ದ್ವೇಷ ಭಾಷಣ ಮಸೂದೆ ಸರಿ - ದ್ವೇಷದ ವ್ಯಾಖ್ಯಾನ ಚಿಕ್ಕದಾಗಿರಲಿ

Published : Dec 23, 2025, 09:08 AM IST
Justice Gopal Gowda

ಸಾರಾಂಶ

ಸಮಾಜದಲ್ಲಿ ಸದ್ಯ ಹೆಚ್ಚುತ್ತಿರುವ ದ್ವೇಷ ಭಾಷಣದಿಂದ ಸಾಮರಸ್ಯ, ಶಾಂತಿ/ಸುವ್ಯವಸ್ಥೆ, ಭ್ರಾತೃತ್ವ ಮತ್ತು ಶಾಸನಬದ್ಧ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಾಗರಿಕ ಸಮಾಜದ ಹಿತದೃಷ್ಟಿಯಿಂದ ದ್ವೇಷ ಭಾಷಣ ಸರಿಯಲ್ಲ. ನಾಗರಿಕ ಸಮಾಜದಲ್ಲಿ ಶಾಸನಬದ್ಧ ಆಳ್ವಿಕೆಯೇ ಬಹಳ ಮುಖ್ಯ

ಲೇಖಕರು, ವಿ.ಗೋಪಾಲ ಗೌಡ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು

ಸಮಾಜದಲ್ಲಿ ಸದ್ಯ ಹೆಚ್ಚುತ್ತಿರುವ ದ್ವೇಷ ಭಾಷಣದಿಂದ ಸಾಮರಸ್ಯ, ಶಾಂತಿ/ಸುವ್ಯವಸ್ಥೆ, ಭ್ರಾತೃತ್ವ ಮತ್ತು ಶಾಸನಬದ್ಧ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಾಗರಿಕ ಸಮಾಜದ ಹಿತದೃಷ್ಟಿಯಿಂದ ದ್ವೇಷ ಭಾಷಣ ಸರಿಯಲ್ಲ. ನಾಗರಿಕ ಸಮಾಜದಲ್ಲಿ ಶಾಸನಬದ್ಧ ಆಳ್ವಿಕೆಯೇ ಬಹಳ ಮುಖ್ಯ. ಅಭಿವ್ಯಕ್ತಿ/ವಾಕ್‌ ಸ್ವಾತಂತ್ರ್ಯವಿದೆ ಎಂಬ ಮಾತ್ರಕ್ಕೆ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ರೀತಿಯಲ್ಲಿ ತೋಚಿದಂತೆ ಮಾತನಾಡುವುದು ಸರಿಯಲ್ಲ.

ಬೇರೊಬ್ಬರ ಸ್ವಾತಂತ್ರ್ಯದ ಮೇಲೆ ವಾಕ್‌ ಸ್ವಾತಂತ್ರ್ಯ ಮೂಲಕ ಗದಾಪ್ರಹಾರ ಮಾಡಲು ಮುಂದಾದರೆ, ಅದಕ್ಕೆ ಪೂರ್ಣ ವಿರಾಮ ಇಡಬೇಕಾಗುತ್ತದೆ. ವಾಕ್‌ ಸ್ವಾತಂತ್ರ್ಯಕ್ಕೆ ಸಮಂಜಸವಾದ ಮಿತಿಗಳನ್ನು ಹೇರಬಹುದಾಗಿದೆ. ಸಾಮರಸ್ಯ, ಶಾಂತಿ ಸುವ್ಯವಸ್ಥೆ, ಭ್ರಾತೃತ್ವ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ನಾಗರಿಕ ಸಮಾಜದಲ್ಲಿ ನೆಲೆಗೊಳಿಸುವುದು ಅತ್ಯಂತ ಮುಖ್ಯ.

