ಬೆಂಗಳೂರು ನಗರದಲ್ಲಿ ಹೀಟ್ ಸ್ಟ್ರೋಕ್‌ : ಅಂಗಾಂಗ ವೈಫಲ್ಯ ಭೀತಿ! ಮುನ್ನೆಚ್ಚರಿಕೆ ಮತ್ತು ಪರಿಹಾರಗಳು

KannadaprabhaNewsNetwork |  
Published : Apr 23, 2026, 04:00 AM ISTUpdated : Apr 23, 2026, 05:22 AM IST
heat stroke

ಸಾರಾಂಶ

ಬೇಸಿಗೆಯಲ್ಲಿ ಉದ್ಯಾನ ನಗರಿ ಎಂದಾಕ್ಷಣ ಪಾರ್ಕ್‌ಗಳಲ್ಲಿ ಮರ, ಗಿಡ, ತಂಗಾಳಿ ಎಂಬ ಭಾವನೆ ಇರುತ್ತಿತ್ತು. ಆದರೆ, ಈ ವರ್ಷದ ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಬೆಂಕಿಯಂತಹ ಬಿಸಿಲು, ಉಸಿರಾಡಲು ಬಿಸಿ ಗಾಳಿ ಇಷ್ಟೊಂದು ಭಯಾನಕ ಪರಿಸ್ಥಿತಿ ಜನರಿಗೆ ಹಠಾತ್ ಎದುರಾಗಿದೆ.

  ಬೆಂಗಳೂರು :  ಬೇಸಿಗೆಯಲ್ಲಿ ಉದ್ಯಾನ ನಗರಿ ಎಂದಾಕ್ಷಣ ಪಾರ್ಕ್‌ಗಳಲ್ಲಿ ಮರ, ಗಿಡ, ತಂಗಾಳಿ ಎಂಬ ಭಾವನೆ ಇರುತ್ತಿತ್ತು. ಆದರೆ, ಈ ವರ್ಷದ ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಬೆಂಕಿಯಂತಹ ಬಿಸಿಲು, ಉಸಿರಾಡಲು ಬಿಸಿ ಗಾಳಿ ಇಷ್ಟೊಂದು ಭಯಾನಕ ಪರಿಸ್ಥಿತಿ ಜನರಿಗೆ ಹಠಾತ್ ಎದುರಾಗಿದೆ. 

ಈಗ ಹೊರಗೆ ಕಾಲಿಡಲು ಭಯಪಡುವಂತಾಗಿದೆ. ಸಂಜೆ 6.30 ಗಂಟೆಯಾದರೂ ವಾತಾವರಣದಲ್ಲಿ ಬಿಸಿ ಇರುತ್ತದೆ. ಇದರಿಂದಾಗಿ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗಿದೆ. ಆರೋಗ್ಯದಲ್ಲಿಯೂ ಏರುಪೇರಾಗುವುದು ಕಂಡು ಬರುತ್ತಿದೆ. ಜನರು ಇದಕ್ಕೆ ಪರಿಹಾರ ಕಾಣದೆ ತೊಂದರೆ ಅನುಭವಿಸುತ್ತಿದ್ದಾರೆ.ಈಗಲೇ ಜನರು ಬಿಸಿಲು ತಡೆಯಲು ಸಾಧ್ಯವಾಗುತ್ತಿಲ್ಲ.  

ಇನ್ನು ರಾಜ್ಯದೆಲ್ಲೆಡೆ ಈ ಬಾರಿಯ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ ಬೀಳಲಿದೆ. ಮೇ ಅಂತ್ಯಕ್ಕೆ ಕೇರಳದಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆ. ಮಾರ್ಚ್ ನಿಂದ ಮೇ ತಿಂಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ. ಅಲ್ಲದೆ, ಮಾರ್ಚ್ ನಿಂದ ಮೇ ಅಂತ್ಯದವರೆಗೆ ಆಲಿಕಲ್ಲು ಮಳೆ, ಅಲ್ಲಲ್ಲಿ ಗುಡುಗು, ಮಿಂಚು ಮಳೆ, ಗಾಳಿಬೀಸುವ ಸಾಧ್ಯತೆ ಎಂದು ರಾಜ್ಯ ಹವಾಮಾನ ಕೇಂದ್ರದ ವಿಜ್ಞಾನಿ ಡಾ.ಲತಾ ಶ್ರೀಧರ್ ಕನ್ನಡಪ್ರಭಕ್ಕೆ ತಿಳಿಸಿದರು.

