ಬೆಂಗಳೂರು : ಹೋಟೆಲ್‌ಗಳ ದರ ಏರಿಕೆ ನಿಯಂತ್ರಿಸಲು, ನಿಗಾ ಇಡಲು ಸಮರ್ಪಕ ವ್ಯವಸ್ಥೆಯೇ ಇಲ್ಲದಿರುವುದು ಇಚ್ಛಾನುಸಾರ ಬೆಲೆ ಏರಿಕೆಗೆ ಹಾದಿಮಾಡಿಕೊಟ್ಟಿದೆ. ಈ ಬಗ್ಗೆ ಸರ್ಕಾರ ಕ್ರಮ ವಹಿಸುವಂತೆ ಗ್ರಾಹಕ ವಲಯ ಒತ್ತಾಯಿಸಿದೆ.
ಹಾಲು, ಮಾಂಸ, ದಿನಸಿ, ಸಿಲಿಂಡರ್, ವಿದ್ಯುತ್ ಸೇರಿ ಇತರೆ ವಸ್ತುಗಳು ಏರಿಕೆಯಾದಾಗ ಸಹಜವಾಗಿ ಹೋಟೆಲ್‌ಗಳು ಬೆಲೆ ಏರಿಕೆ ಮಾಡುತ್ತಿವೆ. ಆದರೆ, ಬೆಲೆ ಇಳಿದಾಗ ಅದನ್ನು ಪರಿಗಣಿಸುವುದಿಲ್ಲ ಎಂಬ ಆರೋಪವಿದೆ. ಇದರಿಂದಾಗಿ ತಿನಿಸುಗಳ ಮೌಲ್ಯಕ್ಕಿಂತ ಹೆಚ್ಚಿನ ದರ ನೀಡಿ ಪಡೆಯಬೇಕಾಗುತ್ತದೆ. ಇದು ನಗರದ ಗ್ರಾಹಕರಿಗೆ ಹೊರೆಯಾಗಿಸಿದೆ.
ವ್ಯವಸ್ಥೆ ಹೇಗಿದೆ?:
ರಾಜ್ಯದ ಕಾನೂನು ಮತ್ತು ಮಾಪನಶಾಸ್ತ್ರ ಇಲಾಖೆಯು ಉತ್ಪನ್ನಗಳ ಮಾರಾಟ ಹಾಗೂ ಖರೀದಿಯಲ್ಲಿ ತೂಕದ ಖಾತ್ರಿ ಜೊತೆಗೆ ಅವುಗಳ ಬೆಲೆ ಬಗ್ಗೆ ನಿಗಾ ವಹಿಸುತ್ತಿದೆ. ಇಲಾಖೆಯ ಸೆಕ್ಷನ್-15 ಪ್ರಕಾರ ಇನ್‌ಸ್ಪೆಕ್ಟರ್, ಸಹಾಯಕ ನಿಯಂತ್ರಕರು ಹಾಗೂ ಉಪನಿಯಂತ್ರಕರು ಬೆಲೆ ನಿಗಾ ವಹಿಸಬಹುದು ಸುಮೊಟೋ ಅಥವಾ ಯಾರಾದರೂ ದೂರು ನೀಡಿದಲ್ಲಿ ಇವರು ದಾಖಲಿಸಿಕೊಳ್ಳಬಹುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇವರು ಗ್ರಾಹಕರ ಸೋಗಿನಲ್ಲಿ ತೆರಳಿ ರಿಯಾಲಿಟಿ ಚೆಕ್ ನಡೆಸಿ, ಬಿಲ್ ಪಡೆದು ತನಿಖೆ ನಡೆಸಿ ಕ್ರಮ ಕೈಗೊಳ್ಳಬಹುದು. ಆದರೆ, ಇಲ್ಲಿ ತಾಂತ್ರಿಕ ಸಮಸ್ಯೆ ಇದೆ. ಪ್ಯಾಕಿಂಗ್ ಆಗಿ ಮಾರಾಟ ಮಾಡಲ್ಪಡುವ ಆಹಾರ ಪದಾರ್ಥಗಳ ಮೇಲಿನ ಎಂಆರ್‌ಪಿ ದರ ಮೀರಿ ಮಾರಾಟ ಆಗುತ್ತಿದ್ದರೆ ಮಾತ್ರ ನಾವು ಪ್ರಕರಣ ದಾಖಲಿಸಿಕೊಳ್ಳಬಹುದು. ಉದಾಹರಣೆಗೆ ಹೋಟೆಲ್‌ಗಳು ಪ್ಯಾಕಿಂಗ್ ಇಲ್ಲದೆ ಹೆಚ್ಚಿನ ದರಕ್ಕೆ ಆಹಾರ ಪದಾರ್ಥ ಮಾರುತ್ತಿದ್ದರೆ ಅವುಗಳ ಮೇಲೆ ಕ್ರಮ ಕೈಗೊಳ್ಳಲು ಬರಲ್ಲ. ಹೋಟೆಲ್‌ನಿಂದ ಕ್ರಿಕೆಟ್ ಸ್ಟೆಡಿಯಂ, ಥಿಯೇಟರ್‌ಗಳಲ್ಲಿ ಮಾರುತ್ತಿದ್ದರೆ ನಮ್ಮ ವ್ಯಾಪ್ತಿಯಲ್ಲಿ ಇರುವುದಿಲ್ಲ. ಜಿಲ್ಲಾಡಳಿತ ಅಥವಾ ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ ಇಂತ ಪ್ರಕರಣಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ನಿರಂತರ ಏರಿಕೆ:
2023ರ ಆಗಸ್ಟ್ 1ರಿಂದ ಕೆಎಂಎಫ್ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ₹3ರಂತೆ ಏರಿಕೆ ಮಾಡಲಾಗಿತ್ತು. ಪರಿಣಾಮವಾಗಿ ಹೋಟೆಲ್‌ಗಳು ಕಾಫಿ-ಟೀ ಮತ್ತು ಹಾಲಿನಿಂದ ಮಾಡಿದ ಇತರ ಪಾನೀಯಗಳ ಬೆಲೆಯನ್ನು ಏರಿಕೆ ಮಾಡಿದ್ದವು. ಇದು ಜನ ಸಾಮಾನ್ಯನ ಹಾಲಿನ ಮೇಲಿನ ವೆಚ್ಚವನ್ನು ಹೆಚ್ಚಿಸಿತ್ತು.
2024ರ ಜುಲೈನಲ್ಲಿ ಕೆಎಂಎಫ್ ಹಾಲಿನ ಪ್ಯಾಕೆಟ್ಟುಗಳ ಗಾತ್ರವನ್ನು ಹೆಚ್ಚಿಸಿ (ಎಲ್ಲ ಪ್ಯಾಕೆಟ್ಟುಗಳಲ್ಲಿ ಹೆಚ್ಚುವರಿ 50 ಎಂಎಲ್ ಹಾಲು), ಪ್ರತಿ ಪ್ಯಾಕೆಟ್ಟಿನ ಬೆಲೆಯನ್ನು ₹2ರಷ್ಟು ಹೆಚ್ಚು ಮಾಡಿತ್ತು. ಜನ ಸಾಮಾನ್ಯ ಪ್ರತಿ ತಿಂಗಳು ಹಾಲಿಗಾಗಿ ಮಾಡುವ ವೆಚ್ಚ ಏರಿಕೆಯಾಗಿತ್ತು. ಈಗ ಮತ್ತೆ ಹಾಲಿನ ದರವನ್ನು ರಾಜ್ಯ ಸರ್ಕಾರ ಹೆಚ್ಚಿಸಿದ್ದು, ಪುನಃ ಹೋಟೆಲ್‌ಗಳು ಒಂದು ಕಪ್ ಮೇಲೆ ₹5-₹10 ದರ ಹೆಚ್ಚಿಸಿವೆ.
ಬೆಲೆ ಏರಿಕೆ ತಡೆಗೆಕೇರಳ ಕಾನೂನು:
ಕೇರಳ ರಾಜ್ಯ ಸರ್ಕಾರ ಈಚೆಗೆ ಹೋಟೆಲ್ ಆಹಾರದ ಬೆಲೆಗಳಲ್ಲಿ ಏಕೀಕರಣ ವ್ಯವಸ್ಥೆ ಜಾರಿಗೆ ತರಲು ಮತ್ತು ಬೇಕಾಬಿಟ್ಟಿ ಬೆಲೆ ಏರಿಕೆಯನ್ನು ತಡೆಯಲು ಆಹಾರ ಬೆಲೆ ನಿಯಂತ್ರಣ ಕಾಯ್ದೆಯನ್ನು ತರಲು ಮುಂದಾಗಿದೆ. ಈ ಸಂಬಂಧ ಕರಡು ನೀತಿಯನ್ನು ಸಿದ್ಧಪಡಿಸಿಕೊಂಡು ಮುಂದಿನ ಕಲಾಪದಲ್ಲಿ ಮಂಡನೆಗೆ ಮುಂದಾಗಿದೆ. ಇದೇ ರೀತಿ ನಮ್ಮಲ್ಲಿ ಕಾನೂನು ರೂಪಿಸುವ ಪ್ರಯತ್ನ ಮಾಡಬೇಕು ಗ್ರಾಹಕರ ಹಿತರಕ್ಷಣಾ ಸಂಘಟನೆಗಳು ಆಗ್ರಹಿಸಿವೆ.