ಸ್ಲಮ್‌ ಪ್ರಿನ್ಸೆಸ್‌ ಟು ಸೂಪರ್‌ ಮಾಡೆಲ್‌ - ಮನೆಯೇ ಇರದಿದ್ದ ಮಲೀಶಾ ಖಾರ್ವಾ ಈಗ ವರ್ಲ್ಡ್ ಫೇಮಸ್ಸು

Published : Feb 22, 2026, 01:13 PM IST
malisha kharwa

ಸಾರಾಂಶ

ಮುಂಬೈ ಬಾಂದ್ರಾದ ಸಮುದ್ರ ಬದಿಯ ಕಲ್ಲುಗಳ ಮೇಲೆ ಕಟ್ಟಿದ್ದ ಜೋಪಡಿಯಲ್ಲಿ ಬದುಕುತ್ತಿದ್ದ, ಹೊಟ್ಟೆಪಾಡಿಗಾಗಿ ಟ್ರಾಫಿಕ್‌ನಲ್ಲಿ ನ್ಯಾಪ್‌ಕಿನ್‌ಗಳನ್ನು ಮಾರುತ್ತಿದ್ದ ಕಡು ಬಡತನದ ಹುಡುಗಿಯೊಬ್ಬಳು ಸೂಪರ್‌ ಮಾಡೆಲ್‌ ಆದ ಅಪೂರ್ವ ಕಥನ.

ಮುಂಬೈ ಬಾಂದ್ರಾದ ಸಮುದ್ರ ಬದಿಯ ಕಲ್ಲುಗಳ ಮೇಲೆ ಕಟ್ಟಿದ್ದ ಜೋಪಡಿಯಲ್ಲಿ ಬದುಕುತ್ತಿದ್ದ, ಹೊಟ್ಟೆಪಾಡಿಗಾಗಿ ಟ್ರಾಫಿಕ್‌ನಲ್ಲಿ ನ್ಯಾಪ್‌ಕಿನ್‌ಗಳನ್ನು ಮಾರುತ್ತಿದ್ದ ಕಡು ಬಡತನದ ಹುಡುಗಿಯೊಬ್ಬಳು ಮಿಲಿಯನ್‌ ಡಾಲರ್‌ ಮ್ಯಾಗಜೀನ್‌ಗಳಾದ ಕಾಸ್ಮೋಪಾಲಿಟನ್‌, ವೋಗ್‌ ಮುಖಪುಟದಲ್ಲಿ ಕಾಣಿಸಿಕೊಂಡು ಸೂಪರ್‌ ಮಾಡೆಲ್‌ ಆದ ಅಪೂರ್ವ ಕಥನ.

ನಾನು ರೂಪುಗೊಂಡಿದ್ದು ಸ್ಲಮ್‌ನಲ್ಲಿ. ಈಗ ಸ್ಫೂರ್ತಿಯಾಗಿ ಬದುಕುತ್ತಿದ್ದೇನೆ.

- ಮಲೀಶಾ ಖಾರ್ವಾ

ಸಮುದ್ರ ದಡದಲ್ಲಿದ್ದ ಒಂದು ಸಣ್ಣ ಜೋಪಡಿ. ಮಳೆ ಬಂದರೆ ಸೋರುತ್ತಿತ್ತು. ಸಮುದ್ರ ಉಕ್ಕಿದರೆ ನೀರು ಮನೆಯೊಳಗೆ ಬರುತ್ತಿತ್ತು. ಅಪಾಯಕಾರಿ ಪ್ರದೇಶ, ಅನಧಿಕೃತ ಮನೆ ಎಂಬ ಕಾರಣವೊಡ್ಡಿ ಆಡಳಿತ ಕಾಲಕಾಲಕ್ಕೆ ಜೋಪಡಿಯನ್ನು ಬುಲ್ಡೋಜರಿನಲ್ಲಿ ನೆಟ್ಟಿ ನೆಲಸಮ ಮಾಡುತ್ತಿತ್ತು. ಪುಟಾಣಿ ಮಲೀಶಾ ಖಾರ್ವಾ ಅದನ್ನೆಲ್ಲಾ ನೋಡುತ್ತಾ ಕಣ್ಣೀರು ಹಾಕುತ್ತಿದ್ದಳು.