ಸಾಮಾನ್ಯ ಬಿಸಿಲು ಇರದೆ, ಇಷ್ಟೊಂದು ಸುಡು ಬಿಸಿಲು ಏಕೆ?

ಆದರೆ, ನಗರದಲ್ಲಿ ಪ್ರತಿ ವರ್ಷದಂತೆ ಸಾಮಾನ್ಯ ಬಿಸಿಲು ಇರದೆ, ಇಷ್ಟೊಂದು ಸುಡು ಬಿಸಿಲು ಏಕೆ?, ಈ ಬಿಸಿಲಿಗೆ ದೇಹ ಹೇಗೆ ಬದಲಾಗುತ್ತದೆ ಎಂದು ವೈದ್ಯರು ವೈಜ್ಞಾನಿಕವಾಗಿ ವಿಶ್ಲೇಷಿಸಿ ಪರಿಹಾರ ಸೂಚಿಸಿದ್ದಾರೆ.

ಹೀಟ್‌ ಸ್ಟ್ರೋಕ್ ಸಾಧ್ಯತೆ:  

ನಾರಾಯಣ ಹೆಲ್ತ್ ಸಿಟಿಯ ಕನ್ಸಲ್ಟೆಂಟ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ.ಕಿರಣ್ ರೆಡ್ಡಿ ವಾರಿ ಪ್ರಕಾರ, ತಾಪಮಾನ ಏರಿ ಅತಿ ಉಷ್ಣತೆಯಿಂದ ಜೀರ್ಣಾಂಗವ್ಯೂಹ ತೀವ್ರ ಒತ್ತಡಕ್ಕೆ ಒಳಗಾಗುತ್ತದೆ, ಹೀಟ್‌ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಇರುತ್ತದೆ ಮತ್ತು ವಯಸ್ಸಾದವರಲ್ಲಿ ಹೃದಯರಕ್ತನಾಳದ ಅಪಾಯಗಳು ಹೆಚ್ಚಬಹುದು. ಬೆಂಗಳೂರು, ಮೈಸೂರು ಪ್ರಸ್ಥಭೂಮಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 900 ಮೀಟರ್ ಎತ್ತರದಲ್ಲಿದೆ. ಇಲ್ಲಿ ತಂಪಾದ ಗಾಳಿ ಬೀಸುತ್ತಿತ್ತು. ಆದರೆ, ಈಗ ಈ ರಕ್ಷಣಾ ಕವಚವು ''''ಎಲ್ ನಿನೋ'''' ವಿದ್ಯಮಾನದಿಂದ ದುರ್ಬಲಗೊಳ್ಳುತ್ತಿದೆ.  ಈ ವಿದ್ಯಮಾನ ಸಾವಿರಾರು ಮೈಲಿ ದೂರದ ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಆಗಿದ್ದರೂ, ಅದರ ಪರಿಣಾಮ ಈಗ ಇಲ್ಲಿ ತಾಪಮಾನ ಏರಿಕೆಯಾಗುತ್ತಿದೆ. 

ಪೂರ್ವ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವುದನ್ನು ''''ಎಲ್ ನಿನೋ ಸದರ್ನ್ ಆಸಿಲೇಷನ್'''' (ಇಎನ್ಎಸ್ಓ) ಪ್ರಕ್ರಿಯೆ ಎನ್ನಲಾಗುತ್ತದೆ. ಭಾರತದಲ್ಲಿ ಇದು ಮಳೆಯ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ. ಅಷ್ಟೇ ಅಲ್ಲದೆ, ವಾತಾವರಣದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿ ಮೇಲ್ಮಟ್ಟದ ಒಣ ಮತ್ತು ಬಿಸಿ ಗಾಳಿ ಕೆಳಮುಖವಾಗಿ ಚಲಿಸುವಂತೆ ಮಾಡುತ್ತದೆ. ಈ ಗಾಳಿಯು ಭೂಮಿಗೆ ಹತ್ತಿರವಾಗುತ್ತಿದ್ದಂತೆ ಸಂಕುಚಿತಗೊಂಡು ಮತ್ತಷ್ಟು ಬಿಸಿಯಾಗುತ್ತದೆ.

