ಒಪ್ಪಂದ ಏರ್ಪಟ್ಟ ಆರೇ ದಿನಕ್ಕೆ ಘಟಕಕ್ಕೆ ಶಂಕು! - ಇನ್ವೆಸ್ಟ್‌ ಕರ್ನಾಟಕದಲ್ಲಿ ಜರ್ಮನಿ ಕಂಪನಿ ಒಪ್ಪಂದ

Published : Feb 21, 2025, 05:23 AM IST
MB Patil

ಸಾರಾಂಶ

ಫೆ.12ರಿಂದ 14ರವರೆಗೆ ಬೆಂಗಳೂರಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್‌ ಕರ್ನಾಟಕ’ದಲ್ಲಿ ಏರ್ಪಟ್ಟ ಒಪ್ಪಂದವೊಂದು ಒಂದೇ ವಾರದಲ್ಲಿ ಸಾಕಾರಗೊಂಡಿದೆ.

 ಕೋಲಾರ : ಫೆ.12ರಿಂದ 14ರವರೆಗೆ ಬೆಂಗಳೂರಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್‌ ಕರ್ನಾಟಕ’ದಲ್ಲಿ ಏರ್ಪಟ್ಟ ಒಪ್ಪಂದವೊಂದು ಒಂದೇ ವಾರದಲ್ಲಿ ಸಾಕಾರಗೊಂಡಿದೆ. ಜರ್ಮನಿ ಮೂಲದ ಕ್ರೋನ್ಸ್ ಕಂಪನಿಯ ೩೧೫ ಕೋಟಿ ರು. ವೆಚ್ಚದ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕ ನಿರ್ಮಾಣಕ್ಕೆ ಕೋಲಾರ ತಾಲೂಕಿನ ವೇಮಗಲ್‌ನಲ್ಲಿ ಗುರುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸಿದ್ದಾರೆ.

ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೂ ಮುನ್ನ ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದ ನಿಯೋಗ ಕಳೆದ ಡಿಸೆಂಬರ್‌ನಲ್ಲಿ ಜರ್ಮನಿಯಲ್ಲಿ ರೋಡ್ ಶೋ ನಡೆಸಿ ಕ್ರೋನ್ಸ್‌ ಕಂಪನಿಯ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿತ್ತು. ಆ ಸಂದರ್ಭದಲ್ಲಿ ನ್ಯೂಟ್ರಾಬ್ಲಿಂಗ್‌ನಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಲ್ಲಿ ಪೂರ್ವಭಾವಿ ಒಪ್ಪಂದ ಏರ್ಪಟ್ಟಿತ್ತು. ಇದೀಗ ಹೂಡಿಕೆ ಸಮಾವೇಶ ಮುಗಿದ ಆರೇ ದಿನಗಳಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿದೆ.

ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಕೈಗಾರಿಕಾ ಅಗತ್ಯಗಳಿಗೆ ಬೇಕಾಗುವ ಬಾಟ್ಲಿಂಗ್ ಮತ್ತು ಶುದ್ಧೀಕರಣ ಸಾಧನಗಳ ತಯಾರಿಕೆಗೆ ದೇಶದಲ್ಲಿ ಅಪಾರ ಬೇಡಿಕೆ ಇದೆ. ಇದನ್ನು ಮನಗಂಡು ಕ್ರೋನ್ಸ್ ರಾಜ್ಯದಲ್ಲಿ ಈ ಸ್ಥಾವರ ಆರಂಭಿಸಲು ಮುಂದಾಗಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು.

ಕಂಪನಿಯು ಹಂತ ಹಂತವಾಗಿ ೩೧೫ ಕೋಟಿ ರು. ಹೂಡಿಕೆ ಮಾಡಲಿದ್ದು, ೫೫೦ ಮಂದಿಗೆ ಉದ್ಯೋಗ ಸಿಗಲಿದೆ. ನಿಮಿಷಕ್ಕೆ ನೂರಾರು ಬಾಟಲಿ ಉತ್ಪಾದಿಸುವ ಯಂತ್ರಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ ಎಂದು ಹೇಳಿದರು.

ಸ್ಥಳೀಯ ಹಾಗೂ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕೆಂದೂ ಸಚಿವರು ಕ್ರೋನ್ಸ್ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು. ಇದನ್ನು ಆದ್ಯತೆ ಮೇಲೆ ಮಾಡಬೇಕು ಎಂದೂ ಅವರು ಕೋರಿದರು.

ಕಾರ್ಯಕ್ರಮದಲ್ಲಿ ಕ್ರೋನ್ಸ್ ಆಡಳಿತ ಮಂಡಳಿ ನಿರ್ದೇಶಕರಾದ ರೊಲ್ಫ್ಸ್ ಗೋಲ್ಡ್ ಬ್ರೋನರ್, ಮಾರ್ಕಸ್ ವಿಂಟರ್, ಯೋಜನಾ ನಿರ್ದೇಶಕ ಡೇವಿಡ್ ಕ್ರಿಮ್ಮರ್, ಕ್ರೋನ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹರೀಶ ಹನುಗೋಡು, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ, ಕೆಐಎಡಿಬಿ ಸಿಇಒ ಡಾ.ಮಹೇಶ ಇದ್ದರು.

ಹೂಡಿಕೆ ಒಪ್ಪಂದ ಏರ್ಪಟ್ಟ ಆರೇ ದಿನಕ್ಕೆ ಘಟಕಕ್ಕೆ ಶಂಕು!

- ಇನ್ವೆಸ್ಟ್‌ ಕರ್ನಾಟಕದಲ್ಲಿ ಜರ್ಮನಿ ಕಂಪನಿ ಒಪ್ಪಂದ

- ನಿನ್ನೆ ಕೋಲಾರದಲ್ಲಿ ಘಟಕ ಸ್ಥಾಪನೆಗೆ ಭೂಮಿಪೂಜೆ

ಎಮ್ವಿ ಎನರ್ಜಿಯಿಂದ 15000 ಕೋಟಿ ಹೂಡಿಕೆ

ಬೆಂಗಳೂರು: ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಹಾಕಿರುವ ಒಪ್ಪಂದಗಳು ಕಾರ್ಯರೂಪಕ್ಕೆ ಬರುತ್ತಿದ್ದು, ಬೆಂಗಳೂರು ಮೂಲದ ಎಮ್ವಿ ಎನರ್ಜಿ ಕಂಪನಿಯು ತನ್ನ ಉತ್ಪಾದನಾ ಘಟಕ ಆರಂಭಿಸಲು ಹಂತಹಂತವಾಗಿ ₹15 ಸಾವಿರ ಕೋಟಿ ಹೂಡಲು ತೀರ್ಮಾನಿಸಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

PREV

Recommended Stories

ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಅಪೋಲೋ
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