ಬದುಕು ಅನಿವಾರ್ಯತೆ ಕಲಿಸುತ್ತದೆ. ತಂದೆ ಮತ್ತೆ ಜೋಪಡಿ ಕಟ್ಟುತ್ತಿದ್ದರು. ಮಳೆ ಬೀಳದಂತೆ ಮಾಡಿಗೆ ಪ್ಲಾಸ್ಟಿಕ್‌ ಹೊದೆಯುತ್ತಿದ್ದರು. ಬದುಕು ಮತ್ತೆ ಮೊದಲಿಂದ ಶುರುವಾಗುತ್ತಿತ್ತು. ಹೊಟ್ಟೆಪಾಡಿ ಮಲೀಶಾ ಮುಂಬೈಯ ಒಣ ಒಣ ಟ್ರಾಫಿಕ್‌ನ ರಣಬಿಸಿನಲ್ಲಿ ನ್ಯಾಪ್‌ಕಿನ್‌ ಮಾರುತ್ತಿದ್ದಳು. ಸಿಕ್ಕ ದುಡ್ಡನ್ನು ತಂದೆಗೆ ಕೊಡುತ್ತಿದ್ದಳು.

ಒಂಟಿ ಜೋಪಡಿಯಲ್ಲಿ ಮೂರು ಜನ. ಅಪ್ಪ, ಮಲೀಶಾ ಮತ್ತು ತಮ್ಮ. ಅಮ್ಮ ಇರಲಿಲ್ಲ. ಮಲೀಶಾಳಿಗೆ ತುಂಬಾ ಓದುವ ಆಸೆ ಇತ್ತು. ಜೊತೆಗೆ ಮಾಡೆಲ್ ಆಗುವ ಕನಸು. ಆದರೆ ಆ ಕನಸು ಈಡೇರುವ ಕನಸಲ್ಲ ಎಂಬ ವಾಸ್ತವದ ಅರಿವೂ ಇತ್ತು. ಕಡುಕಷ್ಟವನ್ನು ನೋಡಿದವರಿಗೆ ನಿರ್ಲಿಪ್ತವಾಗಿರುವುದು ಅಭ್ಯಾಸವಾಗಿರುತ್ತದೆ. ನಗುನಗುತ್ತಲೇ ದಿನ ಕಳೆಯುವುದೂ ತಿಳಿದಿರುತ್ತದೆ. ಮಲೀಶಾ ಕೂಡ ತನ್ನ ಕುಟುಂಬ, ಸ್ನೇಹವಲಯದ ಜೊತೆ ಹಾಗೇ ಬೆಂಕಿ ದಿನಗಳನ್ನು ಕಳೆಯುತ್ತಿದ್ದಳು. ಅವಳಿಗೆ ಆಗ ತನ್ನ ಬದುಕು ಬದಲಾಗಬಹುದು ಎಂಬ ಕಿಂಚಿತ್‌ ಕಲ್ಪನೆಯೂ ಇರಲಿಲ್ಲ. ಆದರೆ ಬದುಕು ಏನೇನು ಅಚ್ಚರಿಗಳನ್ನು ಇಟ್ಟುಕೊಂಡಿರುತ್ತದೆ ಅಂತ ಯಾರಿಗೆ ಗೊತ್ತು.

ಅದು 2020ನೇ ಇಸವಿ. ಕೋವಿಡ್‌ ಆವರಿಸಿದ್ದ ಹೊತ್ತು. ಒಂದು ಸಂಗೀತ ಆಲ್ಬಂ ಚಿತ್ರೀಕರಿಸಲು ಮುಂಬೈಗೆ ಬಂದಿದ್ದ ಹಾಲಿವುಡ್‌ ನಟ ರಾಬರ್ಟ್ ಹಾಫ್‌ಮನ್‌ ಕೋವಿಡ್‌ ಕಾರಣದಿಂದ ಮುಂಬೈನಲ್ಲಿಯೇ ಉಳಿಯುವ ಅನಿವಾರ್ಯ ಎದುರಾಗಿತ್ತು. ಮುಂಬೈ ಬಾಂದ್ರಾದ ಸಮುದ್ರ ತೀರದಲ್ಲಿ ತಿರುಗಾಡುತ್ತಿರುವ ವೇಳೆಯಲ್ಲಿ ಅವರಿಗೆ ಆ ಪ್ರದೇಶ ಕೊಳಗೇರಿಯಲ್ಲಿ ವಾಸಿಸುತ್ತಿದ್ದ ಮಲೀಶಾ ಮತ್ತು ಸ್ನೇಹಿತರು ಸಿಗುತ್ತಾರೆ. ಅವರ ಜೊತೆ ಮಾತುಕತೆ ವೇಳೆಯಲ್ಲಿ ರಾಬರ್ಟ್‌ ಹಾಫ್‌ಮನ್‌ ಅವರ ಕಣ್ಣನ್ನು ಸೆಳೆಯುತ್ತಾಳೆ ಮಲೀಶಾ.