ಮೈಕ್ರೋಕ್ಲೈಮೇಟ್ ಸೃಷ್ಟಿ:  

ಇದರ ಜೊತೆಗೆ, ಸ್ಥಳೀಯವಾಗಿ ಉಂಟಾಗಿರುವ ''''ಅರ್ಬನ್ ಹೀಟ್ ಐಲ್ಯಾಂಡ್'''' (ಯುಎಚ್ಐ) ಪರಿಣಾಮವು ಈಗ ಅಪಾಯಕಾರಿ ಹಂತ ತಲುಪಿದೆ. ಹಸಿರಾಗಿದ್ದ ಬೆಂಗಳೂರು ನಿರಂತರವಾಗಿ ಬೆಳೆಯುತ್ತಿರುವುದು ಕಾರಣ. ಇದರಿಂದಾಗಿ ಸೂರ್ಯನ ಶಾಖವು ಸೂರ್ಯಾಸ್ತದ ನಂತರವೂ ವಾತಾವರಣದಲ್ಲೇ ಉಳಿಯುವಂತಹ ''''ಮೈಕ್ರೋಕ್ಲೈಮೇಟ್'''' ಸೃಷ್ಟಿಯಾಗಿದೆ. ಇದು ಬೆಂಗಳೂರು ಮೊದಲು ಹೊಂದಿದ್ದ ರಾತ್ರಿಯ ತಂಪಾದ ವಾತಾವರಣ ಈಗ ಇಲ್ಲ. ಅಲ್ಲದೆ, ನಗರವು ದೀರ್ಘಕಾಲದವರೆಗೆ ಉಷ್ಣದ ಒತ್ತಡಕ್ಕೆ ಸಿಲುಕುವಂತಾಗಿದೆ ಎನ್ನುತ್ತಾರೆ ವೈದ್ಯರು.

ದೇಹದಲ್ಲಾಗುವ ದುಷ್ಪರಿಣಾಮಗಳೇನೇನು?

ನಗರ ಪರಿಸರದ ತಾಪಮಾನ ನಿರಂತರ 35 ಡಿಗ್ರಿ ಸೆಲ್ಸಿಯಸ್‌ ಗಿಂತಲೂ ಹೆಚ್ಚಾದಾಗ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಇದರಿಂದ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯಿದೆ.

ಮಕ್ಕಳಲ್ಲಿ:  

ಮಕ್ಕಳು ತಮ್ಮ ವಿಶಿಷ್ಟ ಶಾರೀರಿಕ ರಚನೆಯಿಂದಾಗಿ ''''ಹೈಪರ್ ಥರ್ಮಿಯಾ''''ಗೆ (ದೇಹದ ಉಷ್ಣತೆ ಅತಿಯಾಗಿ ಏರುವುದು) ಬೇಗನೆ ತುತ್ತಾಗುತ್ತಾರೆ. ಅವರು ವಯಸ್ಕರಿಗಿಂತ ವೇಗವಾಗಿ ಪರಿಸರದಿಂದ ಶಾಖವನ್ನು ಹೀರಿಕೊಳ್ಳುತ್ತಾರೆ. ಜೊತೆಗೆ, ಅವರ ಬೆವರಿನ ಗ್ರಂಥಿಗಳು ಇನ್ನೂ ಪೂರ್ಣವಾಗಿ ಬೆಳೆದಿರುವುದಿಲ್ಲ. ಇದರಿಂದ ಬೆವರಿನ ಮೂಲಕ ಶಾಖ ಹೊರಹಾಕಿ ದೇಹ ತಂಪುಗೊಳಿಸುವ ಅವರ ಸಾಮರ್ಥ್ಯ ಕಡಿಮೆ ಇರುತ್ತದೆ.  