ವಾಕ್‌ ಸ್ವಾತಂತ್ರ್ಯಕ್ಕೆ ವಿರುದ್ಧ ಅಲ್ಲ

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025 ರೂಪಿಸಿ ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದು ಸಕಾಲಿಕ. ಈ ವಿಧೇಯಕ ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ದ್ವೇಷ ಭಾಷಣ ಮಾಡುವವರ ವಿರುದ್ಧ ಮಾತ್ರ ಈ ವಿಧೇಯಕದ ನಿಯಮಗಳು ಅನ್ವಯಿಸುತ್ತದೆಯೇ ಹೊರತು ದ್ವೇಷ ಭಾಷಣ ಮಾಡದವರ ವಿರುದ್ಧವಲ್ಲ. ಯಾರೂ ಈ ವಿಧೇಯಕವನ್ನು ವಿರೋಧಿಸುತ್ತಾರೋ ಅವರು ದ್ವೇಷ ಭಾಷಣ ಪ್ರೋತ್ಸಾಹಿಸುತ್ತಾರೆ ಎಂದರ್ಥ. ಪ್ರಜಾಪ್ರಭುತ್ವ ಅಥವಾ ವಾಕ್‌ ಸ್ವಾತಂತ್ರ್ಯಕ್ಕೆ ಈ ವಿಧೇಯಕ ವಿರುದ್ಧವಾಗಿಲ್ಲ. ಒಂದು ನಿರ್ದಿಷ್ಟ ಜಾತಿ, ಧರ್ಮ, ವ್ಯಕ್ತಿ, ಭಾಷೆ, ಜನಾಂಗ, ಜಾತಿ ಅಥವಾ ಲಿಂಗಕ್ಕೆ ಸೀಮಿತವಾಗದೆ ಇಡೀ ಸಮಾಜಕ್ಕೆ ಅನ್ವಯವಾಗುತ್ತದೆ. ಟೀಕೆಗಳು ಯಾವತ್ತಿಗೂ ರಚನಾತ್ಮಕವಾಗಿರಬೇಕು.

ಮತ್ತೊಂದು ವಿಚಾರ ಗಮನಿಸುವುದಾದರೆ ದ್ವೇಷ ಭಾಷಣ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಜರುಗಿಸಬೇಕು ಎಂದು ಸುಪ್ರೀಂ ಕೋರ್ಟ್‌, ಕಾನೂನು ಆಯೋಗವೇ ತಿಳಿಸಿದೆ. ದ್ವೇಷ ಭಾಷಣ ತಡೆಯುವಂಥ ಪ್ರತ್ಯೇಕ/ವಿಸ್ತೃತ ಕಾನೂನು ಇಲ್ಲ. ಹೀಗಾಗಿಯೇ ರಾಜ್ಯ ಸರ್ಕಾರ ಈಗ ವಿಧೇಯಕ ಮಂಡಿಸಿದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿಯೂ ಅಡಗಿದೆ. ಯಾವುದೇ ವಿಧೇಯಕಗಳನ್ನು ರಾಜ್ಯಪಾಲರು ತಿರಸ್ಕರಿಸುವಂತಿಲ್ಲ. ಏನಾದರೂ ತಿದ್ದುಪಡಿ ಅವಶ್ಯಕತೆ ಇದ್ದರೆ, ಮಾರ್ಪಾಟು ಮಾಡಲು ಸರ್ಕಾರಕ್ಕೆ ಸೂಚಿಸಬಹುದಷ್ಟೆ. ತಿದ್ದುಪಡಿ ಅಗತ್ಯವಿಲ್ಲದಿದ್ದರೆ ಸರ್ಕಾರ ರವಾನಿಸಿರುವ ವಿಧೇಯಕಕ್ಕೆ ಅಂಕಿತ ಹಾಕಬೇಕು.

ದ್ವೇಷ ಭಾಷಣ ತಡೆಯಲು ಸರ್ಕಾರ ಕಾನೂನು ಜಾರಿಗೊಳಿಸುತ್ತಿದ್ದರೆ, ಅದನ್ನು ರಾಜಕೀಯ ಪಕ್ಷ/ಅದರ ನಾಯಕರು ವಿರೋಧಿಸುತ್ತಿದ್ದಾರೆ ಎಂಬ ಮಾತ್ರಕ್ಕೆ ಆ ಕಾನೂನು ಜನವಿರೋಧಿ ಎಂದು ವ್ಯಾಖ್ಯಾನಿಸಲಾಗದು. ಸಂವಿಧಾನಬದ್ಧ ಆಡಳಿತ ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಈ ವಿಧೇಯಕ ಜಾರಿಯಾಗಬೇಕು.