‘ಆಕೆಯ ಕಣ್ಣಿನ ಗಾಢತೆ ಕತೆಯನ್ನು ಹೇಳುವಂತಿತ್ತು. ನಾನು ಕ್ಯಾಮೆರಾ ಕಣ್ಣಿನಲ್ಲಿ ನೋಡಿದಾಗ ಅವಳು ಪೋಸ್‌ ಕೊಡುತ್ತಿರಲಿಲ್ಲ, ಅವಳ ಕಣ್ಣು ಏನನ್ನೋ ಹೇಳುತ್ತಿತ್ತು’ ಎನ್ನುತ್ತಾರೆ ರಾಬರ್ಟ್‌. ಅವರು ಅವಳ ಜೊತೆ ಮಾತನಾಡಿದಾಗ ಮಲೀಶಾ ತನ್ನ ಓದುವ ಕನಸನ್ನು, ಮಾಡೆಲ್‌ ಆಗುವ ಆಸೆಯನ್ನು ನಗುತ್ತಲೇ ಹೇಳುತ್ತಾಳೆ. ರಾಬರ್ಟ್ ಜಾಸ್ತಿ ಯೋಚಿಸಲು ಹೋಗಲಿಲ್ಲ, ಅವಳ ಓದಿಗೆ ನೆರವಾಗಬೇಕು ಅಂದುಕೊಂಡರು. ತಕ್ಷಣವೇ ಅವಳ ಹೆಸರಿನಲ್ಲಿಯೇ ಇನ್‌ಸ್ಟಾಗ್ರಾಮ್‌ ಖಾತೆಯನ್ನು ತೆರೆದರು. ಅವಳ ಕತೆಯನ್ನು ಜಗತ್ತಿಗೆ ಹೇಳಿದರು.

ಬೆಂಕಿ ಹತ್ತಲು ಒಂದು ಕಿಡಿ ಬೇಕಿರುತ್ತದೆ. ಸೋಷಿಯಲ್‌ ಮೀಡಿಯಾದಲ್ಲಿ ರಾಬರ್ಟ್‌ ಹಚ್ಚಿದ ಬೆಂಕಿಯಲ್ಲಿ ಕಂಡ ಮಲೀಶಾ ಕಣ್ಣಿನ ಹೊಳಪು ಇಡೀ ಜಗತ್ತನ್ನು ಸೆಳೆಯಿತು. ಅವಳ ಮುಗ್ಧ ಮುಖದ ಚೆಲುವಿಗೆ ಲಕ್ಷಾಂತರ ಜನ ಮರುಳಾದರು. ಅಷ್ಟೇ ಅಲ್ಲ, ಜಗತ್ತಿನ ಮಿಲಿಯನ್‌ ಡಾಲರ್‌ ಮ್ಯಾಗಜೀನ್‌ಗಳಾದ ‘ಕಾಸ್ಮೋಪಾಲಿಟನ್‌’ ಮತ್ತು ‘ವೋಗ್‌’ ಅವಳನ್ನು ರೂಪದರ್ಶಿಯನ್ನಾಗಿ ಮುಖಪುಟದಲ್ಲಿ ಬಳಸಿಕೊಂಡವು. ಮಲೀಶಾ ಎಂಬ ಸ್ಲಮ್‌ ಪ್ರಿನ್ಸೆಸ್‌ ವರ್ಲ್ಡ್‌ ಫೇಮಸ್‌ ಆದಳು.

ಅವಳಿಗೆ ಸ್ಲಮ್‌ ಪ್ರಿನ್ಸೆಸ್‌ ಎಂಬ ಹೆಸರು ಕೊಟ್ಟಿದ್ದು ರಾಬರ್ಟ್‌ ಹಾಫ್‌ಮನ್‌. ‘ಅವಳು ಸ್ಲಮ್‌ನಲ್ಲಿ ಬದುಕುತ್ತಿದ್ದಳು. ಆದರೆ ನಿಲುವಿನಲ್ಲಿ ರಾಯಲ್‌ ಆಗಿದ್ದಳು. ನಾನು ಮಣ್ಣಿನಲ್ಲಿ ನಿಂತಿದ್ದ ಒಬ್ಬ ರಾಜಕುಮಾರಿಯನ್ನು ಇಡೀ ಜಗತ್ತು ನೋಡಬೇಕು ಎಂದು ಬಯಸಿದೆನಷ್ಟೇ’ ಅನ್ನುತ್ತಾರೆ ರಾಬರ್ಟ್‌.

ಅವಳು ಖ್ಯಾತಿ ಗಳಿಸುತ್ತಿದ್ದಂತೆ 2023ರಲ್ಲಿ ಫಾರೆಸ್ಟ್‌ ಎಸೆನ್ಷಿಯಲ್‌ ಸಂಸ್ಥೆ ತನ್ನ ಉತ್ಪನ್ನಕ್ಕೆ ಆಕೆಯನ್ನು ರಾಯಭಾರಿಯನ್ನಾಗಿ ಮಾಡಿತು. ಅವಳು ಮತ್ತಷ್ಟು ಜನಪ್ರಿಯಳಾದಳು. ಮಾಡೆಲ್‌ ಆಗುವ ಅವಕಾಶ ಅರಸಿಬಂದಿತು.

