1983ರಲ್ಲಿ ಕಪಿಲ್‌ ಡೆವಿಲ್ಸ್‌ ವಿಶ್ವಕಪ್‌ ಗೆದ್ದಿದ್ದು, ಭಾರತದಲ್ಲಿ ಪುರುಷರ ಕ್ರಿಕೆಟ್‌ನ ದಿಕ್ಕು ಬದಲಿಸಿತ್ತು. ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೆ ಆ ಕ್ಷಣ ಕೊನೆಗೂ ಬಂದಿದೆ. ಭಾರತ ಮಹಿಳೆಯರ ಐದು ದಶಕಗಳ ತಪಸ್ಸು, ಕೋಟ್ಯಂತರ ಅಭಿಮಾನಿಗಳ ಹಾರೈಕೆಗೆ ಈಗ ಫಲ ಸಿಕ್ಕಿದೆ.

ನವಿ ಮುಂಬೈ: 1983ರಲ್ಲಿ ಕಪಿಲ್‌ ಡೆವಿಲ್ಸ್‌ ವಿಶ್ವಕಪ್‌ ಗೆದ್ದಿದ್ದು, ಭಾರತದಲ್ಲಿ ಪುರುಷರ ಕ್ರಿಕೆಟ್‌ನ ದಿಕ್ಕು ಬದಲಿಸಿತ್ತು. ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೆ ಆ ಕ್ಷಣ ಕೊನೆಗೂ ಬಂದಿದೆ. ಭಾರತ ಮಹಿಳೆಯರ ಐದು ದಶಕಗಳ ತಪಸ್ಸು, ಕೋಟ್ಯಂತರ ಅಭಿಮಾನಿಗಳ ಹಾರೈಕೆಗೆ ಈಗ ಫಲ ಸಿಕ್ಕಿದೆ. ಮಹಿಳಾ ಟೀಂ ಇಂಡಿಯಾ ತನ್ನ ಐಸಿಸಿ ಟ್ರೋಫಿ ಬರ ನೀಗಿಸಿದ್ದು, 13ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಭಾನುವಾರ ನವಿ ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ 52 ರನ್‌ ಭರ್ಜರಿ ಗೆಲುವು ಸಾಧಿಸಿತು. 3 ಬಾರಿ ಏಕದಿನ ವಿಶ್ವಕಪ್‌ ಫೈನಲ್‌ಗೇರಿದ್ದ ಭಾರತ ಚೊಚ್ಚಲ ಕಿರೀಟ ತನ್ನದಾಗಿಸಿಕೊಂಡರೆ, ದಕ್ಷಿಣ ಆಫ್ರಿಕಾದ ಚೊಚ್ಚಲ ಕಪ್‌ ಗೆಲ್ಲುವ ಕನಸು ಭಗ್ನಗೊಂಡಿತು.

ಮಳೆಯಿಂದಾಗಿ ಪಂದ್ಯ 2 ಗಂಟೆ ವಿಳಂಬವಾಗಿ ಆರಂಭವಾಯಿತು. ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ ನಷ್ಟದಲ್ಲಿ 298 ರನ್‌ ಕಲೆಹಾಕಿತು. ನಾಯಕಿ ಲಾರಾ ವೊಲ್ವಾರ್ಟ್‌ ಅಮೋಘ ಆಟದ ಹೊರತಾಗಿಯೂ ದ.ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.