ಮಕ್ಕಳಲ್ಲಿ ಉಂಟಾಗುವ ''''ಹೀಟ್ ಎಕ್ಸಾಶನ್'''' (ಶಾಖದ ದಣಿವು) ತಕ್ಷಣವೇ ''''ಹೀಟ್‌ ಸ್ಟ್ರೋಕ್'''' ಆಗಿ ಬದಲಾಗಬಹುದು. ಈ ಸ್ಥಿತಿಯಲ್ಲಿ ದೇಹದ ಆಂತರಿಕ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್‌ ಮೀರುತ್ತದೆ ಮತ್ತು ಅದರಿಂದ ನರಮಂಡಲಕ್ಕೆ ತೊಂದರೆ ಉಂಟಾಗಬಹುದು.

ಹಿರಿಯರಲ್ಲಿ: ಹಿರಿಯರಲ್ಲಿ ಈ ಬಿಸಿಲಿನ ಧಗೆ ಹೃದಯದ ಮೇಲಿನ ಒತ್ತಡ ಮತ್ತು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ದೇಹವು ತನ್ನನ್ನು ತಾನು ತಂಪುಗೊಳಿಸಲು ಪ್ರಯತ್ನಿಸುವಾಗ, ರಕ್ತ ಆಂತರಿಕ ಅಂಗಗಳಿಂದ ಚರ್ಮದ ಕಡೆಗೆ ಹರಿಯಲು ಪ್ರಾರಂಭಿಸುತ್ತದೆ. ಇದನ್ನು ''''ಪೆರಿಫೆರಲ್ ವಾಸೋಡಿಲೇಶನ್'''' ಎಂದು ಕರೆಯಲಾಗುತ್ತದೆ. 

 ಇದರಿಂದಾಗಿ ಹೃದಯ ಹೆಚ್ಚು ವೇಗವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿ, ಅದರ ಮೇಲೆ ವಿಪರೀತ ಒತ್ತಡ ಬೀಳುತ್ತದೆ. ಈಗಾಗಲೇ ರಕ್ತದೊತ್ತಡ ಅಥವಾ ಎರಡನೇ ಹಂತದ ಮಧುಮೇಹ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ, ಅತಿಯಾದ ಉಷ್ಣತೆ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳಿಸುತ್ತದೆ. ಇದು ತೀವ್ರತರದ ಮೂತ್ರಪಿಂಡದ ಹಾನಿ ಅಥವಾ ಸೈಲೆಂಟ್ ಹಾರ್ಟ್ ಅಟ್ಯಾಕ್‌ ಗೆ ದಾರಿಯಾಗುವ ಸಾಧ್ಯತೆ ಇರುತ್ತದೆ.ದೇಹವು ತನ್ನನ್ನು ತಾನು ತಂಪುಗೊಳಿಸಲು ಮೊದಲ ಆದ್ಯತೆ ನೀಡಿದಾಗ, ಅದು ''''ಸ್ಪ್ಲಾಂಕ್ನಿಕ್ ಹೈಪೋಪರ್ಫ್ಯೂಷನ್'''' ಎಂಬ ಸ್ಥಿತಿಯನ್ನು ಉಂಟು ಮಾಡುತ್ತದೆ. 