ಕೆಲ ಎಚ್ಚರಿಕೆಗಳನ್ನು ವಹಿಸಬೇಕಿತ್ತು:

ಈ ವಿಧೇಯಕವನ್ನು ನಾನು ಪರಿಶೀಲಿಸಿದಾಗ ಸಾಮಾಜಿಕ ಸಾಮರಸ್ಯ ಹಾಳು ಮಾಡುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ತಡೆಗಟ್ಟುವುದೇ ಇದರ ಉದ್ದೇಶವೆಂಬುದು ಸ್ಪಷ್ಟವಾಗುತ್ತದೆ. ಆದರೆ, ನಿಯಮಗಳನ್ನು ರೂಪಿಸುವುವಾಗ ಕೆಲ ಎಚ್ಚರಿಕೆಗಳನ್ನು ವಹಿಸಬೇಕಿತ್ತು ಎಂದೆನಿಸುತ್ತದೆ.

ದ್ವೇಷ ಭಾಷಣ ಮಸೂದೆಯ ನಿಯಮ 2ರ ಅಡಿ ‘ದ್ವೇಷ ಭಾಷಣ’ದ ವ್ಯಾಖ್ಯಾನವನ್ನು ತುಂಬಾ ವಿಶಾಲವಾದ ಪದಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಅದು ಹಿಂಸೆ, ತಾರತಮ್ಯ ಅಥವಾ ಸಾರ್ವಜನಿಕ ಅವ್ಯವಸ್ಥೆಗೆ ನಿಕಟ ಸಂಬಂಧ ಹೊಂದಿಲ್ಲ. ಬದಲಾಗಿ, ವ್ಯಕ್ತಿಗತ ‘ಹಾನಿ’, ‘ಅಸಾಮರಸ್ಯ’ ಮತ್ತು ‘ದುರುದ್ದೇಶ’ ದಂಥ ವ್ಯಕ್ತಿನಿಷ್ಠ ಅಭಿವ್ಯಕ್ತಿಗಳನ್ನು ಹೇಳುತ್ತದೆ.

ಅದೇ ರೀತಿ, ‘ದ್ವೇಷ’ದ ವ್ಯಾಖ್ಯಾನವು ಸ್ವತಂತ್ರ ಹಿಂಸೆ ಅಥವಾ ಬಲವಂತದ ಕ್ರಿಯೆಯ ಅಗತ್ಯವಿಲ್ಲದೆ, ಮಾತನ್ನು ಗಂಭೀರ ಅಪರಾಧ ನಡವಳಿಕೆಯೊಂದಿಗೆ ಸಂಯೋಜಿಸುತ್ತದೆ. ಅಂಥ ವಿಧಾನವು ಅಭಿವ್ಯಕ್ತಿ ಮತ್ತು ನಡವಳಿಕೆ ನಡುವಿನ ವ್ಯತ್ಯಾಸ ದುರ್ಬಲಗೊಳಿಸುತ್ತದೆ. ಇದು ಸಾಂವಿಧಾನಿಕ ನ್ಯಾಯಶಾಸ್ತ್ರದಲ್ಲಿ ದೃಢವಾಗಿ ಹುದುಗಿದೆ.