ಆರಂಭಿಕ ಆಟಗಾರ್ತಿ ಲಾರಾ 42ನೇ ಓವರ್‌ವರೆಗೂ ಕ್ರೀಸ್‌ನಲ್ಲಿದ್ದರು. ಅವರು ಇರುವವರೆಗೂ ಭಾರತಕ್ಕೆ ಗೆಲುವು ಅನುಮಾನವಿತ್ತು. ಆದರೆ ದೀಪ್ತಿ ಶರ್ಮಾ ಓವರ್‌ನಲ್ಲಿ ಅಮನ್‌ಜೋತ್‌ ಕೌರ್‌ ಪಡೆದ ಅತ್ಯಾಕರ್ಷಕ ಕ್ಯಾಚ್‌ನೊಂದಿಗೆ ಲಾರಾ ಹೋರಾಟಕ್ಕೆ ತೆರೆ ಬಿತ್ತು. ಅವರು 98 ಎಸೆತಗಳಲ್ಲಿ 101 ರನ್‌ ಸಿಡಿಸಿದರು. ಅನೇರಿ ಡೆರ್ಕ್‌ಸನ್‌ 35, ಲ್ಯೂಸ್‌ 25, ತಾಜ್ಮಿನ್‌ ಬ್ರಿಟ್ಜ್‌ 23 ರನ್‌ ಕೊಡುಗೆ ನೀಡಿದರೂ ತಂಡಕ್ಕೆ ಗೆಲ್ಲಲಾಗಲಿಲ್ಲ. ಬ್ಯಾಟಿಂಗ್‌ ಜೊತೆ ಬೌಲಿಂಗ್‌ನಲ್ಲೂ ಅಮೋಘ ಆಟ ಪ್ರದರ್ಶಿಸಿದ ದೀಪ್ತಿ ಶರ್ಮಾ 5 ವಿಕೆಟ್‌ ಕಿತ್ತರೆ, ಶಫಾಲಿ ವರ್ಮಾ 2 ವಿಕೆಟ್‌ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶಫಾಲಿ, ದೀಪ್ತಿ ಆಸರೆ:

ಇದಕ್ಕೂ ಮುನ್ನ ದೀಪ್ತಿ ಹಾಗೂ ಶಫಾಲಿ ಬ್ಯಾಟಿಂಗ್‌ನಲ್ಲೂ ಭಾರತ ತಂಡಕ್ಕೆ ಆಸರೆಯಾಗಿದ್ದರು. ಸ್ಮೃತಿ ಮಂಧನಾ ಜೊತೆ ಇನ್ನಿಂಗ್ಸ್‌ ಆರಂಭಿಸಿದ ಶಫಾಲಿ 104 ರನ್‌ ಜೊತೆಯಾಟವಾಡಿದರು. ಸ್ಮೃತಿ 45 ರನ್‌ಗೆ ಔಟಾದರೂ ಅಬ್ಬರದ ಆಟ ಪ್ರದರ್ಶಿಸಿ ಶತಕದತ್ತ ದಾಪುಗಾಲಿಟ್ಟಿದ್ದ ಶಫಾಲಿ 78 ಎಸೆತಕ್ಕೆ 87 ರನ್ ಸಿಡಿಸಿ ನಿರ್ಗಮಿಸಿದರು. ಸೆಮಿಫೈನಲ್‌ ಪಂದ್ಯದ ತಾರೆ ಜೆಮಿಮಾ ರೋಡ್ರಿಗ್ಸ್‌ 24, ನಾಯಕಿ ಹರ್ಮನ್‌ಪ್ರೀತ್‌ ಕೌರ್ 20 ರನ್‌ಗೆ ಔಟಾದರು. ಈ ವೇಳೆ ತಂಡವನ್ನು ಮತ್ತೆ ಮೇಲೆತ್ತಿದ್ದು ದೀಪ್ತಿ ಶರ್ಮಾ, ಅವರು 58 ಎಸೆತಗಳಲ್ಲಿ 58 ರನ್‌ ಸಿಡಿಸಿದರೆ, ರಿಚಾ ಘೋಷ್‌ 24 ಎಸೆತಕ್ಕೆ 34 ರನ್‌ ಗಳಿಸಿದರು. ಅಯಾಬೊಂಗಾ ಖಾಕ 3 ವಿಕೆಟ್‌ ಪಡೆದರು.

ಸ್ಕೋರ್: ಭಾರತ 50 ಓವರ್‌ಗಳಲ್ಲಿ 298/7 (ಶಫಾಲಿ 87, ದೀಪ್ತಿ 58, ಸ್ಮೃತಿ 45, ರಿಚಾ 34, ಜೆಮಿಮಾ 24, ಅಯಾಬೊಂಗಾ 3-58), ದಕ್ಷಿಣ ಆಫ್ರಿಕಾ 45.3 ಓವರ್‌ಗಳಲ್ಲಿ 246/10 (ಲಾರಾ 101, ಡರ್ಕ್‌ಸನ್‌ 35, ದೀಪ್ತಿ ಶರ್ಮಾ 5-39, ಶಫಾಲಿ 2-36)

ಪಂದ್ಯಶ್ರೇಷ್ಠ: ಶಫಾಲಿ ವರ್ಮಾ

ಸರಣಿ ಶ್ರೇಷ್ಠ: ದೀಪ್ತಿ ಶರ್ಮಾ

ಒಂದು ಕಪ್‌ಗಾಗಿ ಭಾರತ

ತಂಡ ಕಾದಿದ್ದು 47 ವರ್ಷ!

ಪುರುಷರ ಏಕದಿನ ವಿಶ್ವಕಪ್ 1975ರಲ್ಲಿ ಆರಂಭಗೊಂಡಿದ್ದರೆ ಅದಕ್ಕೂ ಮುನ್ನ ಅಂದರೆ 1973ರಲ್ಲೇ ಮಹಿಳಾ ವಿಶ್ವಕಪ್‌ ಶುರುವಾಗಿತ್ತು. ಮೊದಲ ಆವೃತ್ತಿಯಲ್ಲಿ ಭಾರತ ಆಡಿರಲಿಲ್ಲ. 1978ರಿಂದ ವಿಶ್ವಕಪ್‌ ಆಡುತ್ತಿರುವ ಭಾರತ ಮಹಿಳಾ ತಂಡ ಬರೋಬ್ಬರಿ 47 ವರ್ಷಗಳ ಬಳಿಕ ತನ್ನ ಚೊಚ್ಚಲ ಕಿರೀಟ ಗೆದ್ದುಕೊಂಡಿದೆ. 2005, 2017ರಲ್ಲಿ ಫೈನಲ್‌ಗೇರಿದ್ದರೂ ತಂಡಕ್ಕೆ ಟ್ರೋಫಿ ಗೆಲ್ಲುವ ಭಾಗ್ಯ ಇರಲಿಲ್ಲ. ಇನ್ನು 2009ರಿಂದಲೂ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಆಗಿಲ್ಲ. 2020ರಲ್ಲಿ ರನ್ನರ್‌-ಅಪ್‌ ಆಗಿದ್ದೇ ತಂಡದ ಶ್ರೇಷ್ಠ ಸಾಧನೆ.

ಐಸಿಸಿ ವನಿತಾ ವಿಶ್ವಕಪ್

ಗೆದ್ದ 4ನೇ ತಂಡ ಭಾರತ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ 4ನೇ ತಂಡ ಭಾರತ. ಇದಕ್ಕೂ ಮುನ್ನ ಆಸ್ಟ್ರೇಲಿಯಾ 7, ಇಂಗ್ಲೆಂಡ್ 4 ಹಾಗೂ ನ್ಯೂಜಿಲೆಂಡ್‌ 1 ಬಾರಿ ಚಾಂಪಿಯನ್‌ ಆಗಿವೆ. ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ(6 ಬಾರಿ), ಇಂಗ್ಲೆಂಡ್‌, ನ್ಯೂಜಿಲೆಂಡ್‌, ವೆಸ್ಟ್‌ಇಂಡೀಸ್‌ ತಲಾ 1 ಬಾರಿ ಟ್ರೋಫಿ ಗೆದ್ದಿವೆ.

ದ.ಆಫ್ರಿಕಾ ಮತ್ತೆ ಚೋಕರ್ಸ್‌!

