ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಶೀಘ್ರ 5ನೇ ಗ್ಯಾರಂಟಿ ಯುವನಿಧಿ ಜಾರಿ

KannadaprabhaNewsNetwork | Published : Dec 13, 2023 1:00 AM

ಸಾರಾಂಶ

ಈ ತಿಂಗಳಾಂತ್ಯಕ್ಕೆ ನೋಂದಣಿ ಶುರು? ಜನವರೀಲಿ ಪದವೀಧರರ ಖಾತೆಗೆ ಹಣ? ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಕೊನೆಯ ಗ್ಯಾರಂಟಿಯೇ ನಿರುದ್ಯೋಗ ಭತ್ಯೆ. ಪದವಿ ಪಡೆದು ಕೆಲಸ ಸಿಗದವರಿಗೆ ಮಾಸಿಕ 3 ಸಾವಿರ ರು. ನೀಡಿಕೆ. ಡಿಪ್ಲೊಮಾ ಪೂರ್ಣಗೊಳಿಸಿದವರಿಗೆ ಮಾಸಿಕ 1,500 ಕೋಟಿ ರು. 2 ವರ್ಷಗಳ ಕಾಲ ಮಾಸಾಶನ ಪಾವತಿ. ಯೋಜನೆ ಜಾರಿಗೆ 1000 ಕೋಟಿ ರು. ವೆಚ್ಚ ಮಾಡುವ ನಿರೀಕ್ಷೆ. 5 ಲಕ್ಷ ಯುವಕ, ಯುವತಿಯರಿಗೆ ಲಾಭ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿರುದ್ಯೋಗಿ ಯುವಕರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ. ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ಪಂಚ ಗ್ಯಾರಂಟಿಗಳ ಪೈಕಿ ಕೊನೆಯ ಗ್ಯಾರಂಟಿಯಾದ ‘ಯುವನಿಧಿ’ ಯೋಜನೆಗೆ ಜನವರಿಯಲ್ಲಿ ಚಾಲನೆ ನೀಡಲಿದ್ದು, ಡಿಸೆಂಬರ್‌ ಮಾಸಾಂತ್ಯದ ವೇಳೆಗೆ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಪಕ್ಷವು ಚುನಾವಣಾ ಪೂರ್ವದಲ್ಲಿ ಘೋಷಿಸಲಾಗಿದ್ದ 5 ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೆ ಸರ್ಕಾರವು 4 ಗ್ಯಾರಂಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿದೆ. ಇದೀಗ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಜಾರಿಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಗೊತ್ತಾಗಿದೆ.

ಸರ್ಕಾರದ ಉನ್ನತ ಮೂಲಗಳ ಪ್ರಕಾರ ಯುವ ನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಈ ಮಾಸಾಂತ್ಯದ ವೇಳೆಗೆ ಆರಂಭವಾಗಲಿದ್ದು, ಜನವರಿಯಲ್ಲಿ ಯೋಜನೆ ಅಧಿಕೃತವಾಗಿ ಚಾಲನೆ ಪಡೆದುಕೊಳ್ಳಲಿದೆ. ಯೋಜನೆಯ ನೋಂದಣಿ, ಸಹಾಯಧನ ಪಾವತಿ ಸೇರಿದಂತೆ ಸಂಪೂರ್ಣ ವಿವರ ನೀಡಲು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್‌ ಪಾಟೀಲ್‌ ಡಿ.19 ಅಥವಾ 20ರಂದು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

2023ರಲ್ಲಿ ಪದವಿ ಮತ್ತು ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿ, ಆರು ತಿಂಗಳಾದರೂ ಉದ್ಯೋಗ ಸಿಗದೆ ಪರದಾಡುತ್ತಿರುವ ಯುವಕ-ಯುವತಿಯರು ಯುವನಿಧಿ ಯೋಜನೆಯ ಲಾಭ ದೊರೆಯಲಿದೆ. ಸರ್ಕಾರದ ಅಂದಾಜಿನಂತೆ 5 ಲಕ್ಷ ಯುವಕ-ಯುವತಿಯರು ಯೋಜನೆ ವ್ಯಾಪ್ತಿಗೊಳಪಡಲಿದ್ದಾರೆ. ಪ್ರಾಥಮಿಕವಾಗಿ ಯೋಜನೆಗೆ 250ರಿಂದ 300 ಕೋಟಿ ರು. ವೆಚ್ಚವಾಗುವ ಅಂದಾಜಿಸಲಾಗಿದೆ. ಮುಂದಿನ ವರ್ಷದಿಂದ 1 ಸಾವಿರ ಕೋಟಿ ರು. ಬೇಕಾಗಲಿದೆ ಎಂದು ಲೆಕ್ಕ ಹಾಕಲಾಗಿದೆ.---

2 ವರ್ಷಗಳವರೆಗೆ ಸಹಾಯಧನ

ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾಗಿ 6 ತಿಂಗಳಾದರೂ ಕೆಲಸ ಸಿಗದವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರಲಿದ್ದಾರೆ. ಅಲ್ಲದೆ ಅವರು ಯಾವುದೇ ಉನ್ನತ ಶಿಕ್ಷಣ ಪಡೆಯಲು ಸೇರ್ಪಡೆಯಾಗಿರಬಾರದಾಗಿದೆ. ಸದ್ಯ ಉದ್ಯೋಗ ದೊರಕದವರು ಮುಂದಿನ 2 ವರ್ಷಗಳವರೆಗೆ ಯೋಜನೆಯ ಫಲಾನುಭವಿಗಳಾಗಿರಲಿದ್ದಾರೆ.

ಪದವಿ ವಿದ್ಯಾರ್ಥಿಗಳಿಗೆ ಮಾಸಿಕ 3 ಸಾವಿರ ರು. ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದವರಿಗೆ ಮಾಸಿಕ 1,500 ಕೋಟಿ ರು. ಸಹಾಯಧನ ನೀಡಲಾಗುತ್ತದೆ. ಒಂದು ವೇಳೆ 2 ವರ್ಷದೊಳಗೆ ಉದ್ಯೋಗ ದೊರೆತರೆ ಅವರನ್ನು ಯೋಜನೆಯ ಫಲಾನುಭವಿ ಪಟ್ಟಿಯಿಂದ ಹೊರಗಿಡಲಾಗುತ್ತದೆ.

Share this article