ನಿಯಮ 3, ಕಡ್ಡಾಯ ಕನಿಷ್ಠ ಶಿಕ್ಷೆಗಳನ್ನು ಸೂಚಿಸುತ್ತದೆ ಮತ್ತು ಗಂಭೀರ ಸ್ವರೂಪದ ಅಪರಾಧಗಳನ್ನು ಗುರುತಿಸುತ್ತದೆ. ಈ ಅಪರಾಧವು ಜಾಮೀನು ರಹಿತವೆಂದು ಹೇಳುತ್ತದೆ. ಸಂಕ್ಷಿಪ್ತವಾಗಿ ವ್ಯಾಖ್ಯಾನಿಸಲಾದ ಅಪರಾಧಗಳ ಅನುಪಸ್ಥಿತಿಯಲ್ಲಿ ಅಂತಹ ಕಠಿಣ ದಂಡನೆಯ ಪರಿಣಾಮಗಳು ಮುಕ್ತ ಅಭಿವ್ಯಕ್ತಿ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ನ್ಯಾಯಾಂಗ ವಿವೇಚನೆಯನ್ನು ದುರ್ಬಲಗೊಳಿಸಬಹುದು.

ಭವಿಷ್ಯದಲ್ಲಿ ನಡೆಯಬಹುದಾದ ಅಪರಾಧಗಳನ್ನು ಮುಂಚಿತವಾಗಿಯೇ ಮುನ್ಸೂಚನೆ ಆಧಾರದ ಮೇಲೆ ತಡೆಗಟ್ಟುವ ಅಧಿಕಾರವನ್ನು ನಿಯಮ 4 ಅಧಿಕಾರಿಗಳಿಗೆ ನೀಡಿದೆ. ಇದು ವಸ್ತುನಿಷ್ಠ ಮಾನದಂಡಗಳು ಮತ್ತು ಸಾಕಷ್ಟು ಸುರಕ್ಷತೆ ಹೊಂದಿಲ್ಲ. ದುರುಪಯೋಗ ತಪ್ಪಿಸಲು ಮಾತಿನ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟುವ ಕ್ರಮಗಳನ್ನು ಅಧಿಕಾರಿಗಳು ಅಸಾಧಾರಣ ಸಂಯಮದಿಂದ ಬಳಸಬೇಕಾಗುತ್ತದೆ.

ನಿಯಮ 6, ನಿಯೋಜಿತ ಅಧಿಕಾರಿಗಳಿಗೆ ವಿಷಯವನ್ನು ನಿರ್ಬಂಧಿಸಲು ಅಥವಾ ತೆಗೆದುಹಾಕಲು ಅಧಿಕಾರ ನೀಡುವ ಷರತ್ತು , ನ್ಯಾಯಾಂಗ ಪೂರ್ವ ಮೇಲ್ವಿಚಾರಣೆ, ಸೂಚನೆ, ವಿಚಾರಣೆ ಮತ್ತು ಮೇಲ್ಮನವಿ ಪರಿಹಾರಗಳಂಥ ಕಾರ್ಯ ವಿಧಾನದ ಸುರಕ್ಷತೆಗಳನ್ನು ಹೊಂದಿಲ್ಲ. ಡಿಜಿಟಲ್ ಅಭಿವ್ಯಕ್ತಿ ಮೇಲೆ ಅನಿಯಂತ್ರಿತ ಕಾರ್ಯನಿರ್ವಾಹಕ ನಿಯಂತ್ರಣ ಪ್ರಜಾಪ್ರಭುತ್ವದ ಚರ್ಚೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.

ನಿಯಮ 8ರ ಅಡಿ ಉತ್ತಮ ನಂಬಿಕೆ/ವಿಶ್ವಾಸಕ್ಕೆ ರಕ್ಷಣೆಯಿದೆ. ನಿಯಮ 9ರ ಅಡಿ ತೊಂದರೆಗಳನ್ನು ನಿವಾರಿಸುವ ಅಧಿಕಾರ ಕಾರ್ಯಾಂಗಕ್ಕೆ ವಿಸ್ತೃತವಾಗಿ ನೀಡಲಾಗಿದೆ. ಅದೇ ಸಮಯದಲ್ಲಿ, ಮಸೂದೆಯು ದ್ವೇಷ ಅಪರಾಧಗಳನ್ನು ಪ್ರತ್ಯೇಕ ಅಪರಾಧಗಳೆಂದು ಸರಿಯಾಗಿ ಗುರುತಿಸುತ್ತದೆ. ಸಂತ್ರಸ್ತರಿಗೆ ಪರಿಹಾರವನ್ನೂ ಒದಗಿಸುತ್ತದೆ.