ದಕ್ಷಿಣ ಆಫ್ರಿಕಾ ತಂಡಕ್ಕೆ ಚೋಕರ್ಸ್‌ ಎಂಬ ಹಣೆಪಟ್ಟಿಯಿದೆ. ಅದು ಈ ಬಾರಿ ಮತ್ತೆ ಸಾಬೀತಾಯಿತು. ಪುರುಷರ ವಿಶ್ವಕಪ್‌ಗಳಲ್ಲಿ ಹಲವು ಬಾರಿ ನಾಕೌಟ್‌ನಲ್ಲಿ ಎಡವಿ ಟ್ರೋಫಿ ತಪ್ಪಿಸಿಕೊಂಡಿದ್ದ ದ.ಆಫ್ರಿಕಾ ತಂಡ, ಮಹಿಳೆಯರ ವಿಶ್ವಕಪ್‌ನಲ್ಲೂ ಟ್ರೋಫಿ ಬರ ಮುಂದುವರಿಸಿದೆ. ದ.ಆಫ್ರಿಕಾ ಮಹಿಳಾ ತಂಡ 2023, 2024ರ ಟಿ20 ವಿಶ್ವಕಪ್‌ ಫೈನಲ್‌ನಲ್ಲೂ ಸೋತಿತ್ತು.

ಕೋಚ್‌ ಕಾಲಿಗೆ ಬಿದ್ದ ಹರ್ಮನ್‌

ಐತಿಹಾಸಿಕ ಟ್ರೋಫಿ ಗೆಲುವಿನ ಬಳಿಕ ಭಾರತದ ನಾಯಕಿ ಹರ್ಮನ್‌ಪ್ರೀತ್‌ ಮೈದಾನದಲ್ಲೇ ಕೋಚ್‌ ಅಮೋಲ್‌ ಮಜುಂದಾರ್‌ ಅವರ ಕಾಲಿಗೆ ಬಿದ್ದರು. ಇದರ ಫೋಟೋ, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ವಾರದ ಹಿಂದೆ ಮನೆಯಲ್ಲಿದ್ದ

ಶಫಾಲಿ ಈಗ ವಿಶ್ವಕಪ್‌ ವಿನ್ನರ್‌

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡು ಕಳೆದ ವಾರದವರೆಗೂ ಮನೆಯಲ್ಲಿ ಬಾಕಿಯಾಗಿದ್ದ ಶಫಾಲಿ ವರ್ಮಾ ಈಗ ವಿಶ್ವಕಪ್‌ ವಿಜೇತಯಾಗಿದ್ದಾರೆ. ಅಲ್ಲದೆ, ತಮ್ಮ ಅಮೋಘ ಆಟದ ಮೂಲಕ ಮತ್ತೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಶಫಾಲಿ ಆಡುತ್ತಿದ್ದ ಆರಂಭಿಕ ಆಟಗಾರ್ತಿಯ ಸ್ಥಾನವನ್ನು ಪ್ರತೀಕಾ ರಾವಲ್‌ ತುಂಬಿದ್ದರು. ವಿಶ್ವಕಪ್‌ಗೂ ಶಫಾಲಿ ಬದಲು ಪ್ರತೀಕಾ ಆಯ್ಕೆಯಾಗಿ, ಅಬ್ಬರದ ಆಟವಾಡಿದ್ದರು. ಆದರೆ ಸೆಮೀಸ್‌ಗೂ ಮುನ್ನ ಪ್ರತೀಕಾ ಗಾಯದಿಂದಾಗಿ ಹೊರಬಿದ್ದರು. ಹೀಗಾಗಿ ಶಫಾಲಿ ತಂಡಕ್ಕೆ ಆಯ್ಕೆಯಾದರು. ಸೆಮೀಸ್‌ನಲ್ಲಿ ಮಿಂಚದಿದ್ದರೂ ಫೈನಲ್‌ನಲ್ಲಿ ತಂಡದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.