‘ನನ್ನ ತಂದೆ ಉಪವಾಸ ಮಲಗಬೇಕಿಲ್ಲ ಎಂಬ ಸತ್ಯವೇ ನನಗೆ ಆಗ ಅತ್ಯಂತ ಖುಷಿ ಕೊಟ್ಟಿತ್ತು’ ಅನ್ನುತ್ತಾಳೆ ಮಲೀಶಾ. ಅವಳ ಕತೆ ಗೊತ್ತಾಗುತ್ತಿದ್ದಂತೆ ಪತ್ರಿಕೆಗಳು ಅವಳ ಬಗ್ಗೆ ಬರೆದವು. ಅಂತಾರಾಷ್ಟ್ರೀಯ ಯೂಟ್ಯೂಬರ್‌ಗಳು ಬಂದು ಅವಳನ್ನು ಸಂದರ್ಶನ ಮಾಡಿ ಹೋದರು. ಸ್ವತಃ ಮಲೀಶಾಳ ಇನ್‌ಸ್ಟಾಗ್ರಾಮ್‌ ಫಾಲೋವರ್‌ಗಳ ಸಂಖ್ಯೆ ಈಗ ಐದು ಲಕ್ಷಕ್ಕಿಂತ ಹೆಚ್ಚು. ಯೂಟ್ಯೂಬ್‌ನಲ್ಲಿಯೂ ಒಂದು ಲಕ್ಷದಷ್ಟು ಫಾಲೋವರ್‌ಗಳಿದ್ದಾರೆ.

ಅವಳು ಈಗ ಹತ್ತನೇ ತರಗತಿ ಓದುತ್ತಿದ್ದಾಳೆ. ನಾನು ತುಂಬಾ ಓದಬೇಕು ಅನ್ನುತ್ತಾಳೆ. ಅದೇ ಹೊತ್ತಿಗೆ ಮಲೀಶಾಬೈಮಲೀಶಾ ಎಂಬ ಬ್ರಾಂಡ್‌ ಕೂಡ ಶುರುವಾಗಿದೆ. ಅದರ ಮೂಲಕ ಸ್ಲಮ್‌ ಮಕ್ಕಳ ಓದಿಗೆ, ಉದ್ಧಾರಕ್ಕೆ ಹಣ ಒದಗಿಸುತ್ತಿದ್ದಾಳೆ. ಮುಂಬೈನಲ್ಲೊಂದು ಸ್ವಂತ ಮನೆ ಕಟ್ಟುವ ಆಸೆ ಇಟ್ಟುಕೊಂಡಿದ್ದಾಳೆ. ತನ್ನಂತಹ ಸಾವಿರಾರು ಮಕ್ಕಳಿಗೆ ಉತ್ತಮ ದಾರಿಯನ್ನು ಕಲ್ಪಿಸಿಕೊಡುವ ಹಂಬಲದಲ್ಲಿದ್ದಾಳೆ.

ಏನೇನೂ ಇಲ್ಲದ ಹುಡುಗಿಯೊಬ್ಬಳು, ಮಾಡೆಲ್‌ ಆಗಬಹುದು ಎಂದು ಊಹಿಸುವುದೇ ಕಷ್ಟವಿದ್ದ ಪರಿಸ್ಥಿತಿಯಲ್ಲಿದ್ದವಳು ಎಲ್ಲವನ್ನೂ ದಾಟಿ ಹೋಗಿ ಜಗತ್ತಿಗೆ ಭರವಸೆಯ ಟಾರ್ಚ್‌ ಹಿಡಿದಿದ್ದಾಳೆ. ‘ಒಂದು ಕಾಲದಲ್ಲಿ ನಮ್ಮ ಮನೆಯನ್ನು ಕೆಡವಲಾಗುತ್ತಿತ್ತು. ಈಗ ಭದ್ರವಾದ ಛಾವಣಿ ಇರುವ ಮನೆಯಿದೆ’ ಎನ್ನುವ ಮಲೀಶಾ ಮನೆಯನ್ನು ಕೆಡವಬಹುದು, ಆದರೆ ಕನಸುಗಳನ್ನು ಕೆಡವಲಾಗದು ಎಂಬುದಕ್ಕೆ ಅನ್ವರ್ಥವೆಂಬಂತೆ ನಿಂತಿದ್ದಾಳೆ.

PREV
Read more Articles on

Recommended Stories

17ರ ಬಾಲಕನಿಗೆ ಯಶಸ್ವಿಯಾಗಿ ರೋಬೊಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮಾಡಿದ ಅಪೋಲೋ
ಕಿನ್ನರ ರೆಕ್ಕೆ- ಎಚ್ಚೆಸ್ವಿ ಮಕ್ಕಳ ಸಾಹಿತ್ಯ ವಿವೇಚನೆ