 ಅಂದರೆ, ಇದು ಜಠರ ಮತ್ತು ಕರುಳಿನ ಭಾಗಕ್ಕೆ ಹರಿಯಬೇಕಾದ ರಕ್ತವನ್ನು ಬೇರೆಡೆಗೆ (ಚರ್ಮದ ಕಡೆಗೆ) ತಿರುಗಿಸುತ್ತದೆ. ಹೀಗೆ ಜೀರ್ಣಾಂಗವ್ಯೂಹಕ್ಕೆ ರಕ್ತದ ಹರಿವು ಕಡಿಮೆಯಾದಾಗ ಕರುಳಿನ ಒಳಪದರದ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇದು ಸಾಮಾನ್ಯ ಭಾಷೆಯಲ್ಲಿ ''''ಲೀಕಿ ಗಟ್'''' ಎಂದು ಕರೆಯುವ ಸಮಸ್ಯೆಗೆ ಮತ್ತು ದೇಹದಲ್ಲಿ ಉರಿಯೂತದ ಪ್ರತಿಕ್ರಿಯೆ ಹೆಚ್ಚಾಗಲು ಕಾರಣವಾಗುತ್ತದೆ. 

ಮುನ್ನೆಚ್ಚರಿಕೆ ಮತ್ತು ಪರಿಹಾರಗಳು

- ''''ಸೂಪರ್ ಎಲ್ ನಿನೋ'''' ಪ್ರಭಾವದ ಕಡು ಬೇಸಿಗೆಗೆ ಸಕ್ಕರೆಯುಕ್ತ ಪಾನೀಯಗಿಂತ, ಸತತ ನೀರು ಕುಡಿಯುವುದು ಉತ್ತಮ

- ಕಾರ್ಬೊನೇಟೆಡ್ ಪಾನೀಯಗಳು ಅಥವಾ ಅತಿಯಾದ ಸಕ್ಕರೆಯುಳ್ಳ ಪಾನೀಯಗಳು ಬೇಡ.

- ಓ.ಆರ್.ಎಸ್ ಅಥವಾ ಸ್ವಲ್ಪ ಉಪ್ಪು ಬೆರೆಸಿದ ಮಜ್ಜಿಗೆ ಸೇವಿಸಿ .

- ತಯಾರಿಸಿದ ತಕ್ಷಣವೇ ಸೇವಿಸುವ ಕ್ರಮ ಅನುಸರಿಸುವುದು ಉತ್ತಮ.

- ರಸ್ತೆ ಬದಿ ಕತ್ತರಿಸಿದ ಹಣ್ಣುಗಳು ಅಥವಾ ಸಲಾಡ್‌ ಸೇವಿಸಬೇಡಿ

- ಇವು ಬೇಸಿಗೆಯಲ್ಲಿ ಹರಡುವ ನೀರು-ಆಧಾರಿತ ಜಠರಗರುಳಿನ ಸೋಂಕುಗಳಿಗೆ ಪ್ರಮುಖ ಕಾರಣ

ವ್ಯಾಯಾಮದ ಸಮಯದಲ್ಲಿ ಬದಲಾವಣೆ

-ನಿಮ್ಮ ಬೆಳಗಿನ ನಡಿಗೆ ಸೂರ್ಯೋದಯಕ್ಕಿಂತ ಮುಂಚೆಯೇ ಪೂರ್ಣಗೊಳಿಸಿ.

- ಹಿರಿಯರು ಮತ್ತು ಮಕ್ಕಳು ಚೆನ್ನಾಗಿ ಗಾಳಿ ಬರುವ ಮತ್ತು ನೆರಳಿರುವ ಸ್ಥಳದಲ್ಲಿರಬೇಕು

- ಒಂದು ವೇಳೆ ಎಸಿ ಸೌಲಭ್ಯವಿಲ್ಲದಿದ್ದರೆ, ಒದ್ದೆ ಬಟ್ಟೆ ಮೈಮೇಲೆ ಹಾಕಿಕೊಂಡು ಸಾಂಪ್ರದಾಯಿಕ ತಂಪು ವಿಧಾನ ಅನುಸರಿಸಿ

PREV
Read more Articles on

Recommended Stories

ವರ್ಷ ಕಳೆದರೂ ಮಾಯದ ಪಹಲ್ಗಾಂ ಗಾಯ - ಪಾಕ್‌ ಉಗ್ರರು ನಡೆಸಿದ ಕಂಡು ಕೇಳರಿಯದ ನರಮೇಧ
ಸಮಾಜ ಸುಧಾರಕ ಯತಿ ಸಾರ್ವಭೌಮ ರಾಮಾನುಜರು