ಸಂಕ್ಷಿಪ್ತವಾಗಿ ಮರು ವ್ಯಾಖಾನಿಸಬೇಕು:

ಮಸೂದೆಯು ಸಾಂವಿಧಾನಿಕ ಅವಶ್ಯಕತೆಗಳಿಗೆ ಹೊಂದಿಕೆಯಾಗಬೇಕಾದರೆ, ಅದು ದ್ವೇಷ ಭಾಷಣವನ್ನು ಸಂಕ್ಷಿಪ್ತವಾಗಿ ಮರು ವ್ಯಾಖ್ಯಾನಿಸಬೇಕು. ಶಿಕ್ಷೆ ವಿಧಿಸುವಲ್ಲಿ ನ್ಯಾಯಾಂಗ ವಿವೇಚನೆಯನ್ನು ಪುನಃ ಸ್ಥಾಪಿಸಬೇಕು. ಕಾನೂನು ಕ್ರಮಗಳು ಮತ್ತು ವಿಷಯ ನಿರ್ಬಂಧಕ್ಕೆ ನ್ಯಾಯಾಂಗದ ಪೂರ್ವ ಪರಿಶೀಲನೆ ಪರಿಚಯಿಸಬೇಕು. ಭಾಷಣ ಮತ್ತು ಹಿಂಸಾತ್ಮಕ ದ್ವೇಷ ಅಪರಾಧಗಳ ನಡುವೆ ಸ್ಪಷ್ಟವಾಗಿ ವ್ಯತ್ಯಾಸ ತೋರಿಸಬೇಕು. ದ್ವೇಷದ ವಿರುದ್ಧದ ಹೋರಾಟ ಸಾಂವಿಧಾನಿಕ ನೈತಿಕತೆ ಮತ್ತು ಸಂಯಮದಲ್ಲಿ ನೆಲೆಗೊಂಡಿರಬೇಕು. ಭ್ರಾತೃತ್ವವನ್ನು ರಕ್ಷಿಸಲು ಉದ್ದೇಶಿಸಲಾದ ಕಾನೂನು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯ ಪ್ರಕ್ರಿಯೆಯನ್ನು ಒಳಗೊಂಡಿರಬೇಕು. ಇಲ್ಲದಿದ್ದರೆ ಅದು ರಕ್ಷಿಸಲು ಪ್ರಯತ್ನಿಸುವ ಸಾಂವಿಧಾನಿಕ ಮೌಲ್ಯಗಳನ್ನೇ ದುರ್ಬಲಗೊಳಿಸುವ ಅಪಾಯವಿದೆ. ಯಾವುದೇ ಒಂದು ಧರ್ಮ, ರಾಜಕೀಯ ಪಕ್ಷ ಅಥವಾ ವ್ಯಕ್ತಿ ವಿರುದ್ಧ ಕಾನೂನು ರೂಪಿಸಿ ಜಾರಿಗೊಳಿಸಲಾಗದು. ಬದಲಾಗಿ ಸಮಾಜಕ್ಕೆ ಒಳ್ಳೆಯದಾಗಬೇಕು ಎಂಬ ಸದುದ್ದೇಶದಿಂದ ಜಾರಿಗೊಳಿಸಬೇಕು. ಅದುವೇ ಸಂವಿಧಾನದಬದ್ಧ ಆಡಳಿತ ನೀಡುವ ರಾಜ್ಯ ಅಥವಾ ಕೇಂದ್ರ ಸರ್ಕಾರದ ಜವಾಬ್ದಾರಿ.

PREV
Read more Articles on

Recommended Stories

ವೇಗಕ್ಕೆ ದಕ್ಕುವ ಸ್ಟೈಲಿಶ್ ಸ್ಕೂಟರ್‌ ಟಿವಿಎಸ್‌ ಎನ್‌ಟಾರ್ಕ್‌ 150